Saturday, July 27, 2024

ಜವಳಿ ಉದ್ಯಮ ಉತ್ತೇಜಿಸುವ ನಿಟ್ಟಿನಲ್ಲಿ ಸರಕಾರ ಯಾವುದೇ ಕ್ರಮ ಕೈಗೊಳ್ಳದಿರುವುದು ಖೇದಕರ: ನೇಕಾರರ ಸಂಘ

ಸುದ್ದಿ ಸದ್ದು ನ್ಯೂಸ್                    ಬೆಳಗಾವಿ:ಕೇಂದ್ರ ಸರಕಾರ ಜವಳಿ ಉತ್ಪನ್ನಗಳ ಮೇಲಿನ GST ದರ ಏರಿಸಿರುವ ಹಿನ್ನೆಲೆಯಲ್ಲಿ ಹಳೇ ಬೆಳಗಾವಿಯ ಕಲ್ಮೇಶ್ವರ ದೇವಸ್ಥಾನದಲ್ಲಿ ನೇಕಾರರ ಸಭೆ ಜರಗಿತು.

ಸಭೆಯಲ್ಲಿ ಪಾಲ್ಗೊಂಡಿದ್ದ ನೇಕಾರರು ಈ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. “GST ಹಾಗೂ ಪ್ರಸ್ತುತ GST ಏರಿಕೆಯ ಸಾಧಕ ಬಾಧಕಗಳ ಕುರಿತು ಚರ್ಚಿಸಲಾಯಿತು. ಪ್ರಸ್ತುತ GST ದರ ಏರಿಕೆ ಮೇಲ್ನೋಟಕ್ಕೆ ಜವಳಿ ಉದ್ಯಮಿಗಳ ಪರ ಅನಿಸುತ್ತಿದ್ದರೂ ದೀರ್ಘವಧಿ ಪರಿಣಾಮವು ಜವಳಿ ಉದ್ಯಮಕ್ಕೆ ಅತ್ಯಂತ ಮಾರಕವಾಗಿದೆ.

ಹಿಂದೆ ವಾಜಪೇಯಿ ಸರಕಾರ ಜಾರಿ ಮಾಡಿದ್ದ VAT ನ ಮತ್ತೊಂದು ಮುಖವೇ GST. ಸಣ್ಣ ಕೈಗಾರಿಕೆ ಉದ್ಯಮಗಳ ಮೇಲೆ ಇದರ ಅಡ್ಡಪರಿಣಾಮಗಳನ್ನು ಅರಿತಿದ್ದ ಖ್ಯಾತ ಅರ್ಥಶಾಸ್ತ್ರಜ್ಞರೂ ಆಗಿರುವ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ತಮ್ಮ ಅವಧಿಯಲ್ಲಿ ರದ್ದು ಮಾಡಿದರು. ಆ ನಂತರ ಬಂದ ಮೋದಿ ನೇತೃತ್ವದ ಬಿಜೆಪಿ ಸರಕಾರ GST ಹೆಸರಿನಲ್ಲಿ ಇದನ್ನು ಇನ್ನೂ ಮಾರಕವಾಗಿ ಜಾರಿಗೆ ತಂದಿದೆ.

ಸಭೆಯಲ್ಲಿ ಸೇರಿದ ಪ್ರಮುಖರು

ಸದ್ಯ ಜವಳಿ ಹಾಗೂ ಚರ್ಮ ಉತ್ಪನ್ನಗಳ ಮೇಲಿನ GST ದರ ಏರಿಸಿ ಉದ್ದಿಮೆದಾರರಿಗೆ ತೆರಿಗೆ ಹೊರೆ ಕಡಿಮೆ ಮಾಡುತ್ತಿರುವುದಾಗಿ ಹೇಳಿಕೊಳ್ಳುತ್ತಿದೆ. ಆದರೆ ಇದರಿಂದ ಗ್ರಾಹಕರ ಮೇಲೆ ತೆರಿಗೆ ಹೊರೆ ಹೆಚ್ಚಾಗುತ್ತದೆ. ಈ ವಸ್ತುಗಳ ಬೆಲೆ ಹೆಚ್ಚಾದರೆ ಬೇಡಿಕೆ ಕಡಿಮೆಯಾಗಿತ್ತದೆ. ಬೇಡಿಕೆ ಕಡಿಮೆಯಾದರೆ ಸಣ್ಣ ಉದ್ದಿಮೆದಾರರಲ್ಲಿ ಅನಾರೋಗ್ಯಕರ ಸ್ಪರ್ಧೆ ಹೆಚ್ಚಾಗುತ್ತದೆ. ಇದರಿಂದ ಅತಿ ಸಣ್ಣ ಉದ್ಯಮಿಗಳು ಸಣ್ಣ ಉದ್ದಿಮೆದಾರರ ಹೊಡೆತಕ್ಕೆ ತತ್ತರಿಸುವಂತಾಗುತ್ತದೆ. ಸಣ್ಣ ಮೀನುಗಳನ್ನು ತಿಂದು ದೊಡ್ಡಮೀನುಗಳು ಬದುಕುವಂತೆ ಕೊನೆಗೆ ಉದ್ಯಮ ಕೆಲವೇ ಕೆಲವು ದೊಡ್ಡ ಉದ್ದಿಮೆದಾದರ ಏಕಸ್ವಾಮ್ಯತೆಗೆ ಬಲಿಯಾಗಬೇಕಾಗುತ್ತದೆ.

ಹೀಗಾಗಿ GST ಆಗಲಿ, ಉತ್ಪನ್ನಗಳ ಮೇಲಿನ ದರ ಏರಿಕೆಯಾಗಲಿ ಗ್ರಾಹಕರೂ ಆಗಿರುವ ನೇಕಾರರು, ಸಣ್ಣ ಜವಳಿ ಉದ್ಯಮಿಗಳಿಗೆ ಮಾರಕವೇ ಆಗಿದೆ. ಇದರಿಂದ ನಮ್ಮಿಂದಲೇ ತೆರಿಗೆ ಪಡೆದು ಸರಕಾರದ ಬೊಕ್ಕಸ ತುಂಬುತ್ತದೆ. GST ಯಿಂದ ಸರಕಾರದ ಬೊಕ್ಕಸಕ್ಕೆ ಸಾಕಷ್ಟು ತೆರಿಗೆ ತುಂಬುತ್ತಿದ್ದರೂ ಜವಳಿ ಉದ್ಯಮ ಉತ್ತೇಜಿಸುವ ನಿಟ್ಟಿನಲ್ಲಿ ಸರಕಾರ ಯಾವುದೇ ಕ್ರಮ ಕೈಗೊಳ್ಳದಿರುವುದು ಖೇದಕರ.

ಹೀಗೆ ಜವಳಿ ಉದ್ಯಮ ನಷ್ಟವಾಗಿ ಉದ್ದಿಮೆದಾರರು ತಮ್ಮ ಉಳಿವಿಗೆ ಆ ಹೊರೆಯನ್ನು ಅನಿವಾರ್ಯವಾಗಿ ಕಾರ್ಮಿಕರ ಮೇಲೆ ಹೇರಬೇಕಾಗುತ್ತದೆ. ಇದರಿಂದ ಕಾರ್ಮಿಕರೂ ಪರ್ಯಾಯ ಉದ್ಯೋಗಗಳತ್ತ ಮುಖ ಮಾಡಬೇಕಾಗುತ್ತದೆ. ಇದರಿಂದ ಕಾರ್ಮಿಕರ ಕೊರತೆಯಿಂದ ಮತ್ತೆ ಉದ್ಯೋಗಕ್ಕೆ ನಷ್ಟ ಉಂಟಾಗುತ್ತದೆ”

ಹೀಗೇ GST ಯಿಂದ ಸಣ್ಣ ಜವಳಿ ಉದ್ಯಮಿಗಳು ಹಾಗೂ ಕಾರ್ಮಿಕರು ಹೇಗೆ ನಷ್ಟ ಅನುಭವಿಸುತ್ತಿದ್ದಾರೆ ಎನ್ನುವ ಕುರಿತು ಮಾತನಾಡಿದ ಪ್ರತಿಯೊಬ್ಬ ನೇಕಾರರು, ಕಾರ್ಮಿಕರು ಕೊನೆಗೆ ಐಕ್ಯ ಹೋರಾಟ ಕಟ್ಟುವ ಕುರಿತು ನಿರ್ಣಯ ಕೈಗೊಂಡೆವು.

ಇವುಗಳ ಜೊತೆಗೆ ಸಿದ್ದರಾಮಯ್ಯನವರ ಸರಕಾರ ಇದ್ದಾಗ ಜಾರಿಯಲ್ಲಿದ್ದ ಜನಶ್ರೀ ಬಿಮಾ ಯೋಜನೆಯ ಸೌಲಭ್ಯ ಒದಗಿಸುವುದು, ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಇರುವಂತೆ ನೇಕಾರರ ಕಲ್ಯಾಣ ಮಂಡಳಿ ರಚಿಸಿ ಸವಲತ್ತು ಒದಗಿಸುವುದು, ನೇಕಾರರನ್ನು ಅಸಂಘಟಿತ ಕಾರ್ಮಿಕರು ಎಂದು ಗುರುತಿಸಿ ಕಾರ್ಮಿಕರ ಸೌಲಭ್ಯ ಒದಗಿಸುವುದು,ರಾಷ್ಟೀಕೃತ ಬ್ಯಾಂಕ್ ಗಳಲ್ಲಿ ಸಾಲ ಸೌಲಭ್ಯ ಸೇರಿದಂತೆ ಜವಳಿ ಉದ್ಯಮ ಉತ್ತೇಜಕ ಹಾಗೂ ಕೂಲಿ ಕಾರ್ಮಿಕರ ಪರ ನೀತಿ ನಿರೂಪಣೆಗಳನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಹೋರಾಟ ಕಟ್ಟುವ ಕುರಿತು ನಿರ್ಣಯ ಕೈಗೊಳ್ಳಲಾಯಿತು.

ಹೋರಾಟದ ಮೊದಲ ಹೆಜ್ಜೆಯಾಗಿ ಈ ಎಲ್ಲ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದ ಸಮಯದಲ್ಲಿ ಶಾಸಕರಾದ ಸತೀಶ್ ಜಾರಕಿಹೊಳಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮೂಲಕ ಮುಖ್ಯಮಂತ್ರಿ ಹಾಗೂ ಜವಳಿ ಸಚಿವರನ್ನು ಭೇಟಿಯಾಗಿ ಅಹವಾಲು ಸಲ್ಲಿಸುವ ಕುರಿತು ಚರ್ಚಿಸಲಾಯಿತು.

ಸಭೆಯಲ್ಲಿ ಹಿರಿಯರಾದ ಭೋಜಪ್ಪಾ ಹಜೇರಿ, ಉದ್ಯಮಿಗಳಾದ ರಾಘವೇಂದ್ರ ಲೋಕರಿ, ಬಲರಾಮ ಸಂಗೊಳ್ಳಿ, ಗಣಪತಿ ಅಲಕುಂಟೆ, ತಿಮ್ಮಣ್ಣ ಪರಿಶ್ವಡ್, ದೀಪಕ್ ಕಾಮಕರ, ವಿಶ್ವನಾಥ್ ಕಾಮಕರ, ರಾಜು ಹರಣಿ, ಸುರೇಶ ಭಂಡಾರಿ, ವಿಜಯ ಸಾತ್ಪುತೆ,ರಾಜು ಕ್ಯಾರಕಟ್ಟಿ, ಸಾಗರ ಸಾತ್ಪುತೆ, ನಾಗರಾಜ್ ಬೆಟಗೇರಿ, ಶೇಖರ್ ಕಾಮಕರ, ರುದ್ರಪ್ಪಾ ಢವಳಿ, ಸಂತೋಷ ಸಾತ್ಪುತೆ, ರವಿ ತಾವರೆ, ಶಂಕರ ಲೋಲಿ, ಅನಿಲ್ ಉಪರಿ, ಆನಂದ ಭಗವಂತನವರ, ಶಿವು ಸೊಂಟಕ್ಕಿ ಸೇರಿದಂತೆ ಇನ್ನೂ ಅನೇಕರು ಪಾಲ್ಗೊಂಡಿದ್ದರು.

 

ಜಿಲ್ಲೆ

ರಾಜ್ಯ

error: Content is protected !!