Thursday, July 18, 2024

ರೈತರ ಕಲ್ಯಾಣವೇ ಮುಖ್ಯ ಎಂದು ತಿಳಿದು ರೈತ ಜೀವನಾಡಿಯಾದ ಬಾಬಾಗೌಡ ಪಾಟೀಲ; ಸುತ್ತೂರು ಶ್ರೀಗಳು

ಸುದ್ದಿ ಸದ್ದು ನ್ಯೂಸ್

ಹಿರೇ‌ ಬಾಗೇವಾಡಿ: ಸಾಮಾನ್ಯರಾಗಿದ್ದವರೇ ಯಾವತ್ತೂ ಸಮಾಜದಲ್ಲಿ ದೊಡ್ಡವರಾಗಲಿಕ್ಕೆ ಸಾಧ್ಯ ಎಂಬುದಕ್ಕೆ ಕೇಂದ್ರ ಮಾಜಿ ಸಚಿವ
ಬಾಬಾಗೌಡ ಪಾಟೀಲ ಅವರು ಒಂದು ಉತ್ತಮ ಉದಾಹರಣೆ ಎಂದು ಸುತ್ತೂರು ಸಂಸ್ಥಾನ ಮಠದ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಗುರುವಾರ ದಿ. ಬಾಬಾಗೌಡ ಪಾಟೀಲ ರವರ ಪುತ್ಥಳಿ ಅನಾವರಣ ಸಮಾರಂಭದ ದಿವ್ಯ ಸಾನ್ನಿಧ್ಯವಹಿಸಿ ಮಾತೋಶ್ರೀ ಗಂಗಮ್ಮ ಬಾಬಾಗೌಡ ಪಾಟೀಲ ವೇದಿಕೆಯಲ್ಲಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡುತ್ತಿರುವ ಸುತ್ತೂರು ಶ್ರೀಗಳು

ವಿಧಾನ ಸಭಾ ಸದಸ್ಯರಾಗಿ, ಸಂಸದರಾಗಿ ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿದ್ದಂತಹ ಬಾಬಾಗೌಡರು ಸರಳ ಸಜ್ಜನ ಜೀವನ ನಡೆಸಬಹುದು ಎಂಬುದನ್ನು ಸಮಾಜಕ್ಕೆ ತೋರಿಸಿಕೊಟ್ಟವರು. ಸಾಮನ್ಯವಾಗಿದ್ದೂ ಸಮಾಜದಲ್ಲಿ ದೊಡ್ಡವರಾಗಲಿಕ್ಕೆ ಸಾಧ್ಯ ಎಂಬುದನ್ನು ಪಾಟೀಲರು ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡುತ್ತಿರುವ ಕೂಡಲಸಂಗಮ ಶ್ರೀಗಳು

ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಮಹಾಪೀಠದ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ಮಾತನಾಡಿ ರಾಜ್ಯದಲ್ಲಿರುವ ಕೃಷಿ ವಿಶ್ವವಿದ್ಯಾಲಯಗಳ ಅಧ್ಯಯನ ಕೇಂದ್ರಗಳಿಗೆ ಬಾಬಾಗೌಡ ಪಾಟೀಲ ಅವರ
ಹೆಸರನ್ನಿಡಲು ಶಿಫಾರಸ್ಸು ಮಾಡಬೇಕು ಈ ಹಿನ್ನೆಲೆಯಲ್ಲಿ ನಾಡಿನ ಎಲ್ಲ ಸ್ವಾಮೀಜಿಗಳು, ರೈತರು, ರೈತ ಮುಖಂಡರು ಮುಂದಾಗಿ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿ ಗದಗ ತೋಂಟದಾರ್ಯ ಸಂಸ್ಥಾನ ಮಠದ ಜಗದ್ಗುರು ತೋಂಟದ ಡಾ. ಸಿದ್ದರಾಮ ಮಹಾಸ್ವಾಮಿಗಳು ಮಾತನಾಡಿ ಬಾಬಾಗೌಡ ಪಾಟೀಲರಿಗೆ ರೈತರ ಕಲ್ಯಾಣಕ್ಕಾಗಿ ಹಗಲಿರುಳು ದುಡಿದು. ರೈತರಿಗೆ ಶಕ್ತಿಯನ್ನು ತುಂಬಿಕೊಡುವ ಕೆಲಸವನ್ನು ತಮ್ಮ ಜೀವನದುದ್ದಕ್ಕೂ ಮಾಡಿಕೊಂಡು ಬಂದ ಕಾರಣ ಇವರನ್ನು ರೈತ ಸಂತ ಎಂದು ಕರೆಯುತ್ತಾರೆ.
ರೈತರನ್ನು ಸಂಘಟಿಸಿ, ರೈತರ ಪ್ರತಿನಿಧಿಯಾಗಿ ವಿಧಾನಸಭೆಯಲ್ಲಿ ರೈತರ ಧ್ವನಿಯಾದರು. ಕೇಂದ್ರ ಸಚಿವರಾಗಿ ೨೦೦೦ ರಲ್ಲಿ ಪ್ರದಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಮುಖಾಂತರ ರೈತರ ಹೊಲಗಳಿಗೆ ಹೋಗಲು ರಸ್ತೆ ನಿರ್ಮಿಸಿಕೊಟ್ಟ ಅವರು ರೈತರು ಆ, ಆರ್ಥಿಕವಾಗಿ ಮೇಲೆ ಬರಲು ಅನುವು ಮಾಡಿಕೊಟ್ಟರು.
ಬಾಬಾಗೌಡರನ್ನು ಸ್ಮರಿಸಿದರೆ ರೈತ ಕುಲವನ್ನೇ ಸ್ಮರಿಸಿದಂತೆ. ಇಂದು ಅನಾವರಣ ಮಾಡಿದ ಪುತ್ಥಳಿ ನಾಡಿನ ರೈತರಿ ಚೈತನ್ಯ ಕೊಡಲಿದೆ.

ಬಾಬಾಗೌಡರ ಕಂಚಿನ ಪುತ್ಥಳಿ

ಬಾಬಾಗೌಡ ಪಾಟೀಲರು ಕೇವಲ ರೈತ ಸಂಘಟನೆ, ರೈತ ಪರ ಹೋರಾಟವನ್ನಷ್ಟೇ ಮಾಡದೇ, ಸಮಾಜದಲ್ಲಿರುವ ಪುರೋಹಿತ ಶಾಹಿಯಂತಹ ಅನಿಷ್ಟ ಪದ್ಧತಿಗಳನ್ನು ತಿದ್ದುವ ಮೂಲಕ 1989 ರಲ್ಲಿಯೇ ಚಪ್ಪಾಳೆ ತಟ್ಟುವುದರ ಮೂಲಕ ಅನೇಕ ರೈತರ ಮದುವೆ ಮಾಡಿಸಿದ್ದಾರೆ. ಬೆಳಗಾವಿ ಜಿಲ್ಲೆ ಅಖಂಡವಾಗಿ ಉಳಿಯಲು ಬಾಬಾಗೌಡ ಪಾಟೀಲ ಅವರ ನಿಲುವು ಪ್ರಮುಖ ಪಾತ್ರವಹಿಸಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡುತ್ತಿರುವ ಬೈಲೂರು ಶ್ರೀಗಳು

ಮುಂಡರಗಿ ತೋಂಟದಾರ್ಯ-ಬೈಲೂರ ನಿಷ್ಕಲ ಮಂಟಪದ ನಿಜಗುಣ ಪ್ರಭು ತೋಂಟದಾರ್ಯ ಮಹಾಸ್ವಾಮೀಜಿ ಮಾತನಾಡಿ ಭಾರತ ದೇಶ ರೈತರ ದೇಶ, ರೈತೋದ್ದಾರವೇ ದೇಶೋದ್ದಾರ, ರೈತ ಇಲ್ಲದೆ ದೇಶ ಇರಲು ಸಾದ್ಯವಿಲ್ಲ, ದೇಶದ ಬೆನ್ನೆಲುಬಾಗಿ ರೈತರು ನಿಂತಿದ್ದರೆ, ರೈತರ ಮತ್ತು ರೈತ ಹೋರಾಟದ
ಬೆನ್ನೆಲುಬಾಗಿ ಬಾಬಾಗೌಡ್ರು ನಿಂತಿದ್ದರು, ಇನ್ನೂ ಮುಂದಿನದಿನಮಾನಕಾಲದಲ್ಲಿ ಎಲ್ಲ ಮಠಾಧೀಶರು ನಿಲ್ಲಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾತನಾಡುತ್ತಿರುವ ಗಂಗಾಧರ ಅವರು

ರೈತ ಹೋರಾಟಗಾರ ಕೆ.ಟಿ.ಗಂಗಾಧರ ಮಾತನಾಡಿ ಬಾಬಾಗೌಡ ಹಾಗೂ ನಂಜುಂಡ ಸ್ವಾಮಿ ಕಟ್ಟಿದ ಸಂಘಟನೆಯಿಂದ ಮಾತ್ರ ನಮ್ಮ ರೈತರ ಏಳ್ಗೆ ಸಾಧ್ಯ. ರೈತ ದೇಶದ ಬೆನ್ನೆಲುಬು, ರೈತ ಇಲ್ಲದೆ ದೇಶ ಇಲ್ಲಾ, ರೈತನೆ ದೇಶದ ರಾಜ ಎಂದು ಹೇಳುವ ಜನಪ್ರತಿನಿಧಿಗಳೇ ರೈತರು ಶೋಷಣೆ ಮಾಡುತ್ತಿದ್ದಾರೆ. ಮಾತು ಬಾರದ ಎತ್ತುಗಳನ್ನು ಸರದಿ ಸಾಲಿನಲ್ಲಿ ಹೋಗುವಂತೆ ಮಾಡುವ ರೈತ ಕುಲದಲ್ಲಿ ಹುಟ್ಟಿದ ನಾವು ಜನಪ್ರತಿನಿಧಿಗಳನ್ನ ಮತ್ತು ಸರ್ಕಾರಗಳನ್ನ ಸರಿ ದಾರಿಗೆ ತರುವುದು ಯಾವ ಲೆಕ್ಕ ಎಂದು ಹರಿಹಾಯ್ದರು.

ದೇವದಾಸಿ ವಿಮೋಚನಾ ಸಂಸ್ಥೆಯ ಅಧ್ಯಕ್ಷರಾದ ಬಿ.ಎಲ್.ಪಾಟೀಲ ಮಾತನಾಡಿ ಚಿಕ್ಕಬಾಗೇವಾಡಿ ಗ್ರಾಮದಲ್ಲಿ ಇಂದು ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು. ರೈತನಾಯಕ ಪುತ್ಥಳಿಯನ್ನು ಅನಾವರಣಗೊಳಿಸುವ ಮುಖಾಂತರ ರೈತಸಂತ ದಿ. ಬಾಬಾಗೌಡ ಪಾಟೀಲ ಅವರಿಗೆ ಗೌರವ ಸಲ್ಲಿಸಿದಂತೆ ಆಯಿತು ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಶ್ರೀಗಳು ಮತ್ತು ಗಣ್ಯರು

ಕುರುಬೂರು ಶಾಂತಕುಮಾರ ಮಾತನಾಡಿ ಇಂದು ರೈತರು ಬದುಕುಬೇಕಾದರೆ ರೈತ ಸಂಘಟನೆಗಳಿಂದ ಮಾತ್ರ ಸಾದ್ಯ ರೈತ ಸಂಘಟನೆಗಳು ಹರಿದು ಹಂಚಿ ಹೋಗದೆ ಒಗ್ಗಟ್ಟಾಗಿ ಹೋರಾಡುವ ಅವಶ್ಯಕತೆ ಇದೆ ಎಂದರು.
ಪಚ್ಚೆ ನಂಜುಂಡ ಸ್ವಾಮಿ ಮಾತನಾಡಿ ವಿಧಾನಸಭೆಯಲ್ಲಿ ಬಾಬಾಗೌಡರ ಕನ್ನಡ ಪರ ಹೋರಾಟವನ್ನು ಹಾಗೂ ಅವರ ಹೋರಾಟದ ಹಾದಿಯನ್ನು ಸವಿಸ್ತಾರವಾಗಿ ತಿಳಿಸಿದರು.
ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಹನಮೆಗೌಡ ಬೆಳಗುರ್ಕಿ ಮಾತಮಾಡಿ ಬಾಬಾಗೌಡರ ಸರಳತೆ ಗಾಂದಿ ಬಸವ ಪರ ವಿಚಾರಗಳನ್ನು ಅಳವಡಿಸಿಕೊಂಡು ಹೋರಾಟದಲ್ಲಿ ತೋಡಗಿಕೊಂಡದ್ದನ್ನು ನೆನೆದರು. ಬಾಬಾಗೌಡರ ಕೊಡುಗೆ ಹಾಗೂ ಅವರ ಸೀದಾ ಸಾದಾ ಕೃಷಿಕರಾಗಿ ಹೋರಾಟ ಮಾಡಿಕೊಂಡ ಬಂದ ಬಗೆಯನ್ನು ನೆನೆದರು.
ಗಜಾನಂದ ಸೊಗಲದ ಸ್ವಾಗತಿಸಿದರು. ವಿವೇಕ ಕುರಗುಂದ ಹಾಗೂ ಆನಂದ ಹಂಪಣ್ಣವರ ನಿರೂಪಣೆ ಮಾಡಿದರು,

ಕಾರ್ಯಕ್ರಮದಲ್ಲಿ ಭಾಗವಹಿಸಿದ ರೈತರು ಮತ್ತ ಗ್ರಾಮಸ್ಥರು

ಈ ವೇಳೆ ಬಾಬಾಗೌಡ ಪಾಟೀಲ ಅವರ ಮನೆಯ ಸದಸ್ಯರನ್ನು ಪ್ರೀತಿಯಿಂದ ಸಮಸ್ತ ರೈತ ಬಾಂದವರು ಮತ್ತು ಶ್ರೀಗಳು ಸತ್ಕರಿಸಿ ಗೌರವಿಸದರು.
ಈ ವೇಳೆ ಬೆಳಗಾವಿ ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಬಾಬಾಸಾಹೇಬ ಪಾಟೀಲ, ಡಾ. ಜಗದೀಶ ಹಾರುಗೊಪ್ಪ, ರೋಹಿನಿ ಪಾಟೀಲ ,ಶಿವಾನಂದ ಹೊಳೆಹಡಗಲಿ, ವಿಠಲ ಮಿರಜಕರ, ಶಿವಾನಂದ ಮೇಟ್ಯಾಲ, ರವೀಂದ್ರ ಪಟ್ಟಣಶೆಟ್ಟಿ, ವಿರೇಶ ಕಂಬಳಿ, ಸೋಮನಗೌಡ ಪಾಟೀಲ, ನಾಗರಾಜ ಗುಂಡ್ಲೂರ, ರವಿ ಬುಕ್ಕಟಗಿ, ರಾಜ್ಯದ ಮೂಲೆಮೂಲೆಯಿಂದ ಆಗಮಿಸಿದ ರೈತರು, ರೈತ ಮುಖಂಡರು ಸೇರಿದಂತೆ ಅನೇಕ ಗ್ರಾಮಗಳ ರೈತರು ಇದ್ದರು

ಜಿಲ್ಲೆ

ರಾಜ್ಯ

error: Content is protected !!