Sunday, September 8, 2024

ತಂದೆಗೆ ಮೊಲೆ ಹಾಲು ಕುಡಿಸಿ ಮಾತೃತ್ವ ಮೆರೆದ ಮಗಳು ಪೆರೋ

ಸುದ್ದಿ ಸದ್ದು ನ್ಯೂಸ್

‘ಈ ಚಿತ್ರ ಕೆಲವರಿಗೆ ಅಸಹ್ಯ ಅನ್ನಿಸಬಹುದು. ಮತ್ತೆ ಕೆಲವರಿಗೆ ಆಶ್ಚರ್ಯವೂ ಆದೀತು. ಆದರೆ, ಅದರ ಹಿಂದಿನ ಸತ್ಯ ಘಟನೆ ಅರಿತಾಗ ಯಾರ ಕಣ್ಣಲ್ಲಾದರೂ ನೀರೂರದೆ ಇರಲಾರದು’.

14ನೆಯ ಲೂಯಿಸ್‍ನ ಕಾಲಘಟ್ಟದಲ್ಲಿ ನಡೆದ ಘಟನೆಯೊಂದನ್ನು ಆಧರಿಸಿ ‘ರೋಮನ್ ಚಾರಿಟಿ’ ಎಂಬ ಹೆಸರಿನಲ್ಲಿ ಚಿತ್ರಿಸಲ್ಪಟ್ಟ ಈ ಕಲಾಕೃತಿಯ ಕೆಳಭಾಗದಲ್ಲಿರುವ ಬರಹ ಇದು. ಆ ಕಲಾಕೃತಿಯ ಪ್ರಚಾರಕ್ಕಾಗಿ ಇಂತಹ ಬರಹ ಬರೆದಿಲ್ಲ. ಅದನ್ನು ನೋಡಿದವರ ಸಂವೇದನೆಗಳು ಮಿಡಿಯುವ ಎರಡೂ ಬಗೆಗಳನ್ನು ಮತ್ತು ಅವೆರಡನ್ನೂ ಮೀರಿದ ಹೃದಯದ ಸ್ಪಂದನವನ್ನು ಇಲ್ಲಿರುವ ಶಬ್ದಗಳು ಸಮರ್ಥವಾಗಿ ಕಟ್ಟಿಕೊಡುತ್ತವೆ.

‘ಪ್ರಾಚೀನ ರೋಮನ್ನರ ಅವಿಸ್ಮರಣೀಯ ಘಟನೆಗಳು ಮತ್ತು ಉಕ್ತಿಗಳು’ ಎಂದೇ ಪ್ರಸಿದ್ಧವಾಗಿರುವ ಒಂಬತ್ತು ಗ್ರಂಥಗಳಲ್ಲಿ ರೋಮನ್ ಚಾರಿಟಿಯ ಈ ಘಟನೆ ಅತ್ಯಂತ ಗೌರವದ್ದೆಂದು ದಾಖಲಾಗಿದೆ. ಆ ಘಟನೆ ಆಧರಿಸಿದ ಈ ಚಿತ್ರವು 30,000,000 ಯೂರೊಗಳಿಗೆ ಮಾರಾಟವಾಗಿ ಯುರೋಪಿನ ಅತ್ಯಂತ ಬೆಲೆಬಾಳುವ ಕಲಾಕೃತಿ ಎಂದು ಪ್ರಸಿದ್ಧಿ ಪಡೆದಿದೆ. 

ರೋಮನ್ ಇತಿಹಾಸಕಾರ ವೆಲೇರೀಯಸ್ ಮ್ಯಾಕ್ಷಿಮಮ್ಸ್‌ ದಾಖಲಿಸಿರುವ ಘಟನೆ ಆಧರಿಸಿ ಕ್ರಿ.ಶ. 23-79ರ ನಡುವೆ ಪ್ಲಿನೇ ದಿ ಎಲ್ಡರ್‌ನು ಮರು ನಿರೂಪಿಸಿದ ಕಥೆ ಇದು. ಸಿಮೋನ್ ಎಂಬ ರೋಮನ್ ಪ್ರಜೆ ಹಸಿವಿನಿಂದ ತತ್ತರಿಸುತ್ತಿದ್ದ ದಿನಗಳವು. ಹಸಿವು ತಡೆಯಲಾರದೆ ಅಂಗಡಿಯಲ್ಲಿ ಒಂದು ಲೋಫ್ ಬ್ರೆಡ್ (ಒಂದು ಬ್ರೆಡ್) ಕದಿಯುತ್ತಾನೆ. ಆ ಕಳುವಿನ ಸುದ್ದಿ ಚಕ್ರವರ್ತಿಗೆ ತಲುಪುತ್ತದೆ. ವಿಚಾರಣೆ ನಡೆಸಿ ಸಿಮೋನ್‍ನಿಗೆ ಮರಣದಂಡನೆ ವಿಧಿಸುತ್ತಾನೆ. ಆ ಶಿಕ್ಷೆಯ ಸ್ವರೂಪವೇ ವಿಚಿತ್ರವಾಗಿತ್ತು. ಸಾವು ಬರುವವರೆಗೂ ಆತ ಏನನ್ನೂ ತಿನ್ನುವಂತಿಲ್ಲ; ಕುಡಿಯುವಂತಿಲ್ಲ. ಅಂದರೆ, ಹಸಿವು ಮತ್ತು ನೀರಡಿಕೆಗಳಿಂದಲೇ ಆತ ಸಾಯಬೇಕು! ಸಿಮೋನ್ ಜೈಲಿಗೆ ತಳ್ಳಲ್ಪಡುತ್ತಾನೆ; ಶಿಕ್ಷೆಯೂ ಆರಂಭವಾಗುತ್ತದೆ.

ಪೆರೋ ಎಂಬಾಕೆ ಸಿಮೋನ್‍ನ ಮಗಳು. ತುಂಬು ಯೌವನದಲ್ಲಿದ್ದ ಆಕೆ ಐದಾರು ತಿಂಗಳ ಹಿಂದಷ್ಟೇ ಒಂದು ಗಂಡು ಮಗುವಿನ ತಾಯಿಯಾಗಿರುತ್ತಾಳೆ. ಕಕ್ಕುಲಾತಿಯಿಂದ ತಂದೆಯನ್ನು ಪ್ರೀತಿಸುತ್ತಿದ್ದ ಆಕೆಗೆ, ತಂದೆಗೆ ವಿಧಿಸಲಾದ ಮರಣದಂಡನೆ ವಿಷಯ ತಿಳಿಯುತ್ತದೆ. ಅವಳ ಹೊಟ್ಟೆಯಲ್ಲಿ ತಳಮಳ ಶುರುವಾಗುತ್ತದೆ. ಅಪ್ಪ ಅನ್ನ-ನೀರಿಲ್ಲದೆ ಕೊರಗಿ ಸಾಯುವುದನ್ನು ನೆನೆಸಿಕೊಂಡಾಗ ಅವಳ ಹೃದಯ ನೀರಾಗುತ್ತದೆ. ಕರುಳು ಕಿತ್ತು ಬರುವಷ್ಟು ಸಂಕಟವಾಗುತ್ತದೆ.

ಪೆರೋ ಅಳುತ್ತಾ ಜೈಲಿಗೆ ಓಡಿಬರುತ್ತಾಳೆ. ಆದರೆ, ಅಲ್ಲಿನ ಕಾವಲುಗಾರರು ಅವಳನ್ನು ಒಳಗೆ ಬಿಡುವುದಿಲ್ಲ. ತಕ್ಷಣ ಅವಳು ಚಕ್ರವರ್ತಿಯನ್ನು ಕಂಡು, ತಾನು ತನ್ನ ತಂದೆಯನ್ನು ನೋಡಲೇಬೇಕೆಂದು ಅಹವಾಲು ಸಲ್ಲಿಸುತ್ತಾಳೆ. ಅವಳ ಕೋರಿಕೆಗೆ ಮನ್ನಣೆ ನೀಡಿದ ದೊರೆಯು, ಸಿಮೋನ್ ಸಾಯುವವರೆಗೆ ಪ್ರತಿದಿನ ಒಂದು ಸಲ ಆತನನ್ನು ನೋಡಲು ಪೆರೋಗೆ ಅವಕಾಶ ಕಲ್ಪಿಸುತ್ತಾನೆ.

ಅವಳು ಜೈಲಿನ ಒಳಗೆ ಹೋಗುವಾಗ ತನ್ನೊಂದಿಗೆ ಯಾವುದೇ ಆಹಾರ ಪದಾರ್ಥ ಅಥವಾ ನೀರು ಒಯ್ಯುವಂತಿಲ್ಲ ಎಂಬ ಕರಾರು ವಿಧಿಸಲಾಗುತ್ತದೆ. ತಂದೆಯನ್ನು ನೋಡಿದರೆ ಸಾಕೆಂದು ಪೆರೋ ಆ ಕರಾರಿಗೆ ಒಪ್ಪುತ್ತಾಳೆ. ಪ್ರತಿದಿನ ಜೈಲಿನ ಒಳಗೆ ಹೋಗುವಾಗ ಕಾವಲುಗಾರರು ಆಕೆಯನ್ನು ಸಂಪೂರ್ಣವಾಗಿ ತಪಾಸಣೆ ಮಾಡುತ್ತಾರೆ.

ಜೈಲಿನಲ್ಲಿ ಊಟ -ನೀರಿಲ್ಲದೆ ತಂದೆ ಕೃಶವಾಗುತ್ತಿರುತ್ತಾನೆ. ಅದನ್ನು ನೋಡಿದ ಆಕೆಗೆ ದುಃಖ ಉಮ್ಮಳಿಸಿ ಬರುತ್ತದೆ. ಅಪ್ಪ ಹಸಿವಿನಿಂದ ಸಾಯುವುದನ್ನು ತಾನು ಹೇಗೆ ನೋಡುವುದು? ಮಗಳಾದವಳು ಆತನ ಈ ಸಂಕಟ ಸಹಿಸಿಕೊಳ್ಳುವುದಾದರೂ ಹೇಗೆ? ಎಂದು ದುಃಖಿಸುತ್ತಿರುವಾಗಲೇ ಅವಳಿಗೆ ಥಟ್ಟನೆ ಒಂದು ವಿಚಾರ ಹೊಳೆಯುತ್ತದೆ.

‘ಹೇಗೂ ತಾನು ಒಂದು ಮಗುವಿನ ತಾಯಿ. ಎದೆಯಲ್ಲಿ ಬೇಕಾದಷ್ಟು ಹಾಲಿದೆ. ಕೂಸಿಗೆ ಕುಡಿಸುವ ಹಾಗೆ ಅಪ್ಪನಿಗೂ ತನ್ನ ಮೊಲೆಹಾಲು ಕುಡಿಸಿದರೆ ಆತ ಹಸಿವಿನ ಸಂಕಟದಿಂದ ಪಾರಾಗಬಹುದಲ್ಲವೆ?’ -ಹೀಗೆ ಯೋಚಿಸಿದ ಮರುಕ್ಷಣವೇ ತನ್ನ ಯೋಚನೆಯನ್ನು ಕಾರ್ಯಗತ ಮಾಡಿ ಬಿಡುತ್ತಾಳೆ. ತಂದೆ ಬೇಡವೆಂದು ನಿರಾಕರಿಸಿದರೂ ಆಕೆ ಕೇಳುವುದಿಲ್ಲ. ಅಂದಿನಿಂದ ಪ್ರತಿದಿನ ಜೈಲಿನೊಳಗೆ ಬಂದ ಕೂಡಲೇ ಪೆರೋ, ಸಿಮೋನ್‍ನಿಗೆ ತಪ್ಪದೆ ತನ್ನೆದೆಯ ಹಾಲನ್ನು ಕುಡಿಸತೊಡಗುತ್ತಾಳೆ. ಅದು ಮುಂದುವರಿಯುತ್ತಿರುತ್ತದೆ.

ಆರು ತಿಂಗಳು ಕಳೆಯುತ್ತವೆ. ಆಹಾರ ಮತ್ತು ನೀರಿಲ್ಲದೆ ಹಸಿವಿನಿಂದ ಸಾಯುವ ಶಿಕ್ಷೆಗೆ ಗುರಿಯಾಗಿದ್ದ ಸಿಮೋನ್ ದಿನದಿನಕ್ಕೆ ಕೃಶನಾಗುವ ಬದಲು ಕ್ರಮೇಣ ಚೇತರಿಸಿಕೊಳ್ಳತೊಡಗುತ್ತಾನೆ! ಜೈಲಿನ ಅಧಿಕಾರಿಗಳಿಗೆ ಇದು ದೊಡ್ಡ ದಿಗಿಲು! ಆತನಿಗೆ ಜೈಲಲ್ಲಿ ತಿನ್ನಲು-ಕುಡಿಯಲು ಏನೂ ಕೊಡುತ್ತಲಿಲ್ಲ. ಅತ್ತ ಪೆರೋ ಒಳಗೆ ಹೋಗುವಾಗ ಏನನ್ನೂ ಒಯ್ಯದಂತೆ ತಪಾಸಣೆ ಮಾಡಿಯೇ ಬಿಡಲಾಗುತ್ತಿದೆ. ಹೀಗಿರುವಾಗ ಈತ ಚೇತರಿಸಿಕೊಳ್ಳುತ್ತಿರುವುದಾದರೂ ಹೇಗೆ? ಅವನಿಗೆ ಯಾರು ಆಹಾರ ಕೊಡುತ್ತಿದ್ದಾರೆ? ಗಂಭೀರವಾಗಿ ಯೋಚಿಸಿದ ಜೈಲರ್‌ಗೆ ಬೇರಾವುದೂ ಕಾರಣಗಳು ಕಾಣುವುದಿಲ್ಲ. ಪೆರೋಳ ಮೇಲೆಯೇ ಸಂಶಯ ಉಂಟಾಗುತ್ತದೆ. ಅವಳ ಮೇಲೆ ನಿಗಾ ಇಡುವಂತೆ ಕಾವಲುಗಾರರಿಗೆ ಸೂಚಿಸುತ್ತಾನೆ.

ಕಾವಲುಗಾರರು ಅವಳ ಚಲನವಲನದ ಮೇಲೆ ಗುಪ್ತವಾಗಿ ಕಣ್ಣಿಡುತ್ತಾರೆ. ಪೆರೋ ಪ್ರತಿದಿನವೂ ತನ್ನ ತಂದೆಯನ್ನು ನೋಡಲು ಬಂದಾಗ ಅವನಿಗೆ ತನ್ನ ಎದೆಹಾಲನ್ನು ಕುಡಿಸುವ ವಿಚಿತ್ರ ದೃಶ್ಯ ಅವರ ಕಣ್ಣಿಗೆ ಬೀಳುತ್ತದೆ. ‘ಓಹೋ… ಇದೋ ಸಿಮೋನ್‍ನ ಚೇತರಿಕೆಯ ಕಾರಣ!’ ಎಂದು ತಿಳಿದ ಅವರು, ಚಕ್ರವರ್ತಿಗೆ ಆ ಮಾಹಿತಿ ತಲುಪಿಸುತ್ತಾರೆ.

ತಮ್ಮ ಕರಾರು ಮುರಿದು, ತಂದೆಗೆ ಎದೆಹಾಲು ಕುಡಿಸಿ ಸಿಮೋನ್‍ನನ್ನು ಬದುಕಿಸುತ್ತಿದ್ದ ಪೆರೋಳ ಮೇಲೆ ಚಕ್ರವರ್ತಿಯು ಸಿಟ್ಟಾಗುತ್ತಾನೆ. ಅವಳನ್ನು ಆಸ್ಥಾನಕ್ಕೆ ಕರೆಸಿ ವಿಚಾರಣೆಗೆ ಒಳಪಡಿಸುತ್ತಾನೆ. ಪೆರೋ ತನ್ನ ತಂದೆಯನ್ನು ಬದುಕಿಸುತ್ತಿದ್ದ ವಿಷಯಕ್ಕಿಂತ ಹೆಚ್ಚಾಗಿ, ತಂದೆಯಿಂದ ಹುಟ್ಟಿದ ಮಗಳೇ ತನ್ನ ತಂದೆಗೆ ಎದೆಹಾಲು ಕುಡಿಸುತ್ತಿದ್ದ ಲೋಕವಿಲಕ್ಷಣ ಘಟನೆಯ ಬಗ್ಗೆಯೇ ಅಲ್ಲಿ ಪರ-ವಿರೋಧದ ಚರ್ಚೆ ನಡೆಯುತ್ತದೆ. ಅದು ಅಸಹ್ಯ, ಲೋಕವಿರೋಧಿ ಕ್ರಮ ಎಂದು ಕೆಲವರು ವಾದಿಸಿದರೆ; ಮತ್ತೆ ಕೆಲವರು ಜಗತ್ತಿನಲ್ಲಿಯೇ ಇದೊಂದು ಅನನ್ಯವಾದ ಮಾನವೀಯ ಘಟನೆ ಎಂದು ಸಮರ್ಥಿಸುತ್ತಾರೆ.

ಕೊನೆಗೆ ನ್ಯಾಯಾಧೀಶರು ಕೂಲಂಕಷವಾಗಿ ಆಲೋಚಿಸಿ, ಪೆರೋಳ ಆ ಕಾರ್ಯವು ತಾಯಿ ಕರುಳಿನ ಹಾಗೂ ಮಾನವೀಯತೆಯ ಅತ್ಯುತ್ತಮ ನಡೆಯೆಂದು ತೀರ್ಪು ಕೊಡುತ್ತಾರೆ. ಜೊತೆಗೆ ‘ಒಬ್ಬ ಹೆಣ್ಣುಮಗಳು, ತಾಯಿ, ಮಗಳು, ಅಕ್ಕ, ತಂಗಿ, ಹೆಂಡತಿ ಹೀಗೆ ಬೇರೆ ಬೇರೆ ಸಂಬಂಧದಲ್ಲಿದ್ದಾಗಲೂ ಅವಳಲ್ಲಿ ತಾಯ್ತನದ ತುಡಿತವೊಂದು ಸದಾ ಜಾಗೃತವಾಗಿರುತ್ತದೆ. ಇದಕ್ಕೆ ಜೀವಂತ ನಿದರ್ಶನ ಪೆರೋ.

ಇಲ್ಲಿ ಅವಳು ಯಾವುದೇ ತಪ್ಪು ಮಾಡಿಲ್ಲ. ಮಗಳಾಗಿದ್ದುಕೊಂಡೇ ಅವಳು ತಾಯಿಯ ಕರ್ತವ್ಯ ನಿಭಾಯಿಸಿದ್ದಾಳೆ. ಅದಕ್ಕಾಗಿ ಅವಳಿಗೆ ಯಾವುದೇ ಶಿಕ್ಷೆ ವಿಧಿಸುವಂತಿಲ್ಲ. ಬದಲಾಗಿ ಅವಳ ಈ ಕರುಳ ಕಕ್ಕುಲಾತಿಗೆ ಮತ್ತು ತಂದೆಯ ಜೀವ ಉಳಿಸಿದ ಕಾರಣಕ್ಕೆ ಸಿಮೋನ್‍ನನ್ನೂ ಜೈಲಿನಿಂದ ಬಿಡುಗಡೆ ಮಾಡಬೇಕು ಎಂಬ ನಿರ್ಣಯ ಹೊರಡಿಸುತ್ತಾರೆ. ಆ ಅಪರೂಪದ ತೀರ್ಮಾನದಿಂದ ಸಿಮೋನ್ ಮತ್ತು ಪೆರೋ ಇಬ್ಬರೂ ಶಿಕ್ಷೆಯಿಂದ ಬಿಡುಗಡೆ ಹೊಂದುತ್ತಾರೆ.

ಎಂಥ ಕಲ್ಲು ಹೃದಯಗಳನ್ನೂ ಕರಗಿಸಿಬಿಡುವ ‘ರೋಮನ್ ಚಾರಿಟಿ’ಯ ಈ ಘಟನೆಯು ‘ಮಗಳಧರ್ಮ’ದ ಅನನ್ಯ ಕಥೆಯಾಗಿ ದಾಖಲಾಗಿದೆ. ಅದು ರೋಮನ್ ಕಾಲದಿಂದ ಶತಮಾನಗಳುದ್ದಕ್ಕೂ ಹರಿಯುತ್ತ ಬಂದು, ಈವರೆಗಿನ ಅನೇಕ ಶಿಲ್ಪ ಮತ್ತು ಚಿತ್ರಕಲಾವಿದರಿಂದ ಅದ್ಭುತ ರೀತಿಯಲ್ಲಿ ಚಿತ್ರಣಗೊಳ್ಳುತ್ತಿದೆ. ಸಾಹಿತ್ಯ, ಚಲನಚಿತ್ರ ಮತ್ತಿತರ ಕಲಾಪ್ರಕಾರಗಳಲ್ಲೂ ಮರುಹುಟ್ಟು ಪಡೆಯುತ್ತಿದೆ.

ಹೆಣ್ಣಿನ ಹೃದಯದಲ್ಲಿರುವ ತಾಯ್ತನದ ಸಂವೇದನೆಗೆ ಸಾಕ್ಷಿಯಾಗಿರುವ ಈ ಅಭಿವ್ಯಕ್ತಿಗಳು ಕೆಲವು ಮಡಿವಂತರಿಗೆ ಸಾಮಾಜಿಕ ಪಾಪದ ‘ಅಗ್ಲಿ ಪಿಕ್ಚರ್’ ಆಗಿ ಕಂಡಿದ್ದರೆ, ಜಗತ್ತಿನ ಅತಿಹೆಚ್ಚು ಜನರಿಗೆ ‘ರೋಮನ್ ಗೌರವ’ ಎಂಬ ಹೆಸರಲ್ಲಿ ‘ಮಗಳ ಮಾತೃತ್ವದ’ ಸಂಕೇತವಾಗಿಯೇ ಉಳಿದಿದೆ.

‘ಮೆಮ್ಮೇಲೋಕೆ’ ಹೆಸರಿನ ಇಂಥ ಒಂದು ಶಿಲ್ಪಕಲಾಕೃತಿಯು ಜೇಂಟ್ ಬೆಲ್ಜಿಯಂ ಬೋಟೇರ್‍ಮಾರ್ಕೆಟ್‍ನಲ್ಲಿದೆ. ಅದೇ ಮಾದರಿಯ ಮತ್ತೊಂದು ಕ್ಲಾಸಿಕ್ ಶಿಲ್ಪಾಕೃತಿಯು ಲಾಕೆನ್‍ ಹಿಲ್ ನಗರದ ಜೈಲು ಮತ್ತು ವಾರ್ಡನ್ ಹೌಸ್‍ನ ಪ್ರವೇಶ ದ್ವಾರದ ಮೇಲ್ಭಾಗದಲ್ಲಿ ಕೆತ್ತಲ್ಪಟ್ಟಿದೆ. ಮಾನವೀಯ ಸಂವೇದನೆಗಳ ಅಪೂರ್ವ ಅಭಿವ್ಯಕ್ತಿಯಂತಿರುವ ‘ರೋಮನ್ ಚಾರಿಟಿ’ಯ ಈ ಕಥೆಯು, ಮನುಷ್ಯ ಚರಿತ್ರೆಯಲ್ಲಿಯೇ ಮಗಳೊಬ್ಬಳ ತಾಯ್ತನದ ಅನನ್ಯತೆಯನ್ನು ದರ್ಶಿಸುತ್ತದೆ. ಕಲಾ ಪ್ರಪಂಚವು ಈ ಘಟನೆಯನ್ನು ವಿಭಿನ್ನ ನೆಲೆಗಳಲ್ಲಿ ದಾಖಲಿಸುತ್ತಲೇ ಬಂದಿದೆ. ಆ ಮೂಲಕ ಮಗಳು ಪೆರೋಳಲ್ಲಿದ್ದ ಹೆಣ್ಣಿನ ತಾಯ್ತನವು ಅವಳ ತಂದೆಯನ್ನು ಬಿಡುಗಡೆಗೊಳಿಸಿದ ಮತ್ತು ಬದುಕಿಸಿದ ಅಮರ ಚರಿತ್ರೆಯನ್ನು ಶಾಶ್ವತವಾಗಿ ದಾಖಲಿಸಿವೆ.

ಲೇಖಕರು – ಡಾ.ಬಸವರಾಜ ಸಾದರ

ಜಿಲ್ಲೆ

ರಾಜ್ಯ

error: Content is protected !!