Wednesday, September 18, 2024

ವಿನೀತ ಭಾವದ ಪುನೀತ: ಎಲ್ಲರಿಗೂ ಒಪ್ಪು, ನಮ್ಮ ಅಪ್ಪು.

ಕಾಣದಂತೆ ಮಾಯವಾದನು ನಮ್ಮ ಶಿವ ಕೈಲಾಸ ಸೇರಿಕೊಂಡನು ಕೊಡುವುದನ್ನು ಕೊಟ್ಟು, ಬಿಡುವುದನ್ನು ಬಿಟ್ಟು ಕೈಯ ಕೊಟ್ಟು ಓಡಿಹೋದನು ನಮ್ಮ ಶಿವ ….

ಈ ಹಾಡನ್ನು ಕೇಳದ ಕನ್ನಡಿಗರಿಲ್ಲ. ಡಾ.ರಾಜಕುಮಾರ್- ಸರಿತಾ ಅಭಿನಯದ ಚಲಿಸುವ ಮೋಡಗಳು ಚಿತ್ರದಲ್ಲಿ, ಬಾಲನಟನಾಗಿ ಈ ಹಾಡಿಗೆ ಹೆಜ್ಜೆ ಹಾಕಿದ ಪುನೀತ್ ರವರ ಅಭಿನಯ ಎಲ್ಲ ಕನ್ನಡಿಗರ ಮನಭಿತ್ತಿಯಲ್ಲಿ ಈಗಲೂ ಅಚ್ಚೊತ್ತಿದೆ. ಅಂತಹ ಅಪ್ಪಟ ಬಾಲಪ್ರತಿಭೆ ಪುನೀತ್. ಎಲ್ಲಾ ರೀತಿಯ ಪಾತ್ರಗಳಲ್ಲಿ ತನ್ನ ಪರಿಪಕ್ವ ಅಭಿನಯದಿಂದ, ಸಿನಿಮಾ ಗೀತೆಗಳ ಹಿನ್ನೆಲೆ ಗಾಯನದಿಂದ, ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದ ನಿರೂಪಣೆಯಿಂದ, ಎಲ್ಲಕ್ಕಿಂತ ಹೆಚ್ಚಾಗಿ ಎಲ್ಲರನ್ನೂ ಸೂಜಿಗಲ್ಲಿನಂತೆ ತನ್ನತ್ತ ಸೆಳೆಯುವ ನಗುಮೊಗದಿಂದ, ಕನ್ನಡಿಗರ ಮನದಾಳದ ರಾಜಕುಮಾರನಾಗಿ ಬೆಳೆದುಬಂದ ಪರೆಯೆ ಅದ್ಭುತವಾದದ್ದು.

1975 ರ ಮಾರ್ಚ್ 17ರಂದು ಜನಿಸಿದ ಪುನೀತ್ ತನ್ನ ಐದನೇ ವಯಸ್ಸಿನಲ್ಲಿಯೇ ವಸಂತ ಗೀತ (1980) ಚಿತ್ರದ ಮೂಲಕ ಬಾಲನಟನಾಗಿ ಚಿತ್ರರಂಗ ಪ್ರವೇಶಿಸುತ್ತಾರೆ.ಅವರ ಬಾಲ್ಯದ ಹೆಸರು ಲೋಹಿತ್. ವರ್ಷಕ್ಕೊಂದು ಚಿತ್ರದಂತೆ ಭಾಗ್ಯದಾತ, ಚಲಿಸುವ ಮೋಡಗಳು,ಎರಡು ನಕ್ಷತ್ರಗಳು ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಚಿತ್ರರಂಗದಲ್ಲಿ ತಮ್ಮ ಹೆಜ್ಜೆಗುರುತುಗಳನ್ನು ಮೂಡಿಸುತ್ತಾರೆ.ಅವರ ಲೀಲಾಜಾಲವಾದ, ಲವಲವಿಕೆಯ ಅಭಿನಯ ರಾಜ್ ಕುಮಾರ್ ರಷ್ಟೇ ಅಭಿಮಾನಿಗಳನ್ನು ಬಾಲ್ಯದಲ್ಲಿಯೇ ಸಂಪಾದಿಸುವಂತೆ ಮಾಡುತ್ತದೆ.

ಕೊನೆಯ ನಡೆಗೆ

ಬಿಸಿಲೇ ಇರಲಿ, ಮಳೆಯೇ ಬರಲಿ, ಕಾಡಲ್ಲಿ ಮೇಡಲ್ಲಿ ಅಲೆವೆ’ ಎಂಬ ಹಾಡನ್ನು ಇಂಗ್ಲಿಷ್ ನಲ್ಲಿ ಹೇಳಿಸಿಕೊಂಡು ಕಲಿಯುವ ಪುನೀತ್ ರವರ ಬೆಟ್ಟದ ಹೂವು ಚಿತ್ರದ ಅಭಿನಯವಂತೂ ಯಾರೂ ಮರೆಯಲು ಸಾಧ್ಯವಿಲ್ಲ. ಹಾಗಾಗಿಯೇ ಆ ಚಿತ್ರಕ್ಕೆ ಅವರು ಬಾಲನಟನಾಗಿ ರಾಷ್ಟ್ರಪ್ರಶಸ್ತಿಯನ್ನು ಪಡೆಯುತ್ತಾರೆ. ತಾತ, ಅಪ್ಪoದಿರಾದಿಯಾಗಿ ಇಡೀ ಕುಟುಂಬವೇ ಕಲಾವಿದರ ಕುಟುಂಬವಾದ್ದರಿಂದ ಪುನೀತ್ ರವರೆಗೆ ಅಭಿನಯವೆಂಬುದು ರಕ್ತಗತವಾದದ್ದು. ಕಪಟತೆ ಇಲ್ಲದ, ನೈಜತೆಯೇ ತುಂಬಿದ ಅಭಿನಯ ಅವರದ್ದು. ಆ ಅಭಿನಯವೇ ಕನ್ನಡಿಗರ ಮನಸ್ಸಿನಲ್ಲಿ ಅವರಿಗೊಂದು ಶಾಶ್ವತವಾದ ಸ್ಥಾನವನ್ನು ನೀಡುತ್ತದೆ. ನಟನೆಯಿರಲಿ, ನೃತ್ಯವಿರಲಿ,ಹೊಡೆದಾಡುವ ದೃಶ್ಯಗಳೇ ಇರಲಿ,ಭಾವನಾತ್ಮಕ ಸನ್ನಿವೇಶವೇ ಇರಲಿ, ತುಂಟಾಟವೇ ಆಗಲಿ.-ಎಲ್ಲದರಲ್ಲೂ ಅವರದ್ದು ಪವರ್ ಟಚ್. ಆದ್ದರಿಂದಲೇ ಎಲ್ಲಾ ಬಗೆಯ ಅಭಿಮಾನಿಗಳಿಗೂ ಅವರು ಅಚ್ಚುಮೆಚ್ಚು

ಬಾಲನಟನೆ ನಿಂತ ನಂತರ ಸ್ವಲ್ಪ ಸಮಯ ಪುನೀತ್ ಎಲ್ಲರ ಗಮನದಿಂದ ದೂರ. ಎಲ್ಲಿ ಹೋದರೆಂದು ಎಲ್ಲರಿಗೂ ಕುತೂಹಲ.ಗ್ರಾನೈಟ್ ವ್ಯವಹಾರ ಮಾಡುತ್ತಿದ್ದಾರೆಂದು ಕೆಲವರ ಬಾಯಲ್ಲಿ ಗುಸುಗುಸು. ಸಾಧ್ಯವಿಲ್ಲ, ಅವರದು ಕಲಾವಿದರ ಕುಟುಂಬ. ಹಾಗಾಗಿ ಮುಂದೆ ಬಿರುಗಾಳಿಯಂತೆ ಕನ್ನಡ ಚಿತ್ರರಂಗಕ್ಕೆ ಅಪ್ಪಳಿಸಲು ತರಬೇತಿ ಪಡೆಯುತ್ತಿದ್ದಾರೆಂಬುದು ಇನ್ನೊಂದು ಗುಸುಗುಸು.

2002 ರಲ್ಲಿ, ತನ್ನ 27ನೇ ವಯಸ್ಸಿನಲ್ಲಿ ‘ಅಪ್ಪು’ ಸಿನಿಮಾದ ಮೂಲಕ ಮತ್ತೊಮ್ಮೆ ಕನ್ನಡ ಚಿತ್ರರಂಗಕ್ಕೆ ದಾಂಗುಡಿಯಿಟ್ಟ ಪುನೀತ್ ಬಿರುಗಾಳಿಯನ್ನೇ ಎಬ್ಬಿಸಿದರು. ನಮ್ಮ ನೆರೆಹೊರೆಯ ತೆಲುಗು ತಮಿಳು ಚಿತ್ರಗಳಲ್ಲಿ ಹೊಸ ನೀರು ಹರಿಯುತ್ತಿದ್ದ ಕಾಲಘಟ್ಟವದು. ಅದ್ದೂರಿತನದ ಮೂಲಕ ತೆಲುಗು ತಮಿಳು ಭಾಷೆಯ ಚಿತ್ರಗಳು ಕರ್ನಾಟಕದಲ್ಲೂ ಸುದ್ದಿ ಮಾಡುತ್ತಿದ್ದ ಕಾಲವದು. ಇತರ ಭಾಷೆಗಳ ಚಲನಚಿತ್ರಗಳೆದುರು ಕನ್ನಡ ಭಾಷೆಯ ಚಿತ್ರಗಳು
ಪೇಲವವಾಗಿ ಕಾಣುತ್ತಿದ್ದ .ದಿನಗಳವು.ನಮ್ಮಲ್ಲೂ ಇಂತಹ ಚಿತ್ರಗಳು ಬಂದರೆ ಎಷ್ಟು ಚೆಂದ ಎಂದು ಕನ್ನಡಾಭಿಮಾನಿಗಳು ಕೊರಗುತ್ತಿದ್ದ ಕಾಲವದು. ಆಗ ಬಂದದ್ದೇ ಅಪ್ಪು ಚಿತ್ರ.

ದಿನ ಕಳೆದು ಬೆಳಗಾಗುವಷ್ಟರಲ್ಲಿ ಪುನೀತ್ ಕನ್ನಡಿಗರ ಕಣ್ಮಣಿಯಾಗಿದ್ದರು. ಎಂತಹ ನಾಯಕನಟ ತಮಗೆ ಬೇಕೆಂದು ಕನ್ನಡಿಗರು ಕಾತರದಿಂದ ಕಾಯುತ್ತಿದ್ದರೋ, ಎಂತಹ ಸಿನಿಮಾಗಳು ನಮ್ಮಲ್ಲಿ ಬಂದರೆ ಎಷ್ಟು ಚೆಂದ ಎಂದು ಕನ್ನಡಿಗರು ಆತುರ ಪಡುತ್ತಿದ್ದರೋ,ಅಂತಹ ಕಾತುರ ಮತ್ತು ಆತುರಕ್ಕೆ ಉತ್ತರವಾಗಿ ಬಂದದ್ದೇ ಅಪ್ಪು ಸಿನಿಮಾ. ಅಲ್ಲಿಂದಾಚೆಗೆ ಅಪ್ಪು ಹಿಂತಿರುಗಿ ನೋಡಲೇ ಇಲ್ಲ. ಆನೆ ನಡೆದದ್ದೇ ಹಾದಿ ಎಂಬಂತೆ ಚಿತ್ರರಂಗದ ಅವರ ಪಯಣ ಸಾಗಿತು. ಅಭಿ, ಆಕಾಶ್, ಅರಸು, ಮಿಲನ, ಜಾಕಿ ಅಣ್ಣಾಬಾಂಡ್, ಪವರ್, ಪೃಥ್ವಿ , ರಾಜಕುಮಾರ ಸಿನಿಮಾಗಳು ಪುನೀತ್ ರನ್ನು ಇನ್ನಿಲ್ಲದಂತೆ ಜನಪ್ರಿಯಗೊಳಿಸಿದವು.ಒಂದಕ್ಕಿಂತ ಒಂದು ಸೂಪರ್ ಹಿಟ್ ಸಿನಿಮಾಗಳು. ಎಲ್ಲವೂ ದಾಖಲೆ ಬರೆದ ಸಿನಿಮಾಗಳೇ. ಆ ಮೂಲಕ ಅಪ್ಪು ಕನ್ನಡಿಗರ ಆರಾಧ್ಯದೈವವಾದರು.

ಬೆರಳೆಣಿಕೆಯಷ್ಟು ಚಿತ್ರಗಳನ್ನು ಹೊರತುಪಡಿಸಿ ಅಪ್ಪು ಅಭಿನಯಿಸಿದ 26 ಚಿತ್ರಗಳು ಕನ್ನಡಿಗರ ಮನದಲ್ಲಿ ಮಾಸದೆ ಅಚ್ಚೊತ್ತಿವೆ. ಅವರ ನಟನೆಯಂತೆಯೇ ಕನ್ನಡದ ಕೋಟ್ಯಾಧಿಪತಿಯಲ್ಲಿನ ಅವರ ಸೊಗಸಾದ ನಿರೂಪಣಾ ಶೈಲಿ ಬಹುಜನರ ಮೆಚ್ಚುಗೆಗೆ ಪಾತ್ರವಾಯಿತು.ಬಹಳ ದೊಡ್ಡ ಮಟ್ಟದಲ್ಲಿ ಅಪ್ಪುವಿಗೆ ಜನಪ್ರಿಯತೆ ತಂದುಕೊಟ್ಟ ಕಾರ್ಯಕ್ರಮವದು.ಹಾಗೆಯೇ ಅಪ್ಪುವಿನ ಕಾರಣಕ್ಕೆ ಕೋಟ್ಯಾಧಿಪತಿ ಕಾರ್ಯಕ್ರಮ ಮನೆ ಮನೆ ಮಾತಾಯಿತು.

ಅಪ್ಪುವೆಂದರೆ ಸದಾ ಲವಲವಿಕೆ, ಸದಾ ಹಸನ್ಮುಖಿ, ಇತರೆ ನಾಯಕನಟರುಗಳು ನಾನಾ ರೀತಿಯ ಭಾನಗಡಿಗಳಲ್ಲಿ ತೊಡಗಿ, ತಮ್ಮ ಮರ್ಯಾದೆಯನ್ನು ತಾವೇ ಹಾಳು ಮಾಡಿಕೊಳ್ಳುತ್ತಿದ್ದರೂ, ಎಂದೂ ತಮ್ಮತನವನ್ನು ಕಳೆದುಕೊಳ್ಳದೆ, ಕೊನೆಯವರೆಗೂ ದೊಡ್ಮನೆ ಹುಡುಗನಾಗಿ ದೊಡ್ಡಸ್ತಿಕೆಯಲ್ಲಿ ಮೆರೆದ ಅಪ್ಪು ಇಷ್ಟು ಬೇಗ ನಮ್ಮಿಂದ ದೂರವಾಗಬೇಕೆ? ಇದನ್ನು ಯಾರಾದರೂ ಸಾವು ಎನ್ನುತ್ತಾರೆಯೇ? ಗಿಡುಗವೊಂದು ಹಾರಿಬಂದು ಕ್ಷಣಮಾತ್ರದಿ ಕೋಳಿ ಮರಿಯನ್ನು ಹಾರಿಸಿಕೊಂಡು ಹೋಗುವಂತೆ, ಆ ಕ್ರೂರವಿಧಿ ನಮ್ಮೆಲ್ಲರ ಪ್ರೀತಿಯ ಅಪ್ಪುವನ್ನು ಆರಿಸಿಕೊಂಡು ಹೋಗಿದೆ. ತಾನೆಷ್ಟು ಕ್ರೂರಿ ಎಂದು ಸಾರಿದೆ.

ನಂಬಲಸಾಧ್ಯವಾದ ಆದರೆ ನಂಬಲೇಬೇಕಾದ, ಅರಗಿಸಿಕೊಳ್ಳಲಾಗದ ಆದರೆ ಅರಗಿಸಿಕೊಳ್ಳಲೇಬೇಕಾದ ವಾಸ್ತವ ನಮ್ಮ ಕಣ್ಣ ಮುಂದಿದೆ. ವಿಧಿಯ ಕ್ರೌರ್ಯತೆಗೆ ಅಪ್ಪುವಿನ ಪ್ರಾಣಪಕ್ಷಿ ಹಾರಿಹೋಗಿದೆ. ಅಗಲಿಕೆಯ ನೋವಿಗೆ ನಮ್ಮೆಲ್ಲರ ಪ್ರಾಣ ಕುತ್ತಿಗೆಗೆ ಬಂದು ನಿಂತಿದೆ.ಸಾಧನೆಯ ಅನೇಕ ಶಿಖರಗಳನ್ನು ಏರುವ ಸಮಯದಲ್ಲಿಯೇ ವಿಧಿ ನಿಮ್ಮನ್ನು ಎಳೆದೊಯ್ದದ್ದು ಘೋರ ದುರಂತ. ಶಂಕರ್ ನಾಗ್, ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್ ಸಾವಿನ ನಂತರ ಕನ್ನಡಿಗರನ್ನು ಬಹುವಾಗಿ ಕಾಡಿದ್ದು ಅಪ್ಪುವಿನ ಸಾವು. ಅವರೊಟ್ಟಿಗೆ ಅಪ್ಪು ಇನ್ನುಮುಂದೆ ಧ್ರುವತಾರೆ ಮಾತ್ರ.

ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದೆಂಬಂತೆ ಸಮಾಜಸೇವೆಯಲ್ಲಿ ನಿರತರಾಗಿದ್ದ ಅಪ್ಪುವಿನ ಸಮಾಜ ಸೇವೆಯ ಒಂದು ಸಣ್ಣ ಉದಾಹರಣೆ ಇಲ್ಲಿದೆ.
26 ಅನಾಥಾಶ್ರಮ, 45 ಉಚಿತ ಶಾಲೆ, 16 ವೃದ್ಧಾಶ್ರಮ,19 ಗೋಶಾಲೆ,1800 ಮಕ್ಕಳ ಸಂಪೂರ್ಣ ಶಿಕ್ಷಣ ಹಾಗು ಮೈಸೂರಿನಲ್ಲಿ ಶಕ್ತಿಧಾಮ ಹೆಸರಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ವ್ಯವಸ್ಥೆ ನೋಡಿಕೊಳ್ಳುತ್ತಿರುವ ಕನ್ನಡದ ಏಕೈಕ ನಟ ಪುನೀತ್ ರಾಜುಮಾರ್.ಇದು ಆಕಸ್ಮಿಕವಾಗಿ ಹೊರಗೆ ಬಂದಿದ್ದು ಅಷ್ಟೆ. ಆದರೆ ಹೊರಗೆ ಬಾರದ ಬಹಳಷ್ಟು ಸೇವಾ ಕೈಂಕರ್ಯದ ವಿಚಾರ ಗುಟ್ಟಾಗಿಯೇ ಉಳಿದಿದೆ. ಅದು ಅವರ ಸೇವೆಯ ಪರಿ.

ಡಾ.ರಾಜ್ ಕುಮಾರ್ ಮತ್ತು ಪಾರ್ವತಮ್ಮ ರಾಜ್ ಕುಮಾರ್ ರವರ ಪ್ರೀತಿಯ ಕಿರಿಯ ಪುತ್ರನಾಗಿ; ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್ ಕುಮಾರ್ ರವರ ಪ್ರೀತಿಯ ಕಿರಿಯ ಸಹೋದರನಾಗಿ; ಅಶ್ವಿನಿ ರೇವಂತ್ ರಿಗೆ ಮೆಚ್ಚಿನ ಗಂಡನಾಗಿ; ದ್ರಿತಿ ಮತ್ತು ವಂದಿತಾ ರಿಗೆ ಪ್ರೀತಿಯ ಅಪ್ಪನಾಗಿ: ಕನ್ನಡಿಗರಿಗೆ ಪ್ರೀತಿಯ ಮನೆಮಗನಾಗಿ ರೂಪುಗೊಂಡ ಪುನೀತ್ ಇನ್ನು ನೆನಪು ಮಾತ್ರ. ಅನೇಕ ನೆನಪುಗಳ ಶಕ್ತಿ ತುಂಬಾ ಕಡಿಮೆಯದ್ದಾದರೂ, ಕೆಲವು ನೆನಪುಗಳ ಶಕ್ತಿ ಅಗಾಧವಾದದ್ದು, ಅನಂತವಾದದ್ದು. ಅಂತಹ ಅನಂತ ನೆನಪಿನ ಶಕ್ತಿಯಾಗಿ ಪುನೀತ್ ರಾಜಕುಮಾರ್ ಎಂದೆಂದೂ ನಮ್ಮೆಲ್ಲರೊಂದಿಗೆ ಉಳಿಯುತ್ತಾರೆ-ಪ್ರೀತಿಯ ಮನೆಮಗನಾಗಿ, ಅಪ್ಪುವಾಗಿ.

ಈ ಸಾವು ನ್ಯಾಯವೇ ಎನ್ನುತ್ತಲೇ…
ಅಪ್ಪು,ನಿಮ್ಮನ್ನು ಅಳುತ್ತಲೇ ಕಳಿಸಿಕೊಡುತ್ತಿದ್ದೇವೆ.
ಆದರೆ ಬೇಗ ಬಂದುಬಿಡಿ ಪ್ಲೀಸ್.

ಕನ್ನಡಿಗರ ಹೃದಯ ಸಾಮ್ರಾಜ್ಯದಧಿಪತಿ ಅಪ್ಪು
ಇಷ್ಟು ಬೇಗ ನಮ್ಮನ್ನಗಲಲು ನಾವೇನು ಮಾಡಿದೆವು ತಪ್ಪು?
ಓ! ದುರ್ವಿಧಿಯೇ ಇದೇನಿದು ನಿನ್ನ ಕ್ರೂರ ಗೆಟಪ್ಪು?
ನಿನ್ನಗಲಿಕೆ ತಾಳಲಾರದೆ ನಮ್ಮೆಲ್ಲರಿಗಾವರಿಸಿದೆ ಮುಪ್ಪು

 

ಲೇಖನ:-ಮಣ್ಣೆ ಮೋಹನ್
(M)-6360507617

ಜಿಲ್ಲೆ

ರಾಜ್ಯ

error: Content is protected !!