Thursday, July 25, 2024

ನೆಹರೂ- ಆಜಾದ್ ರವರು ಈ ದೇಶಕ್ಕೆ ಮಾಡಿದ್ದೇನು?

ನೆಹರೂ – ಆಜಾದ್ ರವರು ಈ ದೇಶಕ್ಕೆ ಮಾಡಿದ್ದೇನು?

1947 ಆಗಸ್ಟ್ 14 ರ ಮಧ್ಯರಾತ್ರಿ ನಮ್ಮ ದೇಶ ಬ್ರಿಟಿಷರ ದಾಸ್ಯದ ಸಂಕೋಲೆಯಿಂದ ಬಿಡಿಸಿಕೊಂಡು ಸ್ವಾತಂತ್ರ ಪಡೆಯಿತು. ದೇಶದಾದ್ಯಂತ ಸ್ವಾತಂತ್ರ್ಯದ ಸಂಭ್ರಮ ಮನೆಮಾಡಿತ್ತು. ಆ ಸಂಭ್ರಮ ಸ್ವಾತಂತ್ರಾನಂತರದ ಅನೇಕ ವರ್ಷಗಳು ನಮ್ಮನ್ನಾವರಿಸಿಕೊಂಡಿತು. ಆ ಸಂಭ್ರಮದಲ್ಲಿ ಮೈಮರೆತಿದ್ದ ನಾವೆಲ್ಲ, ನಮ್ಮನ್ನಾಳುವವರು ನಮಗೆ ಒಳಿತನ್ನೆ ಮಾಡುತ್ತಾರೆಂದು ಅತಿ ಭರವಸೆಯನ್ನಿಟ್ಟಿದ್ದೆವು. ಸ್ವಾತಂತ್ರ್ಯ ಹೋರಾಟದ ಚಳುವಳಿಯಲ್ಲಿ ಭಾಗವಹಿಸಿದ್ದವರೇ ಪ್ರಧಾನಿಗಳಾಗಿದ್ದರು ಮತ್ತು ಮಂತ್ರಿಮಂಡಲದಲ್ಲಿದ್ದರು. ಹಾಗಾಗಿ ಅತಿ ಭರವಸೆಗೆ ಸಕಾರಣವಿತ್ತು.

ಸ್ವಾತಂತ್ರ್ಯಾನಂತರ ಕಾಂಗ್ರೆಸ್ ಪಕ್ಷವು 6 ದಶಕಗಳ ಕಾಲ ಈ ದೇಶವನ್ನಾಳಿತು. ಸರ್ಕಾರ ಮತ್ತು ಆಡಳಿತ ನಡೆಸುತ್ತಿದ್ದವರು ಸರಿದಾರಿಯಲ್ಲಿ ಹೋಗುತ್ತಿದ್ದಾರೆಯೇ? ಇಲ್ಲವೇ? ಎಂಬುದು ಯಾರಿಗೂ ಗೊತ್ತಾಗಲೇ ಇಲ್ಲ. ಹೊಗಳುಭಟ್ಟರ ಸಾಮ್ರಾಜ್ಯದಲ್ಲಿ ಯಾರಿಗೂ ಅದು ಬೇಕಾಗಿರಲಿಲ್ಲ.ಗೊತ್ತಾಗಿದ್ದವರು ಬಾಯಿಬಿಡದಂತೆ ಮಾಡಲಾಗಿತ್ತು. ಎಲ್ಲರಿಗೂ ಗೊತ್ತಾಗುವಷ್ಟರಲ್ಲಿ ದೇಶದ ಮೇಲೆ ತುರ್ತುಪರಿಸ್ಥಿತಿ ಹೇರಲ್ಪಟ್ಟಿತ್ತು.

ಆಗಲೇ ತಿಳಿದದ್ದು, ದೇಶದ ಉದ್ಧಾರಕರೆoದು ನಮ್ಮನ್ನಾಳಿದವರು ಎಂತಹ ನೀಚ ಮಟ್ಟವನ್ನು ತಲುಪಿದ್ದಾರೆಂದು. ಜಯಪ್ರಕಾಶ್ ನಾರಾಯಣ್ ರವರ ದೇಶವ್ಯಾಪ್ತಿ ಆಂದೋಲನದ ಮೂಲಕ ಹೊಸ ಸರ್ಕಾರವೇನೋ ಬಂತು. ಆದರೆ ಹೆಚ್ಚು ದಿನ ಆ ಸಂಭ್ರಮವೂ ಉಳಿಯಲಿಲ್ಲ. ಮತ್ತೆ ಹಳೆ ಗಂಡನ ಪಾದವೇ ಗತಿ ಎಂಬಂತೆ ಈ ದೇಶದ ಜನ ಕಾಂಗ್ರೆಸ್ ಪಕ್ಷವನ್ನು ಅಪ್ಪಿಕೊಂಡರು.

ಮಾಜಿ ಪ್ರಧಾನಿ ನೆಹರೂ

ಇದೀಗ ಸ್ವಾತಂತ್ರದ ಅಮೃತ ಮಹೋತ್ಸವದ ಸಂಭ್ರಮದಲ್ಲಿರುವ ನಮಗೆಲ್ಲರಿಗೂ ನಾವು ಎಷ್ಟೊಂದು ಮೋಸ ಹೋಗಿದ್ದೇವೆoಬುದರ ಅರಿವಾಗುತ್ತಿದೆ. ಆರಂಭದಲ್ಲಿ ನಮ್ಮನ್ನಾಳಿದವರು ಈ ದೇಶಕ್ಕೆ ಮತ್ತು ದೇಶದ ಜನರಿಗೆ ಮಾಡಿರುವ ಮೋಸಗಳು, ನಂಬಿಕೆದ್ರೋಹಗಳು ಒಂದೊಂದಾಗಿ ಹೊರಬರುತ್ತಿವೆ. ಕೇವಲ ಅಲ್ಪಸಂಖ್ಯಾತರನ್ನು ಓಲೈಸುವ ಕಡೆಗೆ ಗಮನ ಕೇಂದ್ರೀಕರಿಸಿ, ಈ ದೇಶದ ಮೂಲನಿವಾಸಿಗಳಾದ ಹಿಂದೂಗಳಿಗೆ ಇನ್ನಿಲ್ಲದಂತೆ ಮೋಸ ಮಾಡಿರುವ, ನಂಬಿಕೆ ದ್ರೋಹ ಬಗೆದಿರುವ ಒಂದೊಂದೇ ಕಥೆಗಳು ಇದೀಗ ಅನಾವರಣವಾಗುತ್ತಿವೆ.ಅಂದು ಅವರುಗಳು ತೋರಿದ ದಿವ್ಯ ನಿರ್ಲಕ್ಷ್ಯ ಹಾಗೂ ತೆಗೆದುಕೊಂಡ ತಪ್ಪು ನಿರ್ಧಾರಗಳ ಪ್ರತಿಫಲವಾಗಿ ಇಂದು ಗಡಿಯುದ್ದಕ್ಕೂ ಉದ್ವಿಗ್ನತೆ ತಲೆದೋರುವಂತಾಗಿದೆ.

1947 ರಲ್ಲಿ ಭಾರತ- ಪಾಕಿಸ್ತಾನ ವಿಭಜನೆಯಾದಾಗ ಪಾಕಿಸ್ತಾನದಲ್ಲಿದ್ದ ಹಿಂದೂಗಳ ಸಂಖ್ಯೆ 22.45%..ಆದರೂ ಅವರು ತಮ್ಮ ದೇಶವನ್ನು ಮುಸ್ಲಿಂ ರಾಷ್ಟ್ರವೆಂದು ಘೋಷಿಸಿ ಕೊಂಡರು. ಪೂರ್ವ ಬಂಗಾಲದ ವಿಭಜನೆಯಾಗಿ ರಚನೆಯಾದ ಬಾಂಗ್ಲಾ ದೇಶವನ್ನು ಪಾಕಿಸ್ತಾನದ ಆಡಳಿತದಿಂದ ಬೇರ್ಪಡಿಸಿ, ಸ್ವತಂತ್ರ ದೇಶದ ಸ್ಥಾನಮಾನ ಕಲ್ಪಿಸಿಕೊಟ್ಟವರು ನಾವು. ಆ ಸಂದರ್ಭದಲ್ಲಿ ಅಲ್ಲಿದ್ದ ಹಿಂದೂಗಳ ಸಂಖ್ಯೆ 40%. ಆದರೂ ಅವರು ತಮ್ಮ ದೇಶವನ್ನು ಮುಸ್ಲಿಂ ರಾಷ್ಟ್ರವನ್ನಾಗಿ ಘೋಷಿಸಿಕೊಂಡರು. ಆದರೆ ಸ್ವಾತಂತ್ರ್ಯ ಭಾರತದಲ್ಲಿದ್ದ 90% ಹಿಂದೂಗಳಿಗಾಗಿ ಈ ದೇಶವನ್ನು ಹಿಂದೂ ರಾಷ್ಟ್ರವನ್ನಾಗಿ ಏಕೆ ಮಾಡಲಿಲ್ಲ? ಬದಲಿಗೆ ನಮ್ಮ ದೇಶದಲ್ಲೇ ಉಳಿದಿದ್ದ 7.88% ಮುಸ್ಲಿಮರ ಓಲೈಕೆಗಾಗಿ ನೆಹರೂರವರು ಈ ದೇಶವನ್ನು ಜಾತ್ಯಾತೀತ ರಾಷ್ಟ್ರವನ್ನಾಗಿ ಮಾಡಿದರು. ಇದು ಹಿಂದೂಗಳಿಗೆ ಮಾಡಿದ ಘನಘೋರ ಅನ್ಯಾಯವಲ್ಲವೇ?

ಪಾಕಿಸ್ತಾನ ದೇಶ ರಚನೆಯಾಗುತ್ತಿದ್ದಂತೆಯೇ ಅಲ್ಲಿದ್ದ ಹಿಂದೂಗಳ ಮೇಲೆ ದಾಳಿಗಳು ಆರಂಭವಾದವು. ಆದರೂ ನಮ್ಮ ದೇಶದ ಪ್ರಧಾನಿ ನೆಹರೂ ರವರು ತುಟಿಕ್ ಪಿಟಿಕ್ ಅನ್ನಲಿಲ್ಲ. ಆರಂಭದಲ್ಲಿಯೇ ಹಿಂದೂಗಳ ಮೇಲೆ ದಾಳಿಯಾದಾಗ, ಅದನ್ನು ಖಂಡಿಸಿ ಅದಕ್ಕೆ ತಕ್ಕ ಶಾಸ್ತಿ ಅನುಭವಿಸಬೇಕಾಗುತ್ತದೆಂಬ ಎಚ್ಚರಿಕೆಯ ಸಂದೇಶವನ್ನು ಕಳಿಸಿದ್ದರೆ, ಇಂದು ಅಲ್ಲಿನ ಹಿಂದೂಗಳ ಸಂಖ್ಯೆ 1.5% ಗೆ ಕುಸಿಯುತ್ತಿರಲಿಲ್ಲ. (1947 ರಲ್ಲಿ 7.88% ರಷ್ಟಿದ್ದ ಭಾರತದಲ್ಲಿದ್ದ ಮುಸ್ಲಿಮರ ಸಂಖ್ಯೆ ಇಂದು 18.88% ರಷ್ಟಾಗಿದೆ) ಇದು ಕೇವಲ ಪರ್ಸೆಂಟೇಜ್ ಲೆಕ್ಕವಲ್ಲ. ಅಲ್ಲಿನ ಹಿಂದೂಗಳು ನಿರಂತರವಾಗಿ ಅನುಭವಿಸಿರುವ ಮಾನಸಿಕ, ದೈಹಿಕ ಯಾತನೆಗಳ ನರಕಸದೃಶ ಬದುಕು ಎಂಥವರ ಕರುಳನ್ನು ಹಿಂಡದೆ ಇರದು.ಇದಕ್ಕೆಲ್ಲಾ ನೆಹರೂರವರ ‘ಒಂದು ಕಣ್ಣಿಗೆ ಎಣ್ಣೆ,ಇನ್ನೊಂದು ಕಣ್ಣಿಗೆ ಸುಣ್ಣ’ ಎಂಬ ತಪ್ಪು ನಿರ್ಧಾರವೇ ನೇರ ಕಾರಣ.

ಇದು ಪಕ್ಕದ ದೇಶದ ಕಥೆಯಾದರೆ ನಮ್ಮ ದೇಶದ ಭಾಗವೇ ಆಗಿದ್ದ ಕಾಶ್ಮೀರದಲ್ಲಿ ನೆಹರೂರವರು ಮಾಡಿದ್ದಾದರೂ ಏನು? ಕಶ್ಯಪ ಮುನಿಯ ಹೆಸರಿನಿಂದ ಕರೆಯಲ್ಪಟ್ಟ ಕಾಶ್ಮೀರಕ್ಕೆ ಶಾರದಮಾತೆಯೇ ಪುರವಾಸಿನಿಯಾಗಿದ್ದಳು. ಕಾಶ್ಮೀರ ಜಗತ್ತಿನ ಜ್ಞಾನಸಂಗಮದ ಕೇಂದ್ರವಾಗಿತ್ತು.. ಪಾಂಡಿತ್ಯದಲ್ಲಿ ಯಾರು ಎಲ್ಲರನ್ನು ಗೆಲ್ಲುತ್ತಾರೆಯೋ ಅವರು ಸರ್ವಜ್ಞ ಪೀಠ ಏರುತ್ತಿದ್ದರು. ಅಂತಹ ಸರ್ವಜ್ಞ ಪೀಠ ಇದ್ದದ್ದು ಕಾಶ್ಮೀರದಲ್ಲಿ.

ಪಂಡಿತರು ಶಾಸ್ತ್ರ ಗ್ರಂಥಗಳನ್ನು ಬರೆಯುತ್ತಿರುವುದು

ಇಂಥ ಕಾಶ್ಮೀರದ ಮೂಲನಿವಾಸಿಗಳಾದ ಕಾಶ್ಮೀರಿ ಪಂಡಿತರನ್ನು ಅಲ್ಲಿನ ಮುಸ್ಲಿಮರು ಅತ್ಯಾಚಾರ ಅನಾಚಾರಗಳಿಂದ ಹೊರದಬ್ಬತೊಡಗಿದರು. ನೆಹರೂರವರು ಇದನ್ನೆಲ್ಲ ಕಂಡೂ ಕಾಣದಂತೆ ಮೌನಕ್ಕೆ ಶರಣಾಗಿದ್ದರು.ಇಡೀ ದೇಶಕ್ಕೆ ಒಂದು ನೀತಿಯಾದರೆ ಕಾಶ್ಮೀರಕ್ಕೆ ಮಾತ್ರ ಇನ್ನೊಂದು ನೀತಿ ಎಂಬಂತೆ ಇನ್ನಿಲ್ಲದಷ್ಟು ಪ್ರಾಶಸ್ತ್ಯ ನೀಡಿ ಕಾಶ್ಮೀರಿ ಪಂಡಿತರ ಬದುಕನ್ನು ನರಕಸದೃಶಗೊಳಿಸಿದರು ನೆಹರೂರವರು.ತಾವು ತಲೆತಲಾಂತರಗಳಿಂದ ಹುಟ್ಟಿಬೆಳೆದ ಮಾತೃಭೂಮಿಯ ಮೂಲ ನೆಲೆಯನ್ನು ತೊರೆದು ಬೇರೆಡೆ ನೆಲೆಸುವಂತಹ ಘನಗೋರ ದೌರ್ಜನ್ಯಕ್ಕೆ ತುತ್ತಾದವರು ಕಾಶ್ಮೀರಿ ಪಂಡಿತರು.

ಕ್ಷತ್ರಿಯನೆಂದು ಸುಳ್ಳು ಹೇಳಿ ಪರಶುರಾಮರ ಬಳಿ ವಿದ್ಯಾಕಾಂಕ್ಷಿಯಾಗಿ ಆಗಮಿಸಿದ ಕರ್ಣ, ಒಮ್ಮೆ ತನ್ನ ತೊಡೆಯ ಮೇಲೆ ಮಲಗಿ ನಿದ್ರಿಸುತ್ತಿದ್ದ ಗುರುಗಳ ನಿದ್ರೆಗೆ ಭಂಗ ಬಾರದಿರಲೆಂದು, ತನ್ನ ಕಾಲನ್ನು ಕೊರೆಯುತ್ತಿದ್ದ ಗುಂಗಿಹುಳುವಿನ ನೋವನ್ನು ಸಹಿಸಿ ಸುಮ್ಮನಾಗುತ್ತಾನೆ. ನಿದ್ರೆಯಿಂದ ಎಚ್ಚರಗೊಂಡ ಪರಶುರಾಮರು ರಕ್ತವನ್ನು ಕಂಡು ಇದೇನೆಂದು ಕೇಳಿ, ನೀನು ಕ್ಷತ್ರಿಯನಾಗಿದ್ದರೆ ಈ ರೀತಿ ಗುಂಗಿಹುಳುವಿನಿಂದ ಬಾಧೆಗೊಳಗಾದರೂ ಸುಮ್ಮನಿರುತಿರಲಿಲ್ಲವೆಂದು, ನೀನೊಬ್ಬ ನಕಲಿ ಕ್ಷತ್ರಿಯನೆಂದು,ನೀನು ಕಲಿತ ವಿದ್ಯೆ ಸರಿಯಾದ ಸಮಯದಲ್ಲಿ ಮರೆತು ಹೋಗಲೆಂದು ಶಾಪ ಕೊಡುತ್ತಾರೆ. ಹಾಗೆಯೇ ನೆಹರೂರವರು ಸಹ ತಮ್ಮ ಹೆಸರಿನ ಮುಂದೆ ಪಂಡಿತ್ ಎಂಬ ನಾಮಧೇಯವಿದ್ದರೂ ಕಾಶ್ಮೀರಿ ಪಂಡಿತರಿಗಾಗುತ್ತಿದ್ದ ಘನಘೋರ ಅನ್ಯಾಯವನ್ನು ಕಂಡೂ ಕಾಣದಂತಿದ್ದದ್ದು, ಅವರೊಬ್ಬ ನಕಲಿ ಪಂಡಿತರೆoಬುದನ್ನು ರುಜುವಾತುಪಡಿಸಿತು.

ನೆಹರೂರವರ ಮುಸ್ಲಿಮ್ ಓಲೈಕೆಯ ಕಥನಗಳು ಒಂದೆರಡಲ್ಲ.ಸ್ವತಂತ್ರ ಭಾರತದ ಮೊದಲ ಶಿಕ್ಷಣ ಮಂತ್ರಿಯನ್ನಾಗಿ ಮೌಲಾನಾ ಅಬುಲ್ ಕಲಾಂ ಆಜಾದ್

ಮೌಲಾನಾ ಅಬುಲ್ ಕಲಾಂ ಆಜಾದ್

(ಅವಧಿ: ಆಗಸ್ಟ್ 1947 – ಫೆಬ್ರವರಿ 1958) ಅವರನ್ನು ನೇಮಿಸಿಕೊಂಡರು. ಸುಮಾರು 11 ವರ್ಷಗಳ ಕಾಲ ನೆಹರೂ ಮಂತ್ರಿಮಂಡಲದಲ್ಲಿ ಅವರು ಶಿಕ್ಷಣಮಂತ್ರಿಗಳಾದರು. ಹಾಗಾದರೆ 11 ವರ್ಷಗಳ ದೀರ್ಘ ಕಾಲಾವಧಿಯಲ್ಲಿ ನೆಹರೂ -ಆಜಾದ್ ರವರ ಜೋಡಿ ಅಲ್ಪಸಂಖ್ಯಾತರ ಶಿಕ್ಷಣಕ್ಕೆ ನೀಡಿದ ಕೊಡುಗೆ ಏನು? ಇವತ್ತಿಗೂ ಬಹುಪಾಲು ಮುಸ್ಲಿಮ್ ಜನಾಂಗ ವಿದ್ಯೆಯಿಂದ ವಂಚಿತವಾಗಿರುವುದು ಏತಕ್ಕೆ? ಒಳ್ಳೆಯ ಶಾಲಾ ಕಟ್ಟಡಗಳಾಗಲಿ, ವೈಚಾರಿಕ ವಿದ್ಯೆಯಾಗಲಿ, ತಾಂತ್ರಿಕ ತರಬೇತಿಯಾಗಲಿ ಅವರಿಗೆ ನೀಡಲಿಲ್ಲವೇಕೆ? ಮದರಸಾಗಳಲ್ಲಿ ಅವರಿಗೆ ಕೇವಲ ಧಾರ್ಮಿಕ ಶಿಕ್ಷಣ ನೀಡಿ, ಆಧುನಿಕ ಶಿಕ್ಷಣದಿಂದ ಅವರನ್ನು ವಂಚಿತಗೊಳಿಸಿ,ನಿಜವಾದ ಅರ್ಥದಲ್ಲಿ ಅವರನ್ನು ವಿದ್ಯಾವಂತರನ್ನಾಗಿಸದೆ, ಇಡೀ ಅಲ್ಪಸಂಖ್ಯಾತ ಸಮುದಾಯ ಬಡತನದಲ್ಲೇ ಉಳಿಯುವಂತೆ ಮಾಡಿದವರು ಈ ಜೋಡಿಯಲ್ಲವೇ? ಅಸಲಿಗೆ ಆಜಾದ್ ರವರೇ ಶಾಲೆಯಲ್ಲಿ ಔಪಚಾರಿಕ ಶಿಕ್ಷಣವನ್ನು ಪಡೆದಿರಲಿಲ್ಲ,ತಮ್ಮ ತಂದೆಯವರ ಬಳಿಯೇ ಸಾಂಪ್ರದಾಯಿಕ ಇಸ್ಲಾಮಿಕ್ ಶಿಕ್ಷಣ ಪಡೆದಿದ್ದರು.

ಪ್ರಾಚೀನ ಕಾಲದಿಂದಲೂ ಭಾರತದಲ್ಲಿದ್ದ ಗುರುಕುಲ ಪದ್ಧತಿಯನ್ನು ಬ್ರಿಟಿಷರು ನಿಷೇಧಿಸಿದ್ದರು. ಕಾರಣ ನಮ್ಮನ್ನು ಬಹಳ ವರ್ಷಗಳ ಕಾಲ ಗುಲಾಮರನ್ನಾಗಿಸಿ ಆಳಬೇಕೆಂಬ ದುರಾಸೆ ಮತ್ತು ದುರುದ್ದೇಶದಿಂದ. ಸ್ವಾತಂತ್ರ್ಯಾನಂತರ ಅಧಿಕಾರಕ್ಕೆ ಬಂದ ನೆಹರೂ ಸರ್ಕಾರ ಮತ್ತೆ ಗುರುಕುಲ ಪದ್ಧತಿಯನ್ನು ಯಾಕೆ ಜಾರಿಗೊಳಿಸಲಿಲ್ಲ? ಕೇವಲ ಮುಸ್ಲಿಮರಿಗೇಕೆ ಮದರಸಾ ಶಿಕ್ಷಣ ಪದ್ದತಿಯನ್ನು ಒಪ್ಪಿಕೊಂಡರು? ಈ ತಾರತಮ್ಯ ನೀತಿಗೆ ಕಾರಣವೇನು? ಈ ತಾರತಮ್ಯ ನೀತಿಯೇ, ಇಂದು ಅಲ್ಲಲ್ಲಿ ಕೇಳಿಬರುವ ಈ ದೇಶವನ್ನು ಮುಸ್ಲಿಂ ರಾಷ್ಟ್ರವನ್ನಾಗಿಸುತ್ತೇವೆಂಬ ಕೆಲವು ಕಿಡಿಗೇಡಿಗಳ ಮಾತಿಗೆ, ಭಾರತ- ಪಾಕಿಸ್ತಾನ ಕ್ರಿಕೆಟ್ ಪಂದ್ಯದಲ್ಲಿ ಭಾರತ ಸೋತರೆ ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದು ಕೂಗುವ ಕೆಲವು ಮತಿಗೇಡಿಗಳ ವರ್ತನೆಗೆ ಮೂಲ ಕಾರಣವಾಗಿದೆ.ಅಷ್ಟೆ ಅಲ್ಲದೆ ಹಿಂದೂ- ಮುಸ್ಲಿಂ ನಡುವಿನ ವೈಮನಸ್ಯಕ್ಕೆ ಹಾಗೂ ಆಗಾಗ ನಡೆಯುವ ಕೋಮು ಗಲಭೆಗಳಿಗೂ ಕೂಡ.

ಇದು ಇಷ್ಟಕ್ಕೇ ಮುಗಿಯುವುದಿಲ್ಲ. ಇದರ ಹಿಂದೆ ಇನ್ನೊಂದು ಕರಾಳ ಮುಖ ಕೂಡ ಇದೆ. ನನ್ನ ಪರಿಚಿತ ವಿದ್ಯಾರ್ಥಿಯೊಬ್ಬ ಒಮ್ಮೆ ಹೇಳಿದ. ಭಾರತಕ್ಕೆ ಮೊಘಲರ ಕಾಣಿಕೆ ಏನು? ಎಂದು ಬಿ ಎ ಪರೀಕ್ಷೆಯಲ್ಲಿ ಪ್ರಶ್ನೆ ಕೇಳಲಾಗಿತ್ತಂತೆ. ಅದಕ್ಕೆ ಈತ ಬರೆದ ಉತ್ತರ “ಮೊಘಲರು ಭಾರತಕ್ಕೆ ಯಾವುದೇ ಕಾಣಿಕೆ ಕೊಡಲೆಂದು ಬಂದವರಲ್ಲ. ಇಲ್ಲಿನ ಸಂಪತ್ತನ್ನು ಲೂಟಿ ಮಾಡಲು ಬಂದವರು. ಆ ನಂತರ ಇಲ್ಲಿಯೇ ತಳವೂರಿ, ನಮ್ಮ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಅನಾಚಾರ ನಡೆಸಿ, ಹಿಂದೂಗಳನ್ನು ಮತಾಂತರಗೊಳಿಸಿಸಲು ಪ್ರಯತ್ನಿಸಿದರು. ನಮ್ಮ ದೇವಸ್ಥಾನಗಳನ್ನು ಧ್ವಂಸಗೊಳಿಸಿ ಮಸೀದಿಗಳನ್ನು ಕಟ್ಟಿದರು-ಇದೇ ಅವರ ನಿಜವಾದ ಕಾಣಿಕೆ”

ಇದೀಗ ನನ್ನ ಪ್ರಶ್ನೆ: ಒಬ್ಬ ಬಿಎ ವಿದ್ಯಾರ್ಥಿಗೆ ಅರ್ಥವಾದ ಈ ಕಟುಸತ್ಯ, 75 ವರ್ಷಗಳಾದರೂ ಡೋಂಗಿ ಜಾತ್ಯಾತೀತವಾದಿಗಳಿಗೇಕೆ ಅರ್ಥವಾಗಲಿಲ್ಲ? ಎಂಬುದು. ಏಕೆಂದರೆ ಇಂತಹ ಶಿಕ್ಷಣ ಪದ್ದತಿಯನ್ನು ಮತ್ತು ನಕಲಿ ಜಾತ್ಯಾತೀತವಾದಿಗಳನ್ನು ರೂಪಿಸಿದ್ದೇ ಬ್ರಿಟಿಷರು ಮತ್ತು ಆನಂತರ ನೆಹರು- ಆಜಾದ್ ಜೋಡಿ. ಈ ಜೋಡಿ ಬರೆಸಿದ ಇತಿಹಾಸದಲ್ಲಿ ತಾಜ್ ಮಹಲ್ ಜಗತ್ತಿನ ಅದ್ಭುತವಾಗಿ ದಾಖಲಾಗುತ್ತದೆ. ಆದರೆ ಭಾರತದುದ್ದಗಲಕ್ಕೂ ಸಾವಿರಾರು ವರ್ಷಗಳಿಂದ ತಲೆಎತ್ತಿ ನಿಂತಿರುವ ವಾಸ್ತುಶಿಲ್ಪ-ಶಿಲ್ಪಕಲೆಗಳ ಕಲಾ ವೈಭವದ ಸಾವಿರಾರು ಮಂದಿರಗಳು ಇವರ ಕಣ್ಣಿಗೆ ಏಕೆ ಬೀಳಲಿಲ್ಲ?

ಭೂಮಿಯ ಒಳಭಾಗದಲ್ಲಿದ್ದ ಬಂಡೆಯೊಂದರಲ್ಲಿ ಅದ್ಭುತ ಶಿಲ್ಪಕಲೆಯನ್ನು ಅರಳಿಸಿರುವ ಅಜಂತಾ ಎಲ್ಲೋರದ ಕೈಲಾಸ ಪರ್ವತದ ಅಚ್ಚರಿಗಿಂತ ಇನ್ನೊಂದು ಅಚ್ಚರಿ ಈ ಜಗತ್ತಿನಲ್ಲಿ ಇರಲು ಸಾಧ್ಯವೆ? ಕಲ್ಲಿನ ಕಂಬವೊಂದರಲ್ಲಿ ನಾನಾ ಬಗೆಯ ವಾದ್ಯ ನಿನಾದಗಳನ್ನು ನುಡಿಸುವ ನಮ್ಮದೇ ರಾಜ್ಯದ ಹಂಪೆಯ ವಿಜಯ ವಿಠ್ಠಲ ಆಲಯ ಅಚ್ಚರಿಯಲ್ಲವೇ? ಬೇಲೂರು ಹಳೆಬೀಡಿನ ಶಿಲ್ಪಕಲಾ ವೈಭವವನ್ನು ಜಗತ್ತಿನ ಯಾವುದಾದರೂ ಮೂಲೆಯಲ್ಲಿ ಕಾಣಲು ಸಾಧ್ಯವೇ? ಭಾರತದುದ್ದಕ್ಕೂ ಇಂತಹ ಸಾವಿರಾರು ಅಚ್ಚರಿಗಳನ್ನು ನಾವು ಕಾಣಬಹುದಾಗಿದೆ

ನಾಲ್ಕು ಸಾವಿರಕ್ಕಿಂತಲೂ ಹೆಚ್ಚು ಹೆಣ್ಣು ಮಕ್ಕಳನ್ನು ತನ್ನ ಮೊಘಲ್ ನ ಹರೆಮ್ ನಲ್ಲಿ ಇಟ್ಟುಕೊಂಡಿದ್ದ ಅಕ್ಬರ್, ಇವರಿಗೆ ಅಕ್ಬರ್ ದಿ ಗ್ರೇಟ್ ಆಗುತ್ತಾನೆ. ಆದರೆ ಹಾದಿಯುದ್ದಕ್ಕೂ ಮರಗಿಡಗಳನ್ನು ನೆಟ್ಟು, ಅರವಂಟಿಗೆಗಳನ್ನು ಇಟ್ಟು, ಮಾದರಿ ರಾಜ್ಯವಾಳಿದ ಅಶೋಕ ದಿ ಗ್ರೇಟ್ ಆಗುವುದಿಲ್ಲ.ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿದ್ದ ದೇವಾಲಯವನ್ನು ಒಡೆದು ಅಲ್ಲಿ ಮಸೀದಿ ಕಟ್ಟಿ, ಸಾವಿರಾರು ಹಿಂದೂಗಳ ಕಗ್ಗೊಲೆಗೆ ಕಾರಣನಾದ ಬಾಬರ್ ಇವರಿಗೆ ಜಾತ್ಯಾತೀತ ರಾಜನಾಗಿ ಕಾಣುತ್ತಾನೆ.ಸರ್ದಾರ್ ವಲ್ಲಭಭಾಯಿ ಪಟೇಲ್ ರವರು, ಮೊಘಲರಿಂದ ಧ್ವಂಸವಾಗಿದ್ದ ಗುಜರಾತಿನ ಸೋಮನಾಥ ದೇವಾಲಯವನ್ನು ಪುನರ್ ನಿರ್ಮಿಸಲು ಬಯಸಿದಾಗ ಅದನ್ನು ವಿರೋಧಿಸಿ, ಜಾಮಾ ಮಸೀದಿಯನ್ನು ಪುನರುತ್ಥಾನಗೊಳಿಸುವ ಒತ್ತಾಯ ಇವರ ಅವಧಿಯಲ್ಲಿ ಕೇಳಿಬರುತ್ತದೆ.

ಹಿಂದೂ ಧರ್ಮ ಮತ್ತು ಜನಾಂಗದ ಬದ್ದದ್ವೇಷಿಯಾಗಿ ಸಾವಿರಾರು ಹಿಂದೂಗಳನ್ನು ಬಲವಂತದಿಂದ ಮತಾಂತರಗೊಳಿಸಿದ, ಒಪ್ಪದವರನ್ನು ಕಗ್ಗೊಲೆ ಮಾಡಿದ, ಸಾವಿರಾರು ಹಿಂದೂ ದೇವಾಲಯಗಳನ್ನು ನೆಲಸಮಗೊಳಿಸಿದ್ದ ಔರಂಗಜೇಬನೆಂಬ ಕ್ರೂರಿಯ ಕಥನ, ನಮ್ಮ ಇತಿಹಾಸದ ಪುಸ್ತಕಗಳಲ್ಲಿ ಮಹಾನ್ ಸಾಧಕ ನಾಯಕನೆಂಬಂತೆ ಒಂದು ಅಧ್ಯಾಯದಷ್ಟು ವಿಸ್ತಾರವಾಗಿ ಕಾಣಸಿಗುತ್ತದೆ. ಆದರೆ ಎಂಟನೇ ವಯಸ್ಸಿನಲ್ಲಿಯೇ ತನ್ನ ಮನೆ ತೊರೆದು ಹೊರಟ ಬಾಲಕನೊಬ್ಬ, ಭರತಖಂಡದಾದ್ಯಂತ ಮೂರು ಬಾರಿ ಕಾಲ್ನಡಿಗೆಯಲ್ಲಿ ಕ್ರಮಿಸಿ,ಅವನತಿಯ ಅಂಚಿನಲ್ಲಿದ್ದ ಹಿಂದೂಧರ್ಮದ ಮಹತ್ವವನ್ನು ಎಲ್ಲೆಡೆ ಸಾರಿ ,ಭಾರತದ ನಾಲ್ಕು ದಿಕ್ಕಿನಲ್ಲಿಯೂ ಮಠಗಳನ್ನು ಸ್ಥಾಪಿಸಿ, ಸರ್ವಜ್ಞ ಪೀಠವನ್ನೇರಿದ್ದು ನಮ್ಮ ಇತಿಹಾಸದ ಪಠ್ಯದಲ್ಲಿ ಏಳೆಂಟು ಸಾಲುಗಳಲ್ಲಿ ಚಿತ್ರಿತವಾಗಿರುವ ದುರಂತವನ್ನು ನಾವು ಕಾಣುತ್ತಿದ್ದೇವೆ. ನಾವು ಓದುತ್ತಿರುವ ಭಾರತೀಯ ಇತಿಹಾಸ, ಜಗತ್ತಿನ ಅತಿ ದೊಡ್ಡ ಸುಳ್ಳು ಎಂಬ ಮಾತಿಗೆ ಇದಕ್ಕಿಂತ ಸಾಕ್ಷಿ ಬೇಕೆ?

ಬ್ರಿಟಿಷರು ನಮ್ಮ ದೇಶವನ್ನು ಆಳಲು ಅನುಸರಿಸಿದ ಕುತಂತ್ರ ಬುದ್ಧಿಯ ಫಲವಾಗಿ ರೂಪುಗೊಂಡ ಥಕಥಕಿತ ಕಟ್ಟುಕತೆಯ ಇತಿಹಾಸವನ್ನೇ ಇವರು ಮುಂದುವರೆಸುತ್ತಾರೆ. ಆರ್ಯರು- ದ್ರಾವಿಡರೆoದು ವಿಂಗಡಿಸಿ, ಉತ್ತರ ಭಾರತದವರು- ದಕ್ಷಿಣ ಭಾರತದವರೆಂದು ಪ್ರತ್ಯೇಕಿಸಿ, ಕುಲಕಸುಬಿನ ಮೇಲೆ ವಿಂಗಡಿಸಿದ್ದ ಬ್ರಾಹ್ಮಣ್ಯ, ವೈಶ್ಯ, ಶೂದ್ರ, ಕ್ಷತ್ರಿಯ ಗುಂಪುಗಳನ್ನೇ ಜಾತಿಗಳ ಗುರಾಣಿಯನ್ನಾಗಿಸಿ, ಒಡೆದು ಆಳುವ ನೀತಿ ಅನುಸರಿಸಿ, ಆಳ್ವಿಕೆ ನಡೆಸಿದ ಬ್ರಿಟಿಷರ ಪರಂಪರೆಯನ್ನೇ ಈ ಜೋಡಿ ಮುಂದುವರೆಸುತ್ತದೆ.

ನೆಹರುರವರು ಹಾಕಿಕೊಟ್ಟ ದಾರಿಯಲ್ಲಿ ಕಾಂಗ್ರೆಸ್ ಪಕ್ಷ ಇoದಿಗೂ ನಡೆಯುತ್ತಿದೆ. ನಾವು ಅಧಿಕಾರಕ್ಕೆ ಬಂದರೆ ಕಾಶ್ಮೀರದಲ್ಲಿ 370 ವಿಧಿಯನ್ನು ಮತ್ತೆ ಜಾರಿಗೊಳಿಸುತ್ತೇವೆಂದು ಒಬ್ಬರು ಹೇಳುತ್ತಾರೆ. ಸೈನಿಕರಿಗೆ ಪರಮಾಧಿಕಾರ ತೆಗೆದು ಹಾಕುತ್ತೇವೆಂದು ಇನ್ನೊಬ್ಬರು ಕಿರುಚುತ್ತಾರೆ. ರಾಮಮಂದಿರ ನಿಧಿ ಸಮರ್ಪಣೆಗೆ ಹಣ ನೀಡಬೇಡಿರೆಂದು ಮಾಜಿ ಮುಖ್ಯಮಂತ್ರಿಯೊಬ್ಬರು ಹೇಳುತ್ತಾರೆ.

ಹಿಂದೂ ದೇವಾಲಯಗಳ ಹುಂಡಿಗಳಿಂದ ಸಂಗ್ರಹವಾದ ಹಣವನ್ನು ಚರ್ಚು ಮತ್ತು ಮಸೀದಿಗಳಿಗೆ ಧಾರಾಳವಾಗಿ ನೀಡುವ ಕುಹಕ ಬುದ್ಧಿಯನ್ನು ಪ್ರದರ್ಶಿಸುತ್ತಾರೆ. ಅಯೋಧ್ಯಾ ರಾಮ ಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಮುಸ್ಲಿಮರ ಪರವಾಗಿ ವಾದಿಸುತ್ತಾರೆ. ತೀರ್ಪು ಬಂದಾದ ನಂತರವೂ ರಾಮಮಂದಿರ ಕಟ್ಟಲು ಬಿಡುವುದಿಲ್ಲವೆಂದು ಕೆಲವರು ಕಿರುಚಾಡುತ್ತಾರೆ. ಯಾರೂ ಕೇಳದಿದ್ದರೂ ಟಿಪ್ಪು ಜಯಂತಿ ಆಚರಿಸಿ ಸಮಾಜದಲ್ಲಿ ಅಶಾಂತಿಯನ್ನುಂಟು ಮಾಡುತ್ತಾರೆ. ಬಹಿರಂಗ ಸಭೆಗಳಲ್ಲಿ ಮುಸ್ಲಿಮರಿಂದ ಆಜಾನ್ ಕೂಗಿಸಿ ಸಭಾಮರ್ಯಾದೆಯನ್ನು ಹಾಳುಗೆಡವುತ್ತಾರೆ- ಹೀಗೆ ಒಂದೇ ಎರಡೇ, ಸಾವಿರಾರು ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ.ಇದೆಲ್ಲದರಿಂದ ನಮಗೆ ತಿಳಿದುಬರುವುದೇನೆಂದರೆ ಕಾಂಗ್ರೆಸ್ ಪಕ್ಷಕ್ಕೆ ಕೇವಲ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ ಮಾತ್ರ ಬೇಕಾಗಿದೆಯೇ ಹೊರತು ಅವರ ನಿಜವಾದ ಅಭ್ಯುದಯ ಬೇಡವಾಗಿದೆ.

ವಿಪರ್ಯಾಸವೇನು ಗೊತ್ತೇ? ಮುಸ್ಲಿಂ ಸಮುದಾಯದ ಪ್ರತಿನಿಧಿಯಾಗಿ ನೆಹರೂರವರ ಮಂತ್ರಿಮಂಡಲದಲ್ಲಿ ಶಿಕ್ಷಣ ಖಾತೆಯನ್ನು ಗಿಟ್ಟಿಸಿಕೊಂಡು,ಅವರ ಸರ್ವತೋಮುಖ ಅಭಿವೃದ್ಧಿಗೆ ಏನನ್ನೂ ಮಾಡದ, ಈ ಭವ್ಯ ಭಾರತದ ಇತಿಹಾಸವನ್ನು ತಪ್ಪಾಗಿ ಅರ್ಥೈಸುವ ಪಠ್ಯವನ್ನಿಟ್ಟು ನೈಜ ಇತಿಹಾಸವನ್ನು ಜನರಿಂದ ಮರೆಮಾಚಿದ,ಭಾರತದ ಪ್ರಥಮ ಶಿಕ್ಷಣ ಸಚಿವ ಆಜಾದ್ ಅವರ ಜನ್ಮದಿನವಾದ ನವೆಂಬರ್ 11 ದಿನಾಂಕವನ್ನು ನಾವೆಲ್ಲ ಭಾರತದ ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ ಆಚರಿಸುತ್ತಿದ್ದೇವೆ. ಹೊಸ ಶಿಕ್ಷಣ ನೀತಿಯಲ್ಲಿ ಹಳೆ ಪಠ್ಯಕ್ರಮವನ್ನು ಕಿತ್ತೊಗೆದು, ನೈಜ ಇತಿಹಾಸ ಪ್ರತಿಬಿಂಬಿತವಾಗಲಿ. ಹಾಗೆಯೇ ಆಜಾದ್ ರವರ ಜನ್ಮದಿನದ ಬದಲಿಗೆ, ನಮ್ಮ ದೇಶದ ಹೆಮ್ಮೆಯ ಸುಪುತ್ರ ಅಬ್ದುಲ್ ಕಲಾಂ ರವರ ಜನ್ಮದಿನ ರಾಷ್ಟ್ರೀಯ ಶಿಕ್ಷಣ ದಿನವಾಗಲಿ.

ಕಲು ಲಾಲ್ ಶ್ರೀಮಾಲಿ (ಅವಧಿ: ಫೆಬ್ರವರಿ 1958 ರಿಂದ ಆಗಸ್ಟ್ 1963) ಯವರನ್ನು ಹೊರತುಪಡಿಸಿ ಹುಮಾಯೂನ್ ಕಬೀರ್ (ಅವಧಿ: ಸೆಪ್ಟೆಂಬರ್ 1963 ರಿಂದ ನವೆಂಬರ್ 1963),ಮೊಹಮ್ಮದಾಲಿ ಕರೀಮ್ ಚಾಗ್ಲಾ (ಅವಧಿ: ನವೆಂಬರ್ 1963 ರಿಂದ ನವೆಂಬರ್ 1966), ಫಕ್ರುದ್ದೀನ್ ಅಲಿ ಅಹ್ಮದ್ (ಅವಧಿ: ನವೆಂಬರ್ 1966 ರಿಂದ ಮಾರ್ಚ್ 1967),ಸೈಯಿದ್ ನೂರುಲ್ ಹಸನ್ (ಅವಧಿ: ಮಾರ್ಚ್ 1972 ರಿಂದ ಮಾರ್ಚ್ 1977)-ಹೀಗೆ 1947- 1977ರ ಅವಧಿಯ 30 ವರ್ಷಗಳಲ್ಲಿ 20 ವರ್ಷಗಳ ಕಾಲ ಮುಸ್ಲಿಮರೇ ಸ್ವಾತಂತ್ರ್ಯಾನಂತರ ಭಾರತದ ಶಿಕ್ಷಣ ಸಚಿವರಾಗಿದ್ದರೂ ಆ ಜನಾಂಗದ ವಿದ್ಯಾಪ್ರಗತಿಯ ಗ್ರಾಫ್ ಮೇಲೇಳಲೇ ಇಲ್ಲ ಏಕೆ?

ಹಾಗೆಯೇ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ರವರು ಹಿಂದುಳಿದವರಿಗೆ ಮೀಸಲಾತಿಯನ್ನು ರೂಪಿಸಿ, ಅದಕ್ಕೆ10 ವರ್ಷಗಳ ಕಾಲಮಿತಿಯನ್ನು ವಿಧಿಸಿದ್ದರು.ಆದರೆ ಆ 10 ವರ್ಷಗಳಲ್ಲಿ ನೆಹರೂರವರ ಸರಕಾರಕ್ಕೆ ಆ ಗುರಿ ತಲುಪಲಾಗಲಿಲ್ಲ.10 ವರ್ಷಗಳಿರಲಿ, 6 ದಶಕಗಳಾದರೂ ಕಾಂಗ್ರೆಸ್ ಪಕ್ಷಕ್ಕೆ ಅವರನ್ನು ಬಡತನ ರೇಖೆಗಿಂತ ಮೇಲೆತ್ತಿ, ಮೀಸಲಾತಿಯನ್ನು ಇಲ್ಲವಾಗಿಸಲು ಸಾಧ್ಯವಾಗಲಿಲ್ಲ. ಸ್ವಾತಂತ್ರ್ಯೋತ್ತರ ಭಾರತದ ಸರ್ಕಾರದ ಸಾಧನೆಗಳನ್ನು ಒರೆಗಚ್ಚಿ ನೋಡತೊಡಗಿದರೆ, ಇಂತಹ ಹತ್ತಾರು ವಿಪುಲ ವಿಫಲ ಪ್ರಯೋಗಗಳನ್ನು ಕಾಣಬಹುದು. ಹಾಗೆಯೇ ಹಿಂದುಳಿದವರು ಮತ್ತು ಅಲ್ಪಸಂಖ್ಯಾತರ ಉದ್ಧಾರಕ ತಾನೆಂದು ಬಿಂಬಿಸಿಕೊಳ್ಳುತ್ತಾ, ಇಲ್ಲಿಯವರೆಗೂ ಅವರನ್ನು ಬಡತನದಲ್ಲೇ ಉಳಿಸಿರುವುದು, 6 ದಶಕಗಳ ಕಾಂಗ್ರೆಸ್ ಸರ್ಕಾರದ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ.

 

ಲೇಖಕರು-ಮಣ್ಣೆ ಮೋಹನ್
M-6360507617
[email protected]

ಜಿಲ್ಲೆ

ರಾಜ್ಯ

error: Content is protected !!