Saturday, July 27, 2024

ಖಾಸಗಿ ಶಾಲೆಗಳನ್ನೂ ಮೀರಿಸಿದ ಮೆಣಸೆ ಮಾದರಿ ಸರಕಾರಿ ಶಾಲೆ. ಅಚ್ಚರಿ ಆದರೂ ನಂಬಿ

ವಿಶೇಷ ಲೇಖನ: ಉಮೇಶ ಗೌರಿ (ಯರಡಾಲ)
M-8867505678
Email:[email protected]

ಹಸಿರು ಬೆಟ್ಟಗುಡ್ಡಗಳ ಮಧ್ಯೆ ಹರಿದು ಸಾಗುವ ತುಂಗಾ ನದಿಯ ತೀರದಲ್ಲಿರುವ ಪುಣ್ಯಕ್ಷೇತ್ರ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಆದಿಶಂಕರರು ಸ್ಥಾಪಿತ ವಿದ್ಯಾದೇವತೆ ಶಾರದೆಯ ನೆಲೆವೀಡು. ಈ ತಾಲೂಕಿನ ಮೆಣಸೆ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಎಲ್ಲರ ಗಮನ ಸೆಳೆಯುತ್ತದೆ.

1940 ರಲ್ಲಿ ಪ್ರಾರಂಭಗೊಂಡ ಶಾಲೆ ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನ ದಾಸೋಹವನ್ನು ನೀಡುತ್ತಾ ಬಂದಿದೆ. 1998 ರಲ್ಲಿ ಮಲೆನಾಡಿನ ಗಾಂದಿಯವರಾದ ದಿ. ಎಚ್.ಜಿ ಗೋವಿಂದೇಗೌಡರು ಶಿಕ್ಷಣ ಸಚಿವರಾದ ಸಂದರ್ಭದಲ್ಲಿ ವಿಧಾನಸಭಾವಾರು ಶಾಸಕರ ಮಾದರಿ ಶಾಲೆಗಳನ್ನು ತೆರೆದಿದ್ದು ತನ್ನ ಪಾಲಿನ ಶಾಲೆಯನ್ನು ಗ್ರಾಮೀಣ ಭಾಗದ ಈ ಶಾಲೆಗೆ ನೀಡಿ ಮಾದರಿಯನ್ನಾಗಿಸುವ ಕನಸು ಕಂಡಿದ್ದರು.

ಶಾಲೆಯ ಮೊದಲಿನ ಸ್ಥಿತಿ

ಅಂದು ಶಾಲೆಗೆ ಮೂಲಭೂತ ಸೌಲಭ್ಯಗಳಾದ ಶೌಚಾಲಯ, ಕುಡಿಯುವ ನೀರು ಮತ್ತು ಆಟದ ಮೈದಾನ, ವಿಜ್ಞಾನ ಪ್ರಯೋಗಾಲಯ, ರಂಗಮಂದಿರಗಳಿರಲಿಲ್ಲ. ಕೊಠಡಿಗಳು, ಪೀಠೋಪಕರಣ, ಕ್ರೀಡೋಪಕರಣಗಳ ಹಾಗೂ ದಾಖಲಾತಿ ಕೊರತೆಗಳಿದ್ದವು.

ಮೂಲಭೂತ ಸೌಲಭ್ಯಗಳಿಲ್ಲದ ಹಳೆಯ ಶಾಲೆ ಚಿತ್ರ

ಶಾಲೆಯಲ್ಲಿ ಬದಲಾವಣೆ ಪರ್ವ

“ಶಿಕ್ಷಣ ಎನ್ನುವುದು ಹುಲಿಯ ಹಾಲಿದ್ದಂತೆ, ಅದನ್ನು ಕುಡಿದವರು ಘರ್ಜಿಸಲೇಬೇಕು ಎಂದು ಡಾ.ಬಿ.ಆರ್ ಅಂಬೇಡ್ಕರ್ ಹೇಳಿದಂತೆ, ದಿ.ಎಚ್.ಜಿ ಗೋವಿಂದೇಗೌಡರ ಕನಸನ್ನು ಸಕಾರಗೊಳಸುವ ನಿಟ್ಟಿನಲ್ಲಿ 2008ರಲ್ಲಿ ಈ ಶಾಲೆಗೆ ಪದವೀಧರ ಮುಖ್ಯೋಪಾಧ್ಯಾಯರಾಗಿ ಆಗಮಿಸಿದ ಬಿ.ಆರ್ ಗಂಗಾದರಪ್ಪ ಅವರ ಅವಿರತ ಪರಿಶ್ರಮದ ಫಲವಾಗಿ ಇಂದು ಈ ಶಾಲೆ ರಾಜ್ಯಕ್ಕೆ ಮಾದರಿಯಾಗಿದೆ.

ಬಿ.ಆರ್ ಗಂಗಾದರಪ್ಪ ಅವರು “ಸರ್ಕಾರಿ ಶಾಲೆಗಳು ಉಳಿಯಬೇಕು ಗ್ರಾಮೀಣ ಬಡ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು” ಎಂಬ ಧ್ಯೇಯ ವಾಕ್ಯದೊಂದಿಗೆ ಕಾರ್ಯಪ್ರವೃತ್ತರಾಗಿ, ಸರ್ವಶಿಕ್ಷಣ ಅಭಿಯಾನ ಹಾಗೂ ಸರ್ಕಾರದ ವಿವಿದ ಯೋಜನೆಗಳಡಿಯಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಒಂದು ಕೋಟಿಯವರೆಗಿನ ಅನುದಾನ ಲಭ್ಯತೆಯನ್ನು ಪಡೆದುಕೊಂಡು ಶಾಲಾಭಿವೃದ್ದಿ ಸಮಿತಿಯ ಸಹಕಾರದಿಂದ ಶಾಲಾ ಕೊಠಡಿಗಳ ನಿರ್ಮಾಣ, ದುರಸ್ತಿ, ಕಾಂಪೌಂಡ್, ಶೌಚಾಲಯ, ಅಕ್ಷರ ದಾಸೋಹ ಕೊಠಡಿ, ಬಿಸಿಯೂಟ ಸಭಾಂಗಣ, ತೆರೆದ ಗ್ರಂಥಾಲಯ, ಆಟದ ಮೈದಾನ ಅಭಿವೃದ್ದಿ, ಸುಂದರವಾದ ಪಾರ್ಕ್ ನಿರ್ಮಾಣ ಮತ್ತಿತರ ಕೆಲಸ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.

ಈಗಿನ ಶಾಲೆಯ ಚಿತ್ರಣ

ದಾನಿಗಳಿಂದ ಹರಿದುಬಂದ ನೆರವು

ಸ್ವಾಮಿ ವಿವೇಕಾನಂದರ ಮಾತಿನಂತೆ “ನಿಜವಾದ ಶಿಕ್ಷಣ ಎಂದರೆ ಮಾನವೀಯತೆಯ ವಿಕಾಸ” ಅನ್ನುವ ಹಾಗೆ ಮಲೆನಾಡಿನ ಈ ಸಾಲುಬೆಟ್ಟ ಗುಡ್ಡ, ಕಣಿವೆ ಹಳ್ಳ ಕೊಳ್ಳಗಳನ್ನು ದಾಟಿ ಬಡ ಕೂಲಿ ಕಾರ್ಮಿಕ ಮಕ್ಕಳು ಈ ಶಾಲೆಗೆ ನಿರಂತರವಾಗಿ ಹಾಜರಾಗಿ ವಿದ್ಯೆ ಕಲಿತು ಸುರಕ್ಷಿತವಾಗಿ ಮನೆ ತಲುಪುವ ಮಹದಾಕಾಂಕ್ಷೆಯಿಂದ ದಾನಿಗಳಾದ ಅನಿವಾಸಿ ಭಾರತೀಯ ಮಾಜಿ ಉಪಾಧ್ಯಕ್ಷರಾದ ಡಾ. ಆರತಿ ಕೃಷ್ಣ, ಮತ್ತು ಸಂಪತ್‌ಕುಮಾರ್ ಇವರಿಂದ ಎರಡು ಶಾಲಾ ವಾಹನಗಳನ್ನು ದೇಣಿಗೆಯಾಗಿ ಪಡೆದು ಸುಮಾರು 120 ಮಕ್ಕಳಿಗೆ ಉಚಿತವಾಗಿ ಶಾಲೆಗೆ ಸುರಕ್ಷಿತವಾಗಿ ಬಂದು ಹೋಗುವ ವ್ಯವಸ್ಥೆಯನ್ನು 2015 ರಿಂದ ಪ್ರಾರಂಭಿಸಿದ್ದಾರೆ.

ಈ ಮಹತ್ಕಾರ್ಯವನ್ನು ಆಗಿನ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯನವರು ಉದ್ಘಾಟಿಸಿರುವುದು ಪ್ರಶಂಶನೀಯ. ಅಲ್ಲದೇ ಮಕ್ಕಳು ಶಾಲೆಗೆ ಉಚಿತವಾಗಿ ಬಂದು ಹೋಗಲು ಸರ್ಕಾರದ ವತಿಯಿಂದ ವಿಮೆ, ಇಂಧನ ವೆಚ್ಚ, ಚಾಲಕ-ನಿರ್ವಾಹಕರ ವೇತನದ ಮೊತ್ತವನ್ನು ಪ್ರತಿ ವರ್ಷ ಸರ್ಕಾರವು ಭರಿಸುವಂತೆ ಅಂದು ಸಿದ್ದರಾಮಯ್ಯನವರು ಆದೇಶ ಮಾಡಿರುತ್ತಾರೆ.

ಶೈಕ್ಷಣಿಕವಾಗಿ ರಾಜ್ಯದಲ್ಲಿಯೇ ಪ್ರಥಮವಾಗಿ ಆರು ಮತ್ತು ಏಳನೇ ತರಗತಿಗೆ ಆಂಗ್ಲ ಮಾದ್ಯಮವನ್ನು 2009-10 ರಲ್ಲಿ ಮಂಜೂರಾತಿ ಪಡೆದ ಶಾಲೆಯಾಗಿರುತ್ತದೆ ಹಾಗೂ 2015-16 ನೇ ಸಾಲಿನಲ್ಲಿ ಆಂಗ್ಲ ಮಾದ್ಯಮ ಎಲ್‌ಕೆಜಿ ಮತ್ತು ಯುಕೆಜಿ ಗೆ ಅನುಮತಿ ಪಡೆದಿರುತ್ತದೆ. ಒಂದನೇ ತರಗತಿ ಆಂಗ್ಲ ಮಾದ್ಯಮಕ್ಕೆ 2015-16 ರಿಂದ ಪ್ರಯತ್ನಿಸಿ ಭಾಷಾ ಮಾಧ್ಯಮ ಸಮಸ್ಯೆಯಿಂದಾಗಿ ವಿಳಂಬಗೊಂಡು ನಿರಂತರ ಪ್ರಯತ್ನದಿಂದಾಗಿ 2019-20 ರಲ್ಲಿ ಸರ್ಕಾರದಿಂದ 1ನೆಯ ತರಗತಿಯಿಂದ ಆಂಗ್ಲ ಮಾಧ್ಯಮಕ್ಕೆ ಅನುಮತಿ ಪಡೆದು ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ.

ದಾನಿಗಳಾದ ಡಾ. ಆರತಿ ಕೃಷ್ಣ, ಸಂಪತ್ ಕುಮಾರ್, ಇನ್‌ಫೋಸಿಸ್ ಹಾಗೂ ಸಾರ್ವಜನಿಕರಿಂದ, ಹಳೆಯ ವಿದ್ಯಾರ್ಥಿಗಳಿಂದ ಅಂದಾಜು  66 ಲಕ್ಷಕ್ಕೂ ಅಧಿಕ ದೇಣಿಗೆಯಿಂದ ಶಾಲಾ ವಾಹನಗಳು, ಒಳಾಂಗಣ ಕ್ರೀಡಾಂಗಣ, ವಿಜ್ಞಾನ ಪ್ರಯೋಗಾಲಯ, ಕಂಪ್ಯೂಟರ್ ಸ್ಮಾರ್ಟ್ ಕ್ಲಾಸ್, ಕುಡಿಯುವ ನೀರು, ಆಟದ ಮೈದಾನ ಅಭಿವೃದ್ದಿ, ಶಾಲಾ ಪಾರ್ಕ್ ಮತ್ತಿತರ ಸೌಲಭ್ಯಗಳನ್ನು ಅಚ್ಚುಕಟ್ಟಾಗಿ ಶಾಲಾಭಿವೃದ್ದಿಯ ಸಮಿತಿಯ ಸಹಕಾರದಿಂದ ಯಶಸ್ವಿಯಾಗಿ ಕೆಲಸ ಕಾರ್ಯ ಮಾಡಿದ್ದಾರೆ.

ಪ್ರಸ್ತುತ ಶಾಸಕರಾದ  ಟಿ ಡಿ ರಾಜೇಗೌಡರವರು ಶಾಲೆಯನ್ನು ದತ್ತು ತೆಗೆದುಕೊಂಡು ಇನ್ನೂ ಹೆಚ್ಚಿನ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಈಗಾಗಲೇ ಅಂದಾಜು ರೂ.35-40 ಲಕ್ಷದ ವರೆಗಿನ ಕಾಮಗಾರಿಗಳನ್ನು ಕೈಗೊಂಡಿರುತ್ತಾರೆ

ಮಕ್ಕಳಲ್ಲಿ ಇರುವ ಸಹಪಠ್ಯ ಚಟುವಟಿಕೆಗಳನ್ನು ಪೋಷಕರಿಗೆ ಪ್ರದರ್ಶಿಸುವ ನಿಟ್ಟಿನಲ್ಲಿ ಆಳ್ವಾಸ್ ಮಾದರಿಯಲ್ಲಿ 2020 ಜನೇವರಿ 31 ರಂದು ಶಾಲಾ ವಾರ್ಷಿಕೋತ್ಸವವನ್ನು ಸಂಘಟಿಸಿ ಸೋಷಿಯಲ್ ಮೀಡಿಯಾಗಳ ಮೂಲಕ ರಾಜ್ಯಾದ್ಯಂತ ನೇರ ಪ್ರಸಾರ ಮಾಡಿದ್ದಾರೆ.

ಗುಣಮಟ್ಟದ ಶಿಕ್ಷಣಕ್ಕೆ ಸೈ

ಪ್ರಸ್ತುತ 2021-22 ನೇ ಸಾಲಿನಲ್ಲಿ ಎಲ್.ಕೆ.ಜಿ ಮತ್ತು ಯುಕೆಜಿ ಯಿಂದ ಎಂಟನೇ ತರಗತಿಯವರೆಗೆ 320 ಕ್ಕೂ ಅಧಿಕ ಮಕ್ಕಳ ದಾಖಲಾತಿಯನ್ನು ಹೊಂದಿದ್ದು ಶೃಂಗೇರಿ ತಾಲ್ಲೂಕಿನ ಸರ್ಕಾರಿ ಶಾಲೆಯಲ್ಲಿಯೇ ಅತ್ಯಧಿಕ ದಾಖಲಾತಿ ಹೊಂದಿದ ಶಾಲೆಯಾಗಿದ್ದು ಕಳೆದ ಹತ್ತು ವರ್ಷದಿಂದ ಗುಣಮಟ್ಟದ ಶಿಕ್ಷಣಕ್ಕೆ ಹೆಸರಾಗಿರುವ ಈ ಶಾಲೆಗೆ ಪಟ್ಟಣ ಪ್ರದೇಶ ಹಾಗೂ ಪಕ್ಕದ ತಾಲ್ಲೂಕಿನ ಗ್ರಾಮೀಣ ಭಾಗದಿಂದ ಪೋಷಕರು ಮಕ್ಕಳನ್ನು ದಾಖಲಿಸುತ್ತಿರುವುದು ಕಂಡುಬಂದಿರುತ್ತದೆ. ಕಳೆದ ಹತ್ತು ವರ್ಷದಿಂದ ದಾಖಲಾದ ಯಾವುದೇ ಮಗು ಶಾಲೆಯಿಂದ ಹೊರಗುಳಿಯದಂತೆ ಶಿಕ್ಷಣ ನೀಡಲಾಗುತ್ತಿದೆ.

ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣದ ಜೊತೆಗೆ ಮಕ್ಕಳ ಜ್ಞಾನಾಭಿವೃದ್ದಿ ಹೆಚ್ಚಿಸುವ ನಿಟ್ಟಿನಲ್ಲಿ ಪ್ರಬಂಧ, ಶುದ್ದ ಬರಹ ಸ್ಪಷ್ಟ ಓದು, ಚರ್ಚಾಸ್ಪರ್ದೆ, ಹೆಣ್ಣುಮಕ್ಕಳಿಗೆ ವಿಶೇಷವಾಗಿ ಹೊಲಿಗೆ ತರಬೇತಿ, ಗಂಡುಮಕ್ಕಳಿಗೆ ಕಸೂತಿ ತರಬೇತಿ, ವಿದ್ಯಾರ್ಥಿ ಸಂಸತ್ ನಿರ್ವಹಣೆ ಮತ್ತಿತರ ಚಟುವಟಿಕೆಗಳನ್ನು ಕೈಗೊಳ್ಳುತ್ತಾರೆ.

ದಸರಾ ಉತ್ಸವದ ಸಂದರ್ಭದಲ್ಲಿ ಶೃಂಗೇರಿ ರಾಜಬೀದಿಗಳಲ್ಲಿ ಶಾಲೆಯ ಶಿಲ್ಪಕಲಾ ವೈಭವ, ಸ್ಥಬ್ದ ಚಿತ್ರ ಪ್ರದರ್ಶನ ಹಾಗೂ ಮಕ್ಕಳಿಂದ ವಿವಿದ ಸಂಸ್ಕೃತಿ ಬಿಂಬಿಸುವ ನೃತ್ಯ ಪ್ರದರ್ಶನ ನಡೆಯುತ್ತದೆ.

ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸಂಸ್ಕೃತ ಉತ್ಸವದಲ್ಲಿ ಕೂಡ ಈ ಶಾಲೆಯ ಮಕ್ಕಳು ಭಾಗವಹಿಸಿದ್ದಾರೆ.ಪ್ರತಿಭಾ ಕಾರಂಜಿಯಲ್ಲಿ ಶಾಲಾ ಮಕ್ಕಳು ಭಾಗವಹಿಸಿ ತಾಲ್ಲೂಕು ಜಿಲ್ಲಾ ಮಟ್ಟದ ಪ್ರಶಸ್ತಿ ಗಳಿಸಿರುತ್ತಾರೆ.

ಅನುಭವಿ ಶಿಕ್ಷಕರು ಹಾಗು ಸಂಪನ್ಮೂಲ ವ್ಯಕ್ತಿಗಳಿಂದ ವರ್ಷದಲ್ಲಿ ನಾಲ್ಕೈದು ಬಾರಿ ಶಿಕ್ಷಕರೊಂದಿಗೆ ಹಾಗೂ ವರ್ಷದಲ್ಲಿ ನಾಲ್ಕೈದು ಬಾರಿ ಶಾಲಾ ಮಕ್ಕಳ ಕಲಿಕೆ ಮತ್ತು ಶಾಲಾಭಿವೃದ್ಧಿ ಕುರಿತು ಪೋಷಕರೊಂದಿಗೆ ಸಮಾಲೋಚನೆ ನಡೆಸುತ್ತಿರುವುದು ಗುಣಮಟ್ಟದ ಶಿಕ್ಷಣಕ್ಕೆ ವರವಾಗಿ ಪರಿಣಮಿಸಿದೆ.

ಸಮುದಾಯ ಮತ್ತು ಶಿಕ್ಷಕರು ಒಂದುಗೂಡಿದರೆ ಅಳಿವಿನ ಅಂಚಿನಲ್ಲಿದ್ದ ಸರಕಾರಿ ಶಾಲೆಗಳು ಉತ್ತಮ ಸ್ಥಿತಿ ತಲುಪಬಹುದು ಎನ್ನುವದಕ್ಕೆ ಈ ಶಾಲೆಯೇ ಸಾಕ್ಷಿ.ಈ ಶಾಲಾ ಅಭಿವೃದ್ದಿಯ ಕಾರ್ಯಕ್ಕೆ ಶಿಕ್ಷಣ ಇಲಾಖೆಯವರು, ಜನಪ್ರತಿನಿಧಿಗಳು,ಶಿಕ್ಷಣ ಪ್ರೇಮಿಗಳು, ಸುತ್ತಮುತ್ತಲಿನ ಗ್ರಾಮಸ್ಥರು ಶಿಕ್ಷಕರಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿರುವುದು ಅವರ ಸಾಧನೆಗೆ ಕೈಗನ್ನಡಿ.

ಈ ಶಾಲೆಯ ಮುಖ್ಯ ಶಿಕ್ಷಕರಾದ ಬಿ ಆರ್ ಗಂಗಾಧರಪ್ಪ ರವರು ಸರ್ಕಾರ, ಎಸ್ ಡಿ ಎಮ್ ಸಿ, ಪೋಷಕರ, ಗ್ರಾಮಸ್ಥರ ಮತ್ತು ದಾನಿಗಳ ಸಹಭಾಗಿತ್ವದೊಂದಿಗೆ ಸಮನ್ವಯತೆಯನ್ನು ಸಾಧಿಸಿ ಶಾಲೆಯನ್ನು ಸರ್ವತೋಮುಖವಾಗಿ ಅಭಿವೃದ್ಧಿಪಡಿಸುತ್ತಿದ್ದಾರೆ

          ♦ ರಾಘವೇಂದ್ರ ಎನ್ ಜಿ., ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶೃಂಗೇರಿ.

 

ಜಿಲ್ಲೆ

ರಾಜ್ಯ

error: Content is protected !!