Friday, April 19, 2024

ಬಾಳೆಹಣ್ಣು ಬೇಡವಾದರೆ ಶೇಂಗಾ ಚಕ್ಕೆ ಮತ್ತು ರುಚಿಯಾದ ಊಟ: ಬಿ ಸಿ ನಾಗೇಶ

ಬೆಳಗಾವಿ(ಡಿ.13): ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ 1ರಿಂದ 8ನೇ ತರಗತಿವರೆಗಿನ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ 14 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ನೀಡುತ್ತಿರುವ ಕೋಳಿಮೊಟ್ಟೆ/ ಬಾಳೆಹಣ್ಣು ವಿತರಣೆ ಮಾಡಲಾಗುತ್ತಿದೆ. ಇನ್ನು ಯೋಜನೆಯಲ್ಲಿ ಸದ್ಯದಲ್ಲೇ ಹೊಸ ಆಯ್ಕೆಯಾಗಿ ಕೆಎಂಎಫ್‌ನ ಶೇಂಗಾ ಚಕ್ಕೆ ಮಿಠಾಯಿ ಕೂಡ ಸೇರಿಕೊಳ್ಳಲಿದೆ. ಅಂದರೆ ಬಾಳೆಹಣ್ಣು ಬೇಡವಾದರೆ ಮಕ್ಕಳು ಚಕ್ಕೆ ಮಿಠಾಯಿ ಸೇವಿಸಬಹುದಾಗಿದೆ.

ಅನುದಾನ ಲಭ್ಯತೆ ಆಧಾರದ ಮೇಲೆ ಮೊಟ್ಟೆ ಸೇವಿಸದ ಮಕ್ಕಳಿಗೆ ಬಾಳೆ ಹಣ್ಣು ಹಾಗೂ ಶೇಂಗಾ ಮಿಠಾಯಿ ಎರಡೂ ನೀಡಲು ಸಹ ಶಿಕ್ಷಣ ಇಲಾಖೆ ಗಂಭೀರ ಚಿಂತನೆ ನಡೆಸಿದೆ. ಬಹು ಪೌಷ್ಟಿಕಾಂಶ ಕೊರತೆ ಹಾಗೂ ರಕ್ತ ಹೀನತೆಯಿಂದ ಬಳಲುತ್ತಿರುವ ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳ ಸರ್ಕಾರಿ ಹಾಗೂ ಅನುದಾನಿತ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಮಕ್ಕಳಿಗೆ ಸರ್ಕಾರ ಪ್ರಧಾನ ಮಂತ್ರಿ ಪೋಷಣ್‌ ಶಕ್ತಿ ನಿರ್ಮಾಣ್‌ ಮಧ್ಯಾಹ್ನದ ಉಪಾಹಾರ ಯೋಜನೆಯಡಿ ಈಗಾಗಲೇ ಡಿಸೆಂಬರ್‌ ತಿಂಗಳಿಂದ ಕೋಳಿ ಮೊಟ್ಟೆನೀಡಲಾಗುತ್ತಿದೆ. ಕೋಳಿಮೊಟ್ಟೆ ಸೇವಿಸದವರಿಗೆ ಬಾಳೆಹಣ್ಣು ನೀಡಲಾಗುತ್ತಿದೆ.

ಇದೀಗ ಎಲ್ಲ ಅವಧಿಯಲ್ಲೂ ಸಾಕಷ್ಟು ಪ್ರಮಾಣದಲ್ಲಿ ಬಾಳೆಹಣ್ಣು ಪೂರೈಕೆ ಸಾಧ್ಯವಾಗದಿರಬಹುದು ಎಂಬ ಕಾರಣಕ್ಕೆ ಹಾಗೂ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಆಯ್ಕೆ ನೀಡುವ ಸಲುವಾಗಿ ಬಾಳೆಹಣ್ಣಿಗೆ ಪರ್ಯಾಯವಾಗಿ ಕೆಎಂಎಫ್‌ನಿಂದ ತಯಾರಿಸಿದ ಶೇಂಗಾ ಚಕ್ಕೆ (ಕಡ್ಲೆ) ಮಿಠಾಯಿ ನೀಡಲು ಸರ್ಕಾರ ಮುಂದಾಗಿದೆ. ಒಂದು ವೇಳೆ ಇರುವ ಅನುದಾನದಲ್ಲೇ ಸಾಧ್ಯವಾಗುವುದಾದರೆ ಬಾಳೆಹಣ್ಣು ಮತ್ತು ಕಡ್ಲೆ ಮಿಠಾಯಿ ಎರಡನ್ನೂ ಕೊಡುವ ಆಲೋಚನೆಯೂ ಶಿಕ್ಷಣ ಇಲಾಖೆಗಿದೆ ಎಂದು ಮೂಲಗಳು ತಿಳಿಸಿವೆ.

ಈ ಸಂಬಂಧ ಈಗಾಗಲೇ ಕರ್ನಾಟಕ ಹಾಲು ಒಕ್ಕೂಟದ ಅಧಿಕಾರಿಗಳೊಂದಿಗೆ ( ಕೆಎಂಎಫ್‌ ) ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ.ವಿಶಾಲ… ಅವರು ಚರ್ಚೆ ನಡೆಸಿದ್ದಾರೆ.

ಕೆಎಂಎಫ್‌ ಕೂಡ ಅಗತ್ಯದಷ್ಟು ಕಡ್ಲೆ ಮಿಠಾಯಿ ತಯಾರಿಸಿ ಕೊಡಲು ಒಪ್ಪಿದೆ. ಪ್ರತಿ ಮಿಠಾಯಿಯನ್ನು ಪ್ಯಾಕ್‌ ಮಾಡಿ ಕೊಟ್ಟರೆ ಕೆಜಿ ಗಟ್ಟಲೆ ಪ್ಲಾಸ್ಟಿಕ್‌ ಬಳಸಬೇಕಾಗುತ್ತದೆ. ಹಾಗಾಗಿ ಪ್ಲಾಸ್ಟಿಕ್‌ ಬದಲು ಪರಿಸರ ಸ್ನೇಹಿ ಪೇಪರ್‌ ಬಾಕ್ಸ್‌ಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ಯಾಕ್‌ ಮಾಡಿ ಸರಬರಾಜು ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರು ಖಚಿತಪಡಿಸಿದ್ದಾರೆ.

ಕೋಳಿಮೊಟ್ಟೆಯಲ್ಲಿ ವಿಟಮಿನ್‌ ಬಿ-12, ಅತಿ ಹೆಚ್ಚು ಪೊ›ಟೀನ್‌ ಸೇರಿದಂತೆ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಪೋಷಕಾಂಶಗಳು ಇರುವುದರಿಂದ ಸರ್ಕಾರ ಅತಿ ಹೆಚ್ಚು ಅಪೌಷ್ಟಿಕತೆ ಹೊಂದಿರುವ ಕಲ್ಯಾಣ ಕರ್ನಾಟಕ  ಭಾಗದ ಬೀದರ್‌ , ರಾಯಚೂರು, ಯಾದಗಿರಿ, ಕೊಪ್ಪಳ, ಬಳ್ಳಾರಿ, ಕಲಬುರಗಿ ಮತ್ತು ವಿಜಯಪುರ (ಕಿತ್ತೂರು ಕರ್ನಾಟಕ) ಜಿಲ್ಲೆಗಳ 1 ರಿಂದ 8 ನೇ ತರಗತಿ ವರೆಗಿನ 14,44,322 ಮಕ್ಕಳಿಗೆ ತಿಂಗಳಲ್ಲಿ 12 ದಿನ ಬಿಸಿಯೂಟದ ಜೊತೆ ಒಂದು ಬೇಯಿಸಿದ ಕೋಳಿಮೊಟ್ಟೆ, ಮೊಟ್ಟೆತಿನ್ನದವರಿಗೆ ಬಾಳೆಹಣ್ಣು ನೀಡಲಾಗುತ್ತಿದೆ. ಈ ಮಧ್ಯೆ ಮೊಟ್ಟೆನೀಡಲು ಕೆಲ ಮಠಾಧೀಶರಿಂದ ವಿರೋಧ ವ್ಯಕ್ತವಾದರೂ ಇಲಾಖೆ ನಮಗೆ ಮಕ್ಕಳಲ್ಲಿ ಅಪೌಷ್ಟಿಕತೆ ನೀಗಿಸುವುದು ಮುಖ್ಯ ಎಂದು ಮೊಟ್ಟೆ ವಿತರಣೆಯನ್ನು ಮುಂದುವರೆಸಿದೆ.

ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಶಾಲಾ ಮಕ್ಕಳಿಗೆ ಮಕ್ಕಳ ಆಯ್ಕೆಯಂತೆ ಮೊಟ್ಟೆಅಥವಾ ಬಾಳೆ ಹಣ್ಣು ನೀಡಲಾಗುತ್ತಿದೆ. ಬಾಳೆ ಹಣ್ಣು ನೀಡುವವರಿಗೆ ಬಾಳೆ ಹಣ್ಣಿನ ಬದಲಿಗೆ ಕೆಎಂಎಫ್‌ನಿಂದ ತಯಾರಿಸಿದ ಕಡಲೆ ಮಿಠಾಯಿ ಅಥವಾ ಬರ್ಫಿ ನೀಡುವ ಬಗ್ಗೆ ಚರ್ಚಿಸಲಾಗಿದೆ. ಅನುದಾನ ಲಭ್ಯತೆ ಇದ್ದರೆ ಬಾಳೆ ಹಣ್ಣು ಹಾಗೂ ಮಿಠಾಯಿ ಎರಡೂ ನೀಡಲು ಸಹ ಚಿಂತಿಸಲಾಗಿದೆ. ಈಗಾಗಲೇ ಕೆಎಂಎಫ್‌ ಸಹ ಒಪ್ಪಿಗೆ ನೀಡಿದ್ದು, ಮುಂದಿನ ಎರಡು ವಾರದೊಳಗೆ ತೀರ್ಮಾನ ಅಂತಿಮಗೊಳಿಸಲಾಗುವುದು.

:-ಬಿ.ಸಿ. ನಾಗೇಶ್‌, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ

 

ಜಿಲ್ಲೆ

ರಾಜ್ಯ

error: Content is protected !!