Friday, July 26, 2024

ಉತ್ತರಾಖಂಡದಲ್ಲಿ ಜನಿಸಿ ದೇಶದ ಉದ್ದಗಲಕ್ಕೂ ದೇಶದ ಪರ ಕಾರ್ಯ ನಿರ್ವಹಿಸಿದ ಸೇನಾ ಮುಖ್ಯಸ್ಥ: ‘ಬಿಪಿನ್ ರಾವತ್’

ನವದೆಹಲಿ (ಡಿ.09):  ತಮಿಳುನಾಡಿನ ಕುನ್ನೂರು ಅರಣ್ಯ ಪ್ರದೇಶದಲ್ಲಿ ಸೇನಾ ಹೆಲಿಕಾಪ್ಟರ್ ಬುಧವಾರ ಪತನಗೊಡಿದ್ದು, ಸಶಸ್ತ್ರ ಪಡೆಗಳ ಮುಖ್ಯಸ್ಥ ಬಿಪಿನ್‌ ರಾವತ್‌ ಮತ್ತು ಅವರ ಪತ್ನಿ ಮಧುಲಿಕಾ ರಾವತ್ ಸೇರಿ ಒಟ್ಟು 13 ಮಂದಿ ಸಾವನ್ನಪ್ಪಿದ್ದಾರೆ. ವೆಲ್ಲಿಂಗ್ಟನ್ ರಕ್ಷಣಾ ಸೇವಾ ಸಿಬ್ಬಂದಿ ಕಾಲೇಜಿನಲ್ಲಿ ಉಪನ್ಯಾಸ ನೀಡಲು ಬಿಪಿನ್ ರಾವತ್ ತೆರಳುತ್ತಿದ್ದರು.

ಹೆಲಿಕಾಪ್ಟರ್‌ ದುರಂತದಲ್ಲಿ ಅಂತ್ಯ ಕಂಡ ಸಶಸ್ತ್ರ ಪಡೆಗಳ ಮುಖ್ಯಸ್ಥ ಬಿಪಿನ್‌ ರಾವತ್‌ ಹುಟ್ಟಿದ್ದು ಉತ್ತರಾ ಖಂಡದ ಪೌರಿಯಲ್ಲಿ. 1958ರ ಮಾರ್ಚ16ರಂದು ಹಿಂದೂ ಗಡ್ವಾಲಿ ರಜಪೂತ ಕುಟುಂಬದಲ್ಲಿ ಜನಿಸಿದ್ದರು. ಸೈನ್ಯ ಸೇರಿ ದೇಶ ಸೇವೆ ಮಾಡುವ ಗುಣ ರಾವತ್‌ ರಕ್ತದಲ್ಲೇ ಕರಗತವಾಗಿತ್ತು. ತಂದೆ ಲಕ್ಷ್ಮಣ ಸಿಂಗ್‌ ರಾವತ್‌ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್‌ ಜನರಲ್‌ ಆಗಿದ್ದರು. ಅಜ್ಜ ಸಹ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು.

ವೆಲ್ಲಿಂಗ್ಟನ್‌ನಲ್ಲೇ ಪದವಿ ಪಡೆದಿದ್ದರು:ರಾವತ್‌ ಡೆಹ್ರಾಡೂನ್‌ ಕೇಂಬ್ರಿಯನ್‌ ಹಾಲ್‌ ಸ್ಕೂಲ್‌ ಮತ್ತು ಶಿಮ್ಲಾದ ಎಡ್ವರ್ಡ್‌ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ್ದರು. ನಂತರ ಖಡಕ್‌ ವಾಸ್ಲಾದಲ್ಲಿ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮತ್ತು ಡೆಹ್ರಾಡೂನ್‌ನ ಭಾರತೀಯ ಮಿಲಿಟರಿ ಅಕಾಡೆಮಿ ಸೇರಿ ರಕ್ಷಣಾ ಕ್ಷೇತ್ರದ ತರಬೇತಿ ಪಡೆದಿದ್ದರು. ವೆಲ್ಲಿಂಗ್ಟನ್‌ನಲ್ಲಿ ಡಿಫೆನ್ಸ್‌ ಸರ್ವೀಸ್ ಸ್ಟಾಫ್‌ ಕಾಲೇಜ್‌ನಲ್ಲಿ ಪದವಿ ಪಡೆದು, ಅಮೆರಿಕದ ಆರ್ಮಿ ಕಮಾಂಡ್‌ ಆ್ಯಂಡ್‌ ಜನರಲ್‌ ಸ್ಟಾಫ್‌ ಕಾಲೇಜಿನಲ್ಲಿ ಅತ್ಯುನ್ನತ ಕಮಾಂಡ್‌ ಕೋರ್ಸ್‌ ಪೂರೈಸಿದ್ದರು. ಮದ್ರಾಸ್‌ ವಿಶ್ವವಿದ್ಯಾಲಯದಲ್ಲಿ ರಕ್ಷಣೆ, ಕಂಪ್ಯೂಟರ್‌ ಮತ್ತು ಮ್ಯಾನೇಜ್‌ಮೆಂಟ್‌ ವಿಷಯದಲ್ಲಿ ಎಂ.ಫಿಲ್‌ ಪದವಿ ಪಡೆದಿದ್ದರು.

ತಂದೆಯ ಬೆಟಾಲಿಯನ್‌ ಮೂಲಕವೇ ಸೇನೆಗೆ : ಭಾರತೀಯ ಸೇನೆಯಲ್ಲಿ ಸುದೀರ್ಘ 4 ದಶಕಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ಬಿಪಿನ್‌ ರಾವತ್‌ ತಮ್ಮ 20ನೇ ವಯಸ್ಸಿನಲ್ಲಿಯೇ ಸೇನೆ ಸೇರಿದ್ದರು. 1978ರ ಡಿಸೆಂಬರ್‌ 16ರಂದು 11 ಗೋರ್ಖಾ ರಿಫೈಲ್ಸ್‌ ಮೂಲಕ ಸೇನೆಗೆ ಸೇರ್ಪಡೆಯಾದರು. ವಿಶೇಷ ಎಂದರೆ ತಂದೆ ಲಕ್ಷ್ಮಣ್‌ ರಾವತ್‌ ಅವರು ಸೇನೆಗೆ ಸೇರ್ಪಡೆಯಾಗಿದ್ದ ಬೆಟಾಲಿಯನ್‌ನಿಂದಲೇ ಸೇನೆಯಲ್ಲಿ ವೃತ್ತಿ ಜೀವನ ಆರಂಭಿಸಿದ್ದರು.

40 ವರ್ಷ ದೇಶಕ್ಕಾಗಿ ದುಡಿದ ವೀರ: ಬಿಪಿನ್ ರಾವತ್

ಸಿಯಾಚಿನ್‌ನಲ್ಲೂ ಸೇವೆ ಸಲ್ಲಿಸಿದ್ದರು:  ರಾಷ್ಟ್ರ ಕಂಡ ಅದ್ಭುತ ಯೋಧ, ದೇಶದ ಮೊದಲ ಸೇನಾಪಡೆಗಳ ಮುಖ್ಯಸ್ಥ ರಾವತ್‌ ಅವರಿಗೆ ಸಿಯಾಚಿನ್‌ನಂಥ ಅತಿ ಎತ್ತರದ ಪ್ರತಿಕೂಲ ಹವಾಮಾನದ ಭೂ ಪ್ರದೇಶದಲ್ಲಿ ದೇಶವನ್ನು ರಕ್ಷಣೆ ಮಾಡಲು ಕೆಚ್ಚೆದೆಯಿಂದ ಸೇವೆ ಮಾಡಿದ ಅನುಭವವಿತ್ತು. ಅಲ್ಲದೆ ಎಂಥ ಸಂದರ್ಭದಲ್ಲೂ ದೇಶದ ರಕ್ಷಣೆಗೆ ಒತ್ತು ನೀಡುತ್ತಿದ್ದ ರಾವತ್‌ ಸತತ 10 ವರ್ಷಗಳ ಕಾಲ ದೇಶದ ವಿವಿಧ ಭಾಗಗಳಲ್ಲಿ ಭಯೋತ್ಪಾದಕ ವಿರೋಧಿ ಕಾರಾರ‍ಯಚರಣೆಯಲ್ಲಿ ಭಾಗಿಯಾಗಿದ್ದರು.

ಮೇಜರ್‌ ಆಗಿ ಉರಿ, ಜಮ್ಮು-ಕಾಶ್ಮೀರದಲ್ಲಿ ಸೇನೆ ಮುನ್ನಡೆಸಿದ್ದರು. ಕರ್ನಲ್‌ ಆಗಿ ಗೋರ್ಖಾ ರೈಫಲ್ಸ್‌ನ 5ನೇ ಬೆಟಾಲಿಯನ್‌ನಲ್ಲಿ ಸೇನೆಗೆ ಕಮಾಂಡ್‌ ನೀಡಿದ್ದರು. ನಂತರ ಬ್ರಿಗೇಡಿಯರ್‌ ಸ್ಥಾನಕ್ಕೆ ಬಡ್ತಿ ಪಡೆದು ಸೊಪೋರ್‌ನ ರಾಷ್ಟ್ರೀಯ ರೈಫಲ್ಸ್‌ನ 5 ಸೆಕ್ಟರ್‌ಗಳನ್ನು ಮುನ್ನಡೆಸಿದ್ದರು. ಮೇಜರ್‌ ಜನರಲ್‌ ಆಗಿ, ನಂತರ ಲೆಫ್ಟಿನೆಂಟ್‌ ಜನರಲ್‌, ಜನರಲ್‌ ಸ್ಟಾಫ್‌ ಆಫೀಸರ್‌ ಗ್ರೇಡ್‌-2, ಲಾಜಿಸ್ಟಿಕ್‌ ಸ್ಟಾಫ್‌ ಆಫೀಸರ್‌, ಕರ್ನಲ್‌, ಮಿಲಿಟರಿ ಕಾರ‍್ಯದರ್ಶಿ ಮತ್ತು ಉಪ ಮಿಲಿಟರಿ ಕಾರ‍್ಯದರ್ಶಿ, ಜೂನಿಯರ್‌ ಕಮಾಂಡ್‌ ವಿಂಗ್‌ನಲ್ಲಿ ಹಿರಿಯ ಸಲಹೆಗಾರರಾಗಿ ಮತ್ತು ಜನರಲ್‌ ಆಫೀಸರ್‌ ಕಮಾಂಡಿಂಗ್‌ ಇನ್‌ ಚೀಫ್‌, ಆರ್ಮಿ ಸ್ಟಾಫ್‌ ಉಪಾಧ್ಯಕ್ಷ ಸೇರಿದಂತೆ ಸೇನೆಯಲ್ಲಿ ವಿವಿಧ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿದ್ದರು.

ಭೂಸೇನೆಯ 27ನೇ ಮುಖ್ಯಸ್ಥ: ಭಾರತೀಯ ರಕ್ಷಣಾ ಕ್ಷೇತ್ರದ ಸೇವೆಯಲ್ಲಿಯೇ ಬಹುಪಾಲು ಜೀವನ ಕಳೆದ ಬಿಪಿನ್‌ ರಾವತ್‌ ಅವರನ್ನು ಡಿ.17ರ 2016ರಲ್ಲಿ ಭಾರತ ಸರ್ಕಾರ ಭೂ ಸೇನೆಯ 27ನೇ ಮುಖ್ಯಸ್ಥರನ್ನಾಗಿ ನೇಮಕ ಮಾಡಿತ್ತು. ಈ ಮೂಲಕ ಗೋರ್ಖಾ ಬ್ರಿಗೇಡ್‌ನಿಂದ ಅತ್ಯುನ್ನತ ಸ್ಥಾನಕ್ಕೇರಿದ ಮೂರನೇ ವ್ಯಕ್ತಿ ಎನಿಸಿಕೊಂಡಿದ್ದರು. ಅದಕ್ಕೂ ಮೊದಲು ಫೀಲ್ಡ್‌ ಮಾರ್ಷಲ್‌ ಸ್ಯಾಮ್‌ ಮಾಣೆಕ್‌ ಶಾ ಮತ್ತು ಜದಲ್ಬೀರ್‌ ಸಿಂಗ್‌ ಅದೇ ಬಟಾಲಿಯನ್‌ನಿಂದ ಭೂ ಸೇನೆಯ ಮುಖ್ಯಸ್ಥರಾಗಿದ್ದರು.

ಬಳಿಕ ಡಿ.31ರ 2019ರಂದು ಭೂ, ವಾಯು ಮತ್ತು ನೌಕಾ ಈ ಮೂರೂ ಪಡೆಗಳ ಮುಖ್ಯಸ್ಥರಾಗಿ ನೇಮಕವಾದರು. ಹಾಲಿ ಸೇನಾಪಡೆಯ ಮುಖ್ಯಸ್ಥರೊಬ್ಬರು ಸೇನಾಪಡೆಗಳ ಜಂಟಿ ಮುಖ್ಯಸ್ಥರಾಗಿ ನೇಮಕವಾಗಿದ್ದು ಇದೇ ಮೊದಲು. ಸಿಡಿಎಸ್‌ ಆಗಿ ನೇಮಕವಾದ ಬಳಿಕ ರಕ್ಷಣೆ ಮತ್ತು ಅದರ ಕಾರಾರ‍ಯಚರಣೆಗಳ ಕುರಿತಾಗಿ ಸರ್ಕಾರಕ್ಕೆ ಸಲಹೆ ಮತ್ತು ವಿವರಣೆ ನೀಡುತ್ತಿದ್ದರು. ಅಲ್ಲದೆ ಸಿಬ್ಬಂದಿ ಸಮಿತಿಯ ಶಾಶ್ವತ ಮುಖ್ಯಸ್ಥ (ಸಿಒಎಸ್‌ಸಿ)ರಾಗಿಯೂ ಕಾರ‍್ಯನಿರ್ವಹಿಸುತ್ತಿದ್ದರು.

ಅಮೆರಿಕ, ನೇಪಾಳ ಸೇನೆಯಿಂದ ಗೌರವ 2019ರಲ್ಲಿ ಅಮೆರಿಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಜ.ರಾವತ್‌ ಅವರನ್ನು ಅಮೆರಿಕದ ಆರ್ಮಿ ಕಮಾಂಡ್‌ ಮತ್ತು ಜನರಲ್ ಸ್ಟಾಫ್‌ ಕಾಲೇಜ್‌ ಇಂಟರ್‌ನ್ಯಾಷನಲ್ ಹಾಲ್ ಆಫ್‌ ಫೇಮ್‌ಗೆ ಸೇರಿಸಲಾಯಿತು. ಅವರು ನೇಪಾಳ ಸೇನೆಯ ಗೌರವ ಜನರಲ್ ಕೂಡ ಆಗಿದ್ದರು. ಭಾರತೀಯ ಮತ್ತು ನೇಪಾಳಿ ಸೇನೆಗಳ ನಡುವೆ ತಮ್ಮ ನಿಕಟ ಮತ್ತು ವಿಶೇಷ ಮಿಲಿಟರಿ ಸಂಬಂಧವನ್ನು ಸೂಚಿಸಲು ಪರಸ್ಪರರ ಮುಖ್ಯಸ್ಥರಿಗೆ ಗೌರವಾನ್ವಿತ ಶ್ರೇಣಿಯನ್ನು ನೀಡುವ ಸಂಪ್ರದಾಯ ಚಾಲ್ತಿಯಲ್ಲಿದೆ.

ರಾವತ್‌ಗೆ ಒಲಿದ ಗೌರವಗಳು: ಪರಮ ವಿಶಿಷ್ಟಸೇವಾ ಪದಕ,ಉತ್ತಮ ಯೋಧ ಸೇವಾ ಪದಕ,ಅತಿ ವಿಶಿಷ್ಟ ಸೇವಾ ಪದಕ ಸೇರಿ,ಯೋಧ ಸೇವಾ ಪದಕ,ಸೇನಾ ಪದಕ,ವಿಶಿಷ್ಟಸೇವಾ ಪದಕ, ಚೌಧರಿ ಚರಣಸಿಂಗ್‌ ವಿವಿ ಗೌರವ ಡಾಕ್ಟರೆಟ್‌.

 

ಜಿಲ್ಲೆ

ರಾಜ್ಯ

error: Content is protected !!