Thursday, July 25, 2024

ಆನ್ ಲೈನ್ ತರಗತಿಗಳ ಹಿಂದಿನ ಆಫ್ ಲೈನ್ ಕಥೆಗಳು

ವಿಶೇಷ ಲೇಖನ: ಲೇಖಕರು:ಮಣ್ಣೆ ಮೋಹನ್
6360507617
[email protected]

ಇದು ಸರಕಾರದ ದುಡುಕಿನ ಎಡವಟ್ಟು ನಿರ್ಧಾರ. ಕೊರೋನಾ ಹರಡುವಿಕೆಯ ನೆಪವೊಡ್ಡಿ ಏಕಾಏಕಿ ಒಂದನೇ ತರಗತಿಯಿಂದ ಒಂಬತ್ತನೇ ತರಗತಿಯ ಮಕ್ಕಳಿಗೆ ಆನ್ ಲೈನ್ ನಲ್ಲಿ ಶಾಲೆಯನ್ನು ಆರಂಭಿಸುವ ದಿಢೀರ್ ನಿರ್ಧಾರವನ್ನು ಸರ್ಕಾರ ಘೋಷಿಸಿದೆ. ಕೊರೋನಾ ಕಾಲಘಟ್ಟದುದ್ದಕ್ಕೂ ಸರ್ಕಾರ ಶಾಲೆಗಳ ವಿಷಯದಲ್ಲಿ ಅನೇಕ ತಪ್ಪು ನಿರ್ಧಾರಗಳ ಸರಣಿಯನ್ನೇ ಮಾಡುತ್ತಾ ಬಂದಿದೆ. ಈಗಿನದು ಅದರಲ್ಲಿ ಇನ್ನೊಂದು ಭಾಗವಷ್ಟೆ. ಸರ್ಕಾರದ ಈ ನಿರ್ಧಾರದ ಹಿಂದಿನ ಸಾಧಕ ಬಾಧಕಗಳ ಬಗ್ಗೆ ಬೆಳಕು ಚೆಲ್ಲೋಣ ಬನ್ನಿ.

ಲಾಕ್‌ ಡೌನ್ ಕಾರಣಕ್ಕೆ ಅನೇಕ ಸಣ್ಣ ಕೈಗಾರಿಕೆಗಳು,ಗಾರ್ಮೆಂಟ್ಸ್ ಗಳು, ಸಣ್ಣ ಪುಟ್ಟ ವ್ಯಾಪಾರಸ್ಥರು, ಕೂಲಿಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಆಟೋ ಚಾಲಕರು,ದಿನಗೂಲಿ ನೌಕರರು, ಇತರೆ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದವರು ತಮ್ಮ ತಮ್ಮ ಊರುಗಳಿಗೆ ತೆರಳಿ ವಾಸಿಸತೊಡಗಿದ್ದರು.ಅವರುಗಳಲ್ಲಿ ಕೆಲವರು ನಿಧಾನಕ್ಕೆ ಮತ್ತೆ ನಗರಗಳತ್ತ ಮುಖ ಮಾಡಿ ತಮ್ಮ ಜೀವನ ಕಟ್ಟಿಕೊಳ್ಳುವ ಹೊಸ ಪ್ರಯತ್ನವನ್ನು ಮಾಡುತ್ತಿದ್ದಾರೆ.

ಮುಚ್ಚಿ ಹೋಗಿದ್ದ ಅನೇಕ ಸಣ್ಣ ಕೈಗಾರಿಕೆಗಳು ಇದೀಗ ತಾನೆ ನಿಧಾನಕ್ಕೆ ಒಂದೊಂದಾಗಿ ತೆರೆಯುತ್ತಾ ಕಣ್ಣು ಬಿಡತೊಡಗಿವೆ. ಸಂಪೂರ್ಣ ನಿಂತು ಹೋಗಿದ್ದ ಕಟ್ಟಡ ನಿರ್ಮಾಣ ಕಾಮಗಾರಿಗಳು ನಿಧಾನಕ್ಕೆ ಆರಂಭಗೊಳ್ಳುತ್ತಿವೆ. ಕೆಲಸಗಳಿಲ್ಲದೆ ನಗರ ತೊರೆದು ಊರಿಗೆ ಮರಳಿದ್ದವರು ಮತ್ತೆ ನಗರಗಳತ್ತ ಮುಖ ಮಾಡುತ್ತಿದ್ದಾರೆ. ಇವರೆಲ್ಲ ನಗರಗಳಿಗೆ ಬಂದು ತಮ್ಮ ಜೀವನ ಕಟ್ಟಿಕೊಳ್ಳುವುದು ಹೊಟ್ಟೆಪಾಡಿಗಾಗಿ ಎಂಬುದು ಎಷ್ಟು ಸತ್ಯವೋ, ಅಷ್ಟೆ ಸತ್ಯ ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕೆoಬುದು ಕೂಡ ಆಗಿದೆ.

ಶಾಲೆಗಳು ಜೂನ್ ನಿಂದ ಆನ್ ಲೈನ್ ನಲ್ಲಿ ಆರಂಭಗೊಂಡರೂ,ಆರಂಭದಲ್ಲಿ ಹೆಚ್ಚಿನ ಮಕ್ಕಳು ಶಾಲೆಗಳಿಂದ ಹೊರಗುಳಿದಿದ್ದರು. ಜೂನ್ ತಿಂಗಳ ಶಾಲಾ ದಾಖಲಾತಿ ಪುಸ್ತಕಗಳನ್ನು ಗಮನಿಸಿದಾಗ ಪ್ರತಿವರ್ಷಕ್ಕಿಂತ ಕೇವಲ 10 ರಿಂದ 20 ಪ್ರತಿಶತ ಮಕ್ಕಳು ಮಾತ್ರ ದಾಖಲಾಗಿರುವುದು ತಿಳಿಯುತ್ತದೆ. ಕ್ರಮೇಣ ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್, ನವೆಂಬರ್ ತಿಂಗಳಿನವರೆಗೂ ದಾಖಲಾತಿ ಆಗಿರುವುದನ್ನು ಗಮನಿಸಿದಾಗ, ಊರುಗಳಿಂದ ಜನರು ನಿಧಾನಕ್ಕೆ ಮರಳುತ್ತಾ,ನಗರಗಳಲ್ಲಿ ಮತ್ತೆ ತಮ್ಮ ಜೀವನವನ್ನು ಕಟ್ಟಿಕೊಳ್ಳುತ್ತಿರುವ ಕುಟುಂಬಗಳ ಕತೆಗಳು ಬಿಚ್ಚಿಕೊಳ್ಳುತ್ತವೆ.

ಶಾಲೆಗಳು ಆಫ್ ಲೈನ್ ನಲ್ಲಿ ಆರಂಭಗೊಂಡ ಖುಷಿಯಲ್ಲಿ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿ,ದಂಪತಿಗಳಿಬ್ಬರೂ ಕೆಲಸಗಳಿಗೆ ಹೋಗುತ್ತಾ ತಮ್ಮ ಜೀವನ ಕಟ್ಟಿಕೊಳ್ಳುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಏಕೆಂದರೆ ಬೆಂಗಳೂರಿನಲ್ಲಿ ಬದುಕಬೇಕಾದರೆ ಗಂಡ-ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗುವುದು ಅನಿವಾರ್ಯವಾಗಿದೆ.ಮನೆ ಬಾಡಿಗೆ ಕಟ್ಟಿ,ಹೊಟ್ಟೆಪಾಡಿಗೆ ವ್ಯವಸ್ಥೆ ಮಾಡಿಕೊಂಡು, ಇದ್ದುದರಲ್ಲಿಯೇ ಉತ್ತಮವೆನಿಸುವ ಶಾಲೆಗೆ ಮಕ್ಕಳನ್ನು ಸೇರಿಸಿ, ಹೇಗೋ ಜೀವನ ಸಾಗಿಸಬೇಕೆಂಬುದು ಅವರೆಲ್ಲರ ಉತ್ಕಟ ಜೀವನಪ್ರೇಮವಾಗಿದೆ.ಹಾಗೆಯೇ ಇದೀಗ ಪಾಲಕ ಪೋಷಕರು ಎಚ್ಚೆತ್ತುಕೊಂಡು ಶಿಕ್ಷಣದಲ್ಲಿ ಆಗಿರುವ ಅನ್ಯಾಯ ಸದ್ಯದಲ್ಲಿ ಸರಿಪಡಿಸಲು ಆಗದು ಎಂಬ ನಿರ್ಧಾರಕ್ಕೆ ಬಂದಿದ್ದು ಶಾಲೆಗಳ ಕಡೆಗೆ ಮುಖ ಮಾಡುತ್ತಿದ್ದಾರೆ.

ಇಂತಹ ಸಮಯದಲ್ಲಿ ಸಾವಿರಾರು ಕುಟುಂಬಗಳಿಗೆ ಸರ್ಕಾರದ ನಿರ್ಧಾರವೊಂದು ಮತ್ತೊಮ್ಮೆ ಗಾಯದ ಮೇಲೆ ಬರೆ ಎಳೆದಂತೆ, ಬರ ಸಿಡಿಲಿನಂತೆ ಬಂದಪ್ಪಳಿಸಿದೆ. ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ನೆಪವೊಡ್ಡಿ ಸರ್ಕಾರವು 1 ರಿಂದ 9 ನೇ ತರಗತಿ ಮಕ್ಕಳಿಗೆ ಆಫ್ ಲೈನ್ ತರಗತಿಗಳನ್ನು ರದ್ದುಗೊಳಿಸಿ, ಆನ್ ಲೈನ್ ನಲ್ಲಿ ತರಗತಿಗಳನ್ನು ನಡೆಸಲು ಸೂಚಿಸಿದೆ.ಇದು ಬಹುತೇಕ ಪಾಲಕ ಪೋಷಕರ ಅಸಮಾಧಾನಕ್ಕೆ ಕಾರಣವಾಗಿದೆ. ಆನ್‌ಲೈನ್‌ ತರಗತಿಗಾಗಿ ಮನೆಗಳಲ್ಲಿ ಮಕ್ಕಳನ್ನು ಒಂಟಿಯಾಗಿ ಬಿಟ್ಟು ಹೋಗಲು ಸಾಧ್ಯವೇ? ಎಂಬ ಪ್ರಶ್ನೆ, ತಲೆ ಮೇಲಿನ ಕಲ್ಲುಗುಂಡಿನಷ್ಟು ಬಾರದಂತೆ ಪೋಷಕರನ್ನು ಇನ್ನಿಲ್ಲದಂತೆ ಕಾಡುತ್ತಿದೆ.

 

ಪೋಷಕರ ಸಹಾಯವಿಲ್ಲದೆ 1-5 ನೇ ತರಗತಿಯಲ್ಲಿ ಓದುತ್ತಿರುವ ಮಗುವೊಂದು ತನ್ನಷ್ಟಕ್ಕೆ ಫೋನನ್ನು ಆನ್ ಮಾಡಿಕೊಂಡು ತರಗತಿಗೆ ಲಾಗಿನ್ ಆಗಲು ಸಾಧ್ಯವೇ? ಅಕ್ಕ- ಪಕ್ಕದವರಿಗೆ ಹೇಳಿ ಹೋಗೋಣವೆಂದರೆ ಎಲ್ಲರ ಮನೆಗಳಲ್ಲೂ ದಂಪತಿಗಳಿಬ್ಬರೂ ಕೆಲಸಕ್ಕೆ ಹೋಗುತ್ತಿರುವುದು ಸರ್ವೇ ಸಾಮಾನ್ಯ ಸಂಗತಿಯಾಗಿದೆ. ಗಂಡ ಹೆಂಡತಿಯರಲ್ಲಿ ಯಾರಾದರೊಬ್ಬರು ಮಾತ್ರ ಕೆಲಸಕ್ಕೆ ಹೋಗಿ ಇನ್ನೊಬ್ಬರು ಮಗುವಿನ ಜತೆಗಿರಬೇಕಾದ ತುರ್ತು ಸಂದರ್ಭ ಒದಗಿಬಂದಿದೆ. ಆದರೆ ಒಬ್ಬರ ದುಡಿಮೆಯಿಂದ ಬೆಂಗಳೂರಿನಲ್ಲಿ ಬದುಕುವುದಂತೂ ಸಾಧ್ಯವೇ ಇಲ್ಲವೆಂಬ ಕಟುಸತ್ಯ ಎಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ. ಹೀಗಾಗಿ ಪೋಷಕರ ಪರಿಸ್ಥಿತಿ ಅಡಕತ್ತರಿಯಲ್ಲಿ ಸಿಲುಕಿದ ಅಡಕೆಯಂತಾಗಿದೆ.

ಅನೇಕ ಮನೆಗಳಲ್ಲಿ ಒಂಟಿ ಪೋಷಕರು ಇರುತ್ತಾರೆ. ಅವರ ಕಥೆಯೇನು? ಕೆಲಸ ಬಿಟ್ಟು ಅವರು ಮನೆಯಲ್ಲಿ ಕೂರಲು ಸಾಧ್ಯವೆ? ತಾವು ಕೆಲಸ ಮಾಡುತ್ತಿರುವ ಸ್ಥಳಗಳಿಗೆ ಮಕ್ಕಳನ್ನು ಕರೆದೊಯ್ಯಲು ಅನೇಕ ಕಡೆ ನಿರ್ಬಂಧವಿದೆ. ಹೆಚ್ಚುತ್ತಿರುವ ಕೊರೋನಾ ಕಾಲಘಟ್ಟದಲ್ಲಂತೂ ಯಾರೂ ಇತರರ ಮಕ್ಕಳನ್ನು ತಮ್ಮ ಬಳಿ ಇಟ್ಟುಕೊಳ್ಳಲು ಇಷ್ಟಪಡುವುದಿಲ್ಲ.ಒಂದು ಕಾಲದಲ್ಲಿ ದುಡಿಯುವ ಮಹಿಳೆಯರ ಅನುಕೂಲಕ್ಕಾಗಿ ಗಾರ್ಮೆಂಟ್ಸ್ ಗಳಲ್ಲಿ ಮಕ್ಕಳನ್ನು ನೋಡಿಕೊಳ್ಳುವ ವ್ಯವಸ್ಥೆ ಇತ್ತು. ಕೊರೋನಾ ಸಂದರ್ಭದಲ್ಲಿ ಯಾವ ಕಾರ್ಖಾನೆಯವರು ಇಂತಹ ರಿಸ್ಕ್ ಗಳನ್ನು ತೆಗೆದುಕೊಳ್ಳಲು ಸಿದ್ಧರಿಲ್ಲ.

ಇದು ಒಂದು ರೀತಿಯ ಸಮಸ್ಯೆಯಾದರೆ, ಹೆಣ್ಣುಮಕ್ಕಳ ಪೋಷಕರಿಗೆ ತಮ್ಮ ಮಕ್ಕಳನ್ನು ಮನೆಯಲ್ಲಿ ಬಿಟ್ಟು ಹೋಗಲು ಸಾಧ್ಯವೇ? ಎಂಬ ಅವರ ಸುರಕ್ಷತೆಯ ಪ್ರಶ್ನೆ ಬೃಹದಾಕಾರವಾಗಿ ಎದುರಾಗುತ್ತದೆ. ಪೋಷಕರು ಒಳಗೆ ಅಡುಗೆ ಮಾಡುತ್ತಿರುವ ಸಮಯದಲ್ಲಿಯೇ, ಹೊರಗೆ ಆಟವಾಡುತ್ತಿದ್ದ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ದಿನನಿತ್ಯ ನಾವು ಪತ್ರಿಕೆಗಳಲ್ಲಿ ಓದುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಪೋಷಕರೇ ಇಲ್ಲದೆ ಕೇವಲ ಮಕ್ಕಳು ಮಾತ್ರ ಮನೆಯಲ್ಲಿರುವ ಪರಿಸ್ಥಿತಿಯಲ್ಲಿ ಏನೆಲ್ಲಾ ಅನಾಹುತಗಳಿಗೆ ಎಡೆಯಾಗಬಹುದು ಎಂಬುದು ಈಗ ಎಲ್ಲರ ಆತಂಕದ ಕಾಳಜಿಯಾಗಿದೆ.

ಈ ರೀತಿ ಏನಾದರೂ ಹೆಚ್ಚು ಕಮ್ಮಿಯಾದರೆ ಇದರ ಜವಾಬ್ದಾರಿಯನ್ನು ಸರ್ಕಾರ ಹೊರಲು ಸಿದ್ಧವಿದೆಯೇ? ಬರೀ ಇಷ್ಟೇ ಆಗಿರದೆ ಇದರ ಇನ್ನೊಂದು ಕರಾಳ ಮುಖವೂ ನಮಗೆಲ್ಲ ಗೊತ್ತಿರಬೇಕಾಗುತ್ತದೆ. ಮಕ್ಕಳ ಕಳ್ಳಸಾಗಾಣಿಕೆಯ ಬಹುದೊಡ್ಡ ಜಾಲಗಳು ಕಾರ್ಯಾಚರಣೆ ನಡೆಸುತ್ತಿವೆ. ಅದರಲ್ಲೂ ಹೆಣ್ಣುಮಕ್ಕಳ ಕಳ್ಳಸಾಗಾಣಿಕೆಯಂತೂ ನಮ್ಮ ದೇಶದಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ವರದಿಗಳನ್ನು ನಾವು ಗಮನಿಸುತ್ತಿದ್ದೇವೆ. ಇಂತಹ ಜಾಲಗಳಿಗೆ ಮನೆಗಳಲ್ಲಿ ಒಬ್ಬಂಟಿಯಾಗಿರುವ ಮಕ್ಕಳು ಗುರಿಯಾದರೆ ಗತಿಯೇನು? ಎಂಬುದು ಮಾನವೀಯ ಕಳಕಳಿಯ ಎಲ್ಲರ ಪ್ರಶ್ನೆಯಾಗಿದೆ.

ಮತ್ತೂ ಒಂದು ಸಮಸ್ಯೆ ಇಲ್ಲಿದೆ. ಒಂಟಿ ಮಕ್ಕಳನ್ನು ಮನೆಯಲ್ಲಿ ಕೂಡಿ ಹಾಕಿ ಹೋದರೆ ಮಕ್ಕಳ ಮಾನಸಿಕ ಅಸ್ವಸ್ಥತೆಗೆ ಕಾರಣವಾಗುವುದಿಲ್ಲವೆ? ಇದು ಮಕ್ಕಳ ಹಕ್ಕುಗಳ ಉಲ್ಲಂಘನೆಯಲ್ಲವೆ? ಇತರ ಸಹಪಾಠಿಗಳೊಂದಿಗೆ ನಗುನಗುತಾ ಲವಲವಿಕೆಯಿಂದ ಶಾಲೆಗಳಲ್ಲಿ ಕಲಿಯುವ ಮನಸ್ಥಿತಿಯನ್ನು ರೂಢಿಸಿಕೊಂಡ ಮಗುವೊಂದು,ಏಕಾಏಕಿ ಏಕಾಂಗಿಯಾಗಿ ಕುಳಿತು ಪಾಠ ಕೇಳುವ ಪರಿಸ್ಥಿತಿಯ ಮನಸ್ಥಿತಿಗೆ ಒಗ್ಗಲು ಸಾಧ್ಯವೇ?ಮಕ್ಕಳ ಮನೋ ಭೂಮಿಕೆಯಲ್ಲಿ ಏಕಾಂತತೆ ಮೂಡಿಸುವ ಅಕರಾಳ ವಿಕರಾಳ ಭಾವನೆಗಳು ಮುಂದೆ ಮಗುವನ್ನು ಯಾವ ರೀತಿ ರೂಪಿಸಬಹುದು ಎಂಬ ಪ್ರಶ್ನೆಗಳಿಗೆ ಮನಶ್ಶಾಸ್ತ್ರತಜ್ಞರು ಉತ್ತರಿಸಬೇಕಿದೆ.

ಅನೇಕ ಮನೆಗಳಲ್ಲಿ ಅಪ್ಪಂದಿರು ಮಾತ್ರ ಕೆಲಸಕ್ಕೆ ಹೋಗಿ ಅಮ್ಮಂದಿರು ಮನೆಯಲ್ಲಿರುವ ಉದಾಹರಣೆಗಳಿವೆ.ಆದರೂ ಮಕ್ಕಳು ಅಮ್ಮಂದಿರ ಮಾತನ್ನು ಗಣನೆಗೆ ತೆಗೆದುಕೊಳ್ಳದೆ ಆನ್ ಲೈನ್ ತರಗತಿಗಳು ನಡೆಯುವ ಸಂದರ್ಭದಲ್ಲಿ ಅಮ್ಮ ಮಾಡುವ ಮನೆ ಕೆಲಸ,ಅಕ್ಕಪಕ್ಕದವರ ಜತೆ ಮಾತುಕತೆಯ ಕಡೆಗೆ ಗಮನ ಹರಿಸುವುದು,ದಿನಸಿ ತರಕಾರಿ ತರಲು ಅಂಗಡಿಗೆ ಹೋದರೆ ತರಗತಿಗಳನ್ನು ಮೊಟಕುಗೊಳಿಸಿ ತಾನೂ ಜತೆಯಲ್ಲಿ ಬರುತ್ತೇನೆಂದು ಹಟ ಮಾಡುವುದು ಮಾಮೂಲಿಯಾಗಿದೆ ಎಂದು ಅನೇಕ ಅಮ್ಮಂದಿರ ಅಭಿಪ್ರಾಯವಾಗಿದೆ.

ಇನ್ನೂ 6-9 ನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳ ಕೈಗೆ ಸ್ವತಂತ್ರವಾಗಿ ಫೋನನ್ನು ಕೊಡಲು ಪೋಷಕರು ಸಿದ್ಧರಿಲ್ಲ.ಏಕೆಂದರೆ ಕಳೆದ 2 ವರ್ಷಗಳಿಂದ ಮಕ್ಕಳಲ್ಲಿ ಆಗಿರುವ ಅಸಹಜ ನಡವಳಿಕೆ ಇದಕ್ಕೆ ಕಾರಣವಾಗಿದೆ. ಗೇಮ್ ಗಳಿಗೆ, ಸಿನಿಮಾಗಳಿಗೆ, ಅಶ್ಲೀಲ ವಿಡಿಯೋಗಳಿಗೆ ಮತ್ತು ಕೆಲವರು ಚಾಟಿಂಗ್ ಗೆ ಆಡಿಟ್ ಆಗಿರುವುದೇ ಇದಕ್ಕೆ ಕಾರಣ. ಕೇವಲ ಬೆರಳೆಣಿಕೆಯಷ್ಟು ಮಕ್ಕಳು ಮಾತ್ರ ಪಾಠ ಕೇಳುವಲ್ಲಿ ನಿರತರಾಗಿರುತ್ತಾರೆ. ಉಳಿದ ಅನೇಕರು ಇಂತಹ ಚಟಗಳಿಗೆ ಸಮಯವನ್ನು ಪೋಲು ಮಾಡುತ್ತಾ ತಪ್ಪುದಾರಿ ತುಳಿಯುತ್ತಿರುವುದು ಇತ್ತೀಚಿನ ಅನೇಕ ವರದಿಗಳಿಂದ ಮತ್ತು ಪೋಷಕರ ನೋವಿನ ನುಡಿಗಳಿಂದ ತಿಳಿಯಬಹುದಾಗಿದೆ.

ಆಫ್ ಲೈನ್ ತರಗತಿಗಳು ನಡೆಯುತ್ತಿರುವುದರಿಂದ ಪೋಷಕರು ಫೋನಿನ ರೀಚಾರ್ಜ್ ಮಾಡಿಸಲಿಲ್ಲವೆoಬ ಕಾರಣಕ್ಕೆ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಇತ್ತೀಚೆಗೆ ನಾವು ಪತ್ರಿಕೆಗಳಲ್ಲಿ ಓದಿದ್ದೇವೆ. ತರಗತಿಗಳು ನಡೆಯುವ ಸಂದರ್ಭದಲ್ಲೂ ಕೆಲವು ಮಕ್ಕಳು ಫೋನಿನಲ್ಲಿ ತಲ್ಲೀನವಾಗಿರುವುದನ್ನು ಕಂಡುಹಿಡಿದು, ಅವರ ಪೋಷಕರನ್ನು ಕರೆದು ಎಚ್ಚರಿಸುತ್ತಿರುವುದು ಅನೇಕ ಶಾಲೆಗಳಲ್ಲಿ ದಿನನಿತ್ಯ ನಡೆಯುತ್ತಿರುವ ಸಂಗತಿಯಾಗಿದೆ. ಶಿಕ್ಷಕರು ಮಾಡುತ್ತಿರುವ ಪಾಠಗಳ ಕಡೆ ಗಮನವನ್ನೇ ಕೊಡದೆ ಏನನ್ನೋ ಯೋಚಿಸುತ್ತಿರುವಂತೆ ಮಕ್ಕಳು ಅನ್ಯಮನಸ್ಕರಾಗಿರುವುದು ಅನೇಕ ಶಾಲೆಗಳಲ್ಲಿ ಕಂಡುಬರುತ್ತಿದೆ.

ತಾವು ಫೋನಿನಲ್ಲಿ ನೋಡಿದ ವಿಡಿಯೋಗಳ ಪ್ರಭಾವದಿಂದ ಗಂಡು- ಹೆಣ್ಣು ಮಕ್ಕಳು ಪರಸ್ಪರ ನೋಡುವ ನೋಟವೇ ಸಂಪೂರ್ಣ ಬದಲಾಗಿದೆ ಎಂಬುದು ಕೂಡ ಇತ್ತೀಚಿನ ವರದಿಗಳಿಂದ ತಿಳಿದು ಬರುತ್ತದೆ. ತಮ್ಮ ಶಾಲೆಯ ಸಹಪಾಠಿಗಳೊಂದಿಗೆ,ನೆರೆಹೊರೆಯವರೊಂದಿಗೆ ಅಥವಾ ಅನಾಮಿಕರೊಂದಿಗೆ ಲವ್ ಸೆಳೆತಕ್ಕೊಳಗಾಗಿ ಮಕ್ಕಳು ಗಂಟೆಗಟ್ಟಲೆ ಫೋನಿನಲ್ಲಿ ಮಾತನಾಡುತ್ತಿರುವ ವಿದ್ಯಮಾನವು ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾಗಿದೆ. ಗೇಮ್ ಗಳನ್ನು ಅನುಕರಿಸಲು ಹೋಗಿ ಅನೇಕ ಮಕ್ಕಳು ಸಾವನ್ನಪ್ಪಿರುವ ವಿಷಯ ಕೂಡ ಈಗಾಗಲೇ ನಮಗೆ ತಿಳಿದಿದೆ. ಹಾಗೆಯೇ ಸಿನಿಮಾ ಪ್ರಭಾವದಿಂದ ಮಕ್ಕಳ ಉಡುಗೆ-ತೊಡುಗೆ- ನಡಿಗೆ-ನಡವಳಿಕೆ ಮತ್ತು ಮಾತನಾಡುವ ಶೈಲಿಯೂ ಸಂಪೂರ್ಣ ಬದಲಾಗಿರುವುದು ಕೂಡ ಇತ್ತೀಚಿನ ಬೆಳವಣಿಗೆಯಾಗಿದೆ.

2 ವರ್ಷಗಳಿಂದ ಸರಿಯಾಗಿ ಶಾಲೆಗಳಿಲ್ಲದೆ ಓದು- ಬರವಣಿಗೆಯನ್ನು ಮರೆತ ಮಕ್ಕಳನ್ನು ಮತ್ತೆ ಮೊದಲಿನ ಹಳಿಗೆ ತರಲು ಶಿಕ್ಷಕರು ಪಡುತ್ತಿರುವ ಪಾಡಂತೂ ಯಾರಿಗೂ ಬೇಡವಾಗಿದೆ. ಈ ಬಗ್ಗೆ ಯಾವುದೇ ಶಾಲೆಯ ಶಿಕ್ಷಕರನ್ನು ವಿಚಾರಿಸಿದರೂ ನಿಮಗೆ ನೂರೊಂದು ವ್ಯಥೆಯ ಕಥೆಗಳು ಸಿಗುವುದು ನಿಶ್ಚಿತ. ಶಿಕ್ಷಕರು ಹೇಳುವುದನ್ನು ಗಮನವಿಟ್ಟು ಕೇಳದೆ, ಹೇಳಿದ ಮನೆ ಪಾಠಗಳನ್ನು ಸರಿಯಾಗಿ ಮಾಡದೆ, ಗದರಿಸಿ ಕೇಳಿದರೆ ಉದ್ದಟತನದ ಉತ್ತರಗಳನ್ನು ಕೊಡುವಷ್ಟರ ಮಟ್ಟಿಗೆ ಮಕ್ಕಳಲ್ಲಿ ಆಗಿರುವ ಬದಲಾವಣೆ ಎದ್ದು ಕಾಣುತ್ತಿದೆ. ಅಷ್ಟರಮಟ್ಟಿಗೆ ಆನ್ ಲೈನ್ ತರಗತಿಗಳ ಹೆಸರಿನಲ್ಲಿ ಮಕ್ಕಳು ಹಿಡಿದಿರುವ ಆಘಾತಕರ ಹಾದಿ ಆತಂಕಕ್ಕೆ ಕಾರಣವಾಗಿದೆ.

ಹರಡುತ್ತಿರುವ ಸಾಂಕ್ರಾಮಿಕ ರೋಗದ ನಿಯಂತ್ರಣಕ್ಕೆ ಸರ್ಕಾರಿ ತೆಗೆದುಕೊಂಡಿರುವ ಈ ಕ್ರಮ ಮೇಲ್ನೋಟಕ್ಕೆ ಸರಿ ಯಂತೆ ಕಂಡರೂ, ಮೇಲಿನ ಅಂಶಗಳನ್ನೆಲ್ಲ ಗಮನಿಸಿದಾಗ ಸರ್ಕಾರದ ನಿರ್ಧಾರ ಎಷ್ಟು ಆಘಾತಕಾರಿ ಎಂಬುದು ನಮಗೆ ಮನದಟ್ಟಾಗುತ್ತದೆ. ಸರಕಾರವೇ ಖುದ್ದು ನಿಂತು ಮಕ್ಕಳ ಅದೋಗತಿಗೆ ಕಾರಣವಾಗುತ್ತಿದೆ ಎಂಬುದು ಅನೇಕ ಪೋಷಕರ ನೇರ ಆರೋಪವಾಗಿದೆ. ದೃಶ್ಯಮಾಧ್ಯಮಗಳ ಅಂಕೆಯಿಲ್ಲದ ಚೀರಾಟಕ್ಕೆ ಮಣಿಯುವ ಸರ್ಕಾರ, ಹಿಂದು- ಮುಂದು ಯೋಚಿಸದೆ ತೆಗೆದುಕೊಳ್ಳುವ ತಪ್ಪು ನಿರ್ಧಾರಗಳು ಎಷ್ಟೊಂದು ಅನಾಹುತಕ್ಕೆ ಕಾರಣವಾಗುತ್ತದೆ ಎಂಬುದು ಮೇಲಿನ ವಿಶ್ಲೇಷಣೆಗಳಿಂದ ತಿಳಿದುಬರುತ್ತದೆ.ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಶಾಲಾ ಶಿಕ್ಷಕ ಮಂಡಳಿಗಳು, ಮಕ್ಕಳ ಹಕ್ಕುಗಳ ಆಯೋಗ,ಶಾಲಾ ಶಿಕ್ಷಕರು ಮತ್ತು ಪೋಷಕರ ಅಭಿಪ್ರಾಯ ಸಂಗ್ರಹಿಸಿ, ನಂತರ ನಿರ್ಧಾರ ಕೈಗೊಳ್ಳುವ ಕನಿಷ್ಠ ಜ್ಞಾನವೂ ಸರ್ಕಾರಕ್ಕಿಲ್ಲದಂತಾಗಿದೆ.

ಶಾಲೆಗಳನ್ನು ಮುಚ್ಚಿಸಿ ಮಕ್ಕಳನ್ನು ಮನೆಗಳಲ್ಲಿರಿಸಿದರೆ ಹೊರಗೆ ಕೆಲಸಕ್ಕೆ ಹೋಗಿ ಬರುವ ಪೋಷಕರಿಂದ ಕೊರೋನಾ ಮಕ್ಕಳಿಗೆ ದಾಟುವುದಿಲ್ಲವೇ? ಅಷ್ಟಕ್ಕೂ ಮಕ್ಕಳು ನಿಜಕ್ಕೂ ಮನೆಯಲ್ಲಿಲ್ಲ. ಹೊರಗಡೆಯೇ ಇದ್ದಾರೆ. ಎಲ್ಲಾ ಜಾಗದಲ್ಲೂ ಇದ್ದಾರೆ. ಮಾಲ್ , ಥಿಯೇಟರ್‌, ರೆಸ್ಟೋರೆಂಟ್, ಬಸ್ಸು- ರೈಲು ನಿಲ್ದಾಣಗಳು, ಮದುವೆ- ಮುಂಜಿಯoತಹ ಅನೇಕ ಕಾರ್ಯಕ್ರಮಗಳು-ಹೀಗೆ ಎಲ್ಲದರಲ್ಲೂ ಮಕ್ಕಳ ಉಪಸ್ಥಿತಿ ಎದ್ದು ಕಾಣುತ್ತಿದೆ.ಶಾಲಾ ಆಡಳಿತ ಮಂಡಳಿಗಳು ತಮ್ಮ ಶಾಲೆಗಳ ಗೌರವಕ್ಕಾಗಿ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಅನೇಕ ಸುಧಾರಣಾ ಕ್ರಮಗಳನ್ನು ಕೈಗೊಂಡಿರುವುದು ಎಲ್ಲೆಡೆ ಕಂಡು ಬರುತ್ತಿದೆ. ಆದರೆ ಹೊರಗಡೆ ಆರೋಗ್ಯ ಮಾರ್ಗಸೂಚಿ ನಿಯಮಗಳು ಎಷ್ಟರಮಟ್ಟಿಗೆ ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ನಾವೆಲ್ಲ ಕಾಣುತ್ತಿದ್ದೇವೆ.ಹೀಗಾಗಿ ಕೊರೋನಾ ಶಾಲೆಗಳಿಗಿಂತ ಹೆಚ್ಚಾಗಿ ಇತರೆಡೆಯಿಂದಲೇ ಹರಡುವುದು ಖಚಿತ ಎಂಬುದು ಸತ್ಯಸಂಗತಿಯಾಗಿದೆ.

“ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಯ ಸಂಘಟನೆಗಳು ಪ್ರಾಮಾಣಿಕವಾಗಿ ಕೋವಿಡ್ ನಿಯಂತ್ರಣ ಮಾಡಿ ಎಂದು ಸರ್ಕಾರವನ್ನು ಒತ್ತಾಯಿಸಿದಾಗ, ಯಾವುದೇ ಜವಾಬ್ದಾರಿ ಹಾಗೂ ಇಚ್ಛಾಶಕ್ತಿ ಪ್ರದರ್ಶಿಸದೆ ಕೇವಲ ಕ್ರಮ ತೆಗೆದುಕೊಂಡಿದ್ದೇವೆ, ನಿಯಂತ್ರಿಸುತ್ತೇವೆ ಎಂಬ ಹೆಸರಿನಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಗಿತ ಮಾಡಿರುವುದು ದುರ್ದೈವ,ತುಂಬಲಾರದ ಶೈಕ್ಷಣಿಕ ನಷ್ಟ ಹಾಗೂ ಶೈಕ್ಷಣಿಕ ತುರ್ತು ಪರಿಸ್ಥಿತಿ” ಎಂದು ಕ್ಯಾಂಮ್ಸ್ ಸಂಘಟನೆಯ ಕಾರ್ಯದರ್ಶಿ ಡಿ. ಶಶಿಕುಮಾರ್ ರವರು ಅಭಿಪ್ರಾಯಪಟ್ಟಿದ್ದಾರೆ. “ಈಗಾಗಲೇ ಎಲ್ಲ ಶಾಲೆಗಳಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಕಟ್ಟುನಿಟ್ಟಾಗಿ ಎಸ್ಒಪಿಯನ್ನು ಅಳವಡಿಸಲಾಗಿದೆ. ಶಿಕ್ಷಣ ಸಂಸ್ಥೆಗಳ ಒಳಗೆ ಎಲ್ಲಾ ಕನಿಷ್ಠ ನಿಯಮಗಳನ್ನು ಪಾಲಿಸಿ ಎಲ್ಲೂ ಕೂಡ ತೊಂದರೆಯಾಗದಂತೆ ನೋಡಿಕೊಳ್ಳಲಾಗಿದೆ. ವರದಿಯಾಗಿರುವ ಅಲ್ಲೊಂದು ಇಲ್ಲೊಂದು ಪ್ರಕರಣಗಳು ಶಾಲೆಗಳಿಂದ ಬಂದಿದ್ದಂತೂ ಅಲ್ಲ. ಅದು ರೆಸಿಡೆನ್ಸಿಯಲ್ ಶಾಲೆಗಳಲ್ಲಿ ಮಕ್ಕಳ ಪೋಷಕರ ಸಂಪರ್ಕದಿಂದ ಬಂದಿರಬಹುದು” ಎಂಬುದು ಅವರ ಸಮಜಾಯಿಷಿಯಾಗಿದೆ.

ಕಳೆದ ಲಾಕ್‌ ಡೌನ್ ಸಮಯದಲ್ಲಿ ಮನೆಯಲ್ಲಿದ್ದ 2 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಕೊರೋನಾ ಸೋಂಕು ತಗುಲಿರುವುದು, ಶಾಲೆಗಳನ್ನು ತೆರೆಯುವುದರಿಂದ ಮಕ್ಕಳಿಗೆ ಕೊರೊನಾ ಸೋಂಕು ಹರಡುತ್ತದೆ ಎಂಬ ಸರ್ಕಾರದ ಅಭಿಪ್ರಾಯಕ್ಕೆ ವ್ಯತಿರಿಕ್ತವಾದದ್ದಾಗಿದೆ. ಶಿಕ್ಷಣ ಸಚಿವರು ಯಾವುದೇ ಕಾರಣಕ್ಕೂ ಶಾಲೆಗಳನ್ನು ಮುಚ್ಚುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ ದಿನವೇ ಅದಕ್ಕೆ ವ್ಯತಿರಿಕ್ತವಾಗಿ ಸಮಿತಿ ನಿರ್ಧಾರ ತೆಗೆದುಕೊಂಡಿರುವುದು ನಿಜಕ್ಕೂ ಅಸಮಂಜಸವಾಗಿದೆ. ತಾಂತ್ರಿಕ ಸಮಿತಿ ಸಹ ಸದ್ಯದ ಮಟ್ಟಿಗೆ ಶಾಲೆಗಳನ್ನು ಮುಚ್ಚಲು ಒಲವು ತೋರಿರಲಿಲ್ಲ. ಆದರೆ ಮುಖ್ಯಮಂತ್ರಿಗಳು ಮತ್ತು ಆರೋಗ್ಯ ಸಚಿವರೇ ನಿರ್ಧಾರ ಕೈಗೊಂಡು ಶಿಕ್ಷಣ ಮಂತ್ರಿಗಳ ಮಾತಿಗೆ ಬೆಲೆ ಕೊಟ್ಟಿಲ್ಲ ಎಂಬಂತೆ ಗೋಚರಿಸುತ್ತಿದೆ.

ದೊಡ್ಡವರಿಗಿಂತ ಮಕ್ಕಳಲ್ಲಿಯೇ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ ಎಂಬ ಸಾಮಾನ್ಯ ಜ್ಞಾನವೂ ಇಲ್ಲದೆ, ಮಕ್ಕಳ ಆರೋಗ್ಯದ ಕುಂಟು ನೆಪವನ್ನೊಡ್ಡಿ, ಉಳಿದ ಎಲ್ಲವನ್ನೂ ಯಥಾಸ್ಥಿತಿಯಲ್ಲಿ ಕಾಯ್ದುಕೊಂಡು, ಕೇವಲ ಶಾಲಾ ಮಕ್ಕಳ ಮೇಲೆ ಕೆಂಗಣ್ಣು ಬೀರುತ್ತಿರುವುದರ ಹಿಂದಿನ ಉದ್ದೇಶವಾದರೂ ಏನು? ಎಂಬುದು ಅನೇಕ ಪೋಷಕರ ಬಿಡಿಸಲಾರದ ಒಗಟಾಗಿದೆ.ಈಗಾಗಲೇ ತಜ್ಞರು ನೀಡಿರುವ ಶಿಫಾರಸುಗಳು ಮಕ್ಕಳಿಗೆ ಹೆಚ್ಚಿನ ಸ್ವರೂಪದಲ್ಲಿ ಸಮಸ್ಯೆ ಉಂಟಾಗುವುದಿಲ್ಲ ಎಂಬುದಾಗಿ ಒತ್ತಿ ಹೇಳಿವೆ. ಹಾಗೆಯೇ ಮಕ್ಕಳಿಗೆ ವ್ಯಾಕ್ಸಿನ್ ಅವಶ್ಯಕತೆಯೂ ಇರುವುದಿಲ್ಲ ಎಂಬುದಾಗಿ ಅಭಿಪ್ರಾಯಪಟ್ಟಿವೆ. ಈ ಎಲ್ಲ ಅಭಿಪ್ರಾಯಗಳನ್ನು ಬದಿಗೊತ್ತಿ, ಎಲ್ಲಾ ವಲಯಗಳನ್ನು ಮುಕ್ತವಾಗಿರಿಸಿ, ಕೇವಲ ಶಿಕ್ಷಣ ಸಂಸ್ಥೆಗಳನ್ನು ಮುಚ್ಚುವ ನಿರ್ಧಾರ ಪಾಲಕ-ಪೋಷಕರಲ್ಲಿ ಆತಂಕ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.

ಮನೆಗಳಲ್ಲಿ ಎಷ್ಟೇ ಪ್ರಯತ್ನ ಪಟ್ಟರೂ ಶಾಲೆಗಳಲ್ಲಿ ಕಲಿಸುವ ರೀತಿ ಮಕ್ಕಳನ್ನು ಜ್ಞಾನಾರ್ಜಿತರನ್ನಾಗಿ ಮಾಡುವುದು ಸಾಧ್ಯವೇ ಇಲ್ಲವೆಂಬ ಕಟುಸತ್ಯ ಅರಿತಿರುವ ಪೋಷಕರು, ಯಾವುದೇ ಕಾರಣಕ್ಕೆ ಶಾಲೆಗಳನ್ನು ಮುಚ್ಚಬಾರದೆಂದು ಸರ್ಕಾರಕ್ಕೆ ಹಕ್ಕೊತ್ತಾಯ ಮಂಡಿಸುತ್ತಿದ್ದಾರೆ. ಕೆಲವು ಸೂಕ್ಷ್ಮ ದೇಹಸ್ಥಿತಿಯ ಮಕ್ಕಳ ಪೋಷಕರನ್ನು ಹೊರತುಪಡಿಸಿ ಉಳಿದೆಲ್ಲಾ ಪೋಷಕರು ಯಾವುದೇ ಕಾರಣಕ್ಕೆ ಆನ್ ಲೈನ್ ತರಗತಿಗಳು ಬೇಡವೇ ಬೇಡವೆಂದು ಗಟ್ಟಿದನಿಯಲ್ಲಿ ಮಾತನಾಡುತ್ತಿರುವುದು ಎಲ್ಲೆಡೆ ಕಂಡುಬರುತ್ತಿದೆ.

ಕೊರೋನಾ ಎರಡನೆಯ ಅಲೆಯ ಸಮಯದಲ್ಲಿ ಆಗಿನ ಶಿಕ್ಷಣ ಸಚಿವರು ಖಾಸಗಿ ಶಾಲಾ ಮಂಡಳಿಗಳ ಜತೆ ಜಿದ್ದಿಗೆ ಬಿದ್ದವರಂತೆ ಜಟಾಪಟಿಗಿಳಿದು, ಅನೇಕ ತಪ್ಪು ನಿರ್ಧಾರಗಳನ್ನು ಕೈಗೊಂಡು ಶಿಕ್ಷಣ ಕ್ಷೇತ್ರ ಸಂಪೂರ್ಣ ಹಳಿ ತಪ್ಪುವಂತೆ ಮಾಡಿದ್ದರು. ಇದೀಗ ತುಂಬಾ ಸರಳ ವ್ಯಕ್ತಿತ್ವದವರೆಂದು ಹೆಸರಾಗಿರುವ ಶಿಕ್ಷಣ ಸಚಿವ ಬಿ ಸಿ ನಾಗೇಶ್ ರವರು,ಮೊದಲಿನ ಶಿಕ್ಷಣ ಸಚಿವರ ಹಾದಿಯಲ್ಲಿ ಸಾಗದೆ ಎಲ್ಲರನ್ನೊಳಗೊಂಡು, ಎಲ್ಲರೊಡನೆ ಸಮಾ ಲೋಚಿಸಿ ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕೆಂಬುದು ಎಲ್ಲೆಡೆ ಕೇಳಿ ಬರುತ್ತಿರುವ ಮಾತಾಗಿದೆ.ಪೋಷಕರು,ಖಾಸಗಿ ಶಾಲಾ ಶಿಕ್ಷಣ ಮಂಡಳಿಗಳ ಸಂಘಟನೆಗಳ ಮುಖ್ಯಸ್ಥರು, ಶಿಕ್ಷಣ ತಜ್ಞರುಗಳನ್ನು ಕರೆದು ಸಮಾಲೋಚನೆ ಮಾಡಬೇಕೆ ಹೊರತು ಕೇವಲ ತಾಂತ್ರಿಕ ಸಮಿತಿಯವರು, ಮುಖ್ಯಮಂತ್ರಿಗಳು, ಆರೋಗ್ಯ ಮಂತ್ರಿಗಳು ಮತ್ತು ಕ್ಯಾಬಿನೆಟ್ ನವರು ನಿರ್ಧಾರ ತೆಗೆದುಕೊಳ್ಳುವುದು ಸಮಂಜಸವಲ್ಲ.

ಸರ್ಕಾರಿ ಶಾಲೆ ಮತ್ತು ಖಾಸಗಿ ಶಾಲೆಗಳಿಗೆ ಮಕ್ಕಳ ಹಿತದೃಷ್ಟಿಯಿಂದ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿ,ಸುರಕ್ಷಾ ನಿಯಮಗಳನ್ನು ಪಾಲಿಸಬೇಕೆಂಬ ಎಚ್ಚರಿಕೆಯೊಂದಿಗೆ ಶಾಲೆಗಳನ್ನು ಎಂದಿನಂತೆ ನಡೆಸಲು ಅನುವು ಮಾಡಿಕೊಡಬೇಕೆಂಬುದು ಬಹುಜನ ಪೋಷಕರ ಅಭಿಪ್ರಾಯವಾಗಿದೆ. ಶಿಕ್ಷಣ ಸಚಿವರು ಪೋಷಕರ ಅಭಿಪ್ರಾಯಕ್ಕೆ ಮನ್ನಣೆ ನೀಡಿ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆಂಬುದು ಅನೇಕರ ಆಶಯವಾಗಿದೆ. ಇಲ್ಲದೇ ಹೋದರೆ ಈಗಾಗಲೇ ಇಳಿಕೆ ಕಂಡಿರುವ ರಾಜ್ಯ ಸರ್ಕಾರದ ಜನಪ್ರಿಯತೆ ಇನ್ನಷ್ಟು ಪಾತಾಳಕ್ಕೆ ಕುಸಿಯುವುದರಲ್ಲಿ ಅನುಮಾನವೇ ಇಲ್ಲವೆಂಬುದು ಎಲ್ಲೆಡೆ ಕೇಳಿ ಬರುತ್ತಿರುವ ಮಾತಾಗಿದೆ.

“ಸರಕಾರಿ ಶಾಲೆ, ಖಾಸಗಿ ಶಾಲೆ ಎಂಬ ತಾರತಮ್ಯವಿಲ್ಲದೆ ಮಕ್ಕಳ ಹಿತದೃಷ್ಟಿಯಿಂದ,ಮಕ್ಕಳ ಹಕ್ಕು ಬಾಧ್ಯತೆಗೆ ಪೂರಕವಾಗಿ ಸರ್ಕಾರ ವರ್ತಿಸಬೇಕಾಗಿದೆ. ಏಕೆಂದರೆ ಇದು ಸವಿಂಧಾನದ ವಿರುದ್ಧವಾದ ನಡೆಯಾಗಿದೆ. ಸರ್ಕಾರಿ ಶಾಲೆಗಳ ಮಕ್ಕಳಾಗಲಿ, ಖಾಸಗಿ ಶಾಲೆಗಳ ಮಕ್ಕಳಾಗಲಿ, ಮಕ್ಕಳೆಂದರೆ ಮಕ್ಕಳೆ. ಮೂಲಭೂತ ಹಕ್ಕುಗಳಲ್ಲಿ ಶಿಕ್ಷಣ, ಆರೋಗ್ಯ ಎರಡೂ ಇರುವುದರಿಂದ ಆರೋಗ್ಯದ ದೃಷ್ಟಿಯಿಂದ ಶಿಕ್ಷಣವನ್ನು ಕಸಿಯುವುದಾಗಲೀ, ಶಿಕ್ಷಣದ ದೃಷ್ಟಿಯಿಂದ ಆರೋಗ್ಯವನ್ನು ನಿರ್ಲಕ್ಷ್ಯ ಮಾಡುವುದಾಗಲೀ ಆಗಬಾರದು. ಎರಡೂ ಸಮತೋಲನದಲ್ಲಿರಬೇಕು”

 – ಶಶಿಕುಮಾರ್, ಕ್ಯಾಮ್ಸ್ ಸಂಘಟನೆಯ ಕಾರ್ಯದರ್ಶಿ

ನಾವು ಬದುಕಲು ಊರುಗಳಲ್ಲಿ ನಮ್ಮ ಪಾಲಿನ ಯಾವ ಆಸ್ತಿಯೂ ಇಲ್ಲ. ಕೂಲಿ ನಾಲಿ ಮಾಡಿ ಬದುಕೋಣವೆಂದು ನಗರಗಳಿಗೆ ಬಂದಿದ್ದೇವೆ.ನಮ್ಮ ಮಕ್ಕಳೇ ನಮಗೆ ಆಸ್ತಿ. ಅವರನ್ನು ಶಿಕ್ಷಿತರನ್ನಾಗಿ ಮಾಡಿ ಅವರಿಗೊಂದು ಉಜ್ವಲ ಭವಿಷ್ಯ ನೀಡಬೇಕೆಂಬುದು ನಮ್ಮ ಹಂಬಲ. ಕಳೆದ 2 ವರ್ಷಗಳಿಂದ ಶಾಲೆಗಳಿಲ್ಲದೆ ನಮ್ಮ ಮಕ್ಕಳು ಶೈಕ್ಷಣಿಕವಾಗಿ ತುಂಬಾ ಹಿಂದುಳಿಯುವಂತಾಗಿದೆ. ಆದಕಾರಣ ಸರ್ಕಾರ ಯಾವುದೇ ಕಾರಣಕ್ಕೆ ಶಾಲೆಗಳನ್ನು ಬಂದ್ ಮಾಡಬಾರದು”

ರೂಪ, ಗಾರ್ಮೆಂಟ್ಸ್ ಉದ್ಯೋಗಿ

 

ಜಿಲ್ಲೆ

ರಾಜ್ಯ

error: Content is protected !!