Tuesday, May 28, 2024

ಮತಾಂತರ ಮತ್ತು ದಲಿತರು…

ಸುದ್ದಿ ಸದ್ದು ನ್ಯೂಸ್

ಲೇಖಕರು: ಸಿದ್ದರಾಮ ತಳವಾರ ದಾಸ್ತಿಕೊಪ್ಪ

ಬೆಳಗಾವಿ: ರಾಜ್ಯ ಸರ್ಕಾರ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದಿರುವ ಬೆನ್ನಲ್ಲೇ ಪರ ಮತ್ತು ವಿರೋಧದ ಅನೇಕ ಚರ್ಚೆಗಳು ನಡೆದಿವೆ. ವಾಸ್ತವದಲ್ಲಿ ಮತಾಂತರ ಅನ್ನೋದು ನಿರ್ದಿಷ್ಟ ಒಂದು ಧರ್ಮದಿಂದ ಸ್ವ-ಇಚ್ಛೆಯಿಂದಲೇ ಮತ್ತೊಂದು ಧರ್ಮಕ್ಕೆ ಹೋಗುವುದು ಎಂದರ್ಥ. ಇಲ್ಲಿ ಎರಡು ಆಯಾಮಗಳಲ್ಲಿ ಈ ಮತಾಂತರವನ್ನು ಪರಿಗಣಿಸಬೇಕಾಗುತ್ತದೆ. ಒಂದು ಇರುವ ಧರ್ಮದಲ್ಲಿನ ಲೋಪದೋಷಗಳನ್ನು ಸಹಿಸಲಾಗದೇ ಧಾರ್ಮಿಕ ಸ್ವಾತಂತ್ರ್ಯ ವನ್ನು ಅನುಭವಿಸಲಾಗದೇ ಸ್ವ-ಇಚ್ಛೆಯಿಂದ ಮತ್ತೊಂದು ಧರ್ಮಕ್ಕೆ ಯಾವ ಆಮಿಷವೂ ಯಾರ ಒತ್ತಡವೂ ಇರದೇ ಮತಾಂತರಗೊಳ್ಳುವುದು. ಮತ್ತೊಂದು ಇರುವ ಧರ್ಮದೊಳಗಿನ ಮೇಲು ಕೀಳುಗಳನ್ನು ಅನುಭವಿಸುತ್ತಲೇ ನೂರಾರು ವರ್ಷಗಳಿಂದ ಅದೇ ಏರಿಕೆಯಾಗದ ಆರ್ಥಿಕ ಸ್ವಾವಲಂಬನೆಯ ಬದುಕಿಗೆ ಬೇಸತ್ತು ಮಕ್ಕಳ ಶಿಕ್ಷಣ ಮತ್ತು ಸಮಾಜದಲ್ಲಿನ ಸಮಾನತೆಯನ್ನು ಅನುಭವಿಸುವ ಆಮಿಷಕ್ಕೆ ಒಳಗಾಗಿ ಅನಿವಾರ್ಯವಾಗಿ ಮತಾಂತರವಾಗುವುದು. 

ಬಹುಶ:ಮತಾಂತರ ಪ್ರಕ್ರಿಯೆ ಈ ಹಿಂದಿನಿಂದಲೂ ನಡೆದುಕೊಂಡು ಬಂದಿದೆ ಈ ದೇಶದ ಸ್ವಾಭಿಮಾನಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರು ಕೂಡ ಹಿಂದೂ ಧರ್ಮದೊಳಗಿನ ಅಸಮಾನತೆಯನ್ನು ಖಂಡಿಸಿ ಬೌದ್ದ ಧರ್ಮಕ್ಕೆ ಮತಾಂತರಗೊಂಡಿದ್ದು ಇತಿಹಾಸ. ವಿಶೇಷವಾಗಿ ಈ ಮತಾಂತರ ಪ್ರಕ್ರಿಯೆ ನಡೆಯುತ್ತಿರುವುದು ದಲಿತರಲ್ಲಿ ಅಂದರೆ ತಪ್ಪಾಗಲಾರದು. ಈ ದೇಶದಲ್ಲಿ ಬೆರಳೆಣಿಕೆಯ ಸಂಖ್ಯೆಯಲ್ಲಿರುವ ಕ್ರೈಸ್ತ ಸಮುದಾಯ ತನ್ನ ಸಮುದಾಯವನ್ನು ಹೆಚ್ಚಿಸಲು ಸುಲಭವಾಗಿ ತಮ್ಮ ಧರ್ಮಕ್ಕೆ ಮತಾಂತರ ಮಾಡಲು ಬಳಸಿಕೊಂಡಿದ್ದು ಇದೇ ದಲಿತ ಮತ್ತು ಹಿಂದುಳಿದ ಸಮುದಾಯವನ್ನು. 

1970 ರ ದಶಕದಲ್ಲಿ ಇದ್ದ ಕ್ರೈಸ್ತ ಸಮುದಾಯದ ಸಂಖ್ಯೆಗೂ ಪ್ರಸ್ತುತ ಸಂಖ್ಯೆಗೂ ಹೋಲಿಸಿದಾಗ ಅಲ್ಪ ಪ್ರಮಾಣದಲ್ಲಿ ಕ್ರೈಸ್ತ ಸಮುದಾಯದ ಸಂಖ್ಯೆ ಹೆಚ್ಚಿರುವುದು ಕಾಣಸಿಗುತ್ತದೆ. ಇಲ್ಲಿ ಮೂಲ ಮತ್ತು ಮತಾಂತರ ಅನ್ನೋ ಎರಡು ವರ್ಗಗಳಿದ್ದರೂ ಕಿಂಚಿತ್ತೂ ಬೇಧಭಾವ ಇಲ್ಲದೇ ಒಂದಾಗಿ ಕರೆದುಕೊಂಡು ಹೋಗುವ ಧಾರ್ಮಿಕ ಐಕ್ಯತೆ ಮತ್ತು ಸಮಾನತೆ ಕ್ರೈಸ್ತರಲ್ಲಿದೆ. ಬಹುಶಃ ಇದೇ ಕಾರಣದಿಂದ ದಲಿತರು ಕ್ರೈಸ್ತ ಧರ್ಮಕ್ಕೆ ಆಕರ್ಷಿತರಾಗಿರಬಹುದು. ಕಿತ್ತು ತಿನ್ನೋ ಬಡತನ ಅನಕ್ಷರತೆ ಹಸಿವು ಇಲ್ಲಿನ ಅಸಮಾನತೆ ಇವೆಲ್ಲವುಗಳು ದಲಿತರನ್ನು ಮಾನಸಿಕವಾಗಿ ಜರ್ಜರಿತರನ್ನಾಗಿಸಿದ್ದು ಯೇಸು ಕ್ರಿಸ್ತ ಎಂಬ ಓರ್ವ ದೇವರು ಮನುಷ್ಯನಾಗಿ ಈ ಭೂಮಿಯಲ್ಲಿ ಅವತರಿಸಿ ಕಡುಕಷ್ಟಗಳಲ್ಲಿರುವ ಜನರನ್ನೆಲ್ಲ ಅವರ ಪಾಪಗಳಿಂದ ಮುಕ್ತನನ್ನಾಗಿಸಿ ಸ್ವರ್ಗದತ್ತ ಕರೆದೊಯ್ಯಬಲ್ಲ ಎಂಬ ಕ್ರೈಸ್ತ ಪಾದ್ರಿಗಳ ಅತಿ ವಿಶ್ವಾಸದ ನುಡಿಗಳಿಗೆ ಮನಸೋತು ಈ ನೆಲದಲ್ಲಿ ನಮ್ಮನ್ನೂ ಮನುಷ್ಯರಂತೆ ಕಾಣಬಲ್ಲ ದೇವರು ಒಬ್ಬನಿದ್ದಾನೆ ಅನ್ನೋ ಆಶಯಗಳೊಂದಿಗೆ ಕೆಲವು ಕುಟುಂಬಗಳು ಪಾದ್ರಿಗಳ ನಂಬುಗೆಯ ಪ್ರಾರ್ಥನೆ ಮೂಲಕ ಮಾನಸಿಕವಾಗಿ ತಮ್ಮನ್ನು ತಾವು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸಿಕೊಂಡರು ಎನ್ನಬಹುದು. 

ಕ್ರೈಸ್ತ ಮಿಷಿನರಿಗಳ ಇಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅದಾಗಲೇ ತಮ್ಮ ದಾಪುಗಾಲು ಹಾಕಿದ್ದ ಹಿನ್ನೆಲೆಯಲ್ಲಿ ಅಪಾರ ಸಂಖ್ಯೆಯ ದಲಿತ ಸಮುದಾಯದವರು ಶೈಕ್ಷಣಿಕವಾಗಿ ಅಭಿವೃದ್ದಿ ಆಗಲು ಕ್ರೈಸ್ತ ಮಿಷಿನರಿಗಳ ಶಾಲೆಗೆ ಸೇರಿಕೊಂಡ ಸಂದರ್ಭದಲ್ಲಿ ಅವರ ಜಾತಿ ಕಾಲಂ ನಲ್ಲಿ ಮೂಲ ಜಾತಿ ಬಿಟ್ಟು ಕ್ರೈಸ್ತ ಜಾತಿ ನಮೂದಿಸಿಕೊಂಠಿರುವ ಹಲವಾರು ಉದಾಹರಣೆಗಳೂ ನಮ್ಮ ನಡುವೆ ಇವೆ. ಇನ್ನು ಕೆಲವರು ತಮ್ಮ ಜಾತಿ ಪ್ರಮಾಣಪತ್ರದಲ್ಲಿ ಮೂಲ ಜಾತಿ ಇಟ್ಟುಕೊಂಡರೂ ಆಚರಣೆಗಳಲ್ಲಿ ಮಾತ್ರ ಕ್ರೈಸ್ತರನ್ನು ಅವಲಂಬಿಸುತ್ತ ಬಂದಿರುವುದೂ ಉಂಟು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈವತ್ತು ಅನೇಕ ಜನ ಬಡತನದ ದಾರಿದ್ರ್ಯಕ್ಕೆ ಬೇಸತ್ತು ಕೂಲಿ ನಾಲಿ ಮಾಡುವುದನ್ನು ನೋಡಿದರೆ ಮತಾಂತರ ಅಂದರೆ ಏನು ಅಂತ ಗೊತ್ತಿಲ್ಲದ ವಯಸ್ಸಲ್ಲೇ ಕ್ರೈಸ್ತ ಮಿಷಿನರಿಗಳಲ್ಲಿ ವಿದ್ಯಾಭ್ಯಾಸ ಮಾಡಿ ಉನ್ನತ ಹುದ್ದೆಗಳನ್ನು ಅಲಂಕರಿಸಿರರುವ ಉದಾಹರಣೆಗಳು ನಮ್ಮ ಮಧ್ಯದಲ್ಲಿವೆ. 

ಎಲ್ಲೋ ಒಂದು ಕಡೆ ಆ ಬಡತನ ಆರ್ಥಿಕ ದಾರಿದ್ರ್ಯತೆ ದಲಿತರನ್ನು ಕಾಡಿದಷ್ಟು ಬೇರಾವ ಸಮುದಾಯದವರನ್ನು ಕಾಡಿರಲಿಕ್ಕಿಲ್ಲ. ಹಸಿವು ಅಂದರೆ ಏನು ಅನ್ನೋದನ್ನು ಆ ಅನುಭವಿತ ಧ್ವನಿಯಲ್ಲಿ ಕೇಳಿದ್ರೆ ನಿಜಕ್ಕೂ ಕರುಳು ಚುರ್ರ… ಅನ್ನದೇ ಇರಲಾರದು. ಒಂದು ಹೊತ್ತಿನ ತುತ್ತು ಅನ್ನ, ಮೈ ಮುಚ್ಚೋದಕ್ಕೆ ಒಂದು ಜೊತೆ ಬಟ್ಟೆಯೂ ಇರಲಾರದ ಅಂದಿನ ಆ ಬಡತನವನ್ನೇ ಬಂಡವಾಳ ಮಾಡಿಕೊಂಡ ಕ್ರೈಸ್ತ ಮಿಷಿನರಿಗಳು ಆವತ್ತು ಕೇವಲ ಮತಾಂತರವನ್ನು ಮನದಲ್ಲಿಟ್ಟುಕೊಳ್ಳದೇ ಮಾನವೀಯತೆಯನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ನೆರವಾಗುವ ಮೂಲಕ ಹೆಗಲು ಕೊಟ್ಟಿರಬಹುದು. ಈ ಕಾರಣಕ್ಕೆ ದಲಿತ ಸಮುದಾಯ ಮತಾಂತರಕ್ಕೆ ಅತಿ ಸುಲಭವಾಗಿ ಒಗ್ಗಿದ್ದರು ಎನ್ನಬಹುದು. 

ಬಹತೇಕ ಶಿಕ್ಷಣ ಸಂಸ್ಥೆಗಳನ್ನು ಹುಟ್ಟು ಹಾಕುವ ಮೂಲಕ ದೇಶದಲ್ಲಿ ಶೈಕ್ಷಣಿಕ ಅಭಿವೃದ್ದಿಗೆ ಬುನಾದಿ ಹಾಕಿದವರು ಕ್ರೈಸ್ತ ಮಿಷಿನರಿಗಳು ಅಂದರೆ ತಪ್ಪಾಗಲಾರದು. ಇಂದಿನ ಬಹುತೇಕ ವಿದ್ಯಾವಂತರು ಅವರ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಿದವರೇ ಆಗಿದ್ದು ಸುಳ್ಳಲ್ಲ. ಕ್ರಿಸ್ಮಸ್ ದಂತಹ ಅಪರೂಪದ ಹಬ್ಬವನ್ನು ಐಷಾರಾಮಿ ಹೋಟೆಲ್ಲುಗಳಲ್ಲಿ ಆಸೆ ಕೊಠಡಿಗಳಲ್ಲಿ ಚಿಲ್ಡ್ ಡೀಯರ್ ಸೇವಿಸುತ್ತ ಮಸಾಲೆ ಭರಿತ ಮಾಂಸದ ಖಾದ್ಯಗಳನ್ನು ತಿನ್ನುವ ಮೂಲಕ ಆಚರಿಸದೇ ದೇವರ ಆಶಯದಂತೆ ಬಡವರು ಸ್ಲಂ ಗಳ ನಿರ್ಗತಿಕರೊಂದಿಗೆ ಕೇಕ್ ಕತ್ತರಿಸಿ ಅವರೊಂದಿಗೆ ಊಟ ಮಾಡಿ ಸಂಭ್ರಮಿಸುವ ಮೂಲಕ ಕ್ರಿಸ್ಮಸ್ ಗೆ ಹೊಸದೊಂದು ವ್ಯಾಖ್ಯಾನವನ್ನು ದೊರಕಿಸಿ ಮಾನವೀಯತೆಗೆ ಮೆರಗು ನೀಡಿದವರು ಕ್ರೈಸ್ತ ಸಮುದಾಯದವರು ಹೀಗಾಗಿ ಸುಲಭವಾಗಿ ದಲಿತರು ಕ್ರೈಸ್ತ ಧರ್ಮವನ್ನು ಅಪ್ಪಿದ್ದಾರೆ.

ಮತಾಂತರ ಮಾಡುವ ಮುನ್ನ ಅವರನ್ನು ಮಾನಸಿಕವಾಗಿ ಯೇಸುವಿನತ್ತ ತಿರುಗಿಕೊಳ್ಳುವಂತೆ ಪೂರ್ವತಯಾರಿ ಮಾಡುವ ಪಾದ್ರಿಗಳು ಅವರ ಇಚ್ಛೆಯನುಸಾರವೇ ನದಿಯಲ್ಲಿ ಏಳು ಬಾರಿ ಮುಳುಗಿಸಿ ಪ್ರಾರ್ಥನೆ ಮಾಡುವ ಮೂಲಕ ದೀಕ್ಷಾಸ್ನಾನ ಮಾಡಿಸಿ ಅಧಿಕೃತವಾಗಿ ಧರ್ಮಕ್ಕೆ ಸ್ವಾಗತಿಸುವ ಸಂಪ್ರದಾಯವಿದೆ. ಹೀಗಾಗಿ ಈ ತರಹದ ಮತಾಂತರ ಪ್ರಕ್ರಿಯೆಯಲ್ಲಿ ಯಾವುದೇ ಆಮಿಷಗಳಾಗಲಿ ಪ್ರಲೋಭನೆಗಳಾಗಲಿ ಇರಲಿಕ್ಕಿಲ್ಲ ಅನ್ನೋದು ನನ್ನ ಭಾವನೆ. ‘ಇವನಾರವ ಇವನಾರವ ಎಂದೆಣಿಸದಿರಯ್ಯ ಕೂಡಲ ಸಂಗಮ ದೇವ, ಇವ ನಮ್ಮ ಮಹಾಮನೆಯ ಮಗನೆಂದೆಣಿಸಯ್ಯ’… ಎಂಬ ಅಣ್ಣ ಬಸವಣ್ಣನ ಸಮ ಸಮಾಜದ ಕಲ್ಪನೆಯ ಹಿಂದೂ ಧರ್ಮದಲ್ಲಿ ಜಾತಿ ಜಾತಿಗಳ ಮಧ್ಯೆ ಇರುವ ಅಸಮಾನತೆಯನ್ನು ಸಹಿಸಲಾಗದೇ ಅನಿವಾರ್ಯವಾಗಿ ಮತಾಂತರಕ್ಕೆ ಒಳಗಾಗುವವರನ್ನು ಸಮಾನವಾಗಿ ಕಾಣುವ ಮೂಲಕ ಮತಾಂತರ ಪ್ರಕ್ರಿಯೆಯಿಂದ ತಡೆಯಬಹುದಲ್ಲದೇ ಕಾನೂನುಗಳ ಮೂಲಕ ಕಟ್ಟಿಹಾಕುವ ಮತಾಂತರ ನಿಷೇಧ ಕಾನೂನು ಅವಶ್ಯವಿತ್ತಾ? ಎಂಬುದನ್ನು ಚಿಂತಕರು ಪುನರ್ ವಿಮರ್ಶೆ ಮಾಡಿದರೆ ಬಹುಶಃ ಇದಕ್ಕೂಂದು ಹೊಸ ರೂಪ ನೀಡಬಹುದು.ನೀವೇನಂತೀರಿ?

ಜಿಲ್ಲೆ

ರಾಜ್ಯ

error: Content is protected !!