Friday, April 19, 2024

ದೇಶಕ್ಕೆ ನಿಜವಾದ ಸ್ವಾತಂತ್ರ್ಯ ದೊರಕಿದ್ದು 2014ರಲ್ಲಿ. 1947ರಲ್ಲಿ ದೊರಕಿದ್ದು ಭಿಕ್ಷೆ : ನಟಿ ಕಂಗನಾ ವಿವಾದ

ನವದೆಹಲಿ (ನ.12):  1947ರಲ್ಲಿ ನಮಗೆ ಸಿಕ್ಕಿದ್ದು ಸ್ವಾತಂತ್ರ್ಯವಲ್ಲ ಭಿಕ್ಷೆ .ಭಾರತಕ್ಕೆ ನೈಜ ಸ್ವಾತಂತ್ರ್ಯ ದೊರಕಿದ್ದು 2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ. ಎಂದು ಪದ್ಮಶ್ರೀ ಪುರಸ್ಕೃತ ಬಾಲಿವುಡ್‌ ನಟಿ ಕಂಗನಾ ರಾಣಾವತ್‌ ಹೇಳಿದ್ದಾರೆ. ಇದು ತೀವ್ರ ವಿವಾದಕ್ಕೆ ಗುರಿಯಾಗಿದೆ.

ಕಂಗನಾ ಹೇಳಿಕೆಗೆ ಬಿಜೆಪಿ ಸಂಸದ ವರುಣ್‌ ಗಾಂಧಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‌  ಸೇರಿದಂತೆ ಹಲವು ಪಕ್ಷಗಳು, ಸಿನಿಮಾ ರಂಗದ ಪ್ರಮುಖರು, ಕ್ರೀಡಾ ಕ್ಷೇತ್ರದ ತಾರೆಯರು ಹಾಗೂ ಶ್ರೀಸಾಮಾನ್ಯರು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಹೇಳಿಕೆ ವಿರುದ್ಧ ದೇಶ ದ್ರೋಹದ ಕೇಸು ದಾಖಲಿಸಬೇಕು ಎಂದು ಹಲವರು ಒತ್ತಾಯಿಸಿದ್ದಾರೆ. ಇನ್ನು ಹಲವು ಕಡೆ ಕಂಗನಾ ವಿರುದ್ಧ ಪ್ರಕರಣ ಕೂಡಾ ದಾಖಲಿಸಲಾಗಿದೆ.

ಸುದ್ದಿ ವಾಹಿನಿಯೊಂದು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬುಧವಾರ ಸಂಜೆ ಮಾತನಾಡಿದ ಕಂಗನಾ, ಈ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅವರ ಈ ಮಾತುಗಳನ್ನು ಒಳಗೊಂಡ 24 ಸೆಕೆಂಡುಗಳ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹರಡಿದೆ. ಕಂಗನಾ ಈ ಮಾತು ಆಡುವಾಗ ಸಭಾಂಗಣದಲ್ಲಿದ್ದ ಹಲವರು ಚಪ್ಪಾಳೆ ತಟ್ಟಿ ಹುರಿದುಂಬಿಸಿದ್ದಾರೆ.

[videopress zjvfONIL]

 

ಸಾರ್ವತ್ರಿಕ ಆಕ್ರೋಶ:

ಕಂಗನಾ ಹೇಳಿಕೆಯ ವಿಡಿಯೋವನ್ನು ಟ್ವೀಟರ್‌ನಲ್ಲಿ ಹಂಚಿಕೊಂಡಿರುವ ಬಿಜೆಪಿ ಸಂಸದ ವರುಣ್‌ ಗಾಂಧಿ, ‘ಇದೊಂದು ದೇಶದ್ರೋಹದ ಕೆಲಸ. ನಾವಿಂದು ಮುಕ್ತ ದೇಶವಾಗಿ ತಲೆ ಎತ್ತಿ ನಿಲ್ಲಲು ರಕ್ತ ಚೆಲ್ಲಿದವರಿಗೆ ಮಾಡಿದ ವಂಚನೆ’ ಎಂದು ಹೇಳಿದ್ದಾರೆ. ಕಂಗನಾ ಅವರ ಹೇಳಿಕೆ ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿದ ಅವಮಾನ ಎಂದು ಕಾಂಗ್ರೆಸ್‌, ಶಿವಸೇನೆ  ನಾಯಕರು ಟೀಕಿಸಿದ್ದಾರೆ. ಈ ನಡುವೆ ಕಂಗನಾ ಹೇಳಿಕೆ ಹಾಗೂ ಅವರ ಭಾಷಣಕ್ಕೆ ಚಪ್ಪಾಳೆ ತಟ್ಟಿದ ವ್ಯಕ್ತಿಗಳ ವಿರುದ್ಧ ಸೆಲೆಬ್ರಿಟಿಗಳು ಕೆಂಡಕಾರಿದ್ದಾರೆ.

ಕಂಗನಾ ಹೇಳಿದ್ದೇನು?

ಗಾಂಧಿ ಅವರ ಭಿಕ್ಷಾ ಪಾತ್ರೆಯಲ್ಲಿ ಸ್ವಾತಂತ್ರ್ಯವನ್ನು ನಮಗೆ ನೀಡಲಾಯಿತು. ಭಿಕ್ಷೆಯಾಗಿ ಪಡೆದರೆ ಅದು ಸ್ವಾತಂತ್ರ್ಯವಾಗುತ್ತದೆಯೇ? ದೇಶಕ್ಕೆ ನಿಜವಾದ ಸ್ವಾತಂತ್ರ್ಯ ದೊರಕಿದ್ದು 2014ರಲ್ಲಿ ಮೋದಿ ಪ್ರಧಾನಿಯಾದ  ಬಳಿಕ.

ತಮ್ಮ ಹೇಳಿಕೆ ವಿವಾದಕ್ಕೀಡಾದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಸ್ಪಷ್ಟನೆ ನೀಡಿರುವ ಕಂಗನಾ,1857ರ ದಂಗೆ ಮೊದಲ ಸ್ವಾತಂತ್ರ್ಯ ಹೋರಾಟ. ಆದರೆ ಅದನ್ನು ಹತ್ತಿಕ್ಕಲಾಯಿತು. ಅದಾದ ನಂತರ ಬ್ರಿಟಿಷರ ದೌರ್ಜನ್ಯ ಹಾಗೂ ಕ್ರೂರತೆ ಹೆಚ್ಚಾಯಿತು. ಅದಾದ ಒಂದು ಶತಮಾನದ ಬಳಿಕ ಗಾಂಧಿ ಅವರ ಭಿಕ್ಷಾ ಪಾತ್ರೆಯಲ್ಲಿ ಸ್ವಾತಂತ್ರ್ಯವನ್ನು ನಮಗೆ ನೀಡಲಾಯಿತು. ಸ್ವಾತಂತ್ರ್ಯವನ್ನು ನಾವು ಭಿಕ್ಷೆಯಾಗಿ ಪಡೆದರೆ ಅದು ಸ್ವಾತಂತ್ರ್ಯವಾಗುತ್ತದೆಯೇ? ಬ್ರಿಟಿಷರು ಕಾಂಗ್ರೆಸ್‌ ಎಂಬ ಹೆಸರನ್ನು ಬಿಟ್ಟು ಹೋದರು. ಅವರು ಬ್ರಿಟಿಷರ ಮುಂದುವರಿದ ಭಾಗ ಎಂದು ವಾಗ್ದಾಳಿ ನಡೆಸಿದ್ದಾರೆ.

ಜಿಲ್ಲೆ

ರಾಜ್ಯ

error: Content is protected !!