Monday, April 15, 2024

ಬಹುಭಾಷೆಗಳಲ್ಲಿ ‘ವಚನ’ ಸಂಪುಟಗಳನ್ನು ಪ್ರಕಟಿಸಿದ ಬಸವ ಸಮಿತಿ ಕಾರ್ಯ ಶ್ಲಾಘನೀಯ – ಶಿವರಂಜನ ಬೋಳಣ್ಣವರ

ಬೈಲಹೊಂಗಲ: 27 ಭಾಷೆಗಳಲ್ಲಿ ಈಗಾಗಲೇ ವಚನ ಸಂಪುಟಗಳನ್ನು ಪ್ರಕಟಿಸಿ ಶರಣರ ಜೀವನ ಸಂದೇಶಗಳನ್ನು ಜನರ ಮನಮನಗಳಿಗೆ ಮುಟ್ಟುವಂತೆ ಮಾಡಿದ ಕೇಂದ್ರ ಬಸವ ಸಮಿತಿ ಕಾರ್ಯ ಶ್ಲಾಘನೀಯ ಎಂದು ಖ್ಯಾತ ಚಲನಚಿತ್ರ ನಟ-ನಿರ್ಮಾಪಕರಾದ ಶಿವರಂಜನ ಬೋಳಣ್ಣವರ ಹೇಳಿದರು.

ಬೈಲಹೊಂಗಲದಲ್ಲಿ ಕೇಂದ್ರ ಬಸವ ಸಮಿತಿಯ ೨೦೨೨ರ ಬಸವ ದಿನಚರಿಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಕನ್ನಡ, ಇಂಗ್ಲಿಷ, ಹಿಂದಿ, ಮರಾಠಿ, ತೆಲಗು, ತಮಿಳು, ಬೆಂಗಾಲಿ, ಪಂಜಾಬಿ, ಸಂಸ್ಕೃತ, ಉರ್ದು, ಸಿಂಧಿ, ಗುಜರಾತಿ, ಅಸ್ಸಾಮಿ, ಕೊಂಕಣಿ, ಮೈಥಿಲಿ, ಕಾಶ್ಮೀರಿ, ಒಡಿಯಾ, ಸಂಥಾಲಿ, ರಾಜಸ್ಥಾನಿ, ಮಲಯಾಳಂ, ತುಳು, ಬೋಜ್ ಪುರಿ, ಕೊಡವ, ಅಂಗಿಕ, ಅರಾಬಿಕ್, ಡೋಗ್ರಿ, ಪರ್ಷಿಯನ್ ಭಾಷೆಗಳಲ್ಲಿ ವಚನ ಸಂಪುಟಗಳು ಪ್ರಕಟಗೊಂಡಿರುವುದು ಐತಿಹಾಸಿಕ ಮೈಲುಗಲ್ಲು ಎಂದು ಅವರು ಅಭಿಪ್ರಾಯಪಟ್ಟರು. ಇದಲ್ಲದೇ ವಿದೇಶಿ ಭಾಷೆಗಳಾದ ಸ್ಪಾನಿಷ್, ಮ್ಯಾಂಡ್ರಿನ್, ಜರ್ಮನ್, ರಷ್ಯನ್, ಜಪನೀಸ್ ಹಾಗೂ ಪ್ರೆಂಚ್ ಭಾಷೆಗಳಲ್ಲಿಯೂ ವಚನ ಅನುವಾದ ಕಾರ್ಯ ಪ್ರಾರಂಭಿಸಿರುವುದು ಬಸವ ಸಮಿತಿಯ ಮಹತ್ವದ ಸಾಧನೆ ಎಂದರು.

ಬಸವ ಪ್ರತಿಷ್ಠಾನದ ಅಧ್ಯಕ್ಷರಾದ ಮಹೇಶ ಕೋಟಗಿ ಮಾತನಾಡಿ ಬಸವ ಸಮಿತಿ ಕಳೆದ ೨೨ ವರ್ಷಗಳಿಂದ ನಿರಂತರವಾಗಿ ಬಸವ ದಿನಚರಿಯನ್ನು ಪ್ರಕಟಿಸುತ್ತಾ ಬಂದಿದ್ದು ೨೦೨೨ ನೆಯ ಇಸ್ವಿಯ ತ್ರಿಭಾಷಾ ವಚನ ದಿನಚರಿಯನ್ನು ಸಿದ್ಧಪಡಿಸಲಾಗಿದೆ ಎಂದರು. ಈ ವರ್ಷ ಒಂದು ಪುಟದಲ್ಲಿ ಕನ್ನಡ, ಮತ್ತೊಂದು ಪುಟದಲ್ಲಿ ಇಂಗ್ಲಿಷ, ಇನ್ನೊಂದು ಪುಟದಲ್ಲಿ ಹಿಂದಿ ಭಾಷೆಗಳಲ್ಲಿ ಶರಣರ ವಚನಗಳನ್ನು ಮುದ್ರಿಸಿದ್ದು ಬಸವ ದಿನಚರಿಯ ವೈಶಿಷ್ಟ್ಯವಾಗಿದೆ ಎಂದು ಹೇಳಿದರು.

ಕೇಂದ್ರ ಬಸವ ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯರೂ, ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ ಮಾತನಾಡಿ ನವದೆಹಲಿಯ ವಿಜ್ಞಾನ ಭವನದಲ್ಲಿ ಭಾರತದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು 27 ಭಾಷೆಗಳಲ್ಲಿ ವಚನ ಸಂಪುಟಗಳನ್ನು ಲೋಕಾರ್ಪಣೆ ಮಾಡಿ ರಾಷ್ಟ್ರಮಟ್ಟದಲ್ಲಿ ಪ್ರಪ್ರಥಮ ಬಾರಿಗೆ ಬಸವ ಜಯಂತಿಯನ್ನು ಆಚರಿಸಿದ್ದು ಅತ್ಯಂತ ಸಂತಸದ ವಿಷಯ ಎಂದು ಹೇಳಿದರು.

ಬೈಲಹೊಂಗಲ ಮರ್ಚಂಟ್ಸ್ ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀಶೈಲ ಶರಣಪ್ಪನವರ ಮಾತನಾಡಿ ವಚನಗಳು ಜೀವನ ಮೌಲ್ಯಗಳನ್ನು ಒಳಗೊಂಡಿದ್ದು ವ್ಯಕ್ತಿತ್ವ ವಿಕಸನದ ಜೊತೆಗೆ ಸಮಾಜದ ಪ್ರಗತಿಗೂ ದಾರಿದೀಪಗಳಾಗಿವೆ ಎಂದು ಅಭಿಪ್ರಾಯಪಟ್ಟರು. ಕನ್ನಡ ಜಾನಪದ ಪರಿಷತ್ತಿನ ತಾಲೂಕಾ ಅಧ್ಯಕ್ಷರಾದ ಚಂದ್ರಶೇಖರ ಕೊಪ್ಪದ ಮಾತನಾಡಿ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಶರಣರ ವಚನ ಸಾಹಿತ್ಯ ಸುಧೆಯನ್ನು ವಿಶ್ವದೆಲ್ಲೆಡೆ ಪಸರಿಸುತ್ತಿರುವ ಬಸವ ಸಮಿತಿಯ ಸೇವೆ ನಿಜಕ್ಕೂ ಪ್ರಶಂಸನೀಯವಾದದ್ದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬೂದಿಹಾಳದ ಸರಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕರಾದ ಎನ್.ಆರ್.ಠಕ್ಕಾಯಿ ಮಾತನಾಡಿ ವಿಭಿನ್ನವಾಗಿ ಹೊರಬಂದ ಹೊಸ ವರ್ಷದ ಬಸವ ದಿನಚರಿ ಟಿಪ್ಪಣಿ ಬರೆದುಕೊಳ್ಳುವುದರ ಜೊತೆಗೆ ಅಮೂಲ್ಯ ವಚನಗಳ ಸಾರವನ್ನು ಉಣಬಡಿಸಿ ಜ್ಞಾನವನ್ನು ಹೆಚ್ಚಿಸುವ ಅಪರೂಪದ ದಿನಚರಿಯಾಗಿದೆ ಎಂದು ಹೇಳಿದರು. ಪಟ್ಟಿಹಾಳದ ಶ್ರೀ ಬಸವೇಶ್ವರ ಪ್ರೌಢಶಾಲೆಯ ಶಿಕ್ಷಕರಾದ ಎಸ್.ಎಂ ಪಾಟೀಲ ಮಾತನಾಡಿ ಆನ್ ಲೈನ್ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಿರಂತರವಾಗಿ ವಿಶ್ವಗುರು ಬಸವಣ್ಣನವರ ತತ್ವ, ಸಂದೇಶ, ಚಿಂತನೆಗಳನ್ನು ಹಾಗೂ ಶರಣ ಸಂಸ್ಕೃತಿಯನ್ನು ಪ್ರಸಾರ ಮಾಡುತ್ತಿರುವ ಬಸವ ಸಮಿತಿಯ ಬಗ್ಗೆ ಹೆಮ್ಮೆ ಅನ್ನಿಸುತ್ತದೆ ಎಂದರು.

ಜಿಲ್ಲೆ

ರಾಜ್ಯ

error: Content is protected !!