Sunday, September 8, 2024

ಎಂ.ಇ.ಎಸ್. ಪುಂಡಾಟಿಕೆಯ ಹಿಡನ್ ಅಜೆಂಡಾ ಏನು?

♦ ಪ್ರೊ. ಸಿದ್ದು ಯಾಪಲಪರವಿ. ಕಾರಟಗಿ.

ಕನ್ನಡ ಮರಾಠಿ ಬಾಂಧವ್ಯ ಬೆಳಗಾವಿ ಮಟ್ಟಿಗೆ ಸರಿಯಾಗಿ ಇದೆ. ಆದರೆ ಶಿವಸೇನಾ ಮತ್ತು ಎಂ.ಇ.ಎಸ್. ಪುಂಡಾಟಿಕೆಯಿಂದ ಸೌಹಾರ್ದ ಹಾಳಾಗುತ್ತಲಿದೆ. ಈಗ ಕರ್ನಾಟಕದಲ್ಲಿ ತನ್ನ ರಾಜಕೀಯ ಪ್ರಾಬಲ್ಯ ಕಳೆದುಕೊಂಡಿರುವ ಎಂ.ಇ.ಎಸ್. ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಪರದಾಡುತ್ತದೆ.

ಈ ಹಿಂದೆ ವಿಧಾನಸಭೆ ಮತ್ತು ಮಹಾನಗರ ಪಾಲಿಕೆಯ ಆಡಳಿತ ರುಚಿ ಅನುಭವಿಸಿರುವ ಇವರಿಗೆ ಕನ್ನಡಿಗರ ಒಗ್ಗಟ್ಟು ಮುಳುವಾಗಿದೆ.ಕರ್ನಾಟಕ ಸರ್ಕಾರ ಬೆಳಗಾವಿಯಲ್ಲಿ ಅಧಿವೇಶನ ನಡೆಸಿ ಗಡಿ ಅಭಿವೃದ್ಧಿಗಾಗಿ ಒತ್ತು ಕೊಡುತ್ತಿರುವುದು ಮರಾಠಿಗರನ್ನು‌ ಅಸಮಾಧಾನ ಗೊಳಿಸಿದೆ.

ಮಹಾರಾಷ್ಟ್ರದ ಶಿವಸೇನೆಯ ಸರಕಾರ ಬಿಜೆಪಿ ಮೇಲೆ ತನ್ನ ಸೇಡು ತೀರಿಸಿಕೊಳ್ಳಲು ಬೆಳಗಾವಿಯನ್ನು ಅಸ್ತ್ರವನ್ನಾಗಿ ಬಳಸಿಕೊಂಡಿದೆ. ಈ ಹಿಂದೆ ಬೆಳಗಾವಿ ಬೈ ಎಲೆಕ್ಷನ್ ಸಂದರ್ಭದಲ್ಲಿ ಶ್ರೀಮತಿ ಅಂಗಡಿ ಅವರ ಪ್ರಯಾಸಕರ ಗೆಲುವಿಗೆ ಇದೇ ಎಂ.ಇ.ಎಸ್. ಕಾರಣ.

ಈಗ ರಾಜ್ಯದಲ್ಲಿ ಅಧಿಕಾರದಲ್ಲಿ ಇರುವ ಬಿಜೆಪಿಗೆ ಹಿನ್ನಡೆ ಉಂಟು ಮಾಡುವ ಕಾರಣದಿಂದ ಕನ್ನಡಿಗರ ಸ್ವಾಭಿಮಾನ ಕೆಣಕಲಾರಂಭಿಸಿದೆ.ಬೆಳಗಾವಿ ಹಿಂದುಪರ ಸಂಘಟನೆಗಳು ಹೊಂದಿರುವ ಮುಖವಾಡ ಕೂಡ ಬಯಲಾಗಿದೆ. ಈ ಹಿಂದೆ ಶಿವಸೇನೆಯ ಸಖ್ಯ ಬಿಜೆಪಿ ಜೊತೆಗಿದ್ದಾಗಿನ ಸೌಮ್ಯತೆ ಈಗ ಮಾಯವಾಗಿದೆ.

ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದು ವಿಧಾನಸಭಾ ಕಲಾಪದ‌ ಹಾದಿ ತಪ್ಪಿಸಲು ಬೆಳಗಾವಿ ದಾಂಧಲೆ ಭಾಗಶಃ ಯಶಸ್ವಿಯಾಗಿದೆ. ಗಡಿ ವಿವಾದ ಬಗೆ ಹರಿದರೂ ತನ್ನ ಜಗಳ ಮುಂದುವರೆಸುವ ಎಂ.ಇ.ಎಸ್. ಉದ್ದೇಶವನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು.ಕೇಂದ್ರ ಸರ್ಕಾರ ಹಲವಾರು ಕಾರಣಗಳಿಂದ ಕರ್ನಾಟಕ ಮತ್ತು ದಕ್ಷಿಣ ಭಾರತದಲ್ಲಿ ತನ್ನ ಪ್ರಭಾವ ವಿಸ್ತರಿಸುವ ಉದ್ದೇಶವನ್ನು ಅಲುಗಾಡಿಸುವ ಹಿಡನ್ ಅಜೆಂಡಾ ಇದಾಗಿದೆ.

ಮುಂದಿನ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ತನ್ನ ಪ್ರಾಭಲ್ಯವನ್ನು ಹೆಚ್ಚಿಸಿಕೊಂಡು ಬಿಜೆಪಿ ಪಕ್ಷದ ವರ್ಚಸ್ಸನ್ನು ಕುಂಠಿತಗೊಳಿಸುವ ಮುನ್ಸೂಚನೆ ಸಾಬೀತಾಗಿದೆ. ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿರುವ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಬೆಳಗಾವಿಯ ಕನ್ನಡಿಗರ ಒಗ್ಗಟ್ಟಿನ ಸಂಕೇತವಾದರೆ, ಶಿವಾಜಿ ಮತ್ತು ಮರಾಠಿ ಭಾಷೆಯ ಆಧಾರದ ಮೇಲೆ ಬೆಳಗಾವಿಯನ್ನು ಉದ್ವಿಗ್ನ ಗೊಳಿಸುವ ಯತ್ನವಿದು.

ಕೇವಲ ಕೆಲವು ಪುಂಡರನ್ನು ಬಂಧಿಸಿದರೆ ಸಮಸ್ಯೆ ಮುಗಿಯುವುದಿಲ್ಲ. ಇದರ ಹಿಂದಿರುವ ರಾಜಕೀಯ ದುರುದ್ದೇಶವನ್ನು ಸರಕಾರ ತನ್ನ ಆಂತರಿಕ ಗ್ರಹ ಇಲಾಖೆಯ ಮೂಲಕ ಪತ್ತೆ ಹಚ್ಚಿ ಸಮಸ್ಯಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು.

ಜಿಲ್ಲೆ

ರಾಜ್ಯ

error: Content is protected !!