Saturday, June 15, 2024

ಸ್ವತಂತ್ರ ಭಾರತದ 75 ವರ್ಷಗಳ ಇತಿಹಾಸದಲ್ಲೇ ಇದೊಂದು ಬಹುದೊಡ್ಡ ಹಗರಣ. ಎಸ್‌ಐಟಿ ತನಿಖೆಗೆ ಕಾಂಗ್ರೆಸ್‌ ಆಗ್ರಹ

ನವದೆಹಲಿ (ನ.14):  ಸ್ವತಂತ್ರ ಭಾರತದ 75 ವರ್ಷಗಳ ಇತಿಹಾಸದಲ್ಲೇ ಬಿಟ್‌ಕಾಯಿನ್‌ ಹಗರಣ ಬಹುದೊಡ್ಡ ಹಗರಣವಾಗಿದ್ದು ಇದನ್ನು ಬಿಜೆಪಿ ಸರ್ಕಾರ ಮುಚ್ಚಿಹಾಕಲು ಯತ್ನಿಸುತ್ತಿದೆ.ಈ ಕುರಿತು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ಉಸ್ತುವಾರಿಯಲ್ಲಿ ಎಸ್‌ಐಟಿ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಉಸ್ತುವಾರಿ ರಣದೀಪ್‌ ಸುರ್ಜೇವಾಲಾ ಆಗ್ರಹಿಸಿದ್ದಾರೆ.

ನವದೆಹಲಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕರ್ನಾಟಕದಲ್ಲಿ ಭಾರತದ ಅತಿದೊಡ್ಡ ಬಿಟ್‌ಕಾಯಿನ್‌ ಹಗರಣ ಬೆಳಕಿಗೆ ಬಂದಿದೆ. ಇದೊಂದು ಅಂತಾರಾಷ್ಟ್ರೀಯ ಹಗರಣ. ಈ ಹಗರಣದ ಕುರಿತು ನ್ಯಾಯಯುತ ತನಿಖೆ ನಡೆಸುವ ಬದಲು ರಾಜ್ಯ ಬಿಜೆಪಿ ಸರ್ಕಾರವು ಅದನ್ನು ಮುಚ್ಚಿಹಾಕುವ ಕಾರ್ಯಾಚರಣೆಗಿಳಿದಿರುವಂತೆ ಕಾಣುತ್ತಿದೆ ಎಂದು ಆರೋಪಿಸಿ ರಾಜ್ಯ ಹಾಗೂ ಕೇಂದ್ರ ಬಿಜೆಪಿ ವಿರುದ್ಧ ತೀವ್ರ ಹರಿಹಾಯ್ದರು.

ಇದು ಕೇವಲ ಅಕ್ರಮ ಹಣ ವರ್ಗಾವಣೆಯ ಪ್ರಕರಣವಷ್ಟೇ ಅಲ್ಲ, ಅದರ ಜತೆಗೆ ಅಂತಾರಾಷ್ಟ್ರೀಯ ಅಪರಾಧವೂ ಹೌದು. ಈ ಕುರಿತು ಇ.ಡಿ(ಜಾರಿ ನಿರ್ದೇಶನಾಲಯ) ಹಾಗೂ ಕರ್ನಾಟಕ ಪೊಲೀಸರು ನ್ಯಾಯಸಮ್ಮತ ತನಿಖೆ ನಡೆಸಲಿದ್ದಾರೆಂಬ ವಿಶ್ವಾಸ ಇಲ್ಲ. ಹೀಗಾಗಿ ಈ ಹಗರಣದ ಹಿಂದಿನ ಸತ್ಯ ಬಯಲಿಗೆಳೆಯಲು ಎಸ್‌ಐಟಿ(ವಿಶೇಷ ತನಿಖಾ ತಂಡ) ತನಿಖೆ ನಡೆಸಬೇಕು ಎಂದು ಆಗ್ರಹಿಸುತ್ತಿದ್ದೇವೆ ಎಂದ ಅವರು, ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ಉಸ್ತುವಾರಿಯಲ್ಲಿ ರಚನೆಯಾಗುವ ಎಸ್‌ಐಟಿಯಲ್ಲಿ ಇಂಟರ್‌ಪೋಲ್‌, ರಿಸವ್‌ರ್‍ ಬ್ಯಾಂಕ್‌ ಅಧಿಕಾರಿಗಳು ಹಾಗೂ ಇತರೆ ತಜ್ಞರು ಇರಬೇಕು ಎಂದು ಹೇಳಿದರು.

ಅಮೇರಿಕಾ ಪ್ರವಾಸದಲ್ಲಿಯ ಪ್ರಧಾನಿ ಚಿತ್ರ

ಮೋದಿಗೂ ಮುಜುಗರ:  ಇದೇ ವೇಳೆ ಪ್ರಕರಣದಲ್ಲಿ ಪ್ರಧಾನಿ ಮೋದಿ ಅವರ ಮೌನವನ್ನೂ ಪ್ರಶ್ನಿಸಿದ ಸುರ್ಜೇವಾಲಾ ಅವರು, ಇತ್ತೀಚೆಗೆ ಪ್ರಧಾನಿ ಮೋದಿ ಅವರ ಅಮೆರಿಕ ಭೇಟಿ ವೇಳೆ ಅವರಿಗೆ ಅಲ್ಲಿನ ತನಿಖಾ ಸಂಸ್ಥೆಯಾದ ಎಫ್‌ಬಿಐನಿಂದ ಹಗರಣದ ಕುರಿತು ಮಾಹಿತಿ ನೀಡಲಾಗಿತ್ತು. ಈ ವೇಳೆ ಮೋದಿ ಅವರಿಗೂ ಮುಜುಗರ ಆಗಿತ್ತು. ಇದೊಂದು ಬಹುರಾಷ್ಟ್ರೀಯ ಹಗರಣವಾಗಿದ್ದು, ಈ ವಿಚಾರದಲ್ಲಿ ಸತ್ಯ ಹೊರಬರಲೇಬೇಕು ಎಂದರು.

ಈ ಹಗರಣದಲ್ಲಿ ಕಾಂಗ್ರೆಸ್‌ ನಾಯಕರು ಭಾಗಿಯಾಗಿದ್ದರೆ ಅವರನ್ನು ನೇಣಿಗೆ ಹಾಕಬಹುದು. ಯಾರಿದ್ದರೂ ಬಿಡಬಾರದು. ಪ್ರಕರಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಅವರ ರಾಜಕೀಯ ಪ್ರತಿಷ್ಠೆ ಕುರಿತು ಪ್ರಶ್ನೆಗಳು ಎದ್ದಿವೆ. ಒಂದು ವೇಳೆ ಅವರು ಪ್ರಾಮಾಣಿಕರಾಗಿದ್ದರೆ ಖುದ್ದು ಎಸ್‌ಐಟಿ ತನಿಖೆಗೆ ಆಗ್ರಹಿಸಿ ಕೇಂದ್ರ ಸರ್ಕಾರಕ್ಕೆ ಪತ್ರಬರೆಯಬೇಕು ಎಂದು ಸುರ್ಜೇವಾಲ ಆಗ್ರಹಿಸಿದರು.

ಸ್ವತಃ ಪ್ರಕರಣದ ಆರೋಪಿ ಶ್ರೀಕೃಷ್ಣ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿ ವಿದೇಶಗಳ ಹಣಕಾಸು ಸಂಸ್ಥೆಗಳು ಸೇರಿ ಹಲವು ಭಾರತದ ಪೋರ್ಟಲ… ಹ್ಯಾಕ್‌ ಮಾಡಿರುವುದಾಗಿ ಹೇಳಿಕೆ ದಾಖಲಿಸಿದ್ದಾನೆ. ಜೊತೆಗೆ ಎಷ್ಟೆಷ್ಟು ಬಿಟ್‌ಕಾಯಿನ್‌ ಕಳವು ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದಾನೆ. ಹೀಗಿದ್ದರೂ ಕರ್ನಾಟಕದ ಬಿಜೆಪಿ ಸರ್ಕಾರ ಯಾರಿಗೂ ಹೇಳದೇ ಮುಚ್ಚಿಟ್ಟಿದೆ ಎಂದು ಆರೋಪಿಸಿದರು.

ಇದು .5,240 ಕೋಟಿ ಹಗರಣ, ಇದರ ಹಿಂದೆ ಯಾರದ್ದೋ ಕೈವಾಡ ಇದೆ. ಇ.ಡಿ. ಅವರು ಕೇಳಿದ ನಂತರ ಒಂದು ತಿಂಗಳ ಬಳಿಕ ಎಫ್‌ಐಆರ್‌ ದಾಖಲಾಗಿದೆ. ಐದು ತಿಂಗಳಾದರೂ ಪ್ರಕರಣವನ್ನು ಮುಚ್ಚಿಡಲಾಗಿದೆ ಎಂದು ಇದೇ ವೇಳೆ ಸುರ್ಜೇವಾಲ ಆರೋಪಿಸಿದರು.

ಜಿಲ್ಲೆ

ರಾಜ್ಯ

error: Content is protected !!