Tuesday, May 28, 2024

ಪ್ರತಿಷ್ಠಿತ ಜಿ. ನಾರಾಯಣಸ್ವಾಮಿ ಪ್ರಶಸ್ತಿ ಪುರಸ್ಕೃತ ಈಶ್ವರ ಹೋಟಿ ಅವರಿಗೆ ಸನ್ಮಾನ

ಬೈಲಹೊಂಗಲ: ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಅಂಗಸಂಸ್ಥೆಯಾದ ಹಾಗೂ ಕರ್ನಾಟಕ ಸರಕಾರದಿಂದ ಮಾನ್ಯತೆ ಪಡೆದಿರುವ ಏಕೈಕ ಬೃಹತ್ ಪ್ರಮಾಣದ ಪತ್ರಕರ್ತರ ಸಂಘಟನೆಯಾದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಅತ್ಯುತ್ತಮ ಗ್ರಾಮಾಂತರ ವರದಿ (ಲೇಖನ)ಗಳಿಗೆ ಕೊಡಮಾಡುವ ಪ್ರತಿಷ್ಠಿತ ಜಿ. ನಾರಾಯಣಸ್ವಾಮಿ ಪ್ರಶಸ್ತಿ ಪುರಸ್ಕೃತ ವಿಜಯ ಕರ್ನಾಟಕ ದಿನಪತ್ರಿಕೆಯ ತಾಲೂಕಾ ಮುಖ್ಯ ವರದಿಗಾರರು ಹಾಗೂ ಹಿರಿಯ ಪತ್ರಕರ್ತರಾದ ಈಶ್ವರ ಹೋಟಿ ಅವರನ್ನು ಬೆಳಗಾವಿ ಜಿಲ್ಲಾ ಆರೋಗ್ಯ ಇಲಾಖೆಯ ಸಮಾನ ಮನಸ್ಕರ ವೇದಿಕೆಯ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಈಶ್ವರ ಹೋಟಿ ಉತ್ತಮ ಸಮಾಜ ನಿರ್ಮಿಸುವಲ್ಲಿ ಪತ್ರಕರ್ತರ ಜವಾಬ್ದಾರಿ ಬಹಳ ಮುಖ್ಯವಾದದ್ದು ಎಂದು ಹೇಳಿದರು. ಲೇಖನಿ ಎಂಬ ಆಯುಧವನ್ನು ಸಮಾಜದ ಒಳಿತಿಗಾಗಿ ಬಳಸಿಕೊಳ್ಳುವುದು ಹಾಗೂ ಜನರಿಗೆ ಸತ್ಯದ ದರ್ಶನ ಮಾಡಿಸುವುದು ಪತ್ರಿಕಾ ಧರ್ಮ ಎಂದು ಅವರು ಹೇಳಿದರು.

ಬೆಳಗಾವಿ ಜಿಲ್ಲಾ ಆರೋಗ್ಯ ಇಲಾಖೆಯ ಸಮಾನ ಮನಸ್ಕರ ವೇದಿಕೆಯ ಮುಖಂಡರಾದ ಕಿರಣ ಸಾವಂತನವರ ಮಾತನಾಡಿ ಈಶ್ವರ ಅವರ ಬದ್ಧತೆ, ಪ್ರಾಮಾಣಿಕತೆ, ಸರಳತೆ ಎಲ್ಲರಿಗೂ ಅನುಕರಣೀಯ ಎಂದು ಅಭಿಪ್ರಾಯಪಟ್ಟರು. ಹಿರೇಬಾಗೇವಾಡಿ ಸಮುದಾಯ ಆರೋಗ್ಯ ಕೇಂದ್ರದ ವಿಕಿರಣಶಾಸ್ತ್ರ ಚಿತ್ರಣ ಅಧಿಕಾರಿಗಳಾದ ಆಕಾಶ ಥಬಾಜ ಮಾತನಾಡಿ ಪತ್ರಿಕಾರಂಗದ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾದ ಹೋಟಿಯವರು ಬೈಲಹೊಂಗಲ ನಾಡಿನ ಹೆಮ್ಮೆ ಎಂದು ಹರ್ಷ ವ್ಯಕ್ತಪಡಿಸಿದರು.

ಕೇಂದ್ರ ಬಸವ ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯರೂ, ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ ಮಾತನಾಡಿ ಈಶ್ವರ ಹೋಟಿಯವರು ತಮ್ಮ ಜೀವನದಲ್ಲಿ ಎದುರಾದ ಸಾಕಷ್ಟು ಸವಾಲುಗಳನ್ನು ಧೈರ್ಯದಿಂದ ಎದುರಿಸಿ ಅನೇಕ ವರ್ಷಗಳಿಂದ ಜನರ ಸಂಕಷ್ಟಗಳಿಗೆ ಧನಾತ್ಮಕವಾಗಿ ಸ್ಪಂದಿಸುವ ಅಪರೂಪದ ವ್ಯಕ್ತಿತ್ವ ಹೊಂದಿದವರು ಎಂದರು.

ಸಾಮಾಜಿಕ ಕಾರ್ಯಕರ್ತರಾದ ಪುಂಡಲೀಕ ಭಜಂತ್ರಿ ಮಾತನಾಡಿ ಹೋಟಿಯವರು ಸಾಕಷ್ಟು ಸಮಾಜಮುಖಿ ಕಾರ್ಯಗಳಿಂದ ಜನರ ಮನಸ್ಸಿಗೆ ಹತ್ತಿರವಾಗಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಬೂದಿಹಾಳದ ಸರಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕರಾದ ಎನ್.ಆರ್.ಠಕ್ಕಾಯಿ, ಸಾಮಾಜಿಕ ಕಾರ್ಯಕರ್ತರಾದ ಚಂದ್ರಶೇಖರ ಹನಮನಹಾಳ, ಅಶೋಕ ಸವದತ್ತಿ, ವಿವೇಕಾನಂದ ಪೂಜಾರ, ಉಮೇಶ ಗಾಡದ, ಮಹಾಂತೇಶ ಗುಮತಿ, ಅಶೋಕ ಬಡಿಗೇರ, ಜಗದೀಶ ಕಡಗದ ಉಪಸ್ಥಿತರಿದ್ದರು. ಪತ್ರಕರ್ತರಾದ ಚಂದ್ರಯ್ಯ ಯರಗಟ್ಟಿಮಠ ಸ್ವಾಗತಿಸಿದರು. ಪ್ರಕಾಶ ಬೆಳಗಾವಿ ವಂದಿಸಿದರು.

ಜಿಲ್ಲೆ

ರಾಜ್ಯ

error: Content is protected !!