Friday, September 20, 2024

“ಏಕ ಭಾರತ ವಿಜಯೀ ಭಾರತ” ಸ್ವಾಮಿ ವಿವೇಕಾನಂದರ ಶಿಲಾಸ್ಮಾರಕ,ಪ್ರಸ್ತುತ:

ಏಕನಾಥ್ ಜೀ ರಾನಡೆ: ಈ ಹೆಸರನ್ನು ಎಷ್ಟು ಜನ ಕೇಳಿದ್ದಾರೆ?
ಕರ್ನಾಟಕದ 7 ಕೋಟಿ ಕನ್ನಡಿಗರಲ್ಲಿ 7 ಲಕ್ಷ ಜನಕ್ಕಾದರೂ ಈ ಹೆಸರು ಗೊತ್ತಿರಬಹುದೇ? ಅದೂ ಅನುಮಾನವಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘ, ಸ್ವಾಮಿ ವಿವೇಕಾನಂದ ಕೇಂದ್ರಗಳು, ರಾಮಕೃಷ್ಣ ಮಿಷನ್ ಗಳನ್ನು ಹೊರತುಪಡಿಸಿ ಉಳಿದವರಿಗೆ ಈ ಹೆಸರಿನ ಪರಿಚಯ ಅಷ್ಟಕ್ಕಷ್ಟೇ. ನಮ್ಮ ಮಕ್ಕಳಿಗಂತೂ ಇವರ ಬಗ್ಗೆ ಗೊತ್ತೇ ಇಲ್ಲ ಎನ್ನಬಹುದು. ಹಾಗೆಯೇ ಕಾಲೇಜು ವಿದ್ಯಾರ್ಥಿಗಳಿಗೂ ಸಹ. ಏಕೆಂದರೆ ಇವರ ಬಗ್ಗೆ ಪಾಠವಾಗಲಿ, ಪ್ರಬಂಧವಾಗಲಿ, ಕವನವಾಗಲಿ ಯಾವುದೇ ಪಠ್ಯಪುಸ್ತಕದಲ್ಲಿ ಇರಲು ಸಾಧ್ಯವಿಲ್ಲ. ಮಕ್ಕಳಿಗೆ ಕಲಿಸಬೇಕಾದ ಶಿಕ್ಷಕರಿಗೂ ಕೂಡ ಇವರ ಬಗ್ಗೆ ತಿಳಿದಿರುವುದು ಅಷ್ಟಕಷ್ಟೆ.ಕೇವಲ ಬೆರಳೆಣಿಕೆಯಷ್ಟು ಮಂದಿಗೆ ಮಾತ್ರ ಗೊತ್ತಿರಬಹುದು.ಇದು ನಮ್ಮ ರಾಜ್ಯಕ್ಕೆ ಮಾತ್ರ ಮೀಸಲಾಗದೇ,ಎಲ್ಲ ರಾಜ್ಯಗಳದ್ದು ಇದೇ ಕಥೆ ಎನ್ನಬಹುದು.

ಇದೀಗ ಇನ್ನೊಂದು ಪ್ರಶ್ನೆ:
ಕನ್ಯಾಕುಮಾರಿಯಲ್ಲಿರುವ ವಿವೇಕಾನಂದ ಶಿಲಾಸ್ಮಾರಕ ಗೊತ್ತೆ?
ಬಹುಶಃ ಕರ್ನಾಟಕದ 7 ಕೋಟಿ ಜನರಲ್ಲಿ ಅಂದಾಜು 7 ಲಕ್ಷ ಜನರನ್ನು ಹೊರತುಪಡಿಸಿದರೆ ಉಳಿದವರೆಲ್ಲರಿಗೂ ಗೊತ್ತಿರುತ್ತದೆ. ತಮ್ಮ ಪ್ರವಾಸಗಳ ಮೂಲಕ, ಕ್ಯಾಲೆಂಡರ್ ಗಳಲ್ಲಿ, ಪತ್ರಿಕೆಗಳಲ್ಲಿ ಈ ಬಗ್ಗೆ ಎಲ್ಲರ ಅರಿವಿಗೆ ಬಂದಿರುತ್ತದೆ. ಕನ್ಯಾಕುಮಾರಿಯ ಕಡಲತೀರದಲ್ಲಿ ನಿಂತು,ಟಿಕೆಟ್ ಪಡೆದು ಬೋಟ್ ಗಳಲ್ಲಿ ಕುಳಿತು,ಸಮುದ್ರದ ಮಧ್ಯದ ಬಂಡೆಗೆ ತೆರಳಿ, ಸ್ವಾಮಿ ವಿವೇಕಾನಂದರ ಭವ್ಯಮೂರ್ತಿಗೆ ತಲೆಬಾಗಿ, ಧ್ಯಾನಮಂದಿರದಲ್ಲಿ ಕೊಂಚ ಹೊತ್ತು ಕುಳಿತು ಧ್ಯಾನಿಸಿ, ಆರ್ಭಟಿಸುವ ಸಮುದ್ರದಲೆಗಳ ಅಬ್ಬರಕ್ಕೆ ಬೆರಗಾಗಿ, ತ್ರಿವೇಣಿ ಸಾಗರಸಂಗಮ ಸ್ಥಳದ ಸೌಂದರ್ಯವನ್ನು, ಸೂರ್ಯೋದಯ- ಸೂರ್ಯಾಸ್ತಗಳ ನಯನ ಮನೋಹರ ದೃಶ್ಯಗಳನ್ನು ಎಲ್ಲರೂ ಕಣ್ತುಂಬಿಕೊಂಡಿರುತ್ತಾರೆ.

ಏಕನಾಥ ರಾನಡೆ ಜಿ ಭಾವಚಿತ್ರ.

ಇಂತಹ ಅದ್ಭುತ ವಿವೇಕಾನಂದ ಶಿಲಾಸ್ಮಾರಕದ ಕರ್ತೃವೇ ಏಕನಾಥ್ ಜೀ ರಾನಡೆಯವರು.ಬರೀ ಕರ್ತೃ ಎಂದರೆ ಮುಗಿಯಿತೆ? ಖಂಡಿತಾ ಇಲ್ಲ.ಹಾಗಾದರೆ ಮತ್ತೇನು?
ಆ ರೋಚಕ ಕಥನವನ್ನು ಎಲ್ಲರೂ ತಿಳಿದುಕೊಳ್ಳಲೇಬೇಕು.

ಕನ್ಯಾಕುಮಾರಿಯಲ್ಲಿ ಸ್ವಾಮಿ ವಿವೇಕಾನಂದರು:-ಶ್ರೀ ರಾಮಕೃಷ್ಣ ಪರಮಹಂಸರಿಂದ ಸ್ಫೂರ್ತಿ ಪಡೆದು, ಸಮಾಜ ಸೇವೆಗೆ ತನ್ನ ಸಂಪೂರ್ಣ ಜೀವನವನ್ನು ಮುಡುಪಾಗಿಟ್ಟು,ಎರಡು ವರ್ಷಗಳ ಕಾಲ ಭಾರತದುದ್ದಕ್ಕೂ ಪರಿಕ್ರಮಣ ಮಾಡಿದ ಸ್ವಾಮಿ ವಿವೇಕಾನಂದರು 1892 ರ ಡಿಸೆಂಬರ್ 25 ರಂದು ಕನ್ಯಾಕುಮಾರಿಗೆ ಪಾದಾರ್ಪಣೆ ಮಾಡುತ್ತಾರೆ. ಉತ್ತರದ ತುತ್ತತುದಿಯ ಹಿಮಚ್ಛಾದಿತ ಶಿಖರಗಳ ನೆತ್ತಿಯಿಂದ ಆರಂಭಗೊಂಡ ಅವರ ಪರಿಕ್ರಮಣ ಕನ್ಯಾಕುಮಾರಿಯಲ್ಲಿ ಮುಕ್ತಾಯವಾಗಿತ್ತು. ಅಲ್ಲಿ ಅವರ್ಣನೀಯ ಅನುಭವವೊoದು ಅವರಿಗಾಯಿತು. ಭಗವತಿ ಕನ್ಯಾಕುಮಾರಿಯನ್ನು ದರ್ಶಿಸಿ ಪ್ರಾರ್ಥಿಸಿದರು.

ಭಾರತಮಾತೆಯ ಪಾದಪದ್ಮಗಳನ್ನು ತೊಳೆಯುತ್ತಿರುವ ಸಾಗರವನ್ನು ತದೇಕಚಿತ್ತದಿಂದ ವೀಕ್ಷಿಸುತ್ತಾರೆ. ಸಾಗರದ ಮಧ್ಯದ ಬಂಡೆ ಅವರನ್ನಾಕರ್ಷಿಸುತ್ತದೆ. ಸಮುದ್ರದಲ್ಲಿ ಈಜಿ ಆ ಬಂಡೆಯನ್ನು ತಲುಪುತ್ತಾರೆ. ಭರತಖಂಡದ ದಕ್ಷಿಣದ ತುತ್ತತುದಿಯ ಆ ಮಹಾಬಂಡೆಯ ಮೇಲೆ ಕುಳಿತು ತಾಯ್ನಾಡಿನ ಸ್ಥಿತಿಗತಿಗಳ ಬಗ್ಗೆ ಚಿಂತಿಸುತ್ತಾರೆ. 1892 ರ ಡಿಸೆಂಬರ್ 25,26,27 ರಂದು ಮೂರು ದಿನಗಳ ಕಾಲ ಅಲ್ಲಿಯೇ ಧ್ಯಾನ ಮಗ್ನರಾಗುತ್ತಾರೆ.

ಧ್ಯಾನದ ನಂತರ ಎಚ್ಚರಗೊಂಡಾಗ ಸ್ವಾಮೀಜಿಯವರ ಕಣ್ಣಂಚಿನಲ್ಲಿ ಮಿಂಚೊಂದು ಸಂಚರಿಸುತ್ತದೆ. ಚಿಕಾಗೋದಲ್ಲಿ ನಡೆವ ವಿಶ್ವ ಸರ್ವಧರ್ಮ ಸಮ್ಮೇಳನದಲ್ಲಿ ಪಾಲ್ಗೊಂಡು,ಸನಾತನ ಹಿಂದೂ ಧರ್ಮದ ಮಹತ್ವವನ್ನು ಜಗತ್ತಿನೆಲ್ಲೆಡೆ ಪಸರಿಸಬೇಕೆಂದು ನಿರ್ಧರಿಸುತ್ತಾರೆ. ಆ ಮೂಲಕ ತಮ್ಮತನವನ್ನು ಕಳೆದುಕೊಂಡಿರುವ ಭಾರತೀಯರಲ್ಲಿ ಮತ್ತೆ ಆ ಪ್ರಜ್ಞೆ ಮರುಕಳಿಸುವಂತೆ ಮಾಡಲು ದೃಢನಿರ್ಧಾರಕ್ಕೆ ಬರುತ್ತಾರೆ.

ಮದ್ರಾಸಿನ ಅಲಸಿಂಗ ಪೆರುಮಾಳ್ ಮತ್ತು ಗೆಳೆಯರ ಚಿತ್ರ.

ಚಿಕಾಗೋಗೆ ತೆರಳಲು ಹೆಚ್ಚು ಹಣದ ಅವಶ್ಯಕತೆ ಇರುತ್ತದೆ. ವಿವೇಕಾನಂದರು ಮದ್ರಾಸ್‌ಗೆ ಬಂದಾಗ ಅಲಸಿಂಗ ಎಂಬ ಕಾಲೇಜು ವಿದ್ಯಾರ್ಥಿ ಮತ್ತು ಅವರ ಸ್ನೇಹಿತರು ಅವರನ್ನು ಭೇಟಿಯಾಗಿ ಅವರ ಶಿಷ್ಯರಾಗುತ್ತಾರೆ. ಅವರೆಲ್ಲ ವಿವೇಕಾನಂದರ ಪ್ರಯಾಣಕ್ಕಾಗಿ ಹಣವನ್ನು ಸಂಗ್ರಹಿಸಲು ತೊಡಗುತ್ತಾರೆ. ಕಾಲೇಜು ವಿದ್ಯಾರ್ಥಿಗಳ ಬಳಿ ಒಂದೊಂದು ರೂ. ಗಳಂತೆ ಸಂಗ್ರಹಿಸುತ್ತಾರೆ.ಕೇವಲ ಐನೂರು ರೂ. ಸಂಗ್ರಹವಾಗುತ್ತದೆ. ಆದರೆ ರಾಮಕೃಷ್ಣ ಪರಮಹಂಸರ ಅನುಗ್ರಹ ದೊರೆಯಲಿಲ್ಲ ಎಂಬ ಕಾರಣಕ್ಕೆ ವಿವೇಕಾನಂದರು ಚಿಕಾಗೋ ಪ್ರವಾಸವನ್ನು ರದ್ದುಗೊಳಿಸುತ್ತಾರೆ. ಅಳಸಿಂಗ ಮತ್ತು ಗೆಳೆಯರು ಸಂಗ್ರಹಿಸಿದ ಹಣವನ್ನು ಎಲ್ಲರಿಗೂ ಹಿಂದಿರುಗಿಸುತ್ತಾರೆ.

ಸ್ವಾಮಿ ವಿವೇಕಾನಂದರು ಶಾರದಾ ಮಾತೆಗೆ ಪತ್ರ ಬರೆದು ಚಿಕಾಗೋ ಉಪನ್ಯಾಸಕ್ಕೆ ತೆರಳುವ ಬಗ್ಗೆ ತಮ್ಮ ಸಂದೇಹವನ್ನು ವ್ಯಕ್ತಪಡಿಸುತ್ತಾರೆ. ಶಾರದಾಮಾತೆಯವರು ರಾಮಕೃಷ್ಣ ಪರಮಹಂಸರ ಅನುಗ್ರಹವಾಗಿದೆಯೆoದು, ಹೋಗಬಹುದೆಂದು ಸಲಹೆ ನೀಡುತ್ತಾರೆ. ಅಳಸಿಂಗ ಮತ್ತು ಅವರ ತಂಡದ ಇತರ ಸದಸ್ಯರು ಹೊಸ ಉತ್ಸಾಹದಿಂದ ಮತ್ತೊಮ್ಮೆ ಹಣವನ್ನು ಸಂಗ್ರಹಿಸಲು ಪ್ರಾರಂಭಿಸಿದರು. ಹೀಗೆ ಸಂಗ್ರಹಿಸಿದ ಹಣ ₹ 4000 ಗಳು.ನಂತರ ಅನೇಕ ಕಡೆಗಳಿಂದ ವಿವೇಕಾನಂದರಿಗೆ ಹಣದ ಸಹಾಯ ಒದಗಿ ಬರುತ್ತದೆ. ಮುಂದೆ ವಿವೇಕಾನಂದರು ಅಮೆರಿಕದಲ್ಲಿ ಹಣದ ಮುಗ್ಗಟ್ಟಿನಿಂದ ಸಮಸ್ಯೆಗೆ ಸಿಲುಕಿದಾಗ ಇದೇ ಅಳಸಿಂಗರವರು ವರ್ತಕರಿಂದ ದೇಣಿಗೆ ಸಂಗ್ರಹಿಸಿ ಹಾಗೂ ತನ್ನ ಹೆಂಡತಿಯ ಒಡವೆಗಳನ್ನು ಮಾರಿ ವಿವೇಕಾನಂದರಿಗೆ ಹಣವನ್ನು ಕಳಿಸುತ್ತಾರೆ.

ಮೈಸೂರು ದೊರೆ ನಾಲ್ವಡಿ ಕೃಷ್ಣರಾಜ ಒಡೆಯರ್

1893ರ ಸೆಪ್ಟೆಂಬರ್ 11ರಂದು ಅಮೆರಿಕಾದ ಚಿಕಾಗೋದಲ್ಲಿ ಅವರು ಮಾಡಿದ ಐತಿಹಾಸಿಕ ಭಾಷಣ, ಭಾರತದ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ದಾಖಲಿಸುವಂಥದ್ದು. ಹಾಗೆ ದಾಖಲಿಸಲು ಬಳಸುವ ಲೇಖನಿಗೆ ಶಾಹಿ ಒದಗಿಸಿದ್ದು ನಮ್ಮ ಮೈಸೂರು ಸಂಸ್ಥಾನ ಎಂದರೆ ನಿಮಗೆಲ್ಲ ಆಶ್ಚರ್ಯವಾಗಬಹುದು.ಆದರೆ ಇದು ದಿಟ. ಮೈಸೂರು ಸಂಸ್ಥಾನಕ್ಕೆ ಆಗಮಿಸಿದ್ದ ವಿವೇಕಾನಂದರಿಗೆ ಚಿಕಾಗೋ ಸಮ್ಮೇಳನದಲ್ಲಿ ಪಾಲ್ಗೊಳ್ಳುವಂತೆ ಸಲಹೆ ನೀಡಿ, ಅದಕ್ಕೆ ತಗುಲಿದ ಸಂಪೂರ್ಣ ವೆಚ್ಚವನ್ನು ಭರಿಸಿದ್ದು ಆಗಿನ ಅರಸ 10ನೇ ಜಯಚಾಮರಾಜೇಂದ್ರ ಒಡೆಯರ್.ಆ ನಂತರದ್ದು ಇತಿಹಾಸ. ಹಾಗೆಯೇ ರಾಜಸ್ಥಾನದ ಖೆತಡಿಯ ರಾಜ ಅಜಿತ್ ಸಿಂಗ್ ಸ್ವಾಮೀಜಿಯನ್ನು ತಮ್ಮ ಆಸ್ಥಾನಕ್ಕೆ ಕರೆಸಿಕೊಂಡು, ಚಿಕಾಗೋ ತಲುಪಲು ತಗಲುವ ವೆಚ್ಚವನ್ನು ಭರಿಸಿ, ಹೊಸ ರೇಷ್ಮೆಯ ಉಡುಪುಗಳನ್ನು ನೀಡಿ ಕಳುಹಿಸಿ ಕೊಟ್ಟಿದ್ದರು. ರಾಮನಾಡಿನ ರಾಜ ವಿವೇಕಾನಂದರಿಗೆ ಸಹಾಯದ ಭರವಸೆ ನೀಡಿ ಆನಂತರ ತಮ್ಮ ಮಾತಿನಿಂದ ಹಿಂದೆ ಸರಿದರು. ಹೈದರಾಬಾದ್ ನವಾಬ 1000 ರೂ.ಗಳನ್ನು ಪ್ರವಾಸದ ಖರ್ಚಿಗೆoದು ನೀಡಿದರು.

ಚಿಕಾಗೋ ಭಾಷಣದ ನಂತರ ಭಾರತಕ್ಕೆ ಬಂದ ಸ್ವಾಮೀಜಿಗಳು “ಏಳಿ। ಎದ್ದೇಳಿ! ಗುರಿ ಮುಟ್ಟುವವರೆಗೂ ನಿಲ್ಲದಿರಿ” ಎಂಬ ಸಂದೇಶವನ್ನು ಜನರಿಗೆ ನೀಡುತ್ತಾರೆ.
(ಮುಂದುವರಿಯುತ್ತದೆ)

ಮುಂದಿನ ಭಾಗದಲ್ಲಿ: *ಸ್ಮಾರಕ ನಿರ್ಮಾಣದ ಮಹಾಯಜ್ಞಕ್ಕೆ ಆರಂಭದ ವಿಘ್ನ* (ಭಾಗ -2 ನಿರೀಕ್ಷಿಸಿ.)

(ಸ್ವಾಮಿ ವಿವೇಕಾನಂದರ ಶಿಲಾಸ್ಮಾರಕ ಸಂಭ್ರಮಾಚರಣೆಯ ಸಮಾರೋಪ ದೇಶದೆಲ್ಲೆಡೆ ನಡೆಯುತ್ತಿದೆ. 2019 ರ ಸೆಪ್ಟೆಂಬರ್ 2ರಿಂದ ಆರಂಭಗೊಂಡಿರುವ ಈ ಸಂಭ್ರಮಾಚರಣೆಯು. ಕರ್ನಾಟಕದಲ್ಲೂ ಸಹ ಬೆಂಗಳೂರು, ಮೈಸೂರು ಮತ್ತು ಧಾರವಾಡ ಭಾಗಗಳಲ್ಲಿ ಸಮಾರೋಪ ಸಮಾರಂಭವನ್ನು ಏರ್ಪಡಿಸಲಾಗಿದೆ. 31-10.-21 ರಂದು ಮೈಸೂರಿನ ಶ್ರೀ ಗೋವಿಂದರಾವ್ ಮೆಮೋರಿಯಲ್ ಹಾಲ್ ನಲ್ಲಿ ,14-11-21 ರಂದು ಧಾರವಾಡದಲ್ಲಿ , 21-11.21 ರಂದು ಬೆಂಗಳೂರಿನ ಜಿಗಣಿಯ ಕಲ್ಲುಬಾಳು ವಿವೇಕಾನಂದ ಕೇಂದ್ರ ವಿದ್ಯಾಲಯದಲ್ಲಿ ಸಮಾರೋಪ ಕಾರ್ಯಕ್ರಮ ನಡೆಯಲಿದೆ. ಇದು ಕೇವಲ ಸಮಾರೋಪವಾಗಿರದೆ, ಸ್ವಾಮಿ ವಿವೇಕಾನಂದ ಸ್ಮಾರಕದ ಕರ್ತೃ ಏಕನಾಥ್ ಜೀ ರಾನಡೆಯವರ ಅದ್ವಿತೀಯ ಸಾಧನೆಯ ಸ್ಮರಣೆಯೂ ಆಗಿರುವುದು ಅರ್ಥಗರ್ಭಿತವಾಗಿದೆ.

ವಿವೇಕಾನಂದ ಕೇಂದ್ರಕ್ಕೆ ದೇಣಿಗೆ ನೀಡಬಯಸುವವರು ಹಾಗೂ ಅಲ್ಲಿನ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸುವ ಆಸಕ್ತಿ ಉಳ್ಳವರು ಸಂಪರ್ಕಿಸಿ: ವಿವೇಕಾನಂದ ಕೇಂದ್ರ ವಿದ್ಯಾಲಯ, ಕಲ್ಲುಬಾಳು, ಜಿಗಣಿ. ಸಂಪರ್ಕ ಸಂಖ್ಯೆ: 94486 70527)

ಲೇಖನ:-ಮಣ್ಣೆ ಮೋಹನ್
(M)-6360507617
[email protected]

ಜಿಲ್ಲೆ

ರಾಜ್ಯ

error: Content is protected !!