Monday, April 15, 2024

‘ಏಕ ಭಾರತ ವಿಜಯೀ ಭಾರತ’ ಸ್ವಾಮಿ ವಿವೇಕಾನಂದರ ಶಿಲಾಸ್ಮಾರಕ ಪ್ರಸ್ತುತ: ಭಾಗ-3

ಒಂದು ರೂ. ಕೂಪನ್, ಎಂಬತ್ತೈದು ಲಕ್ಷ ರೂ. ಕಲೆಕ್ಷನ್

ಸ್ಮಾರಕದ ಕೆಲಸವೇನೋ ಆರಂಭವಾಯಿತು. ದಿನವೂ 650 ಕಾರ್ಮಿಕರು ದುಡಿಯುತ್ತಿದ್ದ ಬಹುದೊಡ್ಡ ಕಾಮಗಾರಿ ಅದಾಗಿತ್ತು.ಯೋಜನೆಯ ವೆಚ್ಚವು ದೊಡ್ಡದಿತ್ತು.ಹಾಗಾಗಿ ಕೆಲವೇ ದಿನಗಳಲ್ಲಿ ಹಣದ ಅಡಚಣೆ ಉಂಟಾಯಿತು. ಮತ್ತೆ ಈ ಬೃಹತ್ ಸಮಸ್ಯೆ ರಾನಡೆಯವರ ಮುಂದೆ ಬೆಟ್ಟದೆತ್ತರದಷ್ಟು ಬೃಹದಾಕಾರವಾಗಿ ತಲೆ ಎತ್ತಿತು. ಆದರೆ ರಾನಡೆಯವರು ವಿಚಲಿತರಾಗಲಿಲ್ಲ.ಅವರ ಸಮಯಪ್ರಜ್ಞೆ, ಮುಂದಾಲೋಚನೆಗಳು ಅಸಾಧ್ಯವಾದುದನ್ನು ಸಾಧ್ಯವಾಗಿಸುವ ಅಸಾಧಾರಣ ಶಕ್ತಿ ಪಡೆದಿದ್ದವು.

ತ್ರಿವೇಣಿ ಸಾಗರ ಸಂಗಮದ ಮಧ್ಯೆ ನಯನಮನೋಹರ ಬಂಡೆ

https://suddisaddu.com/News-ID.1704/

ವಿವೇಕಾನಂದ ಸ್ಮಾರಕವು ದೇಶದ ಪ್ರತಿ ಪ್ರಜೆಯ ಹೆಮ್ಮೆಯ ಸಂಕೇತವಾಗಬೇಕಾದರೆ ಎಲ್ಲರ ಸಹಭಾಗಿತ್ವ ಅವಶ್ಯಕವೆಂದು ರಾನಡೆಯವರು ನಿಶ್ಚಯಿಸಿದರು.ಸ್ವಾಮಿ ವಿವೇಕಾನಂದರು ಚಿಕಾಗೊ ಸರ್ವಧರ್ಮ ಸಮ್ಮೇಳನಕ್ಕೆ ಹೋಗುವ ಮೊದಲು ಮದ್ರಾಸ್ ನಲ್ಲಿ ಅಲಸಿಂಗ ಮತ್ತು ಗೆಳೆಯರು ಕಾಲೇಜು ವಿದ್ಯಾರ್ಥಿಗಳಿಂದ ಒಂದೊಂದು ರೂ.ಗಳನ್ನು ಸಂಗ್ರಹಿಸಿದ್ದ ಮಾದರಿ ರಾನಡೆಯವರಿಗೆ ಸ್ಫೂರ್ತಿಯಾಯಿತು.ಹಾಗಾಗಿ ಜಾತಿ ಭೇದಗಳ ಹಂಗಿಲ್ಲದೆ,ದೇಶದ ಪ್ರತಿ ಪ್ರಜೆಯಿಂದ ಕನಿಷ್ಠ ಒಂದು ರೂಪಾಯಿ ಸಂಗ್ರಹಿಸಬೇಕೆಂದು ಯೋಜನೆ ರೂಪಿಸಿದರು. ಸ್ಮಾರಕದ ಮಾದರಿ ಚಿತ್ರ, ಸ್ವಾಮಿ ವಿವೇಕಾನಂದರ ಚಿತ್ರ ಮತ್ತು ವಿವೇಕಾನಂದರ ನುಡಿ ಮುತ್ತುಗಳನ್ನೊಳಗೊಂಡ ಒಂದು ರೂಪಾಯಿಯ ಕೂಪನ್ ಮುದ್ರಣಗೊಂಡವು.ಪ್ರತಿ ರಾಜ್ಯದಲ್ಲಿ ಸಾರ್ವಜನಿಕ ಸಮಿತಿಗಳ ರಚನೆಯಾಯಿತು. ಎಲ್ಲಾ ರಾಜ್ಯಸರ್ಕಾರಗಳು ತಲಾ ಒಂದು ಲಕ್ಷ ರೂ. ಗಳ ದೇಣಿಗೆ ನೀಡಲು ಮುಂದೆ ಬಂದವು.ಕೇಂದ್ರ ಸರ್ಕಾರ 15 ಲಕ್ಷ ರೂ. ದೇಣಿಗೆಯನ್ನು ನೀಡಿತು. ರಾನಡೆಯವರ ಕಾರ್ಯತಂತ್ರ ಯಶಸ್ವಿಯಾಗಿತ್ತು. ಈ ರೀತಿಯ ಕೂಪನ್ ಮಾರಾಟದಿಂದ ಸಂಗ್ರಹವಾದ ಮೊತ್ತ 85 ಲಕ್ಷ ರೂ. ಗಳು. ಕಬ್ಬಿಣದ ಕಡಲೆಯಂತಾಗಿದ್ದ ಸಮಸ್ಯೆಯೊಂದು ಹೂವೆತ್ತಿದಷ್ಟು ಸರಾಗವಾಗಿ ಪರಿಹಾರವಾಗಿತ್ತು .

ನಿರಂತರ ಸಮುದ್ರದಲೆಗಳ ಹೊಡೆತದ ಮಧ್ಯೆಯೂ ನಿಶ್ಚಲವಾಗಿ ನಿಂತಿರುವ ಹೆಬ್ಬಂಡೆ

ಕನ್ಯಾಕುಮಾರಿಯ ಕಡಲ ತೀರದಲ್ಲಿದ್ದ ಬೆಸ್ತರೆಲ್ಲ ಮತಾಂತರಗೊಂಡ ಕ್ರಿಶ್ಚಿಯನ್ ಗಳಾಗಿದ್ದರು.ಸ್ಮಾರಕ ನಿರ್ಮಾಣಕ್ಕೆ ಬೇಕಾದ ಗ್ರಾನೈಟ್ ಶಿಲೆಗಳನ್ನು ಸಮುದ್ರಮಧ್ಯದ ಬಂಡೆಗೆ ಸಾಗಿಸಲು ಅವರ ಅಸಹಕಾರ ವಿತ್ತು.ಅದೆಲ್ಲವನ್ನೂ ಜಯಿಸಿ ರಾನಡೆಯವರು ತಮ್ಮ ಕಾರ್ಯದಲ್ಲಿ ಯಶಸ್ವಿಯಾಗಿದ್ದು, ಸ್ವಾತಂತ್ರ್ಯಾನಂತರ ಭಾರತದ ಬಹುದೊಡ್ಡ ಯಶೋಗಾಥೆ.

ನಿಶ್ಚಲ ಹೆಬ್ಬಂಡೆಯ ಮೇಲೆ ಅಚಲವಾದ ಸ್ಮಾರಕ.
ಅದೇ ಕನ್ಯಾಕುಮಾರಿಯ ಸ್ವಾಮಿ ವಿವೇಕಾನಂದ ಶಿಲಾ ಸ್ಮಾರಕ.

ಸ್ಮಾರಕದ ಕೆಲಸ ಆರಂಭವಾದಂದಿನಿಂದ ಪರಿಸಮಾಪ್ತಿಯಾಗುವವರೆಗೂ ತಾವೇ ಖುದ್ದು ನಿಂತು ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು ಅವರ ಇನ್ನೊಂದು ಹೆಗ್ಗಳಿಕೆ. ಒಂದು ದಿನ ದೇಣಿಗೆ ಸಂಗ್ರಹಣೆಗೆಂದು ಅವರು ಹೊರಗೆ ಹೋಗಿದ್ದರು. ಸಂಜೆ ವಾಪಾಸ್ ಬಂದಾಗ ಅಂದು ನಡೆದಿದ್ದ ಕಾಮಗಾರಿ ಆಯ ತಪ್ಪಿರುವುದು ಅವರ ಗಮನಕ್ಕೆ ಬಂತು.ಮಾರನೇ ದಿನ ಕೆಲಸಗಾರರು ಬಂದಾಗ ಹಿಂದಿನ ದಿನದ ಸಂಪೂರ್ಣ ಕಾಮಗಾರಿಯನ್ನು ತೆರವುಗೊಳಿಸಿ, ಮತ್ತೊಮ್ಮೆ ಆಯಕ್ಕನುಗುಣವಾಗಿ ಹೊಸದಾಗಿ ನಿರ್ಮಿಸಿದ್ದು ಅವರ ಕಾರ್ಯತತ್ಪರತೆಗೊoದು ಜ್ವಲಂತ ನಿದರ್ಶನವಾಗಿದೆ. ಅಷ್ಟೊಂದು ಏಕಾಗ್ರತೆ, ತನ್ಮಯತೆ,ತತ್ಪರತೆ,ಕಾರ್ಯದಕ್ಷತೆ ಅವರದಾಗಿತ್ತು.

https://suddisaddu.com/News-ID.1797/ ‘ಏಕ ಭಾರತ ವಿಜಯೀ ಭಾರತ’ ಭಾಗ-2

ದಿವ್ಯ ಕ್ಷೇತ್ರದಲ್ಲೊಂದು ಭವ್ಯ ಸ್ಮಾರಕ

6 ವರ್ಷಗಳ ಕಾಲ ನಿರ್ಮಾಣಕಾರ್ಯ ನಡೆದು 1970 ರಲ್ಲಿ ಒಂದು ಕೋಟಿ ಮೂವತ್ತು ಲಕ್ಷ ರೂ ಗಳ ವೆಚ್ಚದಲ್ಲಿ ಸ್ಮಾರಕ ಸಿದ್ಧವಾಯಿತು. ಭಾರತದೆಲ್ಲೆಡೆ ಕಂಡುಬರುವ ಅನೇಕ
ವಿಶಿಷ್ಟರೀತಿಯ ವಾಸ್ತುಶೈಲಿಗಳನ್ನು ಬಳಸಿಕೊಂಡು, ನೀಲಿ ಮತ್ತು ಕೆಂಪು ಗ್ರಾನೈಟ್ ಗಳನ್ನು ಬಳಸಿ ಈ ಸ್ಮಾರಕವನ್ನು ನಿರ್ಮಿಸಲಾಗಿದೆ.ಈ ಸ್ಮಾರಕವು ಎರಡು ರಚನೆಗಳನ್ನು ಹೊಂದಿದೆ. ಒಂದು ವಿವೇಕಾನಂದ ಮಂಟಪವಾದರೆ ಇನ್ನೊಂದು ಶ್ರೀಪಾದ ಮಂಟಪ. ವಿವೇಕಾನಂದ ಮಂಟಪವು ಮುಖ್ಯದ್ವಾರ, ಸಭಾಮಂಟಪ, ಮುಖಮಂಟಪ ಮತ್ತು ಧ್ಯಾನಮಂಟಪವೆಂಬ ನಾಲ್ಕು ಭಾಗಗಳನ್ನು ಒಳಗೊಂಡಿದೆ. ಶ್ರೀಪಾದ ಮಂಟಪವು ದೇವಿ ಕನ್ಯಾಕುಮಾರಿ(ಪಾರ್ವತಿ) ಶಿವನನ್ನು ಕುರಿತು ತಪಸ್ಸು ಮಾಡಿದ ಸ್ಥಳವಾಗಿದೆ. 6 ಎಕರೆಗಳಷ್ಟು ವಿಶಾಲ ವಿಸ್ತೀರ್ಣದಲ್ಲಿ ಸ್ಮಾರಕವನ್ನು ನಿರ್ಮಿಸಲಾಗಿದೆ. ಈ ಸ್ಮಾರಕವು ಸಾಗರ ಮಧ್ಯೆ 2 ಬಂಡೆಗಳ ಮೇಲೆ ನಿಂತಿದೆ ಮತ್ತು ದ್ವೀಪದಿಂದ ಸುಮಾರು 500 ಮೀಟರ್ ದೂರದಲ್ಲಿದೆ.

ದಿವ್ಯ ಕ್ಷೇತ್ರದಲ್ಲಿರುವ ಭವ್ಯ ಸ್ಮಾರಕ

ಏಕನಾಥ್ ಜೀ ರಾನಡೆಯವರ ಅವಿರತ ಪರಿಶ್ರಮದ ಫಲವಾಗಿ ಸ್ಮಾರಕವು ಸಾಕಾರಗೊಂಡಿತ್ತು.ವಿವೇಕಾನಂದರ ಜನ್ಮಶತಾಬ್ದಿ ವರ್ಷದಲ್ಲಿ ಸ್ಮಾರಕ ನಿರ್ಮಿಸಲು ಸಾಧ್ಯವಾಗಲಿಲ್ಲವಲ್ಲವೆಂಬ ನೋವಿನ ನಡುವೆಯೂ, ತಡವಾಗಿಯಾದರೂ ಅತ್ಯದ್ಭುತ ಸ್ಮಾರಕವನ್ನು ನಿರ್ಮಾಣ ಮಾಡಿದ ತೃಪ್ತಿ ಅವರದಾಗಿತ್ತು.ಇoತಹ ಅದ್ಭುತ ರಾಷ್ಟ್ರೀಯ ಸ್ಮಾರಕವನ್ನು ತುಂಬಾ ವಿಭಿನ್ನವಾಗಿ ಹಾಗೂ ವಿಶೇಷವಾಗಿ ಉದ್ಘಾಟಿಸಬೇಕೆಂಬುದು ರಾನಡೆಯವರ ಹಂಬಲವಾಗಿತ್ತು. ದೇಶದ ಎಲ್ಲಾ ರಾಜ್ಯಗಳ ಜನರು, ರಾಜ್ಯ ಸರಕಾರಗಳು ಸ್ಮಾರಕ ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸಿದ್ದವು. ಅವರೆಲ್ಲರೂ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಅನುಕೂಲವಾಗುವಂತೆ 60 ದಿನಗಳ ಕಾಲ ಸ್ಮಾರಕ ಲೋಕಾರ್ಪಣಾ ಕಾರ್ಯ ಜರುಗಿತು. 1970 ಸೆಪ್ಟೆಂಬರ್ 2 ರಂದು ಭಾರತದ ರಾಷ್ಟ್ರಪತಿಗಳಾದ ಮಾನ್ಯ ಶ್ರೀ ವಿ ವಿ ಗಿರಿಯವರು ಸ್ಮಾರಕವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಪ್ರಧಾನಮಂತ್ರಿ ಶ್ರೀಮತಿ ಇಂದಿರಾಗಾಂಧಿ, ಉಪರಾಷ್ಟ್ರಪತಿ ಶ್ರೀ ಜಿ.ಎಸ್. ಪಾಠಕ್ ಮೊದಲಾದ ಗಣ್ಯರು ಈ ಅವಧಿಯಲ್ಲಿ ಭೇಟಿ ನೀಡಿದ್ದರು.

ವಿವೇಕಾನಂದ ಕೇಂದ್ರ ಸ್ಥಾಪನೆ

ಸ್ವಾಮಿ ವಿವೇಕಾನಂದರ ಶಿಲಾ ಸ್ಮಾರಕವೇನೋ ನಿರ್ಮಾಣವಾಯಿತು. ಆದರೆ ಏಕನಾಥ್ ಜೀ ರಾನಡೆಯವರು ಇಷ್ಟಕ್ಕೆ ಸುಮ್ಮನಾಗಲಿಲ್ಲ. ಅವರ ಮತ್ತೊಂದು ಸಂಕಲ್ಪ – ವಿವೇಕಾನಂದರ ಜೀವಂತ ಸ್ಮಾರಕವೊಂದನ್ನು ಸ್ಥಾಪಿಸಬೇಕೆಂಬುದು.ಯಾವ ತತ್ತ್ವಾದರ್ಶಗಳಿಗಾಗಿ ಸ್ವಾಮಿ ವಿವೇಕಾನಂದರು ಹಂಬಲಿಸಿದ್ದರೋ, ಅಂತಹ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು,ದೇಶದ ಅಭ್ಯುದಯಕ್ಕೆ ಶ್ರಮಿಸುವ, ದೀನ -ದುಃಖಿಗಳ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸುವ, ಸ್ತ್ರೀಪುರುಷರ ಪಡೆಯೊಂದು ಸಿದ್ಧಗೊಳ್ಳಬೇಕೆಂಬುದು ರಾನಡೆಯವರ ಕನಸಾಗಿತ್ತು.ಅವರ ಕನಸಿನ ಸಾಕಾರ ರೂಪ, 1972ರ ಜನವರಿ 7 ರಂದು(ಸ್ವಾಮಿ ವಿವೇಕಾನಂದರ 108 ನೇ ಜನ್ಮ ದಿನಾಚರಣೆಯ ನೆನಪಿನ ಅಂಗವಾಗಿ) ವಿವೇಕಾನಂದ ಕೇಂದ್ರದ ಸ್ಥಾಪನೆಯ ಮೂಲಕ ನೆರವೇರಿತು.ಕನ್ಯಾಕುಮಾರಿಯ ನೂರು ಎಕರೆಗಳಷ್ಟು ವಿಶಾಲವಾದ ವಿವೇಕಾನಂದ ಪುರಂ ನಲ್ಲಿ ಕೇಂದ್ರದ ಕಾರ್ಯಪದ್ದತಿ ಆರಂಭಗೊಂಡವು. “ಮನುಷ್ಯ ನಿರ್ಮಿತಿ ಮತ್ತು ರಾಷ್ಟ್ರ ನಿರ್ಮಾಣ” ವಿವೇಕಾನಂದ ಕೇಂದ್ರದ ಧ್ಯೇಯವಾಕ್ಯ.

ಕನ್ಯಾಕುಮಾರಿಯಲ್ಲಿರುವ ಸ್ವಾಮಿ ವಿವೇಕಾನಂದ ಕೇಂದ್ರ

ಸ್ವ ಇಚ್ಛೆಯಿಂದ ಸಾಮಾಜಿಕ ಸೇವೆಗಾಗಿ ತಮ್ಮನ್ನು ಸಮರ್ಪಿಸಿಕೊಳ್ಳುವ ಮನೋಭಾವದ ಯುವಕ ಯುವತಿಯರಿಗೆ ತರಬೇತಿ ನೀಡಿ, ದೇಶದ ಬೇರೆ ಬೇರೆ ಭಾಗಗಳಿಗೆ,ಹೆಚ್ಚಾಗಿ ಗುಡ್ಡಗಾಡು ಮತ್ತು ಗ್ರಾಮೀಣ ಪ್ರದೇಶಗಳಿಗೆ, ಸಮಾಜ ಸೇವಾ ಕೈಂಕರ್ಯಕ್ಕೆ ನಿಯೋಜಿಸಲಾಯಿತು. ಅಂದು ಆರಂಭಗೊಂಡ ವಿವೇಕಾನಂದ ಕೇಂದ್ರ, ಇಂದು ದೇಶದೆಲ್ಲೆಡೆ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ 245 ಶಾಖೆಗಳ ಮೂಲಕ 1500 ಸ್ಥಳಗಳಲ್ಲಿ ದಿನನಿತ್ಯವೂ ಯೋಗ ವರ್ಗ, ಸಂಸ್ಕಾರ ವರ್ಗ, ಸ್ವಾಧ್ಯಾಯ ವರ್ಗ ಮತ್ತು ಕೇಂದ್ರ ವರ್ಗಗಳೆಂಬ ಕಾರ್ಯಪದ್ದತಿಯನ್ನು ನಡೆಸುತ್ತಿದೆ.

ಶಿಕ್ಷಣ, ಗ್ರಾಮವಿಕಾಸ, ಸ್ವಾಸ್ಥ್ಯ ಮತ್ತು ಆರೋಗ್ಯ ಶಿಕ್ಷಣ,
ನೈಸರ್ಗಿಕ ಸoಸಾಧನ ವಿಕಾಸ, ಮಹಿಳೆಯರ ಮತ್ತು ಯುವಜನಾಂಗದ ಸಂವರ್ಧನೆ-ಇವುಗಳು ವಿವೇಕಾನಂದ ಕೇಂದ್ರದ ಸೇವಾ ಪ್ರಕಲ್ಪಗಳಾಗಿವೆ. ಶೈಕ್ಷಣಿಕ ಗತಿವಿಧಿಗಳು ವಿಭಾಗದಡಿಯಲ್ಲಿ ಅರುಣಾಚಲ ಪ್ರದೇಶ- 42 (ಇದರಲ್ಲಿ 2 ಶಾಲೆಗಳು ಕೇವಲ ಬಾಲಕಿಯರಿಗಾಗಿ ಕಾರ್ಯನಿರ್ವಹಿಸುತ್ತಿವೆ), ಅಸ್ಸಾಂ- 28,ಅಂಡಮಾನ್ ನಿಕೋಬಾರ್ – 11,ತಮಿಳುನಾಡು – 2, ಕರ್ನಾಟಕ- 1 ನಾಗಲ್ಯಾಂಡ್- 1 -ಹೀಗೆ 85 ವಿದ್ಯಾಲಯಗಳು ಕಾರ್ಯನಿರ್ವಹಿಸುತ್ತಿವೆ. ಹಾಗೆಯೇ ಗ್ರಾಮ ವಿಕಸನ ಕಾರ್ಯಕ್ರಮದಲ್ಲಿ 220 ಬಾಲವಾಡಿಗಳು,240 ಆನಂದಾಲಯಗಳು ಸೇರಿವೆ.ಮಕ್ಕಳ ಶಾರೀರಿಕ, ಮಾನಸಿಕ, ಭಾವನಾತ್ಮಕ, ಬೌದ್ಧಿಕ ಮತ್ತು ಆಧ್ಯಾತ್ಮಿಕ ವಿಕಸನಕ್ಕೆ ಸಮಾನವಾದ ಪ್ರಾಮುಖ್ಯತೆ ಇಲ್ಲಿನ ವಿಶೇಷತೆಯಾಗಿದೆ.

ಸ್ವಾಸ್ಥ್ಯ ಮತ್ತು ಆರೋಗ್ಯ ಶಿಕ್ಷಣ ವಿಭಾಗದಡಿ ಅಸ್ಸಾಂನ
ನುಮಾಲೀಗಢ, ಮಧ್ಯಪ್ರದೇಶದ ಬೀನಾ ಮತ್ತು ಒರಿಸ್ಸಾದ ಪಾರಾದೀಪಗಳಲ್ಲಿ 3 ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ.ಸಾಂಸ್ಕೃತಿಕ ವೇದಿಕೆಯಡಿ
ಸಾಮೂಹಿಕ ಸೂರ್ಯ ನಮಸ್ಕಾರ, ದೀಪ ಪೂಜೆ,
ಯೋಗ ವರ್ಗ, ಗೀತಾ ಪಠನ ವರ್ಗಗಳು;ಅವಾಸೀಯ ಶಿಬಿರಗಳು ಯೋಜನೆಯಡಿ ಯೋಗ ಶಿಕ್ಷಾ ಶಿಬಿರ, ಆಧ್ಯಾತ್ಮಿಕ ಶಿಬಿರ, ವ್ಯಕ್ತಿತ್ವ ವಿಕಾಸ ಶಿಬಿರ ಮತ್ತು ಯುವ ಪ್ರೇರಣಾ ಶಿಬಿರಗಳು ಜರುಗುತ್ತಿವೆ. ಕೇಂದ್ರದ ವತಿಯಿಂದ ಸಮರ್ಥ ಭಾರತ ಪರ್ವ- ವಿವೇಕಾನಂದ ಜಯಂತಿ(25/12 – 12/01),ಗುರುಪೂರ್ಣಿಮೆ,ವಿಶ್ವಭ್ರಾತೃತ್ವ ದಿವಸ (11/09),
ಸಾಧನಾ ದಿವಸ(18/11) ಹಾಗೂ ಗೀತಾ ಜಯಂತಿ ಉತ್ಸವಗಳನ್ನು ಆಚರಿಸಲಾಗುತ್ತದೆ.

2005 ರಲ್ಲಿ ಗ್ವಾಲಿಯರ್ ನಲ್ಲಿ 362 ಶಾಲೆಗಳ
29,973 ವಿದ್ಯಾರ್ಥಿಗಳಿಂದ ಏರ್ಪಡಿಸಿದ್ದ ಸಾಮೂಹಿಕ ಸೂರ್ಯ ನಮಸ್ಕಾರವು ಗಿನ್ನಿಸ್ ವಿಶ್ವದಾಖಲೆಗೆ ಸೇರ್ಪಡೆಗೊಂಡಿದೆ.ತನ್ನ ಅದ್ವಿತೀಯ ಸೇವೆಗಾಗಿ 2015ನೇ ಸಾಲಿನ ಗಾಂಧಿ ಶಾಂತಿ ಪ್ರಶಸ್ತಿ ಮುಡಿಗೇರಿಸಿಕೊಂಡ ಹೆಗ್ಗಳಿಕೆ ವಿವೇಕಾನಂದ ಕೇಂದ್ರದ್ದಾಗಿದೆ.

ರಾನಡೆಯವರ ಕನಸಿನ ಕೂಸಾದ ಸ್ವಾಮಿ ವಿವೇಕಾನಂದ ಕೇಂದ್ರ

“ಏಕ ಭಾರತ ವಿಜಯೀ ಭಾರತ”

ಇದೀಗ ಸ್ವಾಮಿ ವಿವೇಕಾನಂದ ಶಿಲಾಸ್ಮಾರಕಕ್ಕೆ ಸುವರ್ಣ ಸಂಭ್ರಮ. ಐವತ್ತು ವರ್ಷದ ವಾರ್ಷಿಕೋತ್ಸವವನ್ನು ‘”ಏಕ ಭಾರತ ವಿಜಯೀ ಭಾರತ” ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಗಿದೆ. ಈ ಸಂಭ್ರಮಾಚರಣೆಯನ್ನು ರಾಷ್ಟ್ರಪತಿಯಿಂದ ಮೊದಲ್ಗೊಂಡು ಉಪರಾಷ್ಟ್ರಪತಿ, ಪ್ರಧಾನಮಂತ್ರಿಗಳು, ಎಲ್ಲಾ ರಾಜ್ಯಗಳ ರಾಜ್ಯಪಾಲರುಗಳು, ಮುಖ್ಯಮಂತ್ರಿಗಳು, ವಿವೇಕಾನಂದ ಕೇಂದ್ರದ ಶಾಲೆಗಳಲ್ಲಿ ಓದಿದ ಹಳೆಯ ವಿದ್ಯಾರ್ಥಿಗಳು ಹಾಗೂ ಒಂದು ರೂ. ದೇಣಿಗೆ ನೀಡಿದವರೆಲ್ಲರನ್ನೂ ಭೇಟಿ ಮಾಡಲು ಪ್ರಯತ್ನಿಸಿ, ಅವರಿಂದ ಶುಭಾಶಯಗಳನ್ನು ಸ್ವೀಕರಿಸುವ ಮೂಲಕ ಯಶಸ್ವಿಗೊಳಿಸಲಾಗಿದೆ. ಹಾಗೆಯೇ ಶಿಲಾಸ್ಮಾರಕದ ಮಹತ್ವದ ಕುರಿತು ಮನೆಮನೆಯಲ್ಲೂ ಅರಿವು ಮೂಡಿಸುವ ಪ್ರಯತ್ನವೂ ಕೂಡ ಸಾಗಿದೆ.

2019 ರ ಸೆಪ್ಟೆಂಬರ್ 2ರಿಂದ ಆರಂಭಗೊಂಡಿರುವ ಈ ಸಂಭ್ರಮಾಚರಣೆಯ ಸಮಾರೋಪ ದೇಶದೆಲ್ಲೆಡೆ ನಡೆಯುತ್ತಿದೆ. ಅದರಂತೆ ಕರ್ನಾಟಕದಲ್ಲೂ ಸಹ ಬೆಂಗಳೂರು, ಮೈಸೂರು ಮತ್ತು ಧಾರವಾಡ ಭಾಗಗಳಲ್ಲಿ ಸಮಾರೋಪ ಸಮಾರಂಭವನ್ನು ಏರ್ಪಡಿಸಲಾಗಿದೆ. 31-10.-21 ರಂದು ಮೈಸೂರಿನ ಶ್ರೀ ಗೋವಿಂದರಾವ್ ಮೆಮೋರಿಯಲ್ ಹಾಲ್ ನಲ್ಲಿ ,14-11-21 ರಂದು ಧಾರವಾಡದಲ್ಲಿ , 21-11.21 ರಂದು ಬೆಂಗಳೂರಿನ ಜಿಗಣಿಯ ಕಲ್ಲುಬಾಳು ವಿವೇಕಾನಂದ ಕೇಂದ್ರ ವಿದ್ಯಾಲಯದಲ್ಲಿ ಸಮಾರೋಪ ಕಾರ್ಯಕ್ರಮ ನಡೆಯಲಿದೆ. ಇದು ಕೇವಲ ಸಮಾರೋಪವಾಗಿರದೆ, ಸ್ವಾಮಿ ವಿವೇಕಾನಂದ ಸ್ಮಾರಕದ ಕರ್ತೃ ಏಕನಾಥ್ ಜೀ ರಾನಡೆಯವರ ಅದ್ವಿತೀಯ ಸಾಧನೆಯ ಸ್ಮರಣೆಯೂ ಆಗಿರುವುದು ಅರ್ಥಗರ್ಭಿತವಾಗಿದೆ.

ವಿವೇಕಾನಂದ ಕೇಂದ್ರಕ್ಕೆ ದೇಣಿಗೆ ನೀಡಬಯಸುವವರು ಹಾಗೂ ಅಲ್ಲಿನ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸುವ ಆಸಕ್ತಿ ಉಳ್ಳವರು ಸಂಪರ್ಕಿಸಿ:
ವಿವೇಕಾನಂದ ಕೇಂದ್ರ ವಿದ್ಯಾಲಯ, ಕಲ್ಲುಬಾಳು, ಜಿಗಣಿ
ಸಂಪರ್ಕ ಸಂಖ್ಯೆ: 94486 70527

(ಮುಗಿಯಿತು)

ಲೇಖನ: ಮಣ್ಣೆ ಮೋಹನ್
(M)-6360507617
[email protected]

ಜಿಲ್ಲೆ

ರಾಜ್ಯ

error: Content is protected !!