Saturday, July 27, 2024

 ಮುಂಬೈ ಕರ್ನಾಟಕದ ನೋವುಗಳನ್ನು ಮರೆಸಿತೆ ಕಿತ್ತೂರು ಕರ್ನಾಟಕ.?

ಮಾನ್ಯ ಮುಖ್ಯಮಂತ್ರಿಗಳು ಕಿತ್ತೂರು ಉತ್ಸವದಲ್ಲಿ ಘೋಷಿಸಿದಂತೆ “ಮುಂಬೈ-ಕರ್ನಾಟಕ”ವನ್ನು “ಕಿತ್ತೂರು-ಕರ್ನಾಟಕ” ವೆಂದು ಪೋಷಿಸಿದ್ದಕ್ಕೆ ರಾಜ್ಯ ಸರಕಾರವನ್ನು ಅಭಿನಂದಿಸಲು ಹರ್ಷವೆನಿಸುತ್ತದೆ.

ಹಾಗಾದರೆ ಮುಂಬೈ ಕರ್ನಾಟಕವನ್ನು ಕಿತ್ತೂರ ಕರ್ನಾಟಕ ಏಂದು ಘೋಷಣೆ ಮಾಡುವ ದುರ್ದು ಏನಿತ್ತು?ಒಂದು ಸಾರಿ ಉಸಿರು ಗಟ್ಟಿ ಮಾಡಿಕೂಂಡು ಮುಂಬಯಿ ಕರ್ನಾಟಕ ಆಡಳಿತದ ಕರಾಳತೆಯನ್ನು ಸಿಂಹಾವಲೋಕನ ಮಾಡೋಣವೇ?

ಮುಂಬಯಿ ಯನ್ನು ಆಡಳಿತ ಕೇಂದ್ರವನ್ನಾಗಿ ಮಾಡಿಕೊಂಡು ಮುಂಬೈ ಪ್ರಾಂತ್ಯಕ್ಕೆ ಒಳಪಡುವ ಎಲ್ಲ ಸಂಸ್ಥಾನಗಳನ್ನು ಶೋಷಣೆ ಮಾಡಿದವರು ಬ್ರೀಟಿಷರು ಮತ್ತು ನಮ್ಮವರೇ ಆದ ಪುಣಾದ ಪೇಶ್ವೆಗಳು,ಹಾಗಾದರೆ ಇವರ ಆಡಳಿದಲ್ಲಿ ನಡೆದ್ದಿದ್ದಾದರೂ ಏನು?

ಹೈದರಾಭಾದ ಕರ್ನಾಟಕದಲ್ಲಿ ಕನ್ನಡಿಗರು ಹೈದರಾಬಾದಿನ ನಿಜಾಮ ಮತ್ತು ಆತನ ಅನುಯಾಯಿ ಖಾಸಿಂ ರಿಜ್ವೀಯಿಂದ ಶೋಷಣೆಗೂಳಪಟ್ಟಂತೆ ಮುಂಬಯಿ ಕರ್ನಾಟಕ ದಲ್ಲಿ ಏನಾದರೂ ನಡೆಯಿತೆ?

ಹೌದು ಅಷ್ಟೇ ಕ್ರೋರವಾದ ದೌರ್ಜನ್ಯ ಪೇಶ್ವೆ ಮತ್ತು ಬ್ರಿಟಿಷ್ ರಿಂದ ನಡೆದಿದೆ,ಹಾಗಾಗಿ ಹೈದರಾಬಾದ್ ಕರ್ನಾಟಕ ದಲ್ಲಿ ನಿಜಾಮನ ದಬ್ಬಾಳಿಕೆಯ ನೋವನ್ನು ಮರೆಮಾಚಲು ಮತ್ತು ಆ ಭಾಗದಲ್ಲಿ ಶರಣತಂಡದ ಸಾಮಾಜಿಕ ಕ್ರಾಂತಿಯನ್ನು ಸದಾ ಸ್ಮರಿಸಲು “ಕಲ್ಯಾಣ-ಕರ್ನಾಟಕ” ನಾಮಕರಣ ಮಾಡಿದಂತೆ, ಇಲ್ಲೂ ಸಹಿತ ಪೇಶ್ವೆ ಮತ್ತು ಬ್ರೀಟಿಷರ ದೌರ್ಜನ್ಯವನ್ನು ಮರೆಮಾಚಲು ಮತ್ತು ಕಿತ್ತೂರಿನ ರಾಣಿ ಚನ್ನಮ್ಮನ ನೇತೃತ್ವದ ಸೈನ್ಯ ಸೂರ್ಯ ಮುಳುಗದ ಸಾಮ್ರಾಜ್ಯವಾದ ಬ್ರಿಟಿಷರ ಹೆಡೆಮುರಿಕಟ್ಟಿದ ಕಾರಣ ಅದರ ಸ್ವಾಭಿಮಾನ ವನ್ನು ಸದಾಕಾಲ ಈ ನಾಡಿನ ಜನಮಾನಸದಲ್ಲಿ ಜೀವಂತವಾಗಿಡುವ ಉದ್ದೇಶದಿಂದ ಮುಂಬಯಿ ಕರ್ನಾಟಕವನ್ನು “ಕಿತ್ತೂರು-ಕರ್ನಾಟಕ” ಏಂದು ಘೋಷಣೆ ಮಾಡಿರುವುದು ಅಭಿಮಾನದ ಮತ್ತು ಅಭಿನಂದಿಸುವ ವಿಷಯ.

ವೀರಪ್ಪ ದೇಸಾಯಿ ಸಮಾಧಿ

ಬ್ರಿಟಿಷರ ಗಿಂತ ಹೆಚ್ಚಾಗಿ ನಮ್ಮ ಕನ್ನಡ ವ್ಯಾಪ್ತಿಯ ಪ್ರದೇಶಗಳ ಜೊತೆಗೆ ಅಮಾನವಿಯವಾಗಿ ನಡೆದುಕೊಂಡವರು ಪೂಣಾದ ಪೇಶ್ವೇಗಳು ವಿಶೇಷವಾಗಿ ಎರಡನೇ ಪೇಶ್ವೆ ಬಾಜಿರಾಯನ ಆಡಳಿತದಲ್ಲಿ ಮುಂಬೈ ಪ್ರಾಂತಕ್ಕೂಳ್ಳಪಟ್ಟ ಎಲ್ಲ ಕನ್ನಡಿಗರ ಸಂಸ್ಥಾನಗಳನ್ನು ಆರ್ಥಿಕ ವಾಗಿ ಅದಕ್ಕಿಂತ ಹೆಚ್ಚಾಗಿ ಸಾಮಾಜಿಕವಾಗಿ ಶೋಷಣೆ ಮಾಡಿದ ವಿಕೃತ ಮನಸಿನ ರಾಜ.

ಇತನ ಅವದಿಯಲ್ಲಿ ಬರಗಾಲ ಬಿದ್ದಾಗ ಜನಸಾಮಾನ್ಯರು ಆಹಾರ ಧಾನ್ಯ ಕೇಳಲು ಹೋದರೆ “ಉಂಡಿ ಮತ್ತು ಲಾಡು”ತಿಂದು ಬದುಕಲು ಹೇಳಿದ್ದ,ಇದು ಬಡವರ ಹಸಿವನ್ನು ಅಣಕಿಸುವ ಮಾತಲ್ಲದೇ ಮತ್ತೇನು?

1779 ರಲ್ಲಿ ಕಿತ್ತೂರಿನ ದೊರೆ ವೀರಭದ್ರಸರ್ಜ ದೇಸಾಯಿ ಅಂದರೆ ಮಲ್ಲಸರ್ಜ ದೇಸಾಯಿ ಅಪ್ಪನನ್ನು ಅಕ್ರಮ ಮೀರಜ್ನಲ್ಲಿ ಅಕ್ರಮ ಬಂಧನದಲ್ಲಿ ಇರಿಸಿ ಪೂನಾದ ಪೇಶ್ವೆ ಹತ್ಯೆ ಮಾಡಿದ.

ಇದಾದ ನಂತರದಲ್ಲಿ ಮಲ್ಲಸರ್ಜ ದೇಸಾಯಿ ಅಂದರೆ ವೀರಭದ್ರ ದೇಸಾಯಿಯ ಮಗನನ್ನು ಸಹಿತ 1812 ರಿಂದ 1816 ರವರೆಗೆ ಪುಣಾದ ಮುದೋಳಕರವಾಡಾದಲ್ಲಿ ಅಕ್ರಮ ಬಂಧನದಲ್ಲಿರಿಸಿ ಮಲ್ಲಸರ್ಜ ದೇಸಾಯಿ(ರಾಣಿ ಚನ್ನಮ್ಮ ಮತ್ತು ರಾಣಿ ರುದ್ರಮ್ಮಳ ಪತಿ )ಸರಿಯಾಗಿ ಊಟ ವಸತಿಯನ್ನು ಒದಗಿಸಲಾಗದೇ ಹಿಂಸೆ ನೀಡಿ ಮಲ್ಲಸರ್ಜ ದೇಸಾಯಿ ಸಾವಿಗೆ ಕಾರಣನೇ ಏರಡನೇಯಬಾಜಿರಾಯ.

ಮಲ್ಲಸರ್ಜ ದೇಸಾಯಿ ಸಮಾಧಿ ಚಿತ್ರ

ಕಿತ್ತೂರು ಸಂಸ್ಥಾನದ ರಾಜರ ವಿಷಯದಲ್ಲಿ ಆ ರೀತಿಯಾಗಿ ಪೇಶ್ವೇಗಳು ನಡೆದುಕೊಳ್ಳಲು ಕಾರಣ ಕಿತ್ತೂರು ಸಂಸ್ಥಾನ ಕನ್ನಡಿಗರಿಗೆ ಸೇರಿರುವಂತದ್ದು, ಅದರ ಜೊತೆಗೆ ಕಿತ್ತೂರು ಸಂಸ್ಥಾನ ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಬಹಳಷ್ಟು ಪ್ರವರ್ಧಮಾನಕ್ಕೆ ಬರುವಂತಹ ಕಾಲಘಟ್ಟವಾಗಿತ್ತು.

ಈ ಕಾಲಗಟ್ಟ ಅಂದರೆ 1765-1816 ರವರೆಗಿನ ಕಾಲ ಅದಾಗಿತ್ತು. ಹಾಗಾಗಿ ಕಿತ್ತೂರು ಸಂಸ್ಥಾನ ನಮಗೆ ಪ್ರತಿಸ್ಪರ್ಧಿ ಯಾಗಬಹುದು ಏಂಬ ಆತಂಕ ಪೇಶ್ವೆ ಗಳಿಗಿತ್ತು.

ಕಿತ್ತೂರು ಸಂಸ್ಥಾನ ವಶಪಡಿಸಿಕೊಳ್ಳಲು ಸಾದ್ಯವಾಗದೇ ಇರುವಾಗ ಏರಡನೇಯ ಬಾಜಿರಾಯ ಕಿತ್ತೂರು ಸಂಸ್ಥಾನವನ್ನು ವಶಪಡಿಸಿಕೊಳ್ಳಲು ಅಂದಿನ ಬ್ರಿಟಿಷ್ ಅಧಿಕಾರಿ ವೆಲ್ಲಸ್ಲಿ ಗೆ 1804 ರಲ್ಲಿ ಮನವಿ ಮಾಡಿರುವ ದಾಖಲೆಗಳು ಇವತ್ತಿಗೂ ಮಾತನಾಡುತ್ತವೆ.

ಕಿತ್ತೂರಿನ ಎರಡನೇ ಕದನದಲ್ಲಿ ಕಿತ್ತೂರನ್ನು ವಶಪಡಿಸಿಕೊಳ್ಳಲು ಪೂನಾದ ಪೇಶ್ವೆಗಳು ಸಂಬಂಧಿಕ ಸಾಮಂತ ರಾಜರು ಬ್ರಿಟಿಷರ ಜೊತೆಗೆ ಕೈ ಜೋಡಿಸಿದ್ದರು, ಹಾಗಾಗಿ ಇ ಯುದ್ದದ ನೋವನ್ನು ಮರೆಯಲು ಇದೊಂದು ಸ್ವಾಗತಾರ್ಹ ರಾಜಕೀಯ ನಿರ್ಧಾರ.

1818ರಲ್ಲಿ ಪೂನಾದ ಪೇಶ್ವೆ ಏರಡನೇಯ ಬಾಜಿರಾಯನ ಪರವಾಗಿ ಕಾರ್ಯನಿರ್ವಹಿಸುವ ಅಪೇಕ್ಷೆಯನ್ನು ಹೊಂದಿಕೊಂಡು ಮಹರ ಸಮುದಾಯದ ಸಿದ್ದನಾಕನಿಗೆ ಶೂದ್ರ ಎಂಬ ಕಾರಣಕ್ಕಾಗಿ ಕೀಳಾಗಿ ಕಂಡು ಅವಮಾನಿಸಿದ ಎರಡನೇ ಪೇಶ್ವೆಬಾಜಿರಾಯನಿಗೆ ಬುದ್ಧಿ ಕಲಿಸಲು ಭೀಮಾ ಕೋರೆಗಾಂವ್ ಕದನದಲ್ಲಿ ಕೇವಲ ಐದುನೂರರಷ್ಟಿರುವ ಮಹರ್ ಸಮುದಾಯದ ಸೈನಿಕರು ಇಪ್ಪತ್ತೈದು ಸಾವಿರಕ್ಕೂ ಹೆಚ್ಚಿರುವ ಎರಡನೇ ಪೇಶ್ವೆ ಬಾಜಿರಾಯನ ಸೈನ್ಯವನ್ನು ಹೊಡೆದುರುಳಿಸಿರುವುದು ದೇಶದಲ್ಲಿ ಮೊದಲ ಬಾರಿಗೆ ಶೂದ್ರವರ್ಗದ ಸ್ವಾಭಿಮಾನ ಶಕ್ತಿ ಜಾಗೃತವಾಗಲು ವೇದಿಕೆಯನ್ನು ಒದಗಿಸಿಕೊಟ್ಟಿತು.

ಭೀಮಾ ಕೋರೆಗಾಂವ್ ಸ್ಮಾರಕ

ಇದು ನಡೆದಿರುವುದು ಕರ್ನಾಟಕದ ಭೀಮಾ ನದಿಯ ತೀರಕ್ಕೆ ಹತ್ತಿಕೊಂಡ ಪ್ರದೇಶದಲ್ಲಿ ಇದು ಸಹಿತ ಮುಂಬೈ ಕರ್ನಾಟಕದ ವ್ಯಾಪ್ತಿಗೆ ಒಳಪಟ್ಟ ಪ್ರದೇಶದಲ್ಲಿಯೇ,ಹಾಗಾಗಿ ಇ ನೋವನ್ನು ಕಿತ್ತೂರು ಕರ್ನಾಟಕ ಎಂದು ಕರೆಯುವ ಮೂಲಕ ಮರೆಯಬಹುದಾಗಿದೆ.

ಮುಂಬೈ ಕರ್ನಾಟಕದ ಜನಮನ ಭಾಷೆ ಯಾಗಿರುವುದು ಕನ್ನಡ ,ಆದರೆ ಅಂದಿನ ಸಂದರ್ಭದಲ್ಲಿ ಆಡಳಿತವೆಲ್ಲ ಮರಾಠಿ ಆಧಾರಿತ ಮೋಡಿ ಭಾಷೆಯಲ್ಲಿ, ಹೀಗಾಗಿ ಜನಸಾಮಾನ್ಯರು ಆಡಳಿತದಲ್ಲಿ ಭಾಗಿಯಾಗಿದ್ದು ಆಡಳಿತದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಮುಂಬೈ ಕರ್ನಾಟಕದ ಜನರಿಗೆ,ಕನ್ನಡ ವಿದ್ವಾಂಸರಿಗೆ ಸಾಧ್ಯವಾಗಲಿಲ್ಲ. ಹಾಗಾಗಿ ಒತ್ತಾಯಪೂರ್ವಕವಾಗಿ ಮರಾಠಿ ಭಾಷೆಯನ್ನು ಮುಂಬೈ-ಕರ್ನಾಟಕ ವ್ಯಾಪ್ತಿಯ ಕನ್ನಡಿಗರ ಮೇಲೆ ಹೆರಿರುವುದು ಕನ್ನಡದ ಬೆಳವಣಿಗೆಗೆ ಮುಂಬೈ ಆಡಳಿತ ಅಡ್ಡಿಯಾಗಿರುವುದನ್ನು ತೋರುತ್ತದೆ.

ಇದನ್ನು 1865 ಮುಂಬೈ ಕರ್ನಾಟಕ ವ್ಯಾಪ್ತಿಯಲ್ಲಿ ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಬ್ರೀಟಿಷರು ಪರಿವರ್ತಿಸಿವವರೆಗೊ ಕನ್ನಡಿಗರು ಆಡಳಿತದಲ್ಲಿ ಭಾಗಿಯಾಗುವ ಅವಕಾಶವೇ ಇರಲಿಲ್ಲ.

1865ರಲ್ಲಿ ಡ್ಯೆಪುಟ್ಟಿ ಚನ್ನಬಸಪ್ಪನವರು ಮರಾಠಿಯಿಂದ ಕನ್ನಡಕ್ಕೆ ಹೊರಳಿದ ಸಂದರ್ಭದಲ್ಲಿ ಪಠ್ಯಪುಸ್ತಕ ರಚನೆ ಶಿಕ್ಷಕರ ತರಬೇತಿಯಂತಹ ವಿದ್ವತ್ಪೂರ್ಣ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿರುವುದನ್ನು ಇಲ್ಲಿ ಸ್ಮರಿಸಬಹುದು .

ಪೇಶ್ವೇಗಳ ಸಾಮಂತರು ಮತ್ತು ಸಂಬಂಧಿಕರು ಇವತ್ತಿನ ಮುಂಬೈ ಕರ್ನಾಟಕ ವ್ಯಾಪ್ತಿಯ ರಾಮದುರ್ಗದಲ್ಲಿ ಆಡಳಿತವನ್ನು ನಡೆಸುತ್ತಿದ್ದರು ಭಾರತ ಸ್ವತಂತ್ರ ಕಾಯ್ದೆ ಅಡಿ ಒಕ್ಕೂಟ ವ್ಯವಸ್ತೆಯಲ್ಲಿ ವಿಲೀನವಾಗಲು ವಿರೋಧ ವ್ಯಕ್ತಪಡಿಸಿರುವುದನ್ನು ಕಾಣುತ್ತವೆ.

ಹಲಗಲಿ ಬೇಡರ ಲಡಾಯಿ ಚಿತ್ರ

ಅದರ ಜೊತೆಗೆ ಸಂದರ್ಭದಲ್ಲಿ ಇವರ ಆಡಳಿತ ಅದೆಷ್ಟು ಕ್ರೂರವಾಗಿತ್ತು ಎಂದರೆ ಮಹಿಳೆಯೋರ್ವಳು ಮಗುವಿಗೆ ಜನ್ಮ ನೀಡಿದ ಸಂದರ್ಭದಲ್ಲಿ ಅದಕ್ಕೆ ಹೆಚ್ಚಿನ ತೆರಿಗೆಯನ್ನು ಕಟ್ಟಬೇಕಾಗಿತ್ತು, ಮನೆಯಲ್ಲಿರುವ ಎಮ್ಮೆಯೊಂದು ಕರುವಿಗೆ ಜನ್ಮ ನೀಡಿದ ಸಂದರ್ಭದಲ್ಲಿ ಅದಕ್ಕೆ ಹೆಚ್ಚಿನ ತೆರಿಗೆಯನ್ನು ಕಟ್ಟಬೇಕಾಗುತ್ತಿತ್ತು.

ಶ್ರೀಸಾಮಾನ್ಯರನ್ನು ಈ ರೀತಿಯಾಗಿ ಶೋಷಣೆ ಮಾಡಿರುವ ಘಟನಾವಳಿಗಳು ಮುಂಬೈ-ಕರ್ನಾಟಕ ವ್ಯಾಪ್ತಿ ಉದ್ದಕ್ಕೂ ಸಿಗುತ್ತವೆ.ಮುಂಬೈ-ಕರ್ನಾಟಕ ವ್ಯಾಪ್ತಿಯುದ್ದಕ್ಕೂ ಬ್ರಿಟಿಷರು ಮತ್ತು ಪ್ರಶ್ವೆಗಳಿಂದ ಕನ್ನಡಿಗರ ಎದೆಯ ಮೇಲೆ ಗದಾಪ್ರಹಾರ ಗಾಯದ ಕಾಣಸಿಗುತ್ತವೆ. ಈ ಗಾಯದ ಗುರುತುಗಳನ್ನು ಮರೆಮಾಚಲು ಕಿತ್ತೂರು ಕರ್ನಾಟಕ ಪರಿಹಾರವಾದಿತೇ?

ಈ ಪ್ರದೇಶದಲ್ಲಿ ನಡೆದಿರುವ ಗದಾಪ್ರಹಾರಕ್ಕೆ ಪ್ರತಿಯಾಗಿ ಐತಿಹಾಸಿಕ ಸ್ಮಾರಕಗಳನ್ನು ರಚಿಸುವ ಮೂಲಕ ಅದರಿಂದ ಪ್ರೇರಣೆ ಹೊಂದುವಂತೆ ಮಾಡಿ ಮುಂಬೈ-ಕರ್ನಾಟಕ ವ್ಯಾಪ್ತಿಯ ಜನರು ಉತ್ತಮ ಬದುಕನ್ನು ಕಟ್ಟಿಕೊಂಡ ಸಂದರ್ಭದಲ್ಲಿ ಕಿತ್ತೂರು-ಕರ್ನಾಟಕದ ಹೆಸರು ಸಾರ್ಥಕವಾಗುವುದು ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿರುವ ಮುಖ್ಯಮಂತ್ರಿಗಳಿಗೆ ,ಕಿತ್ತೂರಿನ ಶಾಸಕರಿಗೆ ,ಸರಕಾರದ ಮೇಲೆ ನಿರಂತರ ಒತ್ತಡ ಹೇರಿದ ಸರ್ವ ಮಠಾದೀಶರು ,ನಾಡಿನ ಜನತೆಗೆ ಮತ್ತು ರಾಜ್ಯ ಸರಕಾರಕ್ಕೆ ಅನಂತ ಅಭಿನಂದನೆಗಳನ್ನು ಸಲ್ಲಿಸುತ್ತೇನೆ..

 

ಲೇಖನ:ಮಹೇಶ. ಚನ್ನಂಗಿ. 
ಮುಖ್ಯ ಶಿಕ್ಷಕರು.
ಚನ್ನಮ್ಮನ ಕಿತ್ತೂರ.
M-9740313820

 

 

ಜಿಲ್ಲೆ

ರಾಜ್ಯ

error: Content is protected !!