Friday, April 19, 2024

ಹೈನುಗಾರಿಕೆಗೆ ರೈತರು ಹೆಚ್ಚು ಒತ್ತು ನೀಡಬೇಕು: ಬಾಲಚಂದ್ರ ಜಾರಕಿಹೊಳಿ

ಬೆಳಗಾವಿ (ಅ.29): ರೈತರು ತಮ್ಮ ಕೃಷಿ ಚಟುವಟಿಕೆಗಳ ಜೊತೆಗೆ ಹೈನುಗಾರಿಕೆಗೆ ಹೆಚ್ಚು ಒತ್ತು ನೀಡಬೇಕು. ಇದರಿಂದ ರೈತರು ಆರ್ಥಿಕವಾಗಿ ಸದೃಡವಾಗಲು ಸಹಾಯವಾಗಲಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ನಗರದ ಹಾಲು ಒಕ್ಕೂಟದ ಆವರಣದಲ್ಲಿ ಶುಕ್ರವಾರ ನೂತನ ಬಾಯ್ಲರ್ ಉದ್ಘಾಟನೆ ಹಾಗೂ ಹಾಲು ಉತ್ಪಾದಕರ ಮಕ್ಕಳ ವಿದ್ಯಾರ್ಥಿ ನಿಲಯದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಸುಮಾರು ಹಾಲು ಉತ್ಪಾದಕರ 1400 ಮಕ್ಕಳಿಗೆ ವಿದ್ಯಾರ್ಥಿ ನಿಲಯ ಅನುಕೂಲವಾಗಲಿದೆ. ವಸತಿ ನಿಲಯದಲ್ಲಿ 50 ಬಾಲಕರು ಹಾಗೂ 50 ಬಾಲಕಿಯರಿಗೆ ಪ್ರವೇಶ ಅವಕಾಶ ನೀಡಲಾಗುವುದು. ಬೆಂಗಳೂರು ನಂತರ ಬೆಳಗಾವಿಯಲ್ಲಿ ವಿದ್ಯಾರ್ಥಿ ನಿಲಯ ನಿರ್ಮಾಣ ಮಾಡುತ್ತಿರುವದು ಮಹತ್ವದ ಹೆಜ್ಜೆಯಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸುತ್ತಿರುವ ಪೂಜ್ಯರು ಹಾಗೂ ಗಣ್ಯರು

ರೈತ ಸದಸ್ಯರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು. ಹಸು, ಎಮ್ಮೆಗಳು ಸಾವಿಗೀಡಾದಲ್ಲಿ 50 ಸಾವಿರ ಇನ್ಸೂರೆನ್ಸ್  ನೀಡಲಾಗುತ್ತಿದೆ. ರೈತರು ತಮ್ಮ ಕೃಷಿ ಚಟುವಟಿಕೆಗಳ ಜೊತೆಗೆ ಹೈನುಗಾರಿಕೆಗೆ ಹೆಚ್ಚು ಒತ್ತು ನೀಡಬೇಕು ಇದರಿಂದ ರೈತರಿಗೆ ಆರ್ಥಿಕವಾಗಿ ಅನುಕೂಲವಾಗಲಿದೆ.

ಸ್ಥಳೀಯ ಹೈವೇ ಪಕ್ಕದಲ್ಲಿ ಜಾಮೀನು ಖರೀದಿಸಿ ನಂದಿನಿ ಪ್ರಾಡಕ್ಟ್ ಗಳ ಉತ್ಪನ್ನವಾಗುವ ಪ್ಲಾಂಟ್ ಈಗಾಗಲೇ ಸ್ಥಾಪಿಸಲು ನಿರ್ಧರಿಸಲಾಗಿದೆ ಇದರಿಂದ ಸ್ಥಳೀಯ ಯುವಕ ಯುವತಿಯರಿಗೆ ಸುಮಾರು 300ಕ್ಕು ಹೆಚ್ಚು ಉದ್ಯೋಗವಕಾಶ ದೊರೆಯಲಿವೆ ಎಂದು ತಿಳಿಸಿದರು.

ಸುಮಾರು 17 ಕೋಟಿ ವಹಿವಾಟುಗಲಿದ್ದು ಸದ್ಯದಲ್ಲೇ ಕರ್ನಾಟಕ ಸಹಕಾರ ಹಾಲು ಮಹಾಮಂಡಳಿಯ ಬ್ಯಾಂಕ್ ಸ್ಥಾಪಿಸಲಾಗುವುದು. ಬರುವ ದಿನಗಳಲ್ಲಿ ರೈತರು ನೀಡುವ ಹಾಲಿನ ಬೆಳೆ ನಿಗದಿಪಡಿಸಲಾಗುವುದು.

ಶಿಕ್ಷಣದಲ್ಲಿ ಮುಂದುವರಿದ ರೈತರ ಮಕ್ಕಳಿಗೆ 10 ಸಾವಿರ ರೂಪಾಯಿ ಪ್ರೋತ್ಸಾಹಧನ ನೀಡಲಾಗುವುದು. ವಿದ್ಯಾರ್ಥಿನಿಲಯದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಊಟ-ವಸತಿ ಸಂಪೂರ್ಣ ಉಚಿತವಾಗಿ ಇರಲಿದೆ ಎಂದು ಹೇಳಿದರು.

ರೈತರ ಮಕ್ಕಳಿಗಾಗಿ ವಸತಿ ನಿಲಯ ನಿರ್ಮಾಣ ಮಾಡುತ್ತಿರುವುದು ಶ್ಲಾಘನೀಯ ವಿಷಯವಾಗಿದೆ. ಇದರಿಂದ ಅನೇಕ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಕಾರಂಜಿ ಮಠದ ಶ್ರೀಗಳಾದ ಗುರುಸಿದ್ಧ ಸ್ವಾಮಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಡೈರಿಗಳ ಸ್ಥಾಪನೆ:

ಈಗಾಗಲೇ ಜಿಲ್ಲೆಯ 14 ತಾಲೂಕುಗಳನ್ನು ಸೇರಿ ಒಟ್ಟು 875 ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಸ್ಥಾಪಿಸಲಾಗಿದೆ. ಈ ಪೈಕಿ 616 ಹಾಲು ಉತ್ಪಾದಕರ ಸಹಕಾರ ಸಂಘಗಳು ಕಾರ್ಯಾಚರಣೆಯಲ್ಲಿವೆ ಎಂದು ತಿಳಿಸಿದರು.

ಒಕ್ಕೂಟವು 1 ಲಕ್ಷ ಲೀಟರ್ ಸಾಮಾರ್ಥ್ಯದ ಮುಖ್ಯ ಡೇರಿಯನ್ನು ಬೆಳಗಾವಿ, ಗೋಕಾಕ 40 ಸಾವಿರ ಲೀ. ರಾಮದುರ್ಗ 30 ಸಾವಿರ ಲೀ. ಹಾಗೂ ಅಥಣಿಯಲ್ಲಿ 30 ಸಾವಿರ ಲೀ. ಸಾಮರ್ಥ್ಯದ ಶೀತಲ ಕೇಂದ್ರಗಳನ್ನು ಹೊಂದಿದೆ ಎಂದು ತಿಳಿಸಿದರು.

ರಾಯಬಾಗದಲ್ಲಿ 60 ಸಾವಿರ ಲೀ ಸಾಮರ್ಥ್ಯದ ಹಾಲು ಸಂಸ್ಕರಣಾ ಘಟಕ ಪೂರ್ಣಗೊಂಡಿದ್ದು, ಸದ್ಯದಲ್ಲಿ ಪ್ರಾರಂಭಗೊಳ್ಳಲಿದೆ. ಇದಲ್ಲದೆ ಕೇಂದ್ರ ಸರ್ಕಾರದ ಶುದ್ಧ ಹಾಲು ಉತ್ಪಾದನೆ ಮತ್ತು ವಿಶೇಷ ಪ್ಯಾಕೇಜ್ ಯೋಜನೆಗಳಡಿ ಒಟ್ಟು 15 ಬಿಎಂಸಿ ಸ್ಥಾಪಿಸಿದೆ ಎಂದು ಹೇಳಿದರು.

ವಿ.ಬಿ.ಎಮ್.ಪಿ.ಎಸ್ ಯೋಜನೆಯಡಿ 13 ಬಿ.ಎಂ.ಸಿ ಹಾಗೂ ಎಸ್.ಟಿ.ಪಿ ಯೋಜನೆಯಲ್ಲಿ 8, ಡಬ್ಲ್ಯೂ. ಡಿ.ಎಚ್.ಎ.ಆರ್.ಬಿ.ಎ ಯೋಜನೆಯಡಿಯಲ್ಲಿ 2, ಸಿ.ಎಮ್.ಪಿ ಯೋಜನೆಯಲ್ಲಿ 9 ಬಿ.ಎಮ್.ಸಿ ಗಳನ್ನು ಸ್ಥಾಪಿಸಲಾಗಿದೆ ಎಂದು ಕ.ಹಾ.ಮ ವ್ಯವಸ್ಥಾಪಕ ನಿರ್ದೇಶಕರಾದ ಬಿ.ಸಿ ಸತೀಶ ತಿಳಿಸಿದರು.

ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ಸದಸ್ಯರಾದ ವಿವೇಕರಾವ ಪಾಟೀಲ, ಶಾಸಕ ಅನಿಲ ಬೆನಕೆ, ನಗರ ಪಾಲಿಕೆ ಸದಸ್ಯರಾದ ರಾಜಶೇಖರ ಡೋನಿ, ಹಾಗೂ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಜಿಲ್ಲೆ

ರಾಜ್ಯ

error: Content is protected !!