Sunday, September 8, 2024

ಡ್ಯಾನ್ಸ್ ಬಾರ್ ಗೆ ಅನುಮತಿ, ಸಚಿವ ಆರಗ ಜ್ಞಾನೇಂದ್ರ ಹೆಸರು ಬಳಸುತಿದ್ದ ವಂಚಕ ಸಿಸಿಬಿ ಬಲೆಗೆ

ಬೆಂಗಳೂರು (ನ. 05) ಕರ್ನಾಟಕ ಗೃಹ ಸಚಿವ‌ ಆರಗ ಜ್ಞಾನೇಂದ್ರ ಹೆಸರಲ್ಲಿ ವಂಚನೆ ಮಾಡುತಿದ್ದ ಆರೋಪದ ಮೇಲೆ ಶಿವಮೊಗ್ಗ ಮೂಲದ  ಭವಾನಿ ರಾವ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಶಿವಮೊಗ್ಗದಲ್ಲಿ ಬಿಜೆಪಿ ನಾಯಕರ ಹಿಂದೆ ಈ ವ್ಯಕ್ತಿ ತಿರುಗಾಡಿಕೊಂಡಿದ್ದ ಎನ್ನಲಾಗಿದೆ. ಈತನ ವಂಚನೆ ಬಗ್ಗೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.  ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ವಿಸ್ತಾರಕ ಆಗಿಯೂ ಕೆಲಸ ಮಾಡಿದ್ದ ಎನ್ನಲಾಗಿದೆ. ಸದ್ಯ ಕೆಪಿಟಿಸಿಎಲ್ ನಿರ್ದೇಶಕರಾಗಿ ಭವಾನಿ ರಾವ್ ಮೋರೆ ಕೆಲಸ ಮಾಡುತ್ತಿದ್ದ.

ಡ್ಯಾನ್ಸ್ ಬಾರ್ ಗಳಿಗೆ ಲೈಸೆನ್ಸ್ ಕೊಡಿಸುವುದಾಗಿ ಹೇಳಿ ವಂಚಿಸಿದ್ದಾನೆ ಎನ್ನುವ ಆರೋಪ ಬಂದಿದೆ.  ಸುರೇಶ್ ಎಂಬುವವರಿಂದ 25 ಲಕ್ಷ ಹಣ ಪಡೆದ ಆರೋಪವಿದೆ. ಸುರೇಶ್ ಎಂಬುವವರ ದೂರು ಆಧರಿಸಿ ಶಿವಮೊಗ್ಗದಲ್ಲಿ ಸಿಸಿಬಿ ‌ಅಧಿಕಾರಿಗಳು ಈತನನ್ನು ಬಂಧಿಸಿದ್ದಾರೆ.

ಗೃಹ ಸಚಿವರ ಮೂಲಕ  ಡ್ಯಾನ್ಸ್ ಬಾರ್ ಓಪನ್  ಮಾಡಿಸುವ ಭರವಸೆ ನೀಡಿದ್ದ ಈತ ಡ್ಯಾನ್ಸ್ ಬಾರ್ ಅಸೋಸಿಯೇಷನ್ ಕಡೆಯಿಂದ. 1.25 ಕೋಟಿ ಪಡೆದಿದ್ದ  ಎಂಬ ಮಾಹಿತಿಯೂ ಇದೆ. ನಂತರ 1 ಕೋಟಿ ರೂ, ವಾಪಾಸ್ ಮಾಡಿದ್ದ.  ಡ್ಯಾನ್ಸ್ ಬಾರ್ ಅಸೋಸಿಯೇಷನ್ ಕಾರ್ಯದರ್ಶಿ ಸುರೇಶ್ ದೂರು ನೀಡಿದ್ದರು.

ಈ ಮಾಹಿತಿ ಗೊತ್ತಾಗುತ್ತಿದ್ದಂತೆ ಗೃಹ ಸಚಿವರ ಆರಗ ಜ್ಞಾನೇಂದ್ರ ಕಾನೂನು ಕ್ರಮಕ್ಕೆ ಸೂಚನೆ‌ ನೀಡಿದ್ದಾರೆ. ಈ ಹಿಂದೆ ಸಚಿವ ಶ್ರೀರಾಮುಲು ಹೆಸರು ಬಳಸಿಕೊಂಡು ವಂಚನೆ ಮಾಡಿದ್ದವರನ್ನು ಬಂಧಿಸಲಾಗಿತ್ತು. ಸಚಿವರ ಜತೆ ಇರುವ ಪೋಟೋಗಳನ್ನು ತೋರಿಸಿ, ಅವರ ಪಿಎ ಎಂದು ನಂಬಿಸಿ, ನಮಗೆ ಸಚಿವರ ಜತೆ ನಿಕಟ ಸಂಪರ್ಕ ಇದೆ ಎಂದು ವಂಚನೆ ಮಾಡುತ್ತಿರುವ ಪ್ರಕರಣಗಳು ಇದು ಹೊಸದೇನಲ್ಲ. ಈ ಪ್ರಕರಣದಲ್ಲಿ ಗೃಹಸಚಿವರ ಮಗನ ಹೆಸರನ್ನು ವಂಚಕ ಬಳಕೆ ಮಾಡಿಕೊಂಡಿದ್ದ ಎನ್ನಲಾಗಿದೆ.

ಬೆಂಗಳೂರನ್ನು ಟಾರ್ಗೆಟ್ ಮಾಡಿಕೊಂಡು ತನ್ನ ಜಾಲ ಬೀಸಿದ್ದ. ಡ್ಯಾನ್ಸ್ ಬಾರ್ ಗೆ ಅನುಮತಿ ಕೊಡಿಸುವುದಾಗಿ ಇನ್ನಷ್ಟು ಜನರಿಂದ ಹಣ ಪಡೆದುಕೊಂಡಿದ್ದಾನೆ ಎನ್ನಲಾಗಿದ್ದು ಸಿಸಿಬಿ ತನಿಖೆಯ ನಂತರ ಸತ್ಯಾಂಶಗಳು ಬಯಲಾಗಲಿವೆ

 

ಜಿಲ್ಲೆ

ರಾಜ್ಯ

error: Content is protected !!