Sunday, September 8, 2024

ರಾಜಕಾರಣ ಮತ್ತು ಸಾಂಸ್ಕೃತಿಕ ರಾಯಭಾರಿ ರಾಜಾಜಿ

ಸುದ್ದಿ ಸದ್ದು ನ್ಯೂಸ್

ರಾಜಾಜಿ ಎಂದು ಜನಪ್ರಿಯರಾದ ಸಿ. ರಾಜಗೋಪಾಲಾಚಾರಿ ಭಾರತೀಯ ರಾಜಕಾರಣ ಮತ್ತು ಸಾಂಸ್ಕೃತಿಕ ಲೋಕದಲ್ಲಿ ದೊಡ್ಡ ಹೆಸರು ಮಾಡಿರುವ ಮುತ್ಸದ್ಧಿ ನಾಯಕರು

ಚಕ್ರವರ್ತಿ ರಾಜಗೋಪಾಲಾಚಾರಿ ಅವರು 1878ರ ಡಿಸೆಂಬರ್ 10ರಂದು ಹೊಸೂರು ತಾಲ್ಲೂಕಿನ ತೋರ್ಪಳ್ಳಿಯಲ್ಲಿ ಜನಿಸಿದರು. ಅವರ ವಿದ್ಯಾಭ್ಯಾಸ ಬೆಂಗಳೂರಿನ ಸೆಂಟ್ರಲ್ ಕಾಲೇಜು ಮತ್ತು ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜುಗಳಲ್ಲಿ ನಡೆಯಿತು.

ರಾಜಗೋಪಾಲಾಚಾರಿ ಅವರು 1900ರಲ್ಲಿ ಸೇಲಂನ ನ್ಯಾಯಾಲಯದಲ್ಲಿ ವಕೀಲಿ ವೃತ್ತಿ ಪ್ರಾರಂಭಿಸಿದರು. ರಾಜಕೀಯವನ್ನು ಪ್ರವೇಶಿಸಿ ಸೇಲಂ ಮುನಿಸಿಪಾಲಿಟಿ ಸದಸ್ಯರಾದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿ ರೌಲಟ್ ಕಾಯಿದೆ ವಿರುದ್ಧದ ಚಳವಳಿ, ಅಸಹಕಾರ ಚಳವಳಿ, ವೈಕಂ ಸತ್ಯಾಗ್ರಹ, ಕಾಯ್ದೆ ಭಂಗ ಚಳವಳಿಗಳಲ್ಲಿ ಭಾಗಿಯಾದರು. 1930ರಲ್ಲಿ ದಂಡಿ ಉಪ್ಪಿನ ಸತ್ಯಾಗ್ರಹಕ್ಕೆ ಸಹಸ್ಪಂದನೆಯಾಗಿ ವೇದಾರಣ್ಯಂ ಉಪ್ಪಿನ ಸತ್ಯಾಗ್ರಹ ಕೈಗೊಂಡರು.

ರಾಜಾಜಿ ಅವರು 1937ರಲ್ಲಿ ಮದ್ರಾಸ್ ಪ್ರೆಸಿಡೆನ್ಸಿಯ ಪ್ರಧಾನಿಯಾಗಿ ಚುನಾಯಿತರಾಗಿ 1940ರವರೆಗೆ ಸೇವೆ ಸಲ್ಲಿಸಿ ವಿಶ್ವಮಹಾಯುದ್ಧ ಘೋಷಿತವಾಗಿದ್ದ ಸಮಯದಲ್ಲಿ ಹೊರಬಂದರು. ಮುಂದೆ ಯುದ್ಧ ಸಮಯದಲ್ಲಿ ಕ್ವಿಟ್ ಇಂಡಿಯಾ ಚಳವಳಿ ಮಾಡುವುದು ಸರಿಯಲ್ಲ ಎಂದು ಭಾವಿಸಿದ್ದ ಅವರು ಯುದ್ಧ ಸಮಯದಲ್ಲಿ ಬ್ರಿಟಿಷ್ ಆಡಳಿತದೊಂದಿಗೆ ಸಹಕರಿಸಬೇಕು ಎಂಬ ಅಭಿಪ್ರಾಯ ಹೊಂದಿದ್ದರಂತೆ. ಜಿನ್ನಾ ಮತ್ತು ಮುಸ್ಲಿಂ ಲೀಗ್ ಜೊತೆ ಸಂಧಾನ ನಡೆಸಬೇಕು ಎಂದು ಭಾವಿಸಿದ್ದ ಅವರು ಸಿ. ಆರ್. ಫಾರ್ಮ್ಯುಲ ಎಂದು ಪ್ರಸಿದ್ಧವಾದ ಸಂಧಾನ ಸೂತ್ರವನ್ನು ಮಂಡಿಸಿದ್ದರು.

ರಾಜಾಜಿ ಅವರು 1946ರಲ್ಲಿ ಮೂಡಿದ ಹಂಗಾಮಿ ಸರ್ಕಾರದಲ್ಲಿ ಕೈಗಾರಿಕೆ, ಸರಬರಾಜು, ಶಿಕ್ಷಣ ಮತ್ತು ಹಣಕಾಸು ಸಚಿವರಾಗಿ ಕಾರ್ಯನಿರ್ವಹಿಸಿದರು. 1947 – 48ರಲ್ಲಿ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ಮತ್ತು 1948ರಿಂದ 1950ರವರೆಗೆ ಭಾರತದ ಗವರ್ನರ್ ಜನರಲ್ ಆಗಿ ಕಾರ್ಯನಿರ್ವಹಿಸಿದರು. 1952ರಿಂದ 1954 ಅವಧಿಯಲ್ಲಿ ಮದ್ರಾಸ್ ರಾಜ್ಯದ ಮುಖ್ಯಮಂತ್ರಿಗಳಾದರು. 1959ರಲ್ಲಿ ಕಾಂಗ್ರೆಸ್ನಿಂದ ಹೊರಬಂದು ಸ್ವತಂತ್ರ ಪಕ್ಷವನ್ನು ಸ್ಥಾಪಿಸಿದರು. 1967ರಲ್ಲಿ ಕಾಂಗ್ರೆಸ್ ವಿರುದ್ಧ ಅಣ್ಣಾದೊರೈ ನೇತೃತ್ವದ ಸರ್ಕಾರ ಸ್ಥಾಪಿಸುವಲ್ಲಿ ರಾಜಾಜಿ ಪ್ರಮುಖ ಪಾತ್ರ ವಹಿಸಿದ್ದರು.

ರಾಜಾಜಿ ಸ್ಟೇಟ್ಸ್ ಮ್ಯಾನ್ ಮತ್ತು ಹಿಂದೂ – ದಿನಪತ್ರಿಕೆಗಳಿಗೆ ಲೇಖಕರಾಗಿದ್ದರು. ರಾಜಾಜಿ ಸ್ವಂತ ಲೇಖನಗಳೊಂದಿಗೆ, ಅನೇಕ ಮುಖ್ಯ ಭಾರತೀಯ ಹಾಗೂ ಹಿಂದೂ ಧಾರ್ಮಿಕ ಕೃತಿಗಳ ಆಂಗ್ಲ ಭಾಷೆಯ ಭಾಷಾಂತರವನ್ನೂ ಮಾಡಿದ್ದಾರೆ. ಅವರ ರಾಮಾಯಣ, ಮಹಾಭಾರತ, ಭಗವದ್ಗೀತೆ, ಉಪನಿಷತ್ತುಗಳು ಹಾಗೂ ಶಂಕರಾಚಾರ್ಯರ ಭಜಗೋವಿಂದಂ ಇವುಗಳ ಭಾಷಾಂತರಗಳು ಇಂದಿಗೂ ಬಳಕೆಯಲ್ಲಿವೆ. ಅವರು ರಾಮಾಯಣವನ್ನು ತಮಿಳಿಗೂ ತರ್ಜುಮೆ ಮಾಡಿದರು.

ಕರ್ನಾಟಕ ಸಂಗೀತದ ದೊಡ್ಡ ಪ್ರತಿಭೆ, ಎಂ.ಎಸ್ ಸುಬ್ಬುಲಕ್ಷ್ಮಿ ರಾಜಾಜಿಯವರ ಕೆಲವು ಕವಿತೆಗಳನ್ನು ಸಂಗೀತಕ್ಕೆ ಅಳವಡಿಸಿದ್ದರು. ಅನೇಕ ಮುಖ್ಯ ಕಾರ್ಯಕ್ರಮಗಳಲ್ಲಿ ಅವರು ಹಾಡುತ್ತಿದ್ದ ರಾಜಾಜಿ ಅವರ ರಚನೆಯಾದ ಕುರೈ ಒನ್ರುಮ್ ಇಲ್ಲೈ (ಭಗವಂತಾ, ನನಗಿನ್ನೇನೂ ಈಡೇರದ ಅಪೇಕ್ಷೆ ಉಳಿದಿಲ್ಲ….) ಗೀತೆ ಬಹಳ ಜನಪ್ರಿಯವಾಗಿದೆ. ರಾಜಾಜಿ ಬರೆದ “Here under this Uniting Roof” ಸ್ತುತಿಯನ್ನು 1966ರಲ್ಲಿ ಎಂ.ಎಸ್ ಸುಬ್ಬುಲಕ್ಷ್ಮಿಸಂಯುಕ್ತ ವಿಶ್ವಸಂಸ್ಥೆಯಲ್ಲಿ ಹಾಡಿದ್ದರು. ಎಂ. ಎಸ್. ಅವರು ಹಾಡಿರುವ ಆದಿ ಶಂಕರರ ಭಜಗೋವಿಂದಂ ಗೀತೆಗೆ ರಾಜಾಜಿ ಅವರು ನೀಡಿರುವ ಪ್ರಸ್ತಾವನಾ ನುಡಿ ಎಂ. ಎಸ್. ಅವರ ಸಂಗೀತದಷ್ಟೇ ಮಧುರ ಮತ್ತು ವಿದ್ವತ್ಪೂರ್ಣ.

ಭಾರತರತ್ನ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಮುಂತಾದ ಗೌರವಗಳು ರಾಜಾಜಿ ಅವರಿಗೆ ಸಂದಿದ್ದವು.ರಾಜಾಜಿ ಅವರು 1972ರ ಡಿಸೆಂಬರ್ 25ರಂದು ನಿಧನರಾದರು.

ಜಿಲ್ಲೆ

ರಾಜ್ಯ

error: Content is protected !!