Wednesday, September 18, 2024

ಸಚಿವ ಮುರುಗೇಶ ನಿರಾಣಿ ಅವರಿಗೆ ಡಿಸೆಂಬರ 5 ರಂದು “ಗೌರವ ಡಾಕ್ಟರೇಟ್” ಪ್ರಧಾನ ಕರ್ನಾಟಕ ಕೃಷಿ ಉದ್ಯಮದ ಆಸ್ತಿ : ಮುರುಗೇಶ ನಿರಾಣಿ

ಸುದ್ದಿ ಸದ್ದು ನ್ಯೂಸ್

ಭಾರತೀಯ ಸಕ್ಕರೆ ರಂಗದಲ್ಲಿ ತನ್ನದೆಯಾದ ಅಪೂರ್ವ ಸಾಧನೆ ಮಾಡಿದ ಕರ್ನಾಟಕ ಸರ್ಕಾರದ ಕೈಗಾರಿಕಾ ಸಚಿವರಾದ ಮುರುಗೇಶ ಆರ್. ನಿರಾಣಿಯವರಿಗೆ ಕೃಷ್ಣಾ ಮೆಡಿಕಲ್ ಸೈನ್ಸ್ ವಿ.ವಿ. ಈ ಬಾರಿಯ ಘಟಿಕೋತ್ಸವದಲ್ಲಿ  ಗೌರವ ಡಾಕ್ಟರೇಟ್” ಪುರಸ್ಕಾರ ನೀಡಲಿದ್ದು, ಇದು ಕರ್ನಾಟಕ ಸಕ್ಕರೆ ಉದ್ಯಮ ರಂಗಕ್ಕೆ ದೊರೆತ ಗೌರವ ಇದಾಗಲಿದೆ ಎಂದರೆ ಅತಿಶಯೋಕ್ತಿ ಆಗುವುದಿಲ್ಲ.

90 ರ ದಶಕದಲ್ಲಿ ಉತ್ತರ ಕರ್ನಾಟಕದಲ್ಲಿ ಕಬ್ಬಿಗೆ ಸೂಕ್ತ ಮಾರುಕಟ್ಟೆ ಸಿಗದೇ ಪರಿತಪಿಸುತ್ತಿದ್ದ ಕಾಲ. ಮುರುಗೇಶ ನಿರಾಣಿ ರೈತರಿಗಾಗಿ ಮಿನಿ ಕಾರ್ಖಾನೆ ಕಟ್ಟಿ ಯಶಸ್ವಿಯಾದರು. ಅಲ್ಲಿಯತನಕ ಬೇರೆ ರಾಜ್ಯದವರು, ಬೃಹತ್ ಉದ್ಯಮಿಗಳು ಮಾತ್ರ ಕಾರ್ಖಾನೆ ಕಟ್ಟುತ್ತಿದ್ದ ವೇಳೆಯಲ್ಲಿ 26-27 ವರ್ಷದ ಯುವಕನೊಬ್ಬ ಕೃಷಿ ಕುಟುಂಬದಲ್ಲಿ ಹುಟ್ಟಿ ಕಾರ್ಖಾನೆ ಕಟ್ಟಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದರು. ಈ ಪ್ರಯತ್ನ ಅದೆಷ್ಟೋ ಜನರಿಗೆ ಪ್ರೇರಣೆಯಾಯಿತು. ಮುಂದೆ 5-10 ವರ್ಷಗಳಲ್ಲಿ ಉತ್ತರ ಕರ್ನಾಟಕದಲ್ಲಿ ಕಬ್ಬು ಬೆಳೆಯುವ ಪ್ರತಿ ತಾಲೂಕುಗಳಲ್ಲಿಯೂ ಸಕ್ಕರೆ ಕಾರ್ಖಾನೆಗಳು ಎದ್ದು ನಿಲ್ಲಲು ಈ ಪ್ರಯತ್ನ ನಾಂದಿಯಾಯಿತು. ಇದರ ಪ್ರತಿಫಲವಾಗಿ ಕಳೆದ 25-30 ವರ್ಷಗಳಲ್ಲಿ ಕಬ್ಬು ಬೆಳೆಯುವ ಪ್ರಮಾಣವು ಹತ್ತಕ್ಕೂ ಅಧಿಕ ಪಟ್ಟು ವೃದ್ದಿಯಾಯಿತು. ರೈತ ಸದೃಢನಾದ, ಉತ್ತರ ಕರ್ನಾಟಕದಲ್ಲಿ ಕೈಗಾರಿಕಾ ಯುಗ ಆರಂಭವಾಯಿತು. ಸಾವಿರಾರು ಜನರಿಗೆ ಉದ್ಯೋಗಗಳು ಸೃಷ್ಠಿಯಾದವು.

ಮುಧೋಳದಲ್ಲಿ ಚಿಕ್ಕ ಕಾರ್ಖಾನೆ ಕಟ್ಟುವುದರಿಂದ ಪ್ರಾರಂಭವಾದ ಮುರುಗೇಶ ನಿರಾಣಿಯವರ ಸಕ್ಕರೆ ಯಾನ ದಕ್ಷೀಣ ಏಷಿಯಾದ ಪ್ರಥಮ ಅತಿದೊಡ್ಡ ಕಾರ್ಖಾನೆಯಾಗಿ ರೂಪಗೊಂಡಿತು. ಇಂದು ನಿರಾಣಿ ಉದ್ಯಮ ಸಮೂಹ ಕೃಷ್ಣೆಯಿಂದ ಕಾವೇರಿಯವರೆಗೆ ಇಡೀ ವಿಶಾಲ ಕರ್ನಾಟಕಕ್ಕೆ ತನ್ನ ಕಾರ್ಯಕ್ಷೇತ್ರವನ್ನು ವ್ಯಾಪಿಸಿಕೊಂಡಿದೆ. ದೇಶದ 3ನೇ ಅತಿದೊಡ್ಡ ಸಕ್ಕರೆ ಸಮೂಹ ಹಾಗೂ ದಕ್ಷೀಣ ಭಾರತದ ಅತಿದೊಡ್ಡ ಸಕ್ಕರೆ ಸಮೂಹವಾಗಿ ಬೆಳೆದು ನಿಂತಿದೆ. ಇಥೇನಾಲ್ ಉತ್ಪಾದನೆಯಲ್ಲಿ ನಿರಾಣಿ ಸಮೂಹ ಇಡೀ ದೇಶದಲ್ಲಿಯೇ ನಂ.1 ಸ್ಥಾನದಲ್ಲಿದೆ. 75 ಸಾವಿರ ಕುಟುಂಬಗಳು ನೇರವಾಗಿ ಹಾಗೂ ವಿವಿಧ ಮೂಲಗಳಿಂದ ಉದ್ಯೋಗ ಪಡೆದರೆ, 1.20 ಲಕ್ಷ ರೈತ ಕುಟುಂಬಗಳು ನಿರಾಣಿ ಸಮೂಹದೊಂದಿಗೆ ಬದುಕು ಕಟ್ಟಿಕೊಂಡಿವೆ.

ಮುರುಗೇಶ ನಿರಾಣಿಯವರು ಇಷ್ಟು ದೊಡ್ಡ ಉದ್ಯಮಿಯಾಗಿ ಬೆಳೆದರೂ, ಎಂದೂ ತಮ್ಮ ಕಾರ್ಯಕ್ಷೇತ್ರವನ್ನು ಬೇರೆ ರಂಗಗಳಿಗೆ ಚಾಚಲು ಅವಕಾಶ ಮಾಡಿಕೊಡಲಿಲ್ಲ. ಪ್ರಾರಂಭದಲ್ಲಿ ಸ್ಥಾಪಿಸಿದ ಸಕ್ಕರೆ ಹಾಗೂ ಸಿಮೆಂಟ್ ಹೊರತುಪಡಿಸಿ ಬೇರೆಲ್ಲೂ ವಿಚಲಿತರಾಗಲಿಲ್ಲ. ಹೀಗಾಗಿ ಲಾಭ ಬಂದು, ದುಡ್ಡು ಮಾಡಿದ ಬಳಿಕ ರಿಯಲ್ ಎಸ್ಟೇಟ್, ಐಟಿ-ಬಿಟಿ, ಆನಲೈನ್ ಟ್ರೇಡಿಂಗ್ ನಂತಹ ಭಾರಿ ಲಾಭ ತಂದು ಕೊಡುವ ಉದ್ಯಮ ಪ್ರಾರಂಭಿಸಲು ಇಂದಿಗೂ ಮನಸ್ಸು ಮಾಡುವುದಿಲ್ಲ. ರೈತರು ಪ್ರೀತಿಯಿಂದ ಬೆಳೆಸಿದ ಸಕ್ಕರೆ ಸರದಾರ ಕೃಷಿ ಉದ್ಯಮ ಕ್ಷೇತ್ರಕ್ಕೆ ಮಾತ್ರ ಮೀಸಲಾಗಿ ಶ್ರದ್ದೆಯಿಂದ ಇಂದಿಗೂ ದುಡಿಯುತ್ತಿದ್ದಾರೆ. ಕೃಷಿ ಆಧಾರಿತ ಉದ್ಯಮವನ್ನು ವಿಸ್ತರಿಸುವುದರ ಕುರಿತು ದಿನವೂ ಚಿಂತಿಸುತ್ತಾರೆ. ತಮ್ಮ ಬಳಿಗೆ ನಿತ್ಯವೂ ಬರುವ ಪ್ರತಿ ರೈತರಿಗೂ ತಮ್ಮ ಮಕ್ಕಳನ್ನು ಉದ್ಯಮಿಗಳನ್ನಾಗಿ ಮಾಡುವಂತೆ ಪ್ರೇರೇಪಿಸುತ್ತಾರೆ. ಸಲಹೆ ಕೇಳಲು ಬರುವ ಯುವ ಉದ್ಯಮಿಗಳನ್ನು ಹಿರಿಯಣ್ಣನ ಸ್ಥಾನದಲ್ಲಿ ನಿಂತು ಬೆನ್ನು ತಟ್ಟಿ ಬೆಳಸುತ್ತಾರೆ. ತಾವೇ ಎಲ್ಲರಿಗೂ ಹೇಳುವ ಉದ್ಯಮಿಯಾಗು ಉದ್ಯೋಗ ನೀಡು” ಎಂಬ ದಿವ್ಯ ಮಂತ್ರವನ್ನು ಅನುದಿನವೂ ನಿಜವಾಗಿಸುವತ್ತ ಸ್ಪಷ್ಟ ಹೆಜ್ಜೆ ಇಟ್ಟಿದ್ದಾರೆ.

ಉತ್ತರ ಕರ್ನಾಟಕದಲ್ಲಿ ಸಕ್ಕರೆ ಉದ್ಯಮಕ್ಕೂ ಹಾಗೂ ರಾಜಕಾರಣಕ್ಕೂ ಅವಿನಾಭಾವ ನಂಟಿದೆ. ಇಲ್ಲಿಯ ರಾಜಕೀಯದ ಅಸ್ತಿತ್ವವನ್ನು ಸಕ್ಕರೆ ಉದ್ಯಮ ಹಿಡಿದಿಟ್ಟುಕೊಂಡಿದೆ. ರೈತರಿಗಾಗಿ ಕಾರ್ಖಾನೆ ಕಟ್ಟಿ ಬೆಳೆದ ಮುರುಗೇಶ ನಿರಾಣಿಯವರನ್ನು ರಾಜಕಾರಣ ಬಹುಬೇಗ ಆಕರ್ಷಿಸಿತು. ಬೀಳಗಿ ಮತಕ್ಷೇತ್ರದ ಜನ ಬಹುಬೇಗನೇ ಅವರನ್ನು ಅಪ್ಪಿಕೊಂಡು ಗೆಲ್ಲಿಸಿದರು. 2004ರಲ್ಲಿ ಮೊದಲ ಪ್ರಯತ್ನದಲ್ಲಿಯೇ ಶಾಸಕರಾದರು. ಆ ಮೂಲಕ ರೈತ ಕುಟುಂಬದಿಂದ ಬಂದ ಯಶಸ್ವಿ ಉದ್ಯಮಿ, ಬಿ.ಇ ಪದವಿಧರ ಜನನಾಯಕನಾಗುವ ಅವಕಾಶ ಬೀಳಗಿ ಮತಕ್ಷೇತ್ರಕ್ಕೆ ಸಿಕ್ಕಿತು. ಭಾರತದ ರಾಜಕಾರಣದಲ್ಲಿ ಯಾರೇ ರಾಜಕಾರಣಿ ತನ್ನ ಮತಕ್ಷೇತ್ರ ಆಯ್ಕೆಯಲ್ಲಿ ಅನುಸರಿಸುವ ಮಾನದಂಡವೆಂದರೆ ತಾನು ಪ್ರತಿನಿಧಿಸುವ ಜಾತಿ ಹಾಗೂ ಪಕ್ಷದ ಪ್ರಭಾವ. ಆದರೆ ಅವೆರಡೂ ಬೀಳಗಿಯಲ್ಲಿ ನಿರಾಣಿಯವರ ಪಾಲಿಗೆ ನಗಣ್ಯ. ಕಾಂಗ್ರೆಸ್ ಭದ್ರಕೋಟೆ ಹಾಗೂ ಸ್ವಜಾತಿಯ ಅಸ್ತಿತ್ವವೇ ಇಲ್ಲದ ಬೀಳಗಿಯಲ್ಲಿ ಮುರುಗೇಶ ನಿರಾಣಿ ಕಮಲ ಅರಳಿಸಿದರು. ಪರಿಣಾಮವಾಗಿ ನಂಜುಂಡಪ್ಪ ವರದಿಯನ್ವಯ ಅತಿ ಹಿಂದುಳಿದ ತಾಲೂಕು ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಅತಿಹೆಚ್ಚು ಬಾಧಿತಗೊಂಡ ಬೀಳಗಿ ತಾಲೂಕು ಇಂದು ಎಲ್ಲ ರಂಗಗಳಲ್ಲಿಯೂ ಅಭಿವೃದ್ದಿಯನ್ನು ಕಂಡಿದೆ. ಕೃಷಿ ಹಾಗೂ ನೀರಾವರಿ ಬಗ್ಗೆ ಅವರಿಗಿರುವ ಆಸಕ್ತಿಯ ಪರಿಣಾಮ ರಾಜ್ಯದಲ್ಲಿಯೇ ಅತಿಹೆಚ್ಚು ಏತ ನೀರಾವರಿ ಯೋಜನೆಗಳು ಬೀಳಗಿಯಲ್ಲಿ ಅನುಷ್ಠಾನವಾಗಿವೆ. ಕ್ಷೇತ್ರ ವ್ಯಾಪ್ತಿಯ ಬಾದಾಮಿ, ಬಾಗಲಕೋಟೆ ತಾಲೂಕು ಸೇರಿ 1 ಲಕ್ಷಕ್ಕೂ ಅಧಿಕ ಎಕರೆ ಹೊಸ ನೀರಾವರಿ ಪ್ರದೇಶ ಸೃಷ್ಠಿಯಾಗಿದೆ.

2008ರ ಸಮಯ ದಕ್ಷೀಣ ಭಾರತದಲ್ಲಿಯೇ ಪ್ರಥಮ ಬಾರಿಗೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಕಾಲ. ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಹೊಸ್ತಿಲಲ್ಲಿ ಸಾಧನೆಯ ಹಸಿವಿನಲ್ಲಿದ್ದ ಮುರುಗೇಶ ನಿರಾಣಿಯವರನ್ನು ಕರೆದು ತಂದು ಕೈಗಾರಿಕಾ ಮಂತ್ರಿಯನ್ನಾಗಿಸಿದರು. ಅಲ್ಲಿಗೆ ಬಿಇ ಪದವೀಧರ, ಉದ್ಯಮಿಯೊಬ್ಬ ಕೈಗಾರಿಕಾ ಮಂತ್ರಿಯಾದ ಮಹತ್ವದ ಕ್ಷಣಕ್ಕೆ ಕರ್ನಾಟಕ ಸಾಕ್ಷಿಯಾಯಿತು. ಕೈಗಾರಿಕಾ ರಂಗದ ಏಳು-ಬೀಳುಗಳು, ಆಳ-ಅಗಲಗಳನ್ನು ಅರಿತಿದ್ದ ಅವರು ಕರ್ನಾಟಕ ಕೈಗಾರಿಕಾ ರಂಗದ ಪುನರುತ್ಥಾನಕ್ಕೆ ಸಜ್ಜಾಗಿ ನಿಂತರು. 2010 ಹಾಗೂ 2012ರಲ್ಲಿ ಸಂಘಟಿಸಿದ ಎರಡು ಬೃಹತ್ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶಗಳು ಜಗತ್ತಿನ ಗಮನ ಸೆಳೆದವು. 2ನೇ ಸಮಾವೇಶದಲ್ಲಿ 10 ಸಾವಿರ ಕೈಗಾರಿಕಾ ಪ್ರತಿನಿಧಿಗಳು ಭಾಗವಹಿಸಿದರು. 6800 ಹೊಸ ಕೈಗಾರಿಕಾ ಪ್ರಸ್ತಾವಣೆಗಳು ಹಾಗೂ 7 ಲಕ್ಷ ಕೋಟಿ ಬಂಡವಾಳ ಹರಿದು ಬಂತು. 18 ಲಕ್ಷ ಹೊಸ ಉದ್ಯೋಗ ಸೃಷ್ಟಿಯಾಗಿದ್ದನ್ನು ಕಂಡು ಇಡೀ ವಿಶ್ವವೇ ನಿಬ್ಬೆರಗಾಗಿ ನೋಡಿತು. 

ವಿದೇಶ ಸುತ್ತಿ ಹೊಸ ಬಂಡವಾಳ ಹೊತ್ತು ತಂದರು. ಇಲಾಖೆ ಕಾರ್ಯದ ಸರಳೀಕರಣಕ್ಕಾಗಿ ಸಿಂಗಲ್ ವಿಂಡೋ ಸಿಸ್ಟಮ್, ಕೈಗಾರಿಕೊದ್ಯಮಿಗಳ ಅನುಕೂಲಕ್ಕಾಗಿ ಲ್ಯಾಂಡ್ ಬ್ಯಾಂಕ್, ಲ್ಯಾಂಡ್ ಅಡಿಟ್, ಸುವರ್ಣ ಕರ್ನಾಟಕ ಕಾರಿಡಾರ್, ಕರ್ನಾಟಕ ಕೈಗಾರಿಕಾ ನೀತಿ 2009-2014, ವಿಷನ್ ಗ್ರುಪ್ ರಚನೆಯಂತಹ ಹೊಸ ಯೋಜನೆಗಳು ಜಾರಿಯಾದವು. ವಲಯಾಧಾರಿತ ಕೈಗಾರಿಕೆಗಳಿಗೆ ಉತ್ತೇಜನ ನೀಡಿದ ಪರಿಣಾಮ ಐಟಿ-ಬಿಟಿ, ಜವಳಿ, ಅಟೋಮೋಬೈಲ್, ವಿದ್ಯುತ್ ಉತ್ಪಾದನೆಗೆ ಉತ್ತೇಜನ ದೊರೆಯಿತು. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ 981 ಎಕರೆ ಪ್ರದೇಶದಲ್ಲಿ ವೈಮಾಂತರಿಕ್ಷ ವಲಯಾಧಾರಿತ ಕೈಗಾರಿಕಾ ಪ್ರದೇಶ ಸ್ಥಾಪನೆಗೆ ಚಾಲನೆ ನೀಡಿದರು. ಇದು ದೇಶದಲ್ಲಿಯೇ ಮೊದಲ ಪ್ರಯತ್ನ.

2021ರಲ್ಲಿ ದ್ವಿತೀಯ ಬಾರಿಗೆ ಸಂಪುಟ ದರ್ಜೆ ಸಚಿವರಾದ ಮುರುಗೇಶ ನಿರಾಣಿ ಅಲ್ಲಿಯವರೆಗೂ ನಗಣ್ಯವಾಗಿದ್ದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಹೊಸ ಸ್ಪರ್ಶ ನೀಡಿದರು. ಅವರು ಎಲ್ಲೇ ಹೋದರೂ ಹೊಸತನ ತರುತ್ತಾರೆ. ಕೊಟ್ಟ ಅವಕಾಶವನ್ನು ಸವಾಲಾಗಿ ಸ್ವೀಕರಿಸಿ, ಬದಲಾವಣೆ ತರುತ್ತಾರೆ. ಆ ಬದಲಾವಣೆಯ ಮೂಲಕ ಆಕರ್ಷಣೆಯ ಕೇಂದ್ರ ಬಿಂದುವಾಗುತ್ತಾರೆ ಎಂಬುದನ್ನು ಪುನರ್ ನಿರೂಪಿಸಿದರು. ರಾಜ್ಯ ಲಾಂಛನದ ಚಿಹ್ನೆ ಇರುವ ಚಿನ್ನದ ನಾಣ್ಯಗಳನ್ನು ಬಿಡುಗಡೆ ಮಾಡಿದರು. ಸರ್ಕಾರದಿಂದ ಜ್ಯುವೆಲರಿ ಔಟಲೇಟ್ ತೆರೆಯುವ ಕುರಿತು ಆಲೋಚಿಸಿದರು. ದೇಶದ ಏಕೈಕ ಚಿನ್ನ ಉತ್ಪಾದಕ ರಾಜ್ಯವಾದ ಕರ್ನಾಟಕದಲ್ಲಿ ಚಿನ್ನ ಉತ್ಪಾದನೆ ದ್ವೀಗುಣಗೊಳಿಸಲು ಯೋಜನೆ ಸಿದ್ದಪಡಿಸಿದರು. ಗಣಿ ಅದಾಲತ್ ಪ್ರಾರಂಭಿಸಿ ಗಣಿ ಉದ್ಯಮಿಗಳ ಬಹುಕಾಲದ ಸಮಸ್ಯೆಗೆ ಧ್ವನಿಯಾದರು. ಕಲ್ಯಾಣ ಕರ್ನಾಟಕದಲ್ಲಿ ಜ್ಯುವೆಲರಿ ಪಾರ್ಕ್ ನಿರ್ಮಿಸುವ ತಿರ್ಮಾನ ಕೈಗೊಂಡರು. 

ಕೇಂದ್ರ ಗಣಿ ಸಚಿವ ಪ್ರಹ್ಲಾದ ಜೋಶಿಯವರೊಡನೆ ಚರ್ಚಿಸಿ ಕರ್ನಾಟಕ ಅದಿರು ಗಣಿಗಳ ಸುಂಕ ಹಾಗೂ ದಂಡದಿಂದ ಸಂಗ್ರಹವಾದ (ಕೆ.ಕೆ.ಎಲ್.ಆರ್.ಸಿ ರಾಯಲ್ಟಿ) 21 ಸಾವಿರ ಕೋಟಿ ನಿಧಿಯನ್ನು ಪಡೆಯಲು ಪ್ರಯತ್ನಿಸಿದರು. ಅದಿರು ಉದ್ಯಮ ಪುನರ್ ಪ್ರಾರಂಭಿಸಲು ಕಬ್ಬಿಣದ ಅದಿರು ರಫ್ತು ಮತ್ತು ಆಮದಿನ ಮೇಲಿನ ನಿಷೇಧ ತೆರವುಗೊಳಿಸಲು ರಾಜ್ಯ ಸರ್ಕಾರದಿಂದ ಸುಪ್ರಿಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ತಯಾರಿ ನಡೆಸಿದರು. ಸಿಕ್ಕ ಕಡಿಮೆ ಅವಧಿಯಲ್ಲಿಯೇ ಇಲಾಖೆಯ ಕಾರ್ಯಕ್ಷಮತೆಯನ್ನು ಹೆಚ್ಚಿಸಿದರು. ಕಲಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವರಾಗಿಯೂ ಗಮನಾರ್ಹ ಸಾಧನೆ ಮಾಡಿದ ಅವರು ಕೋವಿಡ್ ಬಾಧಿತ ಪಟ್ಟಿಯಲ್ಲಿ 3 ನೇ ಸ್ಥಾನದಲ್ಲಿದ್ದ ಜಿಲ್ಲೆಯನ್ನು 30ನೇ ಸ್ಥಾನಕ್ಕೆ ತಳ್ಳಲು ಸಮರೋಪಾದಿ ಕ್ರಮ ಕೈಗೊಂಡರು. ಕೊವಿಡ್ ಸಂಕ್ರಮಣ ಕಾಲದಲ್ಲಿಯೂ ಜಿಲ್ಲೆಯ ಜನರ ಬದುಕಿನಲ್ಲಿ ಭರವಸೆ ತುಂಬಿ ಕಲಬುರ್ಗಿ ವಿಷನ್-2050 ಎಂಬ ಹೊಸ ಕನಸು ತುಂಬಿದರು.

ಕೈಗಾರಿಕಾ ಸಚಿವರಾಗಿ ಮತ್ತಷ್ಟು ಹೊಸ ಯೋಜನೆಗಳನ್ನು ಹೊತ್ತು ಕಾರ್ಯಪ್ರವೃತ್ತರಾಗಿದ್ದಾರೆ. ಸದಾ ಕ್ರೀಯಾಶೀಲರಾಗಿರುವ ಮುರುಗೇಶ ನಿರಾಣಿಯವರು ಎಂದಿಗೂ ವಿರಮಿಸಿದವರಲ್ಲ. ಇಡೀ ಜಗತ್ತು ಕೊವಿಡ್ ಸಂಕಷ್ಟವನ್ನು ತಲೆ ಮೇಲೆ ಹೊತ್ತು ಕೂತಿದ್ದ ಸಮಯದಲ್ಲಿ ಸ್ಥಗಿತಗೊಂಡಿದ್ದ 3 ಸಕ್ಕರೆ ಕಾರ್ಖಾನೆಗಳಿಗೆ ಮರುಜೀವ ತುಂಬಿದರು. ಎಲ್ಲ ಉದ್ಯಮಗಳಲ್ಲಿ ಕೆಲಸಗಾರರನ್ನು ಕಡಿತಗೊಳಿಸುತ್ತಿದ್ದ ದಿನಗಳವು, ಆದರೆ ನಿರಾಣಿ ಸಮೂಹದಲ್ಲಿ ಹೊಸ ನೇಮಕಾತಿಗಳು ನಿತ್ಯ ನಡೆಯುತ್ತಿದ್ದವು. ಸಾಧನೆ, ಸಾಮಾಜಿಕ ಕಳಕಳಿ ಎಂದರೆ ಇದಲ್ಲವೇ?

ಶ್ರೀಮಂತಿಕೆ ಹಣದಿಂದ ನಿರ್ಧಾರವಾಗುವುದಿಲ್ಲ. ವ್ಯಕ್ತಿಯಲ್ಲಿಯೇ ಉಧಾತ್ತ ಚಿಂತನೆಗಳು ಹಾಗೂ ಸಮಾಜಕ್ಕಾಗಿ ಸಂಪತ್ತನ್ನು ಸಮರ್ಪಿಸುವುದರಿಂದ ನಿರ್ಧಾರವಾಗುತ್ತದೆ ಅದಕ್ಕಾಗಿಯೇ ರತನ್ ಟಾಟಾ, ಸುಧಾಮೂರ್ತಿಯವರು ನಮಗೆ ವೈಶಿಷ್ಟ್ಯಪೂರ್ಣವಾಗಿ ಎದ್ದು ಕಾಣುತ್ತಾರೆ. ಅಂತೆಯೇ ಮುರುಗೇಶ ನಿರಾಣಿಯವರು ಕೂಡ ಎಂ.ಆರ್.ಎನ್. ನಿರಾಣಿ ಫೌಂಡೇಶನ್ ಮೂಲಕ ಸದ್ದಿಲ್ಲದೇ ಸಮಾಜ ಸೇವೆ ಮಾಡುತ್ತಿದ್ದಾರೆ. ಕೌಶಲ್ಯ ತರಬೇತಿ ಹಾಗೂ ಆರೋಗ್ಯ ಸೇವೆ ಅವರ ಫ್ರಥಮ ಆದ್ಯತೆಯ ಆಯ್ಕೆಗಳಾಗಿವೆ. ಉತ್ತರ ಕರ್ನಾಟಕದಲ್ಲಿಯೇ ಅತಿಹೆಚ್ಚು ಆರೋಗ್ಯ ಶಿಬಿರಗಳನ್ನು ಸಂಘಟಿಸಿದ್ದಾರೆ. ಕೇವಲ ಆರೋಗ್ಯ ಶಿಬಿರ ಸಂಘಟಿಸಿ ಕೈತೊಳೆದುಕೊಳ್ಳುವುದರ ಬದಲಾಗಿ ಆರೋಗ್ಯ ಸಮಸ್ಯೆ ಇದ್ದವರಿಗೆ ಉಚಿತ ಶಸ್ತ್ರಚಿಕಿತ್ಸೆ ಮಾಡಿಸುವುದು. ಅವರ ಊಟ-ಉಪಚಾರ, ಪ್ರವಾಸ ಭತ್ಯೆ, ಯೋಗಕ್ಷೇಮವನ್ನು ಸಹ ಫೌಂಡೇಶನ್ ನಿರ್ವಹಿಸುತ್ತಿರುವುದು ಅಪರೂಪ. ತೊಂದರೆಯಾದವರಿಗೆ ಮಾತ್ರ ಫೌಂಡೇಶನ್ ಸಹಾಯ ಮಾಡುವುದರ ಬದಲಿಗೆ ನಿರಾಣಿ ಸಮೂಹದ ಜೊತೆಗಿರುವ 1-20 ಲಕ್ಷ ರೈತ ಕುಟುಂಬಗಳಿಗೆ ವೈದ್ಯಕೀಯ ಹಾಗೂ ಅಪಘಾತ ವಿಮೆಯನ್ನು ಪ್ರತಿವರ್ಷ ಮಾಡುತ್ತಿರುವುದು ನಿರಾಣಿ ಸಮೂಹದ ವಿಶೇಷ.

ಹೀಗಾಗಿ ಮುರುಗೇಶ ನಿರಾಣಿಯವರು ಕೇವಲ ಒಬ್ಬ ಯಶಸ್ವಿ ಉದ್ಯಮಿ, ರಾಜಕಾರಣಿ ಮಾತ್ರವಲ್ಲದೇ ಅಪರೂಪದ ಸಮಾಜ ಸೇವಕರೂ ಹೌದು. ರಾಜ್ಯದ ಅತ್ಯಂತ ಹಳೆಯ ಹಾಗೂ ಐತಿಹಾಸಿಕ ಕಾರ್ಖಾನೆಯೊಂದು ಸ್ಥಗಿತಗೊಳ್ಳಬಾರದು ಎಂಬ ಒಂದೇ ಉದ್ದೇಶದಿಂದ ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು ಲೀಜ್ ಪಡೆದು ಮರು ಪ್ರಾರಂಭಿಸಿದರು. ಅಲ್ಲಿಯವರೆಗೂ ಲೀಜ್ ಪಡೆದವರೆಲ್ಲಿ ಸೋತು ಸುಣ್ಣವಾಗಿದ್ದನ್ನು ಲೆಕ್ಕಿಸದೇ ದೃಢ ಮನಸ್ಸಿನಿಂದ ಒಳ್ಳೆಯ ಸಂಕಲ್ಪ ಹೊತ್ತು ಪಡೆದ ಪರಿಣಾಮ ಇಂದು ಆ ಕಾರ್ಖಾನೆ ಯಶಸ್ವಿಯಾಗಿ ನಡೆದಿದೆ. ಯಾವುದೇ ಮಗು ತಾಯಿ ಇಲ್ಲದೇ ಅನಾಥವಾಗಬಾರದು, ಅದೇ ರೀತಿ ಕೃಷಿ ಆಧಾರಿತ ಕೈಗಾರಿಕೆ ಕೂಡ ಮುಚ್ಚಬಾರದು” ಎಂದು ಮನಸ್ಸಿನಲ್ಲಿಟ್ಟುಕೊಂಡು ಉದ್ಯಮದಲ್ಲಿ ಸಾಗುತ್ತಿದ್ದಾರೆ. 

ಹೀಗಾಗಿ ಇವೆಲ್ಲವನ್ನು ಗುರ್ತಿಸಿ ಮುರುಗೇಶ ನಿರಾಣಿಯವರಿಗೆ ಕರಾಡದ ವಿಶ್ವವಿದ್ಯಾಲಯ ಗೌರ ಡಾಕ್ಟರೇಟ್ ನೀಡಿದೆ. ಅರ್ಹ ವ್ಯಕ್ತಿತ್ವಕ್ಕೆ ಸಂದ ಶ್ರೇಷ್ಠ ಗೌರವ ಇದಾಗಿರುವುದರಿಂದ ಆ ಗೌರವಕ್ಕೂ ಒಂದು ನಿಜವಾದ ಮೌಲ್ಯ ದೊರೆತಂತಾಗಿದೆ.

ಲೇಖಕರು: ವೆಂಕಟೇಶ ಅ. ಜಂಬಗಿ. ಅಧ್ಯಕ್ಷರು, ಪ್ರಣಮ್ಯ ಎಜ್ಯುಕೇಶನ್ ಫೌಂಡೇಶನ್

ಜಿಲ್ಲೆ

ರಾಜ್ಯ

error: Content is protected !!