Saturday, July 27, 2024

ಅಕ್ರಮ ಹಣ ವರ್ಗಾವಣೆ, ಹಫ್ತಾ ವಸೂಲಿ ಪ್ರಕರಣದಲ್ಲಿ : ಮಾಜಿ ಗೃಹ ಸಚಿವ ಅನಿಲ್‌ ದೇಶಮುಖ್‌ ಬಂಧನ.

ಮುಂಬೈ(ನ.03): ಅಕ್ರಮ ಹಣ ವರ್ಗಾವಣೆ ಹಾಗೂ ಹಫ್ತಾ ವಸೂಲಿ ಪ್ರಕರಣದಲ್ಲಿ ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್‌ ದೇಶಮುಖ್‌  ಅವರನ್ನು ಸೋಮವಾರ ತಡರಾತ್ರಿ ಜಾರಿ ನಿರ್ದೇಶನಾಲಯ ಬಂಧಿಸಿದೆ. ಬಳಿಕ ಅವರನ್ನು ನ್ಯಾಯಾಲಯವು ನವೆಂಬರ್‌ 6ರವರೆಗೆ ಇ.ಡಿ. ಕಸ್ಟಡಿಗೆ ಒಪ್ಪಿಸಿದೆ.

ರಾಜ್ಯ ಪೊಲೀಸ್ ಇಲಾಖೆಯ ಮೂಲಕ ಹಣ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸುಮಾರು 12 ಗಂಟೆಗಳ ಕಾಲ ವಿಚಾರಣೆಯ ನಂತರ ಸೋಮವಾರ ತಡರಾತ್ರಿ ದೇಶಮುಖ ಅವರನ್ನು ಇಡಿ ಬಂಧಿಸಿದ್ದು, ಇಂದು ವಿಶೇಷ ರಜಾ ನ್ಯಾಯಾಲಯಕ್ಕೆ ಹಾಜರುಪಡಿಸಿತು ಮತ್ತು ಹೆಚ್ಚಿನ ವಿಚಾರಣೆಗಾಗಿ ಆರೋಪಿಯನ್ನು 14 ದಿನ ತನ್ನ ವಶಕ್ಕೆ ನೀಡುವಂತೆ ಮನವಿ ಮಾಡಿತು.

ಪ್ರಕರಣ ಹಿನ್ನೆಲೆ:-ಅನಿಲ್‌ ದೇಶಮುಖ್‌  ಗೃಹ ಸಚಿವರಾಗಿದ್ದಾಗ ಮುಂಬೈನ ಹೋಟೆಲ್‌, ಬಾರ್‌ ಮತ್ತು ರೆಸ್ಟೋರೆಂಟ್‌ಗಳಿಂದ ಹಣ ಸುಲಿಗೆ ಮಾಡಿ ಪ್ರತಿ ತಿಂಗಳು ತನಗೆ ಕೊಡುವಂತೆ ಹೇಳಿದ್ದರು ಎಂದು ಮುಂಬೈ ಮಾಜಿ ಪೊಲೀಸ್‌ ಕಮೀಷನರ್‌ ಪರಂಬೀರ್‌ ಸಿಂಗ್‌ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ 100 ಕೋಟಿ ‘ಹಫ್ತಾ’ ಆರೋಪದಡಿ ಅನಿಲ್‌ ದೇಶಮುಖ್‌ ವಿರುದ್ಧ ಸಿಬಿಐ ಕೇಸು ದಾಖಲಿಸಿತ್ತು. ಇದನ್ನು ಆಧರಿಸಿ ಇ.ಡಿ. ಕೂಡ ಕೇಸು ದಾಖಲಿಸಿಕೊಂಡಿತ್ತು.

ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ 5 ಬಾರಿ ಸಮನ್ಸ್‌ ನೀಡಿದ್ದರೂ ಅನಿಲ್‌ ದೇಶಮುಖ್‌ ಗೈರಾಗಿದ್ದರು. ಅಲ್ಲದೇ ತನ್ನ ವಿರುದ್ಧ ಜಾರಿ ಮಾಡಲಾದ ಸಮನ್ಸ್‌ ರದ್ದುಗೊಳಿಸುವಂತೆ ಬಾಂಬೆ ಹೈಕೋರ್ಟ್‌ ಮೊರೆ ಹೋಗಿದ್ದರು. ಆದರೆ ಹೈಕೋರ್ಟ್‌ ಅನಿಲ್‌ ದೇಶಮುಖ್‌ ಅರ್ಜಿಯನ್ನು ವಜಾಗೊಳಿಸಿತ್ತು. ಅಂತಿಮವಾಗಿ ಸೋಮವಾರ ವಿಚಾರಣೆಗೆ ಹಾಜರಾದ ಮಾಜಿ ಗೃಹ ಸಚಿವರನ್ನು ಬಂಧಿಸಿದೆ.

ಮಾಜಿ ಪೊಲೀಸ್ ಆಯುಕ್ತ ಪರಂಬಿರ್ ಸಿಂಗ್ ಆರೋಪ

ಅನಿಲ್ ದೇಶ್‌ಮುಖ್ ಅವರು 100 ಕೋಟಿ ರೂಪಾಯಿ ವಸೂಲಿ ಮಾಡಿದ್ದಾರೆ ಎಂದು, ಮುಂಬೈನ ಮಾಜಿ ಪೊಲೀಸ್ ಕಮಿಷನರ್ ಪರಮ್ ಬೀರ್ ಸಿಂಗ್ ಆರೋಪಿಸಿದ್ದರು. 100 ಕೋಟಿ ರೂಪಾಯಿ ವಸೂಲಿ ಮಾಡಿರುವ ಆರೋಪ ಮಾಡಿ, ಪರಂಬೀರ್ ಸಿಂಗ್ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಪತ್ರ ಬರೆದಿದ್ದ ಹಿನ್ನೆಲೆಯಲ್ಲಿ ಈ ಸಂಪೂರ್ಣ ವಿಷಯವು ಮುನ್ನೆಲೆಗೆ ಬಂದಿತ್ತು. ನಂತರ ಈ ಆರೋಪದ ಹಿನ್ನೆಲೆಯಲ್ಲಿ ಅನಿಲ್ ದೇಶಮುಖ್ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

5 ಸಮನ್ಸ್ ಗೆ ಉತ್ತರಿಸದ ಅನಿಲ್ ದೇಶಮುಖ್  :

ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ನಾಯಕ ಮತ್ತು ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರು ತಮ್ಮ ವಕೀಲರೊಂದಿಗೆ ದಕ್ಷಿಣ ಮುಂಬೈನ ಬಲ್ಲಾರ್ಡ್ ಎಸ್ಟೇಟ್ ಪ್ರದೇಶದಲ್ಲಿರುವ ಇಡಿ ಕಚೇರಿಗೆ ನಿನ್ನೆ ಬೆಳಿಗ್ಗೆ 11.40 ರ ಸುಮಾರಿಗೆ ಹಾಜರಾಗಿದ್ದರು. ಇದಕ್ಕೂ ಮೊದಲು, ಐದು ಬಾರಿ ಸಮನ್ಸ್ ಜಾರಿ ಮಾಡಿದರೂ ಇಡಿ ಮುಂದೆ ಹಾಜರಾಗಿರಲಿಲ್ಲ. ಆದರೆ ಕಳೆದ ವಾರ ಬಾಂಬೆ ಹೈಕೋರ್ಟ್ ಸಮನ್ಸ್ ರದ್ದುಗೊಳಿಸಲು ನಿರಾಕರಿಸಿದ ನಂತರ ಅವರು ಏಜೆನ್ಸಿಯ ಮುಂದೆ ಹಾಜರಾಗಿದ್ದರು.

 

ಜಿಲ್ಲೆ

ರಾಜ್ಯ

error: Content is protected !!