Tuesday, September 17, 2024

ಹಿಂಗಾರಿನಲ್ಲೂ ನಳನಳಿಸಿದ ಸಾವೆ

ಸುದ್ದಿ ಸದ್ದು ನ್ಯೂಸ್
ಬಸವರಾಜ ಚಿನಗುಡಿ ಕಿತ್ತೂರು
ಚನ್ನಮ್ಮನ ಕಿತ್ತೂರು: ಬೆಳಗಾವಿ ಜಿಲ್ಲೆಯ ಸಂಪಗಾಂವ ಸಮೀಪದ ಪಟ್ಟಿಹಾಳದಲ್ಲಿ ಹಿಂದೆ ಸಾವೆ ಸಾಂಪ್ರದಾಯಿಕ ಆಹಾರ ಬೆಳೆಯಾಗಿತ್ತು. ಕಬ್ಬು ಸೋಯಾಬಿನ ಹತ್ತಿ ಗೋವಿನಜೋಳ ಇನ್ನೂ ಹಲವಾರು ವಾಣಿಜ್ಯ ಬೆಳೆಗಳು ಬಂದು ಅದರ ಜಾಗವನ್ನು ಆಕ್ರಮಿಸಿದ್ದವು.ಇದರ ಪರಿಣಾಮ ಸಾವಿ ಬೆಳೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗಿದೆ. ಆದರೆ ಗ್ರಾಮದ ರುದ್ರಪ್ಪ ಸೋಮಪ್ಪ ಚಳಕೋಪ್ಪ ಎಂಬ ರೈತರು ಪ್ರತಿವರ್ಷ ತಮ್ಮ ಜಮೀನಿನಲ್ಲಿ ಸಾವೆಯನ್ನು ಬೆಳೆಯುತ್ತಾ ಬಂದಿದ್ದಾರೆ.

ಮುಂಚೆ ಮುಂಗಾರಿನಲ್ಲಿ ಬೆಳೆಯುತ್ತಿದ್ದ ಸಾವೆಯನ್ನು ಈ ಬಾರಿ ಹಿಂಗಾರಿನಲ್ಲಿ ಬೆಳೆದಿದ್ದಾರೆ. ಕಾರಣ ಕೆಲ ಸಾರಿ ಅಕಾಲಿಕ ಮಳೆಗೆ ಸಿಕ್ಕು ಮೇವು ಹಾಗೂ ಕಾಳು ನಾಶವಾಗುತ್ತಿತ್ತು ಅದನ್ನು ಅರಿತು ಈ ಬಾರಿ ಹಿಂಗಾರಿನಲ್ಲಿ ಒಂದು ಬಾರಿ ನೀರು ಹಾಯಿಸಿ ಬೆಳೆಸಿದ್ದಾರೆ. ಹೀಗಾಗಿ ಮೇವು ಹಾಗೂ ಧಾನ್ಯ ಎರಡೂ ಬರಪುರ ಬಂದಿವೆ.

ಬೇಸಿಗೆಯಲ್ಲಿ ಇವರ ಕೆಂಪು ಜಮೀನಿಗೆ ಕೆರೆಯ ಹೂಳನ್ನು ಹಾಗೂ ಕೊಟ್ಟಿಗೆ ಗೊಬ್ಬರವನ್ನು ಹದಮಾಡಿ ಬೆಳೆಯನ್ನು ಬೆಳೆದಿದ್ದಾರೆ. ಮುಂಗಾರಿನಲ್ಲಿ ಸೋಯಾ ಬೆಳೆದು ಎಕರೆಗೆ 10 ಕ್ವಿಂಟಾಲ್ ಇಳುವರಿ ಪಡೆದು ಈಗ ಅದೆ ಭೂಮಿಯಲ್ಲಿ ಸಾವೆಯನ್ನು ಕೂರಿಗೆಯ ಸಹಾಯದಿಂದ ಬಿತ್ತಿದ್ದಾರೆ.ಎಕರೆಗೆ 8 ಕೆ.ಜಿ ಸಾವೆಯನ್ನು ಬಿತ್ತಿದ್ದಾರೆ. 3 ತಿಂಗಳಲ್ಲಿ ಕೊಯಿಲು ಮಾಡಿದ್ದಾರೆ. ಎಕರೆಗೆ ಸುಮಾರು 6 ರಿಂದ 7 ಕ್ವಿಂಟಾಲ್ ಸಾವೆಯನ್ನು ಪಡೆಯುವ ನೀರಿಕ್ಷೆ ಇದೆ ಎಂದಿದ್ದಾರೆ.

ಸಂಸ್ಕರಣೆ : ಸಾವೆಯನ್ನು ಮುಂಚೆ ಹೊಲದಲ್ಲಿ ಕಣ ಮಾಡಿ ರಾಶಿ ಮಾಡುತ್ತಿದ್ದರು ಆ ಸಮಯದಲ್ಲಿ ಸಣ್ಣ ಸಣ್ಣ ಹರಳು ಕಲ್ಲುಗಳು ಧಾನ್ಯದಲ್ಲಿ ಸೇರುತ್ತಿದ್ದವು. ಈಗ ಹರಳು ಕಲ್ಲುಗಳು ಸೇರದಂತೆ ದೊಡ್ಡದಾದ ಹಾಸಿಕೆಯಲ್ಲಿ ಸಾವಿಹುಲ್ಲನ್ನ ಹಾಕಿ ಟ್ಯಾಕ್ಟರ್ ಸಾವಿಹುಲ್ಲಿನ ಮೇಲೆ ಹಾಯಿಸಿ ನಂತರ ಗಾಳಿಯಲ್ಲಿ ತೂರಿದಾಗ ಶುದ್ದವಾದ ಸಾವೆ ದೊರೆಯುತ್ತದೆ ಎನ್ನುತ್ತಾರೆ ರುದ್ರಪ್ಪ ಚಳಕೊಪ್ಪ .ಹೀಗೆ ಬೇರ್ಪಟ್ಟ ಮೇವು ದನಗಳಿಗೂ ಉತ್ತಮ ಮೆವು ದೊರೆಯುತ್ತದೆ ಎನ್ನುತ್ತಾರೆ. ಪಶುಗಳು ಕೂಡಾ ಈ ಮೇವನ್ನು ಬಹಳ ಇಷ್ಟಪಟ್ಟು ತಿನ್ನುತ್ತವೆ ಅನ್ನುತ್ತಾರೆ. ಇದರ ಜೊತೆಗೆ ಬಣವಿಗಳ ಮೇಲೆ ಹೊದಿಕೆಯಾಗಿ ಇದರ ಹುಲ್ಲನ್ನು ಬಳಸುತ್ತಾರೆ.

ಇನ್ನು ಸಾವೆ ಆರೋಗ್ಯಕ್ಕೂ ಉತ್ತಮವಾಗಿದ್ದು ರಕ್ತದೊತ್ತಡ ಹಾಗೂ ಸಕ್ಕರೆ ಕಾಯಿಲೆಗೆ ಉತ್ತಮ ಔಷಧಿಯಂತೆ ಕೆಲಸ ಮಾಡುತ್ತದೆ. ಇದನ್ನು ಉಪ್ಪಿಟ್ಟು ,ಇಡ್ಲಿ ಉಪಹಾರಕ್ಕಾಗಿಯೂ ಬಳಸಬಹುದಾಗಿದೆ. ಅಲ್ಲದೆ ಬಿಸ್ಗಿಟ್ಟು, ಮಾಲ್ಟ್ನ ರೂಪದಲ್ಲಿ ಉಪಯೋಗಿಸುತ್ತಾರೆ.

ʼʼಸುಗ್ಗಿ ಕಾಲದಲ್ಲಿ ಸಾವಿ ಬೆಳೆದು ಸಂಕ್ರಾಂತಿ ಮಾಡುʼʼ ಎಂದು ಹಿರಿಯರು ಹೇಳುತ್ತಿದ್ದರು ಆದರೆ ಈಗ ಸಾವಿ, ನವಣಿ, ರಾಗಿ, ಎಳ್ಳು, ಸಜ್ಜೆ ಬೆಳೆಗಾರರ ಸಂಖ್ಯೆ ಕಡಿಮೆಯಾಗಿದೆ ಹೀಗಾದರೆ ಮುಂದೆ ತೃಣದಾನ್ಯಗಳನ್ನ ನೋಡಲು ಸಿಗುವುದಿಲ್ಲ ತೃಣದಾನ್ಯ ಯುಕ್ತವಾದರೆ ರೋಗ ಮುಕ್ತವಾಗುತ್ತದೆ ಆದ್ದರಿಂದ ಎಲ್ಲರು ಕಷ್ಟಪಟ್ಟು ಯಾವದೆ ರಸಾಯನಿಕ ಔಷದ ಬಳಸದೆ ನಾಟಿ ಗೊಬ್ಬರ ಬಳಸಿ ಬೆಳಸಿದ ದವಸ ದಾನ್ಯಗಳನ್ನ ಬಳಸಿದರೆ ಬೆಳೆದ ಬೆಳೆಗೆ ಹಾಗೂ ರೈತರಿಗೆ ಗೌರವ ಅಷ್ಟೆ ಅಲ್ಲದೆ ಅವರ ಕೈ ಹೆಡಿದು ಮೇಲಕ್ಕೆ ಎತ್ತಿದಂತಾಗುತ್ತದೆ.

ʼʼಸಾವಿಯಲ್ಲಿ ಗ್ಲೂಟಿನ್ ಇಲ್ಲದಿರುವುದರಿಂದ ಕೊಬ್ಬು, ರಕ್ತದೊತ್ತಡ, ಸಕ್ಕರೆ ಕಾಯಿಲೆಗಳಿಗೆೆ ಔಷದಿಯಂತೆ ಕೆಲಸ ಮಾಡುತ್ತದೆ. ಅಷ್ಟೆ ಅಲ್ಲದೆ ಆರೋಗ್ಯಕರ ಬೆಳವಣೆಗೆಗೆ ಬೇಕಾದ ನಿಯಾಸಿನ್, ಪೋಲೀಕ್ ಆಸಿಡ್, ಐರನ್ ಪೋಟ್ಯಾಷಿಯಂ, ಮ್ಯಾಂಗನೀಸ್, ಜಿಂಕ್ ಮತ್ತು ವಿಟಮಿನ್ ಬಿ ಗಳನ್ನೋಳಗೊಂಡ ಸಂರ್ಪೂಣ ಆಹಾರ ಹಾಗಾಗಿ ಸಾವಿ ಸೇವನೆಯಿಂದ ಆರೋಗ್ಯಕ್ಕೆ ಒಳ್ಳೆಯದುʼʼ

ಡಾ|| ಜಗದೀಶ ಹಾರೂಗೊಪ್ಪ ದಂತ ವೈದ್ಯರು ಹಾಗೂ ಸಾವಯವ ಕೃಷಿಕರು

ಜಿಲ್ಲೆ

ರಾಜ್ಯ

error: Content is protected !!