Thursday, July 25, 2024

ಇಂದಿನಿಂದ ಬೆಳಗಾವಿ ಅಧಿವೇಶನ: ನಡೆಯಲಿ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಚಿಂತನ- ಮಂಥನ

ವರದಿ: ಉಮೇಶ ಗೌರಿ

ಬೆಳಗಾವಿ:ಬೆಳಗಾವಿಯಲ್ಲಿ ಇಂದಿನಿಂದ ಆರಂಭವಾಗುವ ಚಳಿಗಾಲದ ಅಧಿವೇಶನದಲ್ಲಿ ಕಿತ್ತೂರು ಕರ್ನಾಟಕ ಘೋಷಣೆ ಫಲದ ಜತೆಗೆ ಇದೇ ಭಾಗದ ರೈತರ ಸಮಸ್ಯೆ , ಪ್ರವಾಹ ಸಂತ್ರಸ್ತರ ಸಂಕಟ, ನಿರುದ್ಯೋಗ ಸಮಸ್ಯೆಗಳು ಸೇರಿದಂತೆ ಉತ್ತರ ಕರ್ನಾಟಕ ಭಾಗದ ಹಲವಾರು ಸಮಸ್ಯೆಗಳಿಗೆ ಸಿಗಬೇಕಿದೆ ಪರಿಹಾರ.

ಶಿಕ್ಷಣ ಕ್ಷೇತ್ರ: ಶಿಕ್ಷಣ ಕ್ಷೇತ್ರವನ್ನು ಇನ್ನಷ್ಟೂ ಸಬಲೀಕರಣಗೊಳಿಸುವತ್ತ ಒಲವು ತೋರಬೇಕು. ಕೊಠಾರಿ ಆಯೋಗದ ವರದಿಯಂತೆ “ಭವ್ಯ ಭಾರತದ ಭವಿಷ್ಯ ತರಗತಿಯ ನಾಲ್ಕು ಗೋಡೆಗಳ ನಡುವೆ ನಿರ್ಮಾಣವಾಗುತ್ತಿದೆ” ಎಂಬುದು ಅಕ್ಷರಶಃ ಸತ್ಯ. ದೇಶದ ಅಭಿವೃದ್ಧಿ ಶಿಕ್ಷಣವನ್ನು ಅವಲಂಬಿಸಿರುತ್ತದೆ.

ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕಾಗಿ ಶಾಲೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು, ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡುವುದು, ಶಾಲೆಗಳಿಗೆ ನಿರ್ವಹಣಾ ಅನುದಾನ ಹೆಚ್ಚಿಸುವುದು,ಶಿಕ್ಷಕರ ಅನ್ಯ ಕಾರ್ಯಗಳ ಹೊರೆ ಕಡಿಮೆ ಮಾಡುವುದು,ಶೈಕ್ಷಣಿಕ ಕುಂದುಕೊರತೆಗಳಿಗೆ ಶೀಘ್ರ ಪರಿಹಾರ ಒದಗಿಸುವುದು, ಪಠ್ಯಕ್ರಮದಲ್ಲಿ ವಿನೂತನ ವಿಷಯಗಳ ಸೇರ್ಪಡೆ, ಜೀವನಕ್ಕೆ ಬೇಕಾಗುವ ಕೌಶಲ್ಯಗಳನ್ನು ಬೆಳೆಸುವುದು,ಶಾಲೆಗಳ ನಿಯಮಿತ ಶೈಕ್ಷಣಿಕ ತಪಾಸಣೆ ಮತ್ತು ಮೇಲ್ವಿಚಾರಣೆ ಹಾಗೂ ಬಜೆಟ್ ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡುವುದು-ಸೇರಿದಂತೆ ಸಾಕ್ಷರತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಧನಾತ್ಮಕ ಚಿಂತನೆಗಳ ಅಗತ್ಯವಿದೆ.

ರೈತರ ಸಮಸ್ಯೆ: ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿವೇತನ ಸೌಲಭ್ಯ ಒದಗಿಸುವ ವಿದ್ಯಾನಿಧಿ ಯೋಜನೆ ಸ್ವಾಗತಾರ್ಹ. ಅನ್ನದಾತನ ಗೋಳಿಗೆ ಶಾಶ್ವತ ಪರಿಹಾರ ದೊರೆಯಲಿ. ದೇಶದ ಬೆನ್ನೆಲುಬು ಎಂದೆಲ್ಲಾ ಕರೆಯುವ ರೈತನ ಜೀವನ ಉತ್ತಮಗೊಳಿಸುವ ಕ್ರಮಗಳ ಅಗತ್ಯವಿದೆ.

ಮುಖ್ಯವಾಗಿ ರೈತ ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗುವಂತಾಗಬೇಕು. ಬೆಂಬಲ ಬೆಲೆ ಘೋಷಣೆ ಮಾಡಬೇಕು. ಕೃಷಿ ಉಪಕರಣ, ರಸಗೊಬ್ಬರ, ಬಿತ್ತನೆ ಬೀಜ ಇತ್ಯಾದಿಗಳ ಬೆಲೆ ಕೈಗೆಟುಕುವಂತಿರಬೇಕು. ಅತಿವೃಷ್ಟಿ ಮತ್ತು ಅನಾವೃಷ್ಟಿ ಕಾಲದಲ್ಲಿ ಅನ್ನದಾತನಿಗೆ ಸೂಕ್ತ ನೆರವು ನೀಡಬೇಕು. ರೈತನಿಗೆ ಬರಬೇಕಾದ ಯಾವುದೇ ಬಿಲ್ಲುಗಳು ಬಾಕಿ ಇರದಂತೆ ನೋಡಿಕೊಳ್ಳಬೇಕು. ವೈಜ್ಞಾನಿಕ ಮತ್ತು ಸಾವಯವ ಕೃಷಿಯ ಬಗ್ಗೆ ರೈತರಿಗೆ ತರಬೇತಿ ನೀಡಬೇಕು. ರೈತಸ್ನೇಹ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು.ಈ ಕುರಿತು ರೈತರ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಮುಕ್ತ ಚರ್ಚೆಯಾಗಲಿ. ಹಗಲಿರುಳು ದುಡಿದು ದಣಿವ ರೈತ ನೆಮ್ಮದಿಯಿಂದ ಬದುಕುವಂತಾಗಬೇಕು.

ಉತ್ತರ ಕರ್ನಾಟಕದ ಜನರ ಬೇಡಿಕೆಗಳು ಈಡೇರಲಿ:
ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಜನರ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದನೆ ಸಿಗುವಂತಾಗಲಿ. ಜೊತೆಗೆ ಈ ಭಾಗವನ್ನು ಕಿತ್ತೂರು ಕರ್ನಾಟಕ ಎಂದು ಘೋಷಣೆ ಮಾಡಿದರಷ್ಟೇ ಸಾಕೇ? ಎನ್ನುವ ಪ್ರಶ್ನೆಯೂ ಚರ್ಚೆಗೆ ಬರುತ್ತಿದೆ. ಘೋಷಣೆ ಜತೆಗೆ, ಕಲ್ಯಾಣ ಕರ್ನಾಟಕಕ್ಕೆ ಅಭಿವೃದ್ಧಿ ಮಂಡಳಿ ಮಾಡಿದ ರೀತಿ ಕಿತ್ತೂರು ಕರ್ನಾಟಕ ಅಭಿವೃದ್ಧಿಗೂ ಮಂಡಳಿ ಸ್ಥಾಪಿಸಿ ಹಣ ಮೀಸಲಿಡಬೇಕು ಎನ್ನುವ ಬೇಡಿಕೆ ಈ ಭಾಗದಲ್ಲಿದೆ. ಅದರ ಬಗ್ಗೆ ಅಧಿವೇಶನದಲ್ಲಿ ರಾಜ್ಯ ಸರಕಾರ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎನ್ನುವ ಕುತೂಹಲವೂ ಮೂಡಿದೆ.

ಉತ್ತರ ಕರ್ನಾಟಕ ಭಾಗದ ಹಲವಾರು ಸಮಸ್ಯೆಗಳ ಬಗ್ಗೆ ಮುಂದಿನ ಸಂಚಿಕೆಯಲ್ಲಿ. ನಿರೀಕ್ಷಿಸಿ

ಜಿಲ್ಲೆ

ರಾಜ್ಯ

error: Content is protected !!