Saturday, July 27, 2024

ಸಿ.ಎಂ ಬದಲಾವಣೆ ಬಗ್ಗೆ ಮುನ್ಸೂಚನೆ ಕೊಟ್ಟ ಬಸವರಾಜ ಬೊಮ್ಮಾಯಿ

ಹಾವೇರಿ: ಬದುಕು ಶಾಶ್ವತವಲ್ಲ. ನಾವು ಎಷ್ಟು ದಿನ ಇರ್ತೇವೆ ಅದು ಗೊತ್ತಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಭಾವುಕರಾದರು.

ಶಿಗ್ಗಾಂವಿ ಪಟ್ಟಣದ ಸಂತೆ ಮೈದಾನದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮ ಪುತ್ಥಳಿ ಲೋಕಾರ್ಪಣೆ ಹಾಗೂ ಸಮುದಾಯ ಭವನದ ಅಡಿಗಲ್ಲು ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಎರಡು ಪೀಠದ ಸ್ವಾಮೀಜಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಸಂತಸ ತಂದಿದೆ. ಇದು ಸಂತರ ನಾಡು, ಇಲ್ಲಿ ವೈಚಾರಿಕ ಕ್ರಾಂತಿಯನ್ನ ಮಾಡಿದ ಗುರುಗಳಿದ್ದಾರೆ. ಕನಕದಾಸರು, ಸಂತ ಶಿಶುನಾಳ ಶರೀಫರು ಇದ್ದ ತಾಲೂಕು. ಯಾವುದು ಶಾಶ್ವತವಲ್ಲ, ಈ ಬದುಕು ಶಾಶ್ವತವಲ್ಲ. ನಾವು ಎಷ್ಟು ದಿನ ಇರ್ತೇವೆ ಅದು ಗೊತ್ತಿಲ್ಲ. ಸ್ಥಾನಮಾನಗಳು ಶಾಶ್ವತವಲ್ಲ ಎಂದು ಹೇಳಿ ಭಾವುಕರಾದರು. 

ನಿಮ್ಮೆಲ್ಲರ ಆಶೀರ್ವಾದದಿಂದ ಈ ರಾಜ್ಯದ ಮುಖ್ಯಮಂತ್ರಿಯಾಗಿ ನಿಂತಿದ್ದೇನೆ. ಕ್ಷೇತ್ರದ ಹೊರಗಡೆ ಇದ್ದಾಗ ನಾನು ಸಿಎಂ, ಗೃಹ ಸಚಿವ. ಆದರೆ ಕ್ಷೇತ್ರದ ಒಳಗಡೆ ಬಂದಾಗ ನಾನು ಬಸವರಾಜ ಬೊಮ್ಮಾಯಿ ಆಗಿ ಉಳಿಯುತ್ತೇನೆ. ಬಸವರಾಜ ಬೊಮ್ಮಾಯಿ ಅನ್ನೋದು ಶಾಶ್ವತ. ಅದರ ಹಿಂದಿರೋ ಪದನಾಮಗಳು ಶಾಶ್ವತವಲ್ಲ. ನಾನು ನಿಮ್ಮೂರಿಗೆ ಬಂದಾಗ ರೊಟ್ಟಿ ತಿನ್ನಿಸಿದ್ದೀರಿ, ನವಣಿ ಅಕ್ಕಿ ಅನ್ನ ಮಾಡಿ ಹಾಕಿದ್ದೀರಿ. ನಾನೇನು ಕೆಲಸ ಮಾಡಿದ್ರೂ ಆ ಋಣ ತೀರಿಸಲು ಆಗೋದಿಲ್ಲ ಎಂದು ಭಾವುಕರಾದರು.

ಶಾಶ್ವತವಾಗಿ ನಿಮ್ಮ ಪ್ರೀತಿ ವಿಶ್ವಾಸ ಉಳಿಸಿಕೊಂಡು ಹೋಗಬೇಕೆಂಬ ಆಸೆಯಿದೆ. ನಾನು ಭಾವನಾತ್ಮಕವಾಗಿ ಮಾತನಾಡಬಾರ್ದು ಅಂದ್ಕೊಂಡಿದ್ದೆ. ನಿಮ್ಮನ್ನೆಲ್ಲ ನೋಡಿದಾಗ ಭಾವನೆಗಳು ಬರುತ್ತವೆ. ಎಲ್ಲ ಸಮುದಾಯಗಳ ಭಾವನೆಗೆ ಸ್ಪಂದಿಸೋದು ಸೇರಿದಂತೆ ದೊಡ್ಡ ಜವಾಬ್ದಾರಿ ನನ್ನ ಮೇಲಿದೆ. ಸರ್ಕಾರಕ್ಕೆ ಸವಾಲುಗಳಿವೆ, ಅವುಗಳನ್ನ ಎದುರಿಸಿಕೊಂಡು ಹೋಗಬೇಕಿದೆ ಎಂದರು.

ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದು, ಯಾವುದೋ ಒಂದು ರಾಜ್ಯ ಪಡೆದುಕೊಳ್ಳಲು ಅಲ್ಲ. ವಿಸ್ತರಣೆಗಾಗಿ ಹೋರಾಟ ಮಾಡಲಿಲ್ಲ. ತನ್ನ ರಾಜ್ಯದ ಜನರ ರಕ್ಷಣೆ ಮತ್ತು ಸ್ವಾಭಿಮಾನಕ್ಕಾಗಿ ಹೋರಾಟ ಮಾಡಿದಳು. ಎಲ್ಲ ಸಮುದಾಯದವರನ್ನ ಸೇರಿಸಿಕೊಂಡು ಚೆನ್ನಮ್ಮ ರಾಜ್ಯವನ್ನ ಉಳಿಸೋ ಕೆಲಸ ಮಾಡಿದಳು. ಸಂಗೊಳ್ಳಿ ರಾಯಣ್ಣ ಸೆರೆಯಾದಾಗ ಕಿತ್ತೂರು ಚೆನ್ನಮ್ಮ ಕುಸಿದು ಹೋದಳು. ಅಲ್ಲಿಯವರೆಗೂ ಕಿತ್ತೂರು ಚೆನ್ನಮ್ಮ ಬ್ರಿಟಿಷರ ಯಾವುದಕ್ಕೂ ಕುಸಿದಿರಲಿಲ್ಲ. ಸಾಧಕರಿಗೆ ಸಾವು ಅಂತ್ಯವಲ್ಲ ಎಂದು ಸ್ಪೂರ್ತಿ ಮಾತುಗಳನ್ನು ಆಡಿದರು.

ಪಕ್ಷದ ಆಂತರಿಕ ವಲಯದಲ್ಲಿ ನಡೆಯುತ್ತಿರುವ ಚರ್ಚೆಗಳು ನಿಜವಾಗಬಹುದೇ ಎನ್ನುವ ಮಾತುಗಳು ಕೂಡ ಕೇಳಿಬಂದಿದೆ. ಜನವರಿಯಲ್ಲಿ, ಸಂಕ್ರಾಂತಿಯಲ್ಲಿ ಕ್ರಾಂತಿಯಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಸಂಭಾವ್ಯ ಬದಲಾವಣೆ ಊಹಿಸಿ ಸಿಎಂ ಇಂತಹ ಹೇಳಿಕೆ ನೀಡಿರಬಹುದೆಂದು ಹೇಳಲಾಗಿದೆ.

ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯುವ ಸಂದರ್ಭದಲ್ಲಿ ಇಂತಹ ಮಾತುಗಳನ್ನಾಡಿದ್ದರು. ಆದರೆ, ಸದ್ಯಕ್ಕೆ ಬಸವರಾಜ ಬೊಮ್ಮಾಯಿ ಬದಲಾವಣೆ ಇಲ್ಲವೆಂದು ಪಕ್ಷದ ನಾಯಕರೇ ಸ್ಪಷ್ಟಪಡಿಸಿದ್ದರೂ, ಸ್ವಕ್ಷೇತ್ರದಲ್ಲಿ ಇಂದು ಅವರು ನೀಡಿರುವ ಹೇಳಿಕೆ ಚರ್ಚೆಗೆ ಕಾರಣವಾಗಿದೆ.

 

ಜಿಲ್ಲೆ

ರಾಜ್ಯ

error: Content is protected !!