Monday, April 15, 2024

ಜೆಡಿಎಸ್ ಪಕ್ಷವನ್ನು ಮುಗಿಸಲು ಯಾವ ದೊಣ್ಣೆ ನಾಯಕನಿಂದಲೂ  ಸಾಧ್ಯವಿಲ್ಲ: ಹೆಚ್.ಡಿ. ದೇವೇಗೌಡ

ವರದಿ: ಗಿರೀಶ್ ಕೆ ಭಟ್, ತುರುವೇಕೆರೆ

ತುರುವೇಕೆರೆ: ಜನಪರ, ರೈತಪರ ಹೋರಾಟದ ಮೂಲಕ ರಾಜಕೀಯವಾಗಿ ಬೆಳೆದಿರುವ ಈ ದೇವೇಗೌಡರನ್ನು, ಕಾರ್ಯಕರ್ತರ ಶ್ರಮದಿಂದ ಕಟ್ಟಿರುವ ಜೆಡಿಎಸ್ ಪಕ್ಷವನ್ನು ಮುಗಿಸಲು ಯಾವ ದೊಣ್ಣೆ ನಾಯಕನಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ತಿಳಿಸಿದರು.

ಪಟ್ಟಣದ ಚೌದ್ರಿ ಕನ್ವೆಂಷನ್ ಹಾಲ್ ನಲ್ಲಿ ತಾಲ್ಲೂಕು ಜೆಡಿಎಸ್ ವತಿಯಿಂದ ಆಯೋಜಿಸಿದ್ದ  ವಿಧಾನಪರಿಷತ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಎಲ್ಲಿದೆ ಎಂದು‌ ಪ್ರಶ್ನಿಸುವವರಿಗೆ, ನಮ್ಮ ಪಕ್ಷದಿಂದ ಬೆಳೆದು ಎಲ್ಲಾ ಅಧಿಕಾರ ಅನುಭವಿಸಿ ಕಾಂಗ್ರೆಸ್ ಸೇರಿ ಈಗ ನಮ್ಮ ಪಕ್ಷವನ್ನೇ ಮುಗಿಸಲು ಹೊರಟಿರುವ ನಾಯಕರಿಗೆ  ಈ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಕಾರ್ಯಕರ್ತರು ತಕ್ಕ ಉತ್ತರ ನೀಡಬೇಕಿದೆ. ಎಂದರು.

ಅಧಿಕಾರಕ್ಕಾಗಿ ಯಾರ ಮನೆ ಬಾಗಿಲಿಗೆ ನನ್ನ ರಾಜಕೀಯ ಜೀವನದಲ್ಲಿ ಹೋಗಿಲ್ಲ. ಕಾಂಗ್ರೆಸ್ ಪಕ್ಷದವರೇ ನನ್ನನ್ನು ಪ್ರಧಾನಿಯನ್ನಾಗಿ, ಮಗ ಕುಮಾರಸ್ವಾಮಿಯನ್ನು ಮುಖ್ಯಮಂತ್ರಿಯಾಗಿ ಮಾಡಿ ನಂತರ ಅಧಿಕಾರದಿಂದ ಕೆಳಗಿಳಿಸಿ ಅವಮಾನ ಮಾಡಿದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಇಷ್ಟವಿರಲಿಲ್ಲ. ಆದರೆ ಕಾಂಗ್ರೆಸ್ ನವರು ಮೈತ್ರಿಯ ಹೆಸರಲ್ಲಿ ಬಲವಂತವಾಗಿ ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಕರೆತಂದು ನಿಲ್ಲಿಸಿ ನನ್ನ ವಿರುದ್ಧ ಚಕ್ರವ್ಯೂಹ ರಚಿಸಿ ಸೋಲಿಸಿದರು ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು. 

ದೇವೇಗೌಡರ ಸೋಲಿಗೆ ಕಾರಣ ನಾನೇ ಎಂದು ಹೇಳಿಕೊಳ್ಳುತ್ತಿರುವ ಕೆ.ಎನ್.ರಾಜಣ್ಣರಿಗೆ 2006ರಲ್ಲಿ ರಾಜಕೀಯ ಪುನರ್ಜನ್ಮ ನೀಡಿದ್ದು ಇದೇ ದೇವೇಗೌಡ ಎಂಬುದನ್ನು ಮರೆಯಬಾರದು ಎಂದ ಅವರು,  ಕಳೆದ ಲೋಕಸಭಾ ಚುನಾವಣೆಯಲ್ಲಿನ ನನ್ನ ಸೋಲಿಗೆ ಸೇಡು ತೀರಿಸಿಕೊಳ್ಳಲು  ನಿಮ್ಮ ಮುಂದೆ ಬಂದಿದ್ದೇನೆ. ನಿಮ್ಮ ಕೈಮುಗಿದು ಮನವಿ ಮಾಡಿಕೊಳ್ಳುತ್ತೇನೆ ಜೆಡಿಎಸ್ ಅಭ್ಯರ್ಥಿ ಮತ ನೀಡಿ ನಮ್ಮ ಶಕ್ತಿ ಏನೆಂಬುದನ್ನು ತೋರಿಸಿ ಎಂದರು.

ನನಗೆ ವಯಸ್ಸಾಗಿರಬಹುದು, ಆದರೆ ಪಕ್ಷ ಕಟ್ಟುವ ಶಕ್ತಿ ಕುಂದಿಲ್ಲ. ನಿಮ್ಮೆಲ್ಲರ ಆಶೀರ್ವಾದದಿಂದ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುತ್ತೇನೆ ಎಂದ ಅವರು, ಅಲ್ಪಸಂಖ್ಯಾತರು, ದಲಿತರು, ಹಿಂದುಳಿದ ವರ್ಗಗಳವರು ಎಲ್ಲಾ ಜಾತಿ ಜನಾಂಗದವರು ಗ್ರಾಪಂ, ತಾಪಂ, ಜಿಪಂಗಳಲ್ಲಿ ರಾಜಕೀಯ ಅಧಿಕಾರ ಪಡೆಯಲು ಸಾಧ್ಯವಾಗಲು ಕಾರಣ ನಾನು ಜಾರಿಗೆ ತಂದ ರಾಜಕೀಯ ಮೀಸಲಾತಿ ಕಾರಣ. ಆದರೆ ಅಹಿಂದ ವರ್ಗಕ್ಕೆ ಏನೂ ಮಾಡದವರು ಅಹಿಂದ ನಾಯಕ ಎಂದು ಹೇಳಿಕೊಳ್ಳುತ್ತಾರೆಂದು ಲೇವಡಿ‌ಮಾಡಿದರು.

ಪ್ರಚಾರ ಸಭೆಯಲ್ಲಿ  ವಿಧಾನ ಪರಿಷತ್ ಅಭ್ಯರ್ಥಿ ಅನಿಲ್ ಕುಮಾರ್,  ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್‌, ಮಾಜಿ ಶಾಸಕರಾದ ಎಂ.ಟಿ.ಕೃಷ್ಣಪ್ಪ,  ಹೆಚ್.ಬಿ. ನಂಜೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ರಾಮಾಂಜನಪ್ಪ, ತಾಲೂಕು ಅಧ್ಯಕ್ಷ ಸ್ವಾಮಿ ಸೇರಿದಂತೆ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು. 

ಜಿಲ್ಲೆ

ರಾಜ್ಯ

error: Content is protected !!