Saturday, July 27, 2024

ಕಂಚಿನ ಕಂಠದ ಕೋಗಿಲೆ ಎಂದು ಹೆಸುರುವಾಸಿಯಾದ ಬಸವಲಿಂಗಯ್ಯ ಹಿರೇಮಠ ಲಿಂಗೈಕ್ಯ

ಸುದ್ದಿ ಸದ್ದು ನ್ಯೂಸ್‌

ಬಸವರಾಜ ಚಿನಗುಡಿ 

ಚನ್ನಮ್ಮನ ಕಿತ್ತೂರು: ಗುಡ್ಡ ಬೆಟ್ಟ ಹಸಿರು ಉಟ್ಟಾದೋ ಆ ಹಸಿರಿನೊಳಗ ಉಸಿರು ಯಾಕ ನಿಂತ ಬಿಟ್ಟಾದೋ ಓ ಸೃಷ್ಟಿ ಲಿಂಗ ಹೆಸರಿನರ್ಥ ನಿನಗ ಹೊಳೆದದೋ….

ಗುಬ್ಬಿಯೊಂದು ಗೂಡು ಕಟ್ಯಾದೋ ಆ ಗೂಡಿನೊಳಗ ಜೀವ ಇಟ್ಟು ಎಲ್ಲಿಗ್ಹೋಗ್ಯದೋ…

ಹಾಡಿನ ಸಾಲುಗಳು ಆ ಕಂಚಿನ ಕಂಠದಲ್ಲಿ ಕೇಳ್ತಿದ್ರೇ ಎಂಥ ಕಟುಕನ ಕಣ್ಣುಗಳು ತೇವಗೊಳ್ಳೋದು ಪಕ್ಕಾ. ಇಂತ ಹಾಡು ಬೆಳ್ಬೆಳೆಗ್ಗೇನೆ ನೆನಪಾಗಿದ್ದು ಗಂಟಲು ಬಿಗಿದು ಬರುವಂತದ್ದು. ಹೌದು! ಈ ಹಾಡು ಹಾಡಿದ್ದು ಬೇರೆ ಯಾರೂ ಅಲ್ಲ ಜಾನಪದ ಲೋಕದ ಹಿರಿಯ ಹಾಡುಗಾರ ಐತಿಹಾಸಿಕ ಕಿತ್ತೂರು ತಾಲೂಕಿನ ಬೈಲೂರು ಗ್ರಾಮದ ಬಸವಲಿಂಗಯ್ಯ ಹಿರೇಮಠ. ಅಂತ ಕಂಚಿನ ಕಂಠದ ಕೋಗಿಲೆ ಇಂದು ತನ್ನ ಉಸಿರು ನಿಲ್ಲಿಸಿದ್ದು ನಿಜಕ್ಕೂ ಜಾನಪದ ಲೋಕದ ಬಹುದೊಡ್ಡ ನಷ್ಟವೇ ಸರಿ.  

ಮೂಲತಃ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬೈಲೂರಿನ ಬಸವಲಿಂಗಯ್ಯ ಹಿರೇಮಠ ಇಂದು ಬೆಳಗಿನ ಜಾವ ಇಹಲೋಕ ತ್ಯಜಿಸಿದ್ದಾರೆ. ಜಾನಪದ ವಿಷಯದಲ್ಲಿ ಎಂ.ಎ. ಪದವೀಧರರಾದ ಇವರು 1983ರಲ್ಲಿ ನೀನಾಸಂ, ಜನಸ್ಪಂದನ ಶಿಬಿರಗಳ ಮೂಲಕ ರಂಗಭೂಮಿಗೆ ಪ್ರವೇಶ ಪಡೆದಿದ್ದರು. ಹಿರಿಯ ರಂಗಕರ್ಮಿ ಬಿ.ವಿ.ಕಾರಂತರೊಂದಿಗೆ ರಂಗ ಸಂಗೀತವನ್ನು ಅಭ್ಯಾಸ ಮಾಡಿ, ಧಾರವಾಡದಲ್ಲಿ ಜಾನಪದ ಸಂಶೋಧನಾ ಕೇಂದ್ರ ಸ್ಥಾಪಿಸುವ ಮೂಲಕ ಜಾನಪದವನ್ನು ಜೀವಂತವಾಗಿರಿಸಿದ ಮೇರು ಕಲಾವಿದರು. ಉತ್ತರ ಕರ್ನಾಟಕದ ಹಿರಿಮೆ ಹೆಚ್ಚಿಸಿದ ಇವರ ರಚನೆಯ ಪರಿಷ್ಕೃತ ರಂಗರೂಪ-‘ಶ್ರೀಕೃಷ್ಣ ಪಾರಿಜಾತ’ ದೇಶದೆಲ್ಲೆಡೆ ಸಾವಿರಾರು ಪ್ರಯೋಗಗಳನ್ನು ಕಂಡಿದೆ. ನಟನಾಗಿ ಗಾಯಕನಾಗಿ ಸಂಗೀತ ನಿರ್ದೇಶಕನಾಗಿ ಹತ್ತು ಹಲವು ಕ್ಷೇತ್ರಗಳಲ್ಲಿ ನಿರಂತರ ಕೃಷಿ ಮಾಡುತ್ತ, ದಾಸರ, ಸಂತರ, ಶರಣರ ಅನೇಕ ತತ್ವಪದಗಳಿಗೆ ದನಿಯಾಗುವ ಮೂಲಕ ಜೀವಂತ ಜಾನಪದ ವಿಶ್ವವಿದ್ಯಾಲಯದಂತೆ ಕಾರ್ಯೋನ್ಮುಖರಾದವರು ಬಸವಲಿಂಗಯ್ಯ ಹಿರೇಮಠ. ಜಾನಪದ, ದೊಡ್ಡಾಟ, ಬಯಲಾಟ ಎಲ್ಲ ಪ್ರಕಾರದ ಸಾಹಿತ್ಯವನ್ನು ವಿದೇಶದಲ್ಲೂ ಪ್ರಚಾರ-ಪ್ರಸಾರ ಮಾಡಿದ ಕೀರ್ತಿ ಇವರದು. ಪತ್ತಾರ ಮಾಸ್ತರರ `ಸಂಗ್ಯಾ ಬಾಳ್ಯಾ’ ಪದ್ಯಕ್ಕೆ ರಂಗರೂಪ ನೀಡುವ ಮೂಲಕ ಉತ್ತರ ಕರ್ನಾಟಕದ ಕೀರ್ತಿ ಹೆಚ್ಚಿಸಿದವರು.

ಬಸವಲಿಂಗಯ್ಯ ಹಿರೇಮಠ ಅವರು ಪಡೆದ ಪ್ರಶಸ್ತಿಗಳು:ಇಂತಹ ಮೇರು ಕಲಾವಿದರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ಅಭಿನವ ಶರೀಫ್, ಕರ್ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರ , ಅಂತರಾಷ್ಟ್ರ ಮಟ್ಟದ ಅನೇಕ ಪುರಸ್ಕಾರಗಳು ಇವರ ಪ್ರತಿಭೆಗೆ ಸಂದಿವೆ 

ಸುಗಮ ಸಂಗೀತ ಗಾಯಕರಾಗಿ, ದೊಡ್ಡಾಟ, ಸಣ್ಣಾಟ, ಪಾರಿಜಾತ ನಾಟಕಗಳನ್ನು ಆಧುನಿಕ ರಂಗಭೂಮಿಗೆ ಪರಿಚಯಿಸಿ ಅವುಗಳನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದು ಅವುಗಳನ್ನು ಹೊಸ ಪೀಳಿಗೆಗೆ ಪರಿಚಯಿಸಿದರು.

ಕುಲಗೋಡು ತಮ್ಮಣ್ಣ ವಿರಚಿತ 12 ಗಂಟೆಗಳ ಅವಧಿಯ ಶ್ರೀ ಕೃಷ್ಣ ಪಾರಿಜಾತ ವನ್ನು ಮೂರು ಗಂಟೆಯಲ್ಲಿ  ಪ್ರೇಕ್ಷಕರ ಮನ ಮುಟ್ಟುವಂತೆ ಮಾಡಿ ಸಾವಿರಕ್ಕೂ ಅಧಿಕ ಪ್ರಯೋಗದಿಂದ ಜನ ಮಾನಸದಲ್ಲಿ ಛಾಪು ಮೂಡಿಸಿದ್ದರು. ಹುಲಿಯ ಹುಟ್ಟಿತೋ ಕಿತ್ತೂರು ನಾಡಾಗ, ಭಂಟ ರಾಯಣ್ಣ ಸಂಗೊಳ್ಳಿ ಊರಾಗ….ಈ ಹಾಡು ಕೇಳ್ತಿದ್ರೇನೆ ಮೈಯಲ್ಲಿ ಸ್ವತಂತ್ರದ ಕಿಚ್ಚು ಸ್ವಾಭಿಮಾನದ ಹುಚ್ಚು ನಾಡಿನ ಬಗೆಗಿನ ಮೆಚ್ಚು ಎಲ್ಲವೂ ಮೈದಳೆಯುತ್ತೆ. ಇಂತ ಹಾಡು ಹಾಡಿದ್ದು ಇದೇ ಜಾನಪದ ಗಾಯಕರಾದ ಬಸವಲಿಂಗಯ್ಯ ಹಿರೇಮಠ.

ಅವರು ಜಾನಪದ ಸಂಶೋಧನಾ ಸಂಸ್ಥೆ ಆರಂಭಿಸಿ ಯುವ ಕಲಾವಿದರು, ಯುವ ಸಮೂಹವನ್ನು ಸಜ್ಜುಗೊಳಿಸಿದ್ದರು. ಬಸವಲಿಂಗಯ್ಯ ಅವರ ಕಂಚಿನ‌ಕಂಠದ ಹಾಡುಗಾರಿಕೆಗೆ ಎಲ್ಲರೂ ತಲೆತೂಗುತ್ತಿದ್ದರು. ಅಮೆರಿಕ, ಇಂಗ್ಲೆಂಡ್, ದುಬೈ ಸೇರಿದಂತೆ ವಿಶ್ವದ ಇತರ ರಾಷ್ಟ್ರಗಳಲ್ಲಿ ಕೂಡ ಕೃಷ್ಣ ಪಾರಿಜಾತ ಸಣ್ಣಾಟ ಪ್ರದರ್ಶನ ನೀಡಿದ್ದ ಅವರ ಕಲಾ ಸೇವೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ  ಸೇರಿದಂತೆ ಹಲವು ಪ್ರಶಸ್ತಿಗಳು ಒಲಿದು ಬಂದಿದ್ದವು. ಇಂತಹ ಜಾನಪದ ಕ್ಷೇತ್ರದ ಧೀಮಂತ ಕಲಾವಿದರು ಇಹಲೋಕ ತ್ಯಜಿಸಿದ್ದು ಜಾನಪದ ಕ್ಷೇತ್ರಕ್ಕೆ ಮತ್ತುಕಲಾ ಸೇವೆಗೆ ತುಂಬಲಾರದ ನಷ್ಟ.

ಯಕೃತ್ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಪತ್ನಿ ಜಾನಪದ ಕಲಾವಿದೆ ವಿಶ್ವೇಶ್ವರಿ ಹಿರೇಮಠ ಹಾಗೂ ಪುತ್ರ ನಾಗಭೂಷಣ ಸೇರಿದಂತೆ ಇಬ್ಬರು ಸಹೋದರ ಸೇರಿದಂತೆ ಅನೇಕ ಕಲಾವಿದ ಮತ್ತು ಅಭಿಮಾನಿ ಬಳಗವನ್ನು ಅಗಲಿದ್ದಾರೆ. ಲಿಂಗೈಕ್ಯ ಬಸವಲಿಂಗಯ್ಯ ಹಿರೇಮಠ ಅವರ ಅಂತಿಮ ಸಂಸ್ಕಾರ ಬೈಲೂರು ನಿಷ್ಕಲ ಮಂಟಪ ಹಾಗೂ ಮುಂಡರಗಿಯ ತೋಂಟದಾರ್ಯ ಮಠದ ಪೂಜ್ಯ ಶ್ರೀ ನಿಜಗುಣ ಪ್ರಭು ತೋಂಟದಾರ್ಯ ಮಹಾಸ್ವಾಮಿಗಳ ದಿವ್ಯ ನೇತೃತ್ವದಲ್ಲಿ ನಾಳೆ (ಸೋಮವಾರ) ಮುಂಜಾನೆ 11.00 ಗಂಟೆಗೆ ಅವರ ಹುಟ್ಟೂರಾದ ಬೈಲೂರಿನಲ್ಲಿ ನೆರವೇರಲಿದೆ ಎಂದು ಕುಟುಂಭ ಸದಸ್ಯರು ತಿಳಿಸಿದ್ದಾರೆ.

ಶ್ರೀ ನಿಜಗುಣ ಪ್ರಭು ತೋಂಟದಾರ್ಯ ಮಹಾಸ್ವಾಮಿಗಳು ನಿಷ್ಕಲ ಮಂಟಪ ಬೈಲೂರು ಹಾಗೂ ತೋಂಟದಾರ್ಯ ಮಠ ಮುಂಡರಗಿ

ಕನ್ನಡ ಜನಪದ ರಂಗದ ಮೇರುವೀರ ವ್ಯಕ್ತಿತ್ವನ್ನು ಹೊಂದಿದ ಬಸವಲಿಂಗಯ್ಯ ಹಿರೇಮಠ ಅಪ್ರತಿಮ ಹಾಡುಗಾರ, ಸ್ನೇಹಜೀವಿ, ಕುಟುಂಬ ಪ್ರೇಮಿ ಇಂದು ಅವರನ್ನು ಕಳೆದುಕೊಂಡ ನಾಡಿನ ಜನತೆ ಮತ್ತು ಅಭಿಮಾನಿಗಳಿಗೆ ಅನಾಥಪ್ರಜ್ಞೆಕಾಡುತ್ತಿದೆ. ಅವರ ಆತ್ಮಕ್ಕೆ ಪರಮಾತ್ಮ ಚಿರಶಾಂತಿ ನೀಡಲಿ. ಶ್ರೀ ನಿಜಗುಣ ಪ್ರಭು ತೋಂಟದಾರ್ಯ ಮಹಾಸ್ವಾಮಿಗಳು ನಿಷ್ಕಲ ಮಂಟಪ ಬೈಲೂರು ಹಾಗೂ ತೋಂಟದಾರ್ಯ ಮಠ ಮುಂಡರಗಿ

ಬಸವಜಯ ಮೃತ್ಯಂಜಯ ಮಹಾಸ್ವಾಮಿಗಳು ಲಿಂಗಾಯತ ಪಂಚಮಸಾಲಿ ಪೀಠ ಕೂಡಲಸಂಗಮ.

ʼʼಗುಬ್ಬಿಯೊಂದು ಗೂಡು ಕಟ್ಯಾದೋʼʼ ಎನ್ನುವ ಹಾಡಿನ ಮೂಲಕ ಮೂಲ ಜನಪದ ಗಾಯನವನ್ನ ಈ ನಾಡಿನಲ್ಲಿ ಬಿತ್ತಿ ಬೆಳೆದಿರುವಂತಹ ಬಸವಲಿಂಗಯ್ಯ ಹಿರೇಮಠ ಅವರ ಅಗಲಿಕೆ ಇಡಿ ಜಾನಪದ ಲೋಕವನ್ನೆ ತಲ್ಲಣಗೊಳಿಸಿದೆ. ಸಿ ಅಶ್ವತ ಅವರಿಗೂ ಕಡಿಮೆ ಇಲ್ಲದಂತೆ ತಮ್ಮ ಧ್ವನಿಯ ಮೂಲಕ ಆಂತ್ರಿಕ ಶಕ್ತಿಯನ್ನು ಹೊಂದಿದ್ದರು. ಭಜನೆ, ಲಾವಣೆ, ಜನಪದ, ಪಾರಿಜಾತ ಮತ್ತು ರಂಗಭೂಮಿ ಹಾಡುಗಳನ್ನು ಹಾಡುವುದರ ಮೂಲಕ ಹೊಸ ಮನ್ವಂತರವನ್ನು ಸೃಷ್ಠಿಮಾಡಿದ್ದರು. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಅವರ ಅಗಲಿಕೆಯ ನೋವು ತಡೆದುಕೊಳ್ಳುವ ಶಕ್ತಿಯನ್ನು ವಿಶ್ವಗುರು ಬಸವಣ್ಣನವರು ದಯಪಾಲಿಸಲಿ. ಬಸವಜಯ ಮೃತ್ಯಂಜಯ ಮಹಾಸ್ವಾಮಿಗಳು ಲಿಂಗಾಯತ ಪಂಚಮಸಾಲಿ ಪೀಠ ಕೂಡಲಸಂಗಮ.

. ಹಣುಮಂತ ಗುಂಡಗಾವಿ ಯುವ ಮುಖಂಡರು ಬೈಲೂರು.

“ಜನಪದ ಜಗತ್ತಿನ ವಿಶಿಷ್ಟ ಗಾಯಕರು,ಕಿತ್ತೂರು ನಾಡಿನ ಹಿರಿಮೇಯನ್ನು ದೇಶ ವಿದೇಶಗಳಲ್ಲಿ ಬಿತ್ತರಿಸಿ ಕಿತ್ತೂರು ನಾಡು ಹುಲಿಗಳ ಬಿಡು ಅಂತ ಸಾರಿಧಂತಹ ಮಹಾನ್ ಚೇತನ ಇಂದು  ನಮ್ಮಿಂದ ದೂರವಾದದ್ದು ಬೇಸರದ ಸಂಗತಿ.  ಹಣುಮಂತ ಗುಂಡಗಾವಿ ಯುವ ಮುಖಂಡರು ಬೈಲೂರು.

ಸಿದ್ದರಾಮ ತಳವಾರ ಯುವ ಸಾಹಿತಿ ದಾಸ್ತಿಕೊಪ್ಪ

“ಹೃದಯಕ್ಕೆ ಹತ್ತಿರವಾದ ಜಾನಪದವನ್ನು ಮತ್ತಷ್ಟು ಮೆರಗುಗೊಳಿಸುವ ಭಾವುಕರನ್ನಾಗಿಸುವ ಕಂಚಿನ ಕಂಠದ ಜಾನಪದ ಜಾಣ ಪ್ರೀತಿಯ ಗಾಯಕರಾದ ಬಸವಲಿಂಗಯ್ಯ ಹಿರೇಮಠ ಅವರು ಈ ನಾಡಿನ ಅದ್ಭುತ ಕಲಾವಿದರು ಇಂತಹ ಮೇರು ಕಲಾವಿದರನ್ನು ಕಳೆದುಕೊಂಡ ನಾವು ದೌರ್ಭಾಗ್ಯವೇ ಸರಿ. ಭಗವಂತ ಅವರ ಆತ್ಮಕ್ಕೆ ಚಿರಶಾಂತಿಯನ್ನೀಯಲಿ ಅವರ ಕುಟುಂಬದವರಿಗೆ ಈ ದುಃಖ ಸಹಿಸುವ ಶಕ್ತಿ ಕರುಣಿಸಲಿ ಅಂತ ಬೇಡಿಕೊಳ್ಳುವೆ. ಸಿದ್ದರಾಮ ತಳವಾರ ಯುವ ಸಾಹಿತಿ ದಾಸ್ತಿಕೊಪ್ಪ

“ಜಾನಪದ ಸಾಹಿತ್ಯವನ್ನು ದೇಶ ವಿದೇಶಗಳಲ್ಲಿ ಪಸರಿಸುವ ಮೂಲಕ ನಮ್ಮ ಬೈಲೂರ ಗ್ರಾಮದ ಕೀರ್ತಿಯನ್ನು ಎತ್ತಿ ಹಿಡಿದು ಗಟ್ಟಿ ಧ್ವನಿಯ ಸಾವಿರ ಹಾಡುಗಳ ಸರದಾರ, ಜಾನಪದ ಗಾರುಡಿಗ ಶ್ರೀ ಬಸವಲಿಂಗಯ್ಯ ಹಿರೇಮಠ ಅವರ ಅಗಲಿಕೆ ನಾಡಿಗೆ ತುಂಬಲಾಗದ ನಷ್ಟ. ಗುಲಾಭ ಬಾಳೆಕುಂದರಗಿ, ಯುವ ಮುಖಂಡರು ಬೈಲೂರು.

ಗುಲಾಭ ಬಾಳೆಕುಂದರಗಿ, ಯುವ ಮುಖಂಡರು ಬೈಲೂರು.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಜನಪದ ಸಾಹಿತ್ಯ ಲೋಕದ ದಿಗ್ಗಜರು ನಮ್ಮ ಬೈಲೂರು ಗ್ರಾಮದ ಹೆಮ್ಮೆ ಕಲಾವಿದರಾದ ಬಸವಲಿಂಗಯ್ಯ ಹಿರೇಮಠ ಅವರ ಅಕಾಲಿಕ ನಿಧನದ ಸುದ್ದಿ ತಿಳಿದು ತುಂಬಾ ದುಃಖವಾಯಿತು ಭಗವಂತ ಅವರು ಪವಿತ್ರ ಆತ್ಮಕ್ಕೆ ಚಿರ ಶಾಂತಿ ನೆಮ್ಮದಿ ಕರುಣಿಸಲಿ. ಬಸವರಾಜ ಲದ್ದಿಮಠ, ಗ್ರಾಮಪಂಚಾಯತ ಸದಸ್ಯರು ಬೈಲೂರ

ಬಸವರಾಜ ವ್ಹಿ ಲದ್ದಿಮಠ, ಗ್ರಾಮಪಂಚಾಯಿತ ಸದಸ್ಯರು ಬೈಲೂರ

 

ಜಿಲ್ಲೆ

ರಾಜ್ಯ

error: Content is protected !!