Saturday, July 27, 2024

ಕನ್ನಡದ ಅಮೂಲ್ಯ ಕಲಾವಿದ ಶಿವರಾಮ್ ಇಂದು ನಿಧನ

ಸುದ್ದಿ ಸದ್ದು ನ್ಯೂಸ್

ಕನ್ನಡದ ಅಮೂಲ್ಯ ಕಲಾವಿದರಾದ ಶಿವರಾಮ್ ಅವರು ಇಂದು ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು.

ಎಸ್. ಶಿವರಾಮ್ 1938ರ ಜನವರಿ 28ರಂದು ರಾಜ್ಯದ ಗಡಿಯಲ್ಲಿರುವ ಚೂಡಸಂದ್ರ ಗ್ರಾಮದಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ತಮ್ಮ ಹಿರಿಯ ಸಹೋದರ ಶ್ರೀಕಂಠೇಶ್ವರ ಅಯ್ಯರ್ ಅವರೊಂದಿಗೆ ಬೆಂಗಳೂರಿಗೆ ಬಂದು ವಾಣಿ ಟೈಪ್‍ರೈಟಿಂಗ್ ಮತ್ತು ಶೀಘ್ರಲಿಪಿ ಕಲಿಕಾ ಸಂಸ್ಥೆಯನ್ನು ನಡೆಸುತ್ತಿದ್ದರು.

ಗುಬ್ಬಿ ವೀರಣ್ಣನವರ ರಂಗಭೂಮಿಯ ಪ್ರದರ್ಶನಗಳಿಂದ ಪ್ರಭಾವಿತರಾದ ಶಿವರಾಮ್ ಚಲನಚಿತ್ರ ನಿರ್ಮಾಣ ಮತ್ತು ನಟನೆಯ ಕಡೆಗೆ ತೀವ್ರ ಒಲವು ಬೆಳೆಸಿಕೊಂಡರು. ಹಲವಾರು ರಂಗ ನಾಟಕಗಳಲ್ಲಿ ನಟಿಸಲು ಪ್ರಾರಂಭಿಸಿದ ಅವರು 1958ರಲ್ಲಿ ಚಿತ್ರರಂಗಕ್ಕೆ ಬಂದು ಕು. ರ. ಸೀತಾರಾಮ ಶಾಸ್ತ್ರಿ ಅವರಿಗೆ ಸಹಾಯಕರಾಗಿ ದುಡಿದರು. ಹಿರಿಯ ಛಾಯಾಗ್ರಾಹಕ ಬೋಮನ್ ಡಿ. ಇರಾನಿ ಅವರ ಕ್ಯಾಮರಾ ಸಹಾಯಕರಾಗಿಯೂ ಕೆಲಸ ಮಾಡಿದರು. ಕೆ.ಎಸ್.ಎಲ್.ಸ್ವಾಮಿ, ಗೀತಪ್ರಿಯ, ಸಿಂಗೀತಂ ಶ್ರೀನಿವಾಸ ರಾವ್ ಮತ್ತು ಪುಟ್ಟಣ್ಣ ಕಣಗಾಲ್ ಅವರಂತಹ ಪ್ರಮುಖ ನಿರ್ದೇಶಕರಿಗೆ ಸಹಾಯ ಮಾಡುತ್ತಿದ್ದರು.

ಶಿವರಾಮ್ 1958ರಿಂದ 1965ರವರೆಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ನಂತರ, ಕಲ್ಯಾಣ್ ಕುಮಾರ್ ನಟಿಸಿದ ಕು.ರ. ಸೀತಾರಾಮ ಶಾಸ್ತ್ರಿಯವರ ‘ಬೆರೆತ ಜೀವ’ ಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದರು. ಶರಪಂಜರ, ನಾಗರಹಾವು, ಶುಭಮಂಗಳ ಮುಂತಾದ ಪುಟ್ಟಣ್ಣ ಕಣಗಾಲರ ಚಿತ್ರಗಳಲ್ಲಿನ ಅವರ ಅಭಿನಯ ಅವಿಸ್ಮರಣೀಯವೆನಿಸಿತು. ‘ಅದೇಕೆ ಪದೇ ಪದೇ ನೀವು ಹಾಗೆ ನನ್ನ ನೋಡುವುದು’, ‘ಅದೇ ನಮ್ ರಾಮಾಚಾರಿ ಸ್ಪೆಷಾಲಿಟಿ ಕಣಯ್ಯ’, ‘ಸೂರ್ಯಂಗು ಚಂದ್ರಂಗೂ ಬಂದಾರೆ ಮುನಿಸು’, ಮುಂತಾದ ಸನ್ನಿವೇಶಗಳಿದ್ದ ಈ ಚಿತ್ರಗಳಲ್ಲಿ ‘ವಾಹ್ ಅವರೇ ಅಲ್ಲಿ ಅವಿಸ್ಮರಣೀಯ ಕೇಂದ್ರಬಿಂದು’!. ‘ಬಂಧನ’ ಚಿತ್ರದ ತಳ್ಳು ಗೋವಿಂದ’, ‘ಶೂನ್ಯ ಸಾರು ಶೂನ್ಯ’, ‘ಪಾಷಾಣದ್ದು ಪ್ರವೀಣ, ಪಂಡಿತಂದು ರತ್ನ ವಾಹ್’ ಅವರು ಅದ್ಭುತ! ಅದೆಲ್ಲ ಹಾಸ್ಯ ಪಾತ್ರಧಾರಿಗಳ ಪೆಕರು ಅಭಿನಯವಾಗಿರದೆ ನಿಜ ಜೀವನದಲ್ಲಿ ನಮ್ಮ ಸುತ್ತ ಕಾಣುವ ಜೀವಂತ ಪಾತ್ರಗಳಾಗಿ ನಮ್ಮ ತನ್ಮಯರಾಗಿಸಿದಂತಹವು.

ಶಿವರಾಮ್ ನಟಿಸಿದ ಚಿತ್ರಗಳು ಅನೇಕ‍. ಚಲಿಸುವ ಮೋಡಗಳು, ಶ್ರಾವಣ ಬಂತು, ಹಾಲು ಜೇನು, ಹೊಂಬಿಸಿಲು, ಹೊಸ ಬೆಳಕು, ಗುರು ಶಿಷ್ಯರು, ಸಿಂಹದ ಮರಿ ಸೈನ್ಯ, ಮಕ್ಕಳ ಸೈನ್ಯ ಮುಂತಾದ ನೂರಾರು ಚಿತ್ರಗಳಲ್ಲಿ ಅವರು ನೆನಪಾಗುತ್ತಾರೆ. ಅವರು ‘ಡ್ರೈವರ್ ಹನುಮಂತು’ (1980) ನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು. ಆಪ್ತಮಿತ್ರ, ಹುಚ್ಚ, ಬಾರಾ, ತಾಯಿ ಸಾಹೇಬ ಮುಂತಾದ ವಿಭಿನ್ನ ನೆಲೆಗಳ ಪಾತ್ರಗಳಿಗೆ ಬಂದರು. ಗಿರೀಶ್ ಕಾಸರವಳ್ಳಿ ನಿರ್ದೇಶನದ ‘ಗೃಹಭಂಗ’ ಮತ್ತು ರವಿಕಿರಣ್ ನಿರ್ದೇಶನದ ‘ಬದುಕು’ ಮುಂತಾದ ಕಿರುತೆರೆ ಕಥಾನಕಗಳಿಗೂ ಬಂದಿದ್ದರು.

ಶಿವರಾಮ್ ತಮ್ಮ ಸಹೋದರ ಎಸ್. ರಾಮನಾಥನ್ ಅವರೊಂದಿಗೆ”ರಾಶಿ ಬ್ರದರ್ಸ್” ನಿರ್ಮಾಣ ಸಂಸ್ಥೆ ಸ್ಥಾಪಿಸಿ ಗೆಜ್ಜೆ ಪೂಜೆ (1970), ಉಪಾಸನೆ (1974), ನಾನೊಬ್ಬ ಕಳ್ಳ (1979), ಡ್ರೈವರ್ ಹನುಮಂತು (1980), ಬಹು ಚೆನ್ನಾಗಿದೆ (2001) ಮುಂತಾದ ಚಿತ್ರಗಳ ನಿರ್ಮಾಣ – ಸಹನಿರ್ಮಾಣಗಳನ್ನು ಮಾಡಿದ್ದರು. 1972ರಲ್ಲಿ ಈ ರಾಶಿ ಸಹೋದರರು ‘ಹೃದಯ ಸಂಗಮ’ ಚಿತ್ರವನ್ನು ನಿರ್ದೇಶಿಸಿದ್ದರು. ರಜನಿಕಾಂತ್ ನಟಿಸಿದ ತಮಿಳು ಚಲನಚಿತ್ರ ಧರ್ಮ ದುರೈ ಅನ್ನು ಸಹಾ ನಿರ್ಮಿಸಿದ್ದರು. ಈ ಸಹೋದರರು ಒಟ್ಟಾಗಿ 1985ರ ಚಲನಚಿತ್ರ ಗಿರಾಫ್ತಾರ್ ಸೇರಿದಂತೆ ಕೆಲವು ಬಾಲಿವುಡ್ ಚಲನಚಿತ್ರಗಳನ್ನೂ ನಿರ್ಮಿಸಿದರು. ಅಮಿತಾಬ್ ಬಚ್ಚನ್ ಸೇರದಂತೆ ಅನೇಕರನ್ನು ನಿರ್ದೇಶಿಸಿದ್ದರು.

ಶಿವರಾಮ್ ಅವರಿಗೆ ಪದ್ಮಭೂಷಣ ಡಾ. ಬಿ. ಸರೋಜಾದೇವಿ ರಾಷ್ಟ್ರೀಯ ಪ್ರಶಸ್ತಿ, ಕರ್ನಾಟಕ ಸರ್ಕಾರದಿಂದ ಡಾ. ರಾಜ್‌ಕುಮಾರ್ ಜೀವಮಾನ ಸಾಧನೆ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿದ್ದವು.

ಇನ್ನೆಲ್ಲಿ ಹಿರಿಯ ಕಲಾವಿದರಿಗೆ ಶಿವರಾಮಣ್ಣ ಆಗಿ, ಸಿನಿಮಾ ವೀಕ್ಷಕರಿಗೆ ಅಕ್ಕರೆಯ ಕಲಾವಿದನಾಗಿ, ಸ್ವಾಮಿ ಅಯ್ಯಪ್ಪನಿಗೆ ನಿರಂತರ ನಿಷ್ಠೆಯ ಭಕ್ತನಾಗಿದ್ದ ಈ ಶಿವರಾಮ.

“ಕಾಲ ಕ್ಷಣಿಕ ಕಣೊ, ಆ ಶಿವನೇ ಕಳಿಸುವವನು, ಕರೆಸಿಕೊಳ್ಳುವವನು!”. ಅಪಘಾತವೊ, ಕಾಹಿಲೆಯೊ ಏನೊ ಒಂದು ನಮಗೆ ಕಾಣುವುದು ನೆಪ. ಇಲ್ಲಿದ್ದಾಗ ಅನುಭವಿಸಿ ನೆನಪಾಗಿಸಿ ಉಳಿಸಿ ಹೋದ ಕ್ಷಣಗಳಷ್ಟೇ ಬದುಕು. ಕೆಲವರು ಹೆಚ್ಚು ಅಂತಹ ನೆನಪುಗಳ ಕ್ಷಣಗಳನ್ನು ಬಿಟ್ಟು   ಹೋಗಿದ್ದಾರೆ.

 

 

ಜಿಲ್ಲೆ

ರಾಜ್ಯ

error: Content is protected !!