Saturday, May 25, 2024

ಶಿಕ್ಷಣ ಕ್ಷೇತ್ರದಲ್ಲಿ ಅಚ್ಚರಿ ಬದಲಾಣೆ! ಟಿಇಟಿಗೆ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಅವಕಾಶ: ಅಪಾಯಕಾರಿ ನಿರ್ಧಾರ .

ಶಾಲಾ ಶಿಕ್ಷಕರಾಗಲು ಎಂಜಿನಿಯರಿಂಗ್ ಪದವೀಧರರಿಗೆ ಅವಕಾಶ ನೀಡುವ ಸರಕಾರದ ನಿರ್ಧಾರದಿಂದ  B.Ed /D.Ed ತರಬೇತಿ ಹೊಂದಿದ ವಿಜ್ಞಾನ ಪದವೀಧರರ ಜೊತೆಗೆ ಕಲಾ, ವಾಣಿಜ್ಯ ಪದವೀಧರರು ಅವಕಾಶ ವಂಚಿತರಾಗಲಿದ್ದಾರೆ.

 ಹೌದು. ಶಿಕ್ಷಕರಾಗುವ ಕನಸು ಹೊತ್ತು ಹತ್ತಿಪ್ಪತ್ತು ವರ್ಷಗಳಿಂದ ಜಾತಕ ಪಕ್ಷಿಯಂತೆ ಕಾದು ಕುಳಿತ ಹತ್ತಾರು ಸಾವಿರ ಯುವಪೀಳಿಗೆ, ಮತ್ತು  ವಯೋಮಿತಿ ಮೀರಿದ ಅರ್ಹರಿಗೆ ಸರಕಾರ ದೊಡ್ಡ ಆಘಾತ ನೀಡಿದೆ.

ಸುಮಾರು 50 ಸಾವಿರದಷ್ಟು ಹುದ್ದೆಗಳು ಖಾಲಿ ಇರುವಾಗ ಸರಕಾರ ಮೂಲ ವೃಂದದ ಪದವೀಧರ ಪ್ರಾಥಮಿಕ ಶಾಲಾ ( 6 ರಿಂದ 8) ಶಿಕ್ಷಕರ ಹತ್ತು ಸಾವಿರ ಹುದ್ದೆ, ಕಲ್ಯಾಣ ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ 5 ಸಾವಿರ ಹುದ್ದೆ ಸೇರಿ 15ಸಾವಿರ ಹುದ್ದೆ ಭರ್ತಿಗೆ ಅಧಿಸೂಚನೆ ಹೊರಡಿಸುವ ನಿರ್ಣಯ ಮಾಡಿದೆ.ನೇಮಕಾತಿ ಪ್ರಕ್ರಿಯೆ ಸ್ವಾಗತಾರ್ಹವಾದರೂ, ಈ ನಿರ್ಧಾರದಲ್ಲಿ ಗಮನಿಸಬೇಕಾದ ಗಂಭೀರ ಅಂಶಗಳಿವೆ.

ಈ ಬಾರಿ ಟಿಇಟಿ ಗೆ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುತ್ತಿರುವದು.ಅದಕ್ಕೆ ಸರಕಾರ ಕೊಡುವ ಕಾರಣ ವಿಜ್ಞಾನ ಹಾಗೂ ಗಣಿತ ಶಿಕ್ಷಕರ ಕೊರತೆಯಂತೆ.

ಆದರೆ ಇದು ಸಂಪೂರ್ಣ ಸುಳ್ಳು. ಕಳೆದ ಹತ್ತಿಪ್ಪತ್ತು ವರ್ಷಗಳಿಂದ ವಿಜ್ಞಾನ ಪದವೀಧರರು ಶಿಕ್ಷಕರಾಗಲು ಕಾಯುತ್ತಿರುವಾಗ, ಕೊರತೆ ಇದೆ ಎಂಬ ವಾದ ಇಟ್ಟುಕೊಂಡು ಎಂಜಿನಿಯರಿಂಗ್ ಪದವೀಧರರಿಗೆ ಶಿಕ್ಷಕರಾಗುವ ನಿರ್ಣಯ ಮಾಡಿರುವುದು ಅಸಮರ್ಥನೀಯ.

ಈಗಾಗಲೆ ಬಿ.ಇಡಿ, ಡಿ.ಇಡಿ ಪದವಿ ಹೊಂದಿದ ಟಿಇಟಿ ಪಾಸಾದವರು ಸಿಇಟಿಗೆ (ಸಾಮಾನ್ಯ ಪ್ರವೇಶ ಪರೀಕ್ಷೆ )ಅರ್ಹರು ಎಂದು ಹೇಳುವ ಸರಕಾರ ಬಿಇಡಿ,ಡಿಇಡಿ ಪದವೀಧರರಲ್ಲದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಅವಕಾಶ ನೀಡಲು ಯಾವ ನಿಯಮಾವಳಿ ಇದೆ? ಇಂತಹ ಆಲೋಚನೆ ಹೇಗೆ ಬಂತು? ಒಂದು ಕಡೆ ಕಟ್ಟುನಿಟ್ಟಾದ ನಿಯಮಾವಳಿ ಇನ್ನೊಂದು ಕಡೆ ಸಂಬಂಧವೆ ಇಲ್ಲದವರ ನೇಮಕ.ಈ ನಿರ್ಧಾರ ಖಂಡನೀಯ.

ಇಂಥ ನಿರ್ಧಾರ ಜಾರಿ ಮಾಡುವ ಮುನ್ನ ಸರಕಾರ ಮರು ಆಲೋಚನೆ ಮಾಡಿ ಬಿಇಡಿ ತರಬೇತಿ ಹೊಂದಿದ ವಿಜ್ಞಾನ ಪದವೀಧರರಿಗೆ ಮಾತ್ರ ಆದ್ಯತೆ ನೀಡಲಿ.ಅದರೊಂದಿಗೆ ಕಿರಿಯ ಶಾಲೆಗಳಿಗೆ ಅಗತ್ಯವಿರುವ PUC D.Ed ಆದವರ ನೇಮಕವೂ ಆಗಬೇಕು.

ಸರಕಾರಿ ಶಾಲೆಗಳ ಬಗ್ಗೆ ಕಾಳಜಿ ಮಾಡುವ ಸರಕಾರ, ಖಾಸಗಿ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರ ನೇಮಕಾತಿಗೆ ಶೀಘ್ರ ಅನುಮತಿ ನೀಡಲಿ ಮತ್ತು ಅನುದಾನರಹಿತ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಿಗೆ ಅನುದಾನ ನೀಡಿ ಶೈಕ್ಷಣಿಕ ಸಮತೋಲನ ಕಾಪಾಡಲಿ.

ಸರಕಾರದ ಈ ಅವೈಜ್ಞಾನಿಕ ನಿಲುವನ್ನು ಶಿಕ್ಷಣತಜ್ಞರು, ಜನಪ್ರತಿನಿಧಿಗಳು ಮತ್ತು ಪದವೀಧರರು  ಖಂಡಿಸಿ ಸರಕಾರವನ್ನು ಎಚ್ಚರಿಸಲಿ.

 

ಲೇಖನ:ಉಮೇಶ ಗೌರಿ (ಯರಡಾಲ) .M- 8867505678.

ಜಿಲ್ಲೆ

ರಾಜ್ಯ

error: Content is protected !!