Tuesday, May 28, 2024

ಆಡಂಬರವೇ ಪ್ರಧಾನ! ಅಭಿವೃದ್ಧಿ ನಿಧಾನ! ಕಿತ್ತೂರು ಚನ್ನಮ್ಮನಿಗೆ ಅವಮಾನ? “ಇಂದಿನಿಂದ ಕಿತ್ತೂರು ಉತ್ಸವ”:

ಕಿತ್ತೂರು ಚನ್ನಮ್ಮ- ಈ ಹೆಸರನ್ನು ಕೇಳದ ಕನ್ನಡಿಗರಿಲ್ಲ.ಆ ಹೆಸರನ್ನು ಕೇಳಿದಾಕ್ಷಣ ಮೈ ರೋಮಾಂಚನಗೊಳ್ಳುತ್ತದೆ, ಮನ ಹೆಮ್ಮೆಯಿಂದ ಹಿಗ್ಗುತ್ತದೆ. ಕನ್ನಡಿಗರ ಸ್ವಾಭಿಮಾನ, ಶೌರ್ಯ-ಸಾಹಸಗಳ ಸಂಕೇತವಾಗಿ, ಮಹಿಳೆಯೊಬ್ಬಳ ದಿಟ್ಟ ಹೋರಾಟದ ಕಥನವಾಗಿ ನಮ್ಮ ಮನಗಳಲ್ಲಿ ಅಚ್ಚೊತ್ತಿದೆ.
ಭಾರತದ ಪ್ರಥಮ ಸ್ವಾತಂತ್ರ್ಯಸಂಗ್ರಾಮಕ್ಕೆ 33 ವರ್ಷಗಳ ಮೊದಲೇ ಬ್ರಿಟಿಷರ ವಿರುದ್ಧ ಹೋರಾಟದ ರಣ ಕಹಳೆಯನ್ನು ಊದಿ, ಧೈರ್ಯದಿಂದ ಮುನ್ನುಗ್ಗಿ ಪರಾಕ್ರಮ ಮೆರೆದು, ಬ್ರಿಟಿಷ್ ಕಲೆಕ್ಟರ್ ಥ್ಯಾಕರೆ ಸಾಹೇಬನ ರುಂಡ ಚೆಂಡಾಡಿ ವಿಜಯ ಪತಾಕೆ ಹಾರಿಸಿದ ವೀರವನಿತೆ ಕಿತ್ತೂರು ಚನ್ನಮ್ಮ.

ಕಿತ್ತೂರಿನ ಇತಿಹಾಸ: ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಧಾರವಾಡ-ಬೆಳಗಾವಿ ನಡುವೆ ಇರುವ ಒಂದು ಪುಟ್ಟ ಊರು ಕಿತ್ತೂರು,ಮೂರ್ತಿ ಪುಟ್ಟದಾದರೂ ಕೀರ್ತಿ ದೊಡ್ಡದು ಎಂಬಂತೆ ಈ ಊರಿನ ಇತಿಹಾಸ ಬಲು ವಿಶಿಷ್ಟ.ಇಲ್ಲಿನ ಮಣ್ಣಿನ ಗುಣವೇ ಸ್ವಾಭಿಮಾನ, ಪರಾಕ್ರಮ ಮತ್ತು ದೇಶಪ್ರೇಮ. ಇದು ಬೈಲಹೊಂಗಲದಿಂದ 26 ಕಿ.ಮೀ ದೂರದಲ್ಲಿದೆ.12 ನೇ ಶತಮಾನದಿಂದಲೇ ಕಿತ್ತೂರು ಒಂದು ಐತಿಹಾಸಿಕ ಪಟ್ಟಣವಾಗಿತ್ತು.ಆದರೆ ಅದು ಹೋರಾಟದ ಕೇಂದ್ರವಾಗಿ ಪ್ರಸಿದ್ಧಿಗೆ ಬಂದದ್ದು 16 ನೆಯ ಶತಮಾನದಿಂದೀಚೆಗೆ. ಮಲೆನಾಡಿನ ಗೌಡಕುಲಕ್ಕೆ ಸೇರಿದ ಹಿರೇಮಲ್ಲ ಮತ್ತು ಚಿಕ್ಕಮಲ್ಲ ಎಂಬ ಸಹೋದರರು ಈ ಮನೆತನದ ಸ್ಥಾಪಕರು. ಬಿಜಾಪುರದ ಸುಲ್ತಾನರಿಂದ ಕಿತ್ತೂರು ಸಂಸ್ಥಾನವನ್ನು ದತ್ತಿ ಪಡೆದು,ಸಂಪಗಾವ್ ಎಂಬಲ್ಲಿ ನೆಲೆಸಿ,1585 ರ ಸುಮಾರಿಗೆ ಕಿತ್ತೂರು ದೇಸಾಯರ ಮನೆತನವನ್ನು ಸ್ಥಾಪಿಸಿದರು. 1585-1824ರ ಅವಧಿಯಲ್ಲಿ ಕಿತ್ತೂರು ಸಂಸ್ಥಾನವನ್ನು 12 ದೇಸಾಯ ಕುಟುಂಬಗಳು ಆಳ್ವಿಕೆ ನಡೆಸಿದವು.

ಕಿತ್ತೂರಿನ 5ನೇ ದೊರೆಯಾಗಿ ಶಿವನಗೌಡ ಸರ್ದೇಸಾಯಿ 1717 ರಿಂದ 1734 ರವರೆಗೆ ಆಳ್ವಿಕೆ ಮಾಡಿದ. ಈತನ ನಂತರ ಮಾಳವ ರುದ್ರಗೌಡ 1734 ರಿಂದ 1749 ರವರೆಗೆ ರಾಜ್ಯಭಾರ ಮಾಡಿದನು.ಈತನ ಪತ್ನಿ ರಾಣಿ ಮಲ್ಲಮ್ಮ ಮಹಾಧೈರ್ಯಶಾಲಿಯಾಗಿದ್ದಳು.

ಬಿಜಾಪುರದ ಸುಲ್ತಾನರ ಅವನತಿಯ ನಂತರ ಕಿತ್ತೂರು ಸಂಸ್ಥಾನ ಸವಣೂರಿನ ನವಾಬರ ಪಾಲಾಯಿತು.1746ರಲ್ಲಿ ಸವಣೂರಿನ ನವಾಬ ಕಿತ್ತೂರನ್ನು ಮರಾಠರ ವಶಕ್ಕೆ ಒಪ್ಪಿಸಿದ.1749 ರಲ್ಲಿ ಮಾಳವ ರುದ್ರಸರ್ಜನ ಮರಣಾನಂತರ ಅವನ ದತ್ತುಪುತ್ರ ವೀರಪ್ಪಗೌಡ ದೇಸಾಯಿ, ಪೇಶ್ವೆಗಳು ಮತ್ತು ಹೈದರಾಲಿಯನ್ನು ಸೋಲಿಸಿ ಕಿತ್ತೂರಿನ ರಾಜನಾದ. ಆ ಮೂಲಕ ಪೇಶ್ವೆಗಳಿಗೆ ಸೋಲಿನ ರುಚಿ ತೋರಿಸಿದ ಕನ್ನಡದ ಮೊದಲ ರಾಜ ಎನಿಸಿಕೊಂಡ.1978 ರಲ್ಲಿ ಗೋಕಾಕ್ ಮತ್ತು ಸವದತ್ತಿಗಳನ್ನು ವಶಪಡಿಸಿಕೊಂಡು ಕಿತ್ತೂರು ಸಂಸ್ಥಾನವನ್ನು ವಿಸ್ತರಿಸಿದ.ಆದರೆ ಆ ಗೆಲುವಿನ ಸಂತೋಷ ಹೆಚ್ಚು ದಿನ ಉಳಿಯಲಿಲ್ಲ.ಅದೇ ವರ್ಷ ಮತ್ತೆ ಹೈದರಾಲಿಯು ಕಿತ್ತೂರಿನ ಮೇಲೆ ದಾಳಿ ಮಾಡಿ, ದೇಸಾಯಿಯನ್ನು ಸೋಲಿಸಿ ಅವನಿಂದ ಕಪ್ಪಕಾಣಿಕೆಯನ್ನು ವಸೂಲಿ ಮಾಡಿದ. 1779 ರಲ್ಲಿ ಪೇಶ್ವೆ ದೊರೆ ಪರಶುರಾಮಭಾವು ಗೋಕಾಕನ್ನು ವಶಪಡಿಸಿಕೊಂಡು ದೇಸಾಯಿಯನ್ನು ಸೆರೆಹಿಡಿದು ಮೀರಜ್ ನಲ್ಲಿ ಬಂಧನದಲ್ಲಿರಿಸಿದ.1782 ರಲ್ಲಿ ಆತ ಸೆರೆಮನೆಯಲ್ಲಿಯೇ ಮರಣ ಹೊಂದಿದ.

ವೀರಪ್ಪಗೌಡ ದೇಸಾಯಿಗೆ ಮಕ್ಕಳಿಲ್ಲದ ಕಾರಣ ಅವನ ದತ್ತುಪುತ್ರ ಮಲ್ಲಸರ್ಜ ದೇಸಾಯಿ 1782 ರಲ್ಲಿ ಕಿತ್ತೂರಿನ ಸಿಂಹಾಸನವನ್ನೇರಿದ.1785 ರಲ್ಲಿ ಮೈಸೂರು ದೊರೆ ಟಿಪ್ಪೂಸುಲ್ತಾನ್ ಕಿತ್ತೂರಿನ ಮೇಲೆ ಯುದ್ಧ ಮಾಡಿ ಮಲ್ಲಸರ್ಜನನ್ನು ಬಂಧಿಸಿ,ಶ್ರೀರಂಗಪಟ್ಟಣದಲ್ಲಿ ಬಂಧನದಲ್ಲಿರಿಸಿ, ಕಿತ್ತೂರಿನಲ್ಲಿ ತನ್ನ ಸೈನ್ಯದ ಭಾಗವೊಂದನ್ನು ನಿಯೋಜಿಸಿದ.1788 ರಲ್ಲಿ ಮಲ್ಲಸರ್ಜನು ಬಂಧನದಿಂದ ತಪ್ಪಿಸಿಕೊಂಡು ಕಿತ್ತೂರಿಗೆ ಬಂದು ಮತ್ತೆ ರಾಜನಾದ. ಕೊಲ್ಲಾಪುರದ ದೇಸಾಯರು, ದಕ್ಷಿಣದ ದೇಸಾಯರನ್ನು ಒಗ್ಗೂಡಿಸಿ, ಬಲಶಾಲಿ ಸಾಮ್ರಾಜ್ಯ ಕಟ್ಟಲು ಯತ್ನಿಸಿದನು. ಅದಕ್ಕಾಗಿ ಊರೂರು ಅಲೆಯುತ್ತ ಒಮ್ಮೆ ಬೆಳಗಾವಿ ಜಿಲ್ಲೆಯ ಕಾಕತಿಗೂ ಬಂದನು. ಬರುವ ದಾರಿಯಲ್ಲಿ ತರುಣನೊಬ್ಬ ಹುಲಿಯೊಂದಿಗೆ ಸೆಣಸಿ, ಬೇಟೆಯಾಡಿದ್ದನ್ನು ಕಣ್ಣಾರೆ ಕಂಡು,ಯುವಕನ ಪರಾಕ್ರಮಕ್ಕೆ ಬೆರಗಾಗಿ ತನ್ನ ಕಠಾರಿಯನ್ನು ಬಹುಮಾನವಾಗಿ ನೀಡಿದನು. ನಂತರ ತಿಳಿಯಿತು ಹುಲಿಯೊಂದಿಗೆ ಕಾದಾಡಿದ್ದು ಯುವಕನಲ್ಲ,ಪುರಷ ವೇಷದ ಚನ್ನಮ್ಮನೆಂಬವೀರಾಗ್ರಣಿಯೆoದು.

ವೀರವನಿತೆ ಚನ್ನಮ್ಮನ ಆಗಮನ:-ಚನ್ನಮ್ಮನು 1778 ರಲ್ಲಿ  ಕಾಕತಿಯ ದೇಸಾಯಿ ದೂಳಪ್ಪಗೌಡ-ಪದ್ಮಾವತಿಯವರ ಏಕಮಾತ್ರ ಪುತ್ರಿಯಾಗಿ ಜನಿಸಿದಳು. ಚನ್ನಮ್ಮನ ಕುಟ್ಟಿದ ಜಾತಕ ನೋಡಿದ ಶರಣರು ಈಕೆ ಮುಂದೆ ನಾಡಿನ
ರಾಣಿಯಾಗುತ್ತಾಳೆಂದು ಭವಿಷ್ಯ ನುಡಿದರು. ಇದಕ್ಕನುಗುಣವಾಗಿ ದೂಳಪ್ಪಗೌಡ ದೇಸಾಯಿಯವರು ತಮ್ಮ ಮಗಳಿಗೆ ಬಾಲ್ಯದಿಂದಲೇ ಕತ್ತಿವರಸೆ, ಬಿಲ್ವಿದ್ಯೆ, ಕುದರೆಸವಾರಿಗಳಂತಹ ಯುದ್ಧಕಲೆಗಳಲ್ಲಿ ನುರಿತಳನ್ನಾಗಿಸಿದರು. ಇದೀಗ ಚನ್ನಮ್ಮನು ಕಿತ್ತೂರಿನ ಅರಸ ಮಲ್ಲಸರ್ಜನಲ್ಲಿ ಅನುರಕ್ತಳಾದಳು. ಆಕೆಯ ತಂದೆ ತಾಯಿಗಳಿಗೆ ವಿಷಯ ತಿಳಿಸಿದಳು. ಅವರು ಮಲ್ಲಸರ್ಜನ ಬಳಿ ಈ ವಿಷಯವನ್ನು ಪ್ರಸ್ತಾಪಿಸುತ್ತಾರೆ. ಆದರೆ ತನಗೆ ಈಗಾಗಲೇ ರುದ್ರಾಂಬೆಯೊಂದಿಗೆ ಮದುವೆಯಾಗಿರುವ ವಿಷಯವನ್ನು ತಿಳಿಸಿ,ಚನ್ನಮ್ಮನನ್ನು ವರಿಸಲು ನಿರಾಕರಿಸುತ್ತಾನೆ. ಈ ವಿಷಯ ರುದ್ರಾಂಬೆಗೆ ತಿಳಿದು, ಮದುವೆಗೆ ಸಮ್ಮತಿಸಿ, ಮಲ್ಲಸರ್ಜನೊಂದಿಗೆ ಚೆನ್ನಮ್ಮನ ವಿವಾಹ ನೆರವೇರಿಸುತ್ತಾಳೆ.

1792 ರಲ್ಲಿ ನಡೆದ ಮೂರನೇ ಆಂಗ್ಲೋ- ಮೈಸೂರು ಯುದ್ಧದಲ್ಲಾದ ಶ್ರೀರಂಗಪಟ್ಟಣದ ಒಪ್ಪಂದದಂತೆ ಕಿತ್ತೂರಿನ ಮೇಲೆ ಟಿಪ್ಪೂವಿನ ಹಿಡಿತ ಸಡಿಲಿತು. ಕೆಲಕಾಲಾನಂತರ ಮತ್ತೆ ಕಿತ್ತೂರು ಮರಾಠರ ವಶವಾಯಿತು.1802 ರಲ್ಲಿ ಮಲ್ಲಸರ್ಜ ಪೇಷ್ವೆಗಳಿಗೆ ಕಪ್ಪಕಾಣಿಕೆ ಸಲ್ಲಿಸುತ್ತಿದ್ದರೂ,ವೆಲ್ಲೆಸ್ಲಿಯ ಮೈತ್ರಿಯನ್ನು ಬೆಳೆಸಿಕೊಂಡು ಮರಾಠರಿಂದ ಸ್ವತಂತ್ರನಾಗಲು ಯೋಚಿಸಿದ. ಇದರಿಂದ ಸಂತೋಷಗೊಂಡ ವೆಲ್ಲೆಸ್ಲಿ, ಮರಾಠರಿಗೂ ಮಲ್ಲಸರ್ಜನಿಗೂ ಮೈತ್ರಿ ಏರ್ಪಡಿಸಿದ. ಇದರ ಪ್ರಕಾರ ಮಲ್ಲಸರ್ಜ ಸ್ವತಂತ್ರವಾಗಿ ಆಳಿದರೂ ಪೇಷ್ವೆಗೆ ಕಪ್ಪಕಾಣಿಕೆಗಳನ್ನು ಸಲ್ಲಿಸಬೇಕಾಯಿತು.

ಆದರೆ ಸ್ವಲ್ಪ ಸಮಯದಲ್ಲಿಯೇ ಮಲ್ಲಸರ್ಜ ಮರಾಠರಿಂದ ಸೆರೆಯಾಗಿ ಪುಣೆಯ ಕಾರಾಗೃಹದಲ್ಲಿ ಬಂಧಿಯಾದ. ಅವನ ಅನುಪಸ್ಥಿತಿಯಲ್ಲಿ ಚನ್ನಮ್ಮನೇ ಕಿತ್ತೂರಿನ ಆಡಳಿತವನ್ನು ನೋಡಿಕೊಳ್ಳುತ್ತಿದ್ದಳು.ಕಿತ್ತೂರಿನ ಅರಸರ ಶೌರ್ಯದ ಬಗ್ಗೆ ದಿಗಿಲುಗೊಂಡು, ಕಿತ್ತೂರಿನ ಬಲವನ್ನು ಮುರಿಯಬೇಕೆಂದು ನಿರ್ಧರಿಸಿದ ಪೇಶ್ವೆ 2 ನೇ ಬಾಜಿರಾಯ, 1804 ರಲ್ಲಿ ಬ್ರಿಟಿಷ್ ಅಧಿಕಾರಿ ವೆಲ್ಲೆಸ್ಲಿಗೆ ಕಿತ್ತೂರು ಸಂಸ್ಥಾನವನ್ನು ವಶಪಡಿಸಿಕೊಳ್ಳಲು ಸಲಹೆ ನೀಡಿದ. 1816ರಲ್ಲಿ ಬಂಧಮುಕ್ತನಾದ ಮಲ್ಲಸರ್ಜ ಕಿತ್ತೂರಿಗೆ ಹಿಂದಿರುಗುವ ಹಾದಿಯಲ್ಲಿ ಅಸುನೀಗಿದ. ಕಿತ್ತೂರಿನ ಅರಸರಲ್ಲಿ ಮಲ್ಲಸರ್ಜನೇ ಅತ್ಯಂತ ಮುಖ್ಯನಾದವ.ಆತ ಸಾಹಸಿ ಮತ್ತು ಸಮರ್ಥ ಆಡಳಿತಗಾರನಾಗಿದ್ದ.

ಇದೀಗ ಕಿತ್ತೂರು ಸಿಂಹಾಸನಕ್ಕೆ ಮಲ್ಲಸರ್ಜನ ಜ್ಯೇಷ್ಠಪುತ್ರ, ರುದ್ರಾಂಬೆಯ ಮಗ ಶಿವಲಿಂಗಸರ್ಜನಿಗೆ ಪಟ್ಟಕಟ್ಟಲಾಯಿತು.1818 ರಲ್ಲಿ ಬ್ರಿಟಿಷರಿಗೂ ಮರಾಠರಿಗೂ ಮನಸ್ತಾಪ ಉಂಟಾಗಿ ಯುದ್ಧ ನಡೆಯಿತು. ಈ ಯುದ್ಧದಲ್ಲಿ ಶಿವಲಿಂಗರುದ್ರಸರ್ಜ ಬ್ರಿಟಿಷರ ಪರ ನಿಂತ.ಇದರಿಂದ ಸಂತೋಷಗೊಂಡ ಬ್ರಿಟಿಷರು ಶಿವಲಿಂಗರುದ್ರ ಸರ್ಜನಿಗೆ ಕಿತ್ತೂರನ್ನು ಜಹಗೀರಿಯಾಗಿ ಕೊಟ್ಟರು. ಆತ 1824 ರವರೆಗೆ ರಾಜ್ಯವಾಳಿ,ರೋಗಪೀಡಿತನಾಗಿ ಮರಣವನ್ನಪ್ಪಿದ. ಕಿತ್ತೂರು ಸಿಂಹಾಸನ ವಾರಸುದಾರರಿಲ್ಲದಂತಾಯಿತು.

*ಥ್ಯಾಕರೆಯ ಸಾವು, ಕಿತ್ತೂರಿನ ಗೆಲುವು :-ಕಿತ್ತೂರು ರಾಜ ಮನೆತನದಿಂದ ದತ್ತುಪುತ್ರನನ್ನು ಪಡೆದು,ರಾಜ ಸಿಂಹಾಸನವನ್ನು ಅಲಂಕರಿಸಲು ಪ್ರಯತ್ನಗಳು ಆರಂಭಗೊಂಡವು.ರಾಣಿ ಚೆನ್ನಮ್ಮ 1824 ರಲ್ಲಿ ಶಿವಲಿಂಗಪ್ಪನನ್ನು ದತ್ತು ತೆಗೆದುಕೊಂಡು ಅವನನ್ನು ಕಿತ್ತೂರಿನ ರಾಜನೆಂದು ಘೋಷಿಸಿದಳು.ಆದರೆ ಬ್ರಿಟಿಷ್ ಸರ್ಕಾರ ಕಿತ್ತೂರಿನ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿತು.1824 ಸೆಪ್ಟೆಂಬರ್ 13 ರಂದು ಧಾರವಾಡದ ಕಲೆಕ್ಟರ್ ಥ್ಯಾಕರೆ ಕಿತ್ತೂರಿಗೆ ಬಂದು ರಾಜಭಂಡಾರಕ್ಕೆ ಬೀಗ ಹಾಕಿದ. ಇದರಿಂದ ಕಿತ್ತೂರಿನ ಅಮೂಲ್ಯವಾದ ವಜ್ರ- ಒಡವೆ- ವಸ್ತ್ರಗಳು ರಾಜಮನೆತನದಿಂದ ಕಸಿಯಲ್ಪಟ್ಟವು.

ಆ ಮೂಲಕ ಕಿತ್ತೂರಿನ ಸ್ವಾಭಿಮಾನವನ್ನು ಥ್ಯಾಕರೆ ಕೆಣಕಿದ.ಇದನ್ನು ರಾಣಿ ಚನ್ನಮ್ಮ ವಿರೋಧಿಸಿದಳು.ಇಡೀ ಕಿತ್ತೂರು ಪ್ರಜೆಗಳು ತಮ್ಮ ಸಂಸ್ಥಾನದ ಸಂರಕ್ಷಣೆಗಾಗಿ ಕಂಕಣ ತೊಟ್ಟರು.ಬ್ರಿಟಿಷರಿಗೆ ತಕ್ಕಶಾಸ್ತಿ ಮಾಡಲು ಚನ್ನಮ್ಮನ ನೇತೃತ್ವದಲ್ಲಿ ಪ್ರಾಣಾರ್ಪಣಾ ಪಡೆ ಸಿದ್ಧವಾಯಿತು.1824ರ ಅಕ್ಟೋಬರ್ 23 ರಂದು ಎರಡು ಸೈನ್ಯಗಳು ಮುಖಾಮುಖಿಯಾದವು. ಅಲ್ಲಿ ನಡೆದ ಭೀಕರ ರಣಕಾಳಗದಲ್ಲಿ, ಚನ್ನಮ್ಮನ ಆದೇಶದಂತೆ ಅಮಟೂರ ಬಾಳಪ್ಪ ಥ್ಯಾಕರೆಯ ತಲೆಗೆ ಗುಂಡುಹಾರಿಸಿದ. ಮಹಾನವಮಿಯ ದಿನ ಥ್ಯಾಕರೆ ಹೆಣವಾದ. ನೂರಾರು ಬ್ರಿಟಿಷ್ ಸೈನಿಕರನ್ನು ಸೆರೆ ಹಿಡಿದು ಸೆರೆಮನೆಗೆ ತಳ್ಳಲಾಯಿತು. ಕಿತ್ತೂರು ಸಂಸ್ಥಾನ ಜಯ ಸಾಧಿಸಿತು.ಆ ಮೂಲಕ ಭಾರತದ ಸ್ವಾತಂತ್ರ್ಯ ಸಂಗ್ರಾಮವೆಂಬ ಮಹಾ ಕಥನಕ್ಕೆ ಮೊದಲ ಅಧ್ಯಾಯ ಸೇರ್ಪಡೆಯಾಯಿತು.

*ಬ್ರಿಟಿಷರ ಮೋಸ, ಕಿತ್ತೂರಿನ ವಿನಾಶ*
*ಬ್ರಿಟಿಷರ ಕುತಂತ್ರ, ಕಿತ್ತೂರು ಅತಂತ್ರ*

ಇದೀಗ ಬ್ರಿಟಿಷ್ ಸೈನ್ಯ ಗಾಯಗೊಂಡ ವ್ಯಾಘ್ರದಂತಾಗಿತ್ತು.
ತನ್ನ ಕಲೆಕ್ಟರ್ ನ ಸಾವಿಗೆ ಪ್ರತಿಯಾಗಿ ಇಡೀ ಕಿತ್ತೂರು ಸಂಸ್ಥಾನದ ತಲೆದಂಡಕ್ಕಾಗಿ ಬ್ರಿಟಿಷ್ ಸೈನ್ಯ ಹಾತೊರೆಯುತ್ತಿತ್ತು. ಚನ್ನಮ್ಮನ ವಿರುದ್ಧದ ಸೋಲು ಅವರಿಗೆ ಅರಗಿಸಿಕೊಳ್ಳಲಾಗದ ಅವಸ್ಥೆಯಾಗಿತ್ತು. ಶೋಲಾಪುರ, ಮೈಸೂರು ಮತ್ತು ಇತರ ಪ್ರದೇಶಗಳಿಂದ ಬ್ರಿಟಿಷ್ ಸೈನ್ಯಗಳು ಬಂದು ಕಿತ್ತೂರಿಗೆ ಲಗ್ಗೆ ಇಟ್ಟವು. ಚನ್ನಮ್ಮ ಆರಂಭದಲ್ಲಿ ರಕ್ತ ವಾತವನ್ನು ತಪ್ಪಿಸಲು ಶಾಂತಿಗಾಗಿ ಪ್ರಯತ್ನಿಸಿದಳು. ಥ್ಯಾಕರೆಯ ಕುತಂತ್ರವನ್ನು ವಿವರಿಸಿ ಗವರ್ನರ್ ಎಲ್‍ಫಿನ್‍ಸ್ಟನನಿಗೆ ಪತ್ರ ಬರೆದಳು.ಆದರೆ ಅದರಿಂದ ಯಾವ ಪ್ರಯೋಜನವೂ ಆಗಲಿಲ್ಲ.ಬ್ರಿಟಿಷರ ಕುತಂತ್ರದ ಬುದ್ದಿ ಮತ್ತೊಮ್ಮೆ ಜಗಜ್ಜಾಹೀರಾಯಿತು.ಶಾಂತಿಗೆ ಒಪ್ಪುವಂತೆ ನಟಿಸಿ ಕಮಿಷನರ್ ಚಾಪ್ಲಿನನು ಸೆರೆಯಲ್ಲಿದ್ದ ಬ್ರಿಟಿಷ್‍ಯೋಧರನ್ನೆಲ್ಲ ಬಿಡಿಸಿಕೊಂಡ. ನಂತರ ಕಿತ್ತೂರಿನ ಮೇಲೆ ಯುದ್ಧ ಸಾರಿದ.

ಚನ್ನಮ್ಮನೇ ಮುಂದೆ ನಿಂತು ತನ್ನ ಸೈನ್ಯವನ್ನು ಮುನ್ನಡೆಸಿದಳು.1824 ಡಿಸೆಂಬರ್ 3 ರಿಂದ 5 ರವರೆಗೂ ಬ್ರಿಟಿಷರ ಕುತಂತ್ರಿ ಸೈನ್ಯಕ್ಕೂ ಕಿತ್ತೂರಿನ ಸ್ವಾಭಿಮಾನಿ ಸೈನ್ಯಕ್ಕೂ ಘೋರ ಕದನ ನಡೆಯಿತು.ಬ್ರಿಟಿಷರ ಕುಟಿಲೋಪಾಯಗಳಿಗೆ ಬಲಿಯಾಗಿ ಕಿತ್ತೂರಿನ ಕೆಲವು ನಂಬಿಕೆದ್ರೋಹಿಗಳು ಸೈನ್ಯದ ಗುಟ್ಟುಗಳನ್ನು ಬ್ರಿಟಿಷರ ಬಳಿ ರಟ್ಟು ಮಾಡಿದರು.ಹಾಗೆಯೇ ಕಿತ್ತೂರಿನ ಮುದ್ದಿನ ಉಗ್ರಾಣದಲ್ಲಿದ್ದ ಮದ್ದುಗಳಿಗೆ ಸಗಣಿ ನೀರನ್ನಾಕಿ ನಿಷ್ಕ್ರಿಯಗೊಳಿಸಿದರು. ಇದು ಯುದ್ಧದಲ್ಲಿ ಬ್ರಿಟಿಷರ ಕೈ ಮೇಲಾಗಲು ಕಾರಣವಾಯಿತು ಹಾಗೆಯೇ ಸೈನಿಕರ ಸಂಖ್ಯೆ ಹಾಗೂ ಆಯುಧಗಳಲ್ಲಿ ಬ್ರಿಟಿಷ್ ಸೈನ್ಯಕ್ಕೆ ಸರಿಸಮಾನವಲ್ಲದ ಕಿತ್ತೂರು ಸೈನ್ಯವು ಅಪಜಯ ಹೊಂದಿತು. ಬ್ರಿಟಿಷರು ಚನ್ನಮ್ಮನನ್ನು ಸೆರೆಹಿಡಿದು ಬೈರಮಂಗಲದ ಕಾರಾಗೃಹದಲ್ಲಿ ಸೆರೆಯಾಗಿರಿಸಿದರು. ಹಾಗೆಯೇ ಚನ್ನಮ್ಮನ ಅನುಯಾಯಿಗಳಾದ ಗುರುಸಿದ್ದಪ್ಪ, ಅಮಟೂರು ಬಾಳಪ್ಪ, ಸಂಗೊಳ್ಳಿ ರಾಯಣ್ಣ ಮತ್ತಿತರನ್ನು ಕೂಡ ಸೆರೆಮನೆಗೆ ತಳ್ಳಿತು. 3 ಶತಮಾನಗಳ ಕಾಲ ಕಿತ್ತೂರನ್ನು ಆಳಿ, ಶೌರ್ಯ ಸ್ವಾಭಿಮಾನಕ್ಕೆ ಸಂಕೇತವಾಗಿ, ಇತಿಹಾಸದ ಪುಟಗಳಲ್ಲಿ ತನ್ನ ಹೆಸರನ್ನು ಅಜರಾಮರ ಗೊಳಿಸಿಕೊಂಡ ಸಂಸ್ಥಾನವೊಂದು ಬ್ರಿಟಿಷರ ಒಡೆದು ಆಳುವ ನೀತಿಯಿಂದ ಅವಸಾನ ಕಂಡಿತು.

1826 ರಲ್ಲಿ ಗುರುಸಿದ್ಧಪ್ಪರನ್ನು ಹೊರತುಪಡಿಸಿ ಅಮಟೂರು ಬಾಳಪ್ಪ, ಸಂಗೊಳ್ಳಿ ರಾಯಣ್ಣ ಮತ್ತಿತರನ್ನು ಬ್ರಿಟಿಷ್ ಸರಕಾರ ಜಾಮೀನಿನ ಮೇಲೆ ಬಿಡುಗಡೆಗೊಳಿಸಿತು.ಸೇನಾ ಮುಖ್ಯಸ್ಥನಾಗಿ ಕಿತ್ತೂರು ಸೈನ್ಯವನ್ನು ಮುನ್ನಡೆಸಿದ್ದ ಗುರುಸಿದ್ಧಪ್ಪರವರಿಗೆ ಬೆಳಗಾವಿಯಲ್ಲಿ ಗಲ್ಲುಶಿಕ್ಷೆಗೊಳಪಡಿಸಿತು. ಆ ಮೂಲಕ ಗುರುಸಿದ್ಧಪ್ಪನವರು ದೇಶದ ಮೊದಲ ಸ್ವಾತಂತ್ರ್ಯ ಹುತಾತ್ಮ ಸರದಾರರಾದರು.

ಸಂಗೊಳ್ಳಿ ರಾಯಣ್ಣನ ಸಂಗ್ರಾಮದ ಕಥನ: ಕಿತ್ತೂರಿನ ಆಂತರ್ಯದಲ್ಲಿ ಅಡಗಿದ್ದ ಸ್ವಾಭಿಮಾನದ ಕಿಡಿ ಮತ್ತೊಮ್ಮೆ ಹೊತ್ತಿಕೊಂಡಿತು.ಸಂಗೊಳ್ಳಿ ರಾಯಣ್ಣನೆಂಬ ಅಸಮಾನ್ಯ ಶೂರ, ಸ್ವಾಭಿಮಾನಿ ವೀರರನ್ನು ಸಂಘಟಿಸಿ ಮತ್ತೊಂದು ಸೈನ್ಯ ಕಟ್ಟಿದ.ಮತ್ತೊಂದು ಸ್ವಾತಂತ್ರ್ಯಸಂಗ್ರಾಮಕ್ಕೆ ಕಿತ್ತೂರಿನ ನೆಲ ವೇದಿಕೆಯಾಯಿತು.
ರಾಣಿ ಚನ್ನಮ್ಮ ಆಯ್ಕೆ ಮಾಡಿದ್ದ ದತ್ತುಪುತ್ರ ಶಿವಲಿಂಗಪ್ಪನೇ ಕಿತ್ತೂರಿನ ಮುಂದಿನ ರಾಜ ಎಂದು ಘೋಷಿಸಿ, ಸಂಗೊಳ್ಳಿ ರಾಯಣ್ಣ ಬ್ರಿಟಿಷರ ವಿರುದ್ಧ ಗೆರಿಲ್ಲಾ ಯುದ್ಧದಲ್ಲಿ ತೊಡಗಿದ.
ಬ್ರಿಟಿಷರ ಹತ್ತಾರು ಸರ್ಕಾರಿ ಕಟ್ಟಡಗಳನ್ನು ಸುಟ್ಟುಹಾಕಿ, ಕೈಗೆ ಸಿಕ್ಕಿದ ಬ್ರಿಟಿಷ್ ಅಧಿಕಾರಿಗಳನ್ನು ಕೊಲ್ಲತೊಡಗಿದ.

ಬ್ರಿಟಿಷರಲ್ಲಿ ನಡುಕ ಉಂಟಾಯಿತು.ಬ್ರಿಟಿಷ್ ಅಧಿಕಾರಿಗಳು ನಿರ್ಭಿಡೆಯಿಂದ ಓಡಾಡದಂತಾಯಿತು. ಸುಮಾರು 4 ತಿಂಗಳ ಕಾಲ ಬ್ರಿಟಿಷರ ನಿದ್ದೆಗೆಡಿಸಿ, ಅವರ ನೆಮ್ಮದಿ ಭಂಗ ಉಂಟು ಮಾಡಿದ. ರಾಯಣ್ಣನನ್ನು ಹಿಡಿಯಲು ಬ್ರಿಟಿಷರು ಇನ್ನಿಲ್ಲದ ಪ್ರಯತ್ನ ಮಾಡಿದರು ಸಾಧ್ಯವಾಗದಿದ್ದಾಗ ರಾಯಣ್ಣನ ಸಂಬಂಧಿಕರಿಗೆ ಹಣ,ಅಧಿಕಾರದ ಆಸೆ ತೋರಿಸಿ ಮೋಸದಿಂದ ರಾಯಣ್ಣನನ್ನು ಬಂಧಿಸಿದರು. ಅವನಿಗೆ ದೇಶದ್ರೋಹದ ಪಟ್ಟ ಕಟ್ಟಿ ಗಲ್ಲಿಗೇರಿಸಲಾಯಿತು. ಆ ಮೂಲಕ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣನ ಅಂತ್ಯವಾಯಿತು. ಶಿವಲಿಂಗಪ್ಪನನ್ನು ಬ್ರಿಟಿಷರು ಬಂಧಿಸಿದರು.ತನ್ನ ಅನುಯಾಯಿಗಳು ಮತ್ತೆ ಕಿತ್ತೂರನ್ನು ಬ್ರಿಟಿಷರಿಂದ ವಶಪಡಿಸಿಕೊಳ್ಳುತ್ತಾರೆಂಬ ಕಾತುರದಿಂದ ಸೆರೆಮನೆಯಲ್ಲಿ ಕಾಯುತ್ತಿದ್ದ ಚನ್ನಮ್ಮ, ಅದೇ ಕೊರಗಿನಲ್ಲಿ
1829 ಫೆ.2ರಂದು ಬೈಲಹೊಂಗಲದ ಕಾರಾಗೃಹದಲ್ಲಿ ದೇಹತ್ಯಾಗ ಮಾಡಿದಳು. ಆ ಮೂಲಕ ಇತಿಹಾಸದ ಪುಟಗಳಲ್ಲಿ ತನ್ನ ಶೌರ್ಯ ಸಾಹಸಗಳಿಂದ ಅಜರಾಮರ ಳಾದಳು. ಸ್ವಾಭಿಮಾನ, ಪರಾಕ್ರಮ ಹಾಗೂ ಸ್ವಾತಂತ್ರ್ಯದ ಸಂಕೇತವಾಗಿ ಮನುಕುಲಕ್ಕೆ ಸ್ಪೂರ್ತಿಯಾದಳು.

ಚನ್ನಮ್ಮನ ಕಿತ್ತೂರು, ಅವಸಾನದ ತವರೂರು:-ಕಿತ್ತೂರಿನ ಜನರ ಪರಾಕ್ರಮದ ಕಾರಣಕ್ಕಾಗಿ,
ಭಾರತದ ಸ್ವಾತಂತ್ರ್ಯ ನಂತರ ಕಿತ್ತೂರು ಮತ್ತೆ ಮುನ್ನೆಲೆಗೆ ಬರುತ್ತಿದೆ. ಕಿತ್ತೂರು ಸಂಸ್ಥಾನದ ಭವ್ಯ ಕೋಟೆಯ ಅವಶೇಷಗಳು ಇಂದಿಗೂ ಗತಕಾಲದ ವೈಭವವನ್ನು ಸಾರಿ ಹೇಳುತ್ತಿವೆ.ಹಾಗೆಯೇ ಬಹುಪಾಲು ನಾಶವಾಗಿದ್ದರೂ ದೇಸಾಯಿ ಕುಟುಂಬದ ಅರಮನೆಯ ಭವ್ಯತೆ ಕೋಟೆಯ ಸನಿಹದಲ್ಲಿಯೇ ಎದ್ದು ಕಾಣುತ್ತಿದೆ. ಕೋಟೆಯ ಪಶ್ಚಿಮ ದಿಕ್ಕಿನಲ್ಲಿ,ಎತ್ತರವಾದ ಸ್ಥಳವೊಂದರಲ್ಲಿ ಕಿತ್ತೂರು ದೇಸಾಯರ ಕುಟುಂಬದ ಕೆಲವು ಸಮಾಧಿ ಕಟ್ಟಡಗಳಿವೆ. ಹಾಗೆಯೇ ಅರಸರಿಗೆ ಮಾರ್ಗದರ್ಶನ ನೀಡಿದ್ದ ರಾಜಗುರು ಸಂಸ್ಥಾನ ಕಲ್ಮಠದ ಆವರಣದಲ್ಲಿರುವ ರಾಜರ ಸಮಾಧಿಗಳು ಮತ್ತು ಚೌಕಿ ಮಠದಲ್ಲಿರುವ ರಾಜಗುರುಗಳ ಸಮಾಧಿಗಳು ದುಸ್ಥಿತಿಯಲ್ಲಿವೆ.

ಆದರೆ ಯಾವ ಐತಿಹಾಸಿಕ ಸ್ಥಳಗಳು ನಾಡಿನ ಜನತೆಗೆ, ಅದರಲ್ಲೂ ಮಹಿಳೆಯರಿಗೆ, ಯುವಕರಿಗೆ ಸ್ಫೂರ್ತಿಯ ಸೆಲೆ ಯಾಗಬೇಕಿತ್ತೊ ಅವುಗಳೆಲ್ಲ ಯೋಜನಾಬದ್ಧ ನಿರ್ವಹಣೆಯ ಕೊರತೆಯಿಂದ ಕುಸಿದು ಬೀಳುತ್ತಿವೆ. “ಕೋಟೆಯಲ್ಲಿರುವ ದರ್ಬಾರ್ ಹಾಲ್, ಮದ್ದುಗುಂಡುಗಳ ಸಂಗ್ರಹಾಗಾರ, ಬತೇರಿ, ಅರಮನೆಯ ಮುಖ್ಯದ್ವಾರ, ಅತಿಥಿ ಕೋಣೆಗಳು, ಸಭಾಗೃಹ, ಭೋಜನಾಲಯ, ಪೂಜಾ ಕೊಠಡಿ, ಬಾವಿಗಳು, ಸ್ನಾನದ ಮನೆಗಳು ಮುಂತಾದವು ಅವಸಾನದಂಚಿಗೆ ತಲುಪಿವೆ”-ಎಂಬುದು ಇತಿಹಾಸ ಪ್ರಿಯರ ನೋವಿನ ನುಡಿಗಳು.

ಇoದಿನ ಕಿತ್ತೂರು,ಒಡ್ಡೋಲಗದ ದರ್ಬಾರು:-ಕಿತ್ತೂರಿನ ಸಮಗ್ರ ಅಭಿವೃದ್ಧಿಗೆಂದು ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಿದೆ. ಕೆ ಪಿ ಪೂರ್ಣಚಂದ್ರ ತೇಜಸ್ವಿಯವರು ಒಮ್ಮೆ ಹೇಳಿದ್ದರು “ನನ್ನನ್ನು ಕಾಫಿ ಬೋರ್ಡಿನ ಅಧ್ಯಕ್ಷನನ್ನಾಗಿಸಿದರೆ, ಒಂದೇ ವರ್ಷದಲ್ಲಿ ಕಾಫಿ ಬೆಳೆಗಾರರಿಗೆ ನೆರವಾಗುವಂತೆ, ಸಂಸ್ಥೆ ಲಾಭದಾಯಕವಾಗುವಂತೆ ಮಾಡಿ ತೋರಿಸುತ್ತೇನೆಂದು”. ಆದರೆ ಯಾರು ಯಾವುದರಲ್ಲಿ ಸಮರ್ಥರೋ, ಅವರಿಗೆ ಆ ಸ್ಥಾನ ಸಿಗದೇ ಇರುವುದು ನಮ್ಮ ದೇಶದ ದುಸ್ಥಿತಿಗೆ ಕಾರಣವಾಗಿದೆ. ಹಾಗೆಯೇ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಕಿತ್ತೂರಿನ ಇತಿಹಾಸ ಬಲ್ಲವರನ್ನು ನೇಮಿಸದೆ,ರಾಜಕೀಯ ನಿರಾಶ್ರಿತರಿಗೆ, ತಮ್ಮ ಹಿಂಬಾಲಕರಿಗೆ,ಗೂಟದ ಕಾರಿಗೆ ಆಸೆಪಡುವವರಿಗೆ, ಅತೃಪ್ತರನ್ನು ತೃಪ್ತಿಪಡಿಸುವ ಸಲುವಾಗಿ ಯಾರ್ಯಾರನ್ನೊ ನೇಮಿಸಿ, ಪ್ರಾಧಿಕಾರವಿoದು ಹಲ್ಲಿಲ್ಲದ ಹಾವಿನಂತಾಗಿದೆ. ಮಾಡಬೇಕಿರುವುದು ಅಗಾಧ, ಆದರೆ ಮಾಡುತ್ತಿರುವುದು ಅತ್ಯಲ್ಪ ಎಂಬಂತೆ ಪ್ರಾಧಿಕಾರದ ಕಾರ್ಯವೈಖರಿ ಇದೆ ಎಂಬುದು ಚನ್ನಮ್ಮನ ಅಭಿಮಾನಿಗಳ ಆರೋಪವಾಗಿದೆ.

ವೀರ ರಾಣಿ ಚೆನ್ನಮ್ಮನ ನೆನಪಿಗಾಗಿ ಮಹಿಳೆಯರ ಸೈನಿಕ ಶಾಲೆ ಇಲ್ಲಿ ಆರಂಭವಾಗಿವೆ. ದೇಸಾಯರ ಕಾಲದ ಜನ ಜೀವನ ಮತ್ತು ವಾಸ್ತುಶಿಲ್ಪ,ಶಿಲ್ಪಕಲೆಯ ವೈಖರಿಯನ್ನು ಪ್ರತಿಬಿಂಬಿಸುವ ವಸ್ತು ಸಂಗ್ರಹಾಲಯ ಕೋಟೆಯೊಳಗೆ ತಲೆ ಎತ್ತಿದೆ. ಸಂಗ್ರಹಾಲಯದಲ್ಲಿ ಹಲವು ಮಹತ್ವದ ಶಾಸನಗಳು, ವೀರಗಲ್ಲುಗಳು, ಬ್ರಿಟಿಷರ ವಿರುದ್ಧದ ಯುದ್ಧದ ವೇಳೆ ಸೈನಿಕರು ಬಳಸಿದ್ದ ಸಾಮಗ್ರಿಗಳು, ಆ ವೇಳೆ ಧರಿಸಿದ್ದ ಸಮವಸ್ತ್ರಗಳು ಇವೆ.ಇಲ್ಲಿ ಒಂದು ಸುಂದರವಾದ ಉದ್ಯಾನವೂ ರೂಪುಗೊಂಡಿದೆ.23ಎಕರೆಗಳಷ್ಟು ವಿಸ್ತಾರವಾದ ಕೋಟೆಯನ್ನು ಸಂಪೂರ್ಣ ಅಭಿವೃದ್ಧಿಗೊಳಿಸಬೇಕಾಗಿದೆ. 12 ನೆಯ ಶತಮಾನದ ಚಾಳುಕ್ಯಶೈಲಿಯಲ್ಲಿ ನಿರ್ಮಾಣಗೊಂಡಿರುವ ಹೊಂಡದ ಗುಂಡಿ ಎಂದು ಕರೆಯುವ ಈಶ್ವರ ದೇವಾಲಯವನ್ನು ಪರಿಪೂರ್ಣವಾಗಿ ಪುನರ್ನಿರ್ಮಿಸಲಾಗಿದೆ.

*ಕಿತ್ತೂರು ಉತ್ಸವವೋ?*
*ಪ್ರಾಧಿಕಾರ,ಸರ್ಕಾರದ ಜಾತ್ರೆಯೋ?:-ಪ್ರತಿವರ್ಷ ಅಕ್ಟೋಬರ್ 23 ರಿಂದ 25 ರವರೆಗೆ ಬ್ರಿಟಿಷರ ವಿರುದ್ಧ ಕಿತ್ತೂರು ಸಂಸ್ಥಾನದ ಗೆಲುವಿನ ನೆನಪಿಗಾಗಿ ಕಿತ್ತೂರು ಉತ್ಸವವನ್ನು ಆಚರಿಸಲಾಗುತ್ತಿದೆ.ಸರ್ಕಾರದ ವತಿಯಿಂದ 1996 ರಲ್ಲಿ ಆರಂಭಗೊಂಡ ಕಿತ್ತೂರು ಉತ್ಸವಕ್ಕೆ ಈಗ ಬೆಳ್ಳಿವರ್ಷದ ಬೆಡಗು, ಬೆರಗು. ಕಿತ್ತೂರು ಉತ್ಸವ ಕೇವಲ ಜಿಲ್ಲೆಗಷ್ಟೇ ಸೀಮಿತವಾಗದೆ, ಮೈಸೂರು ದಸರಾ ಉತ್ಸವದಂತೆ ನಾಡ ಉತ್ಸವವಾಗಬೇಕೆಂಬುದು ಎಲ್ಲಾ ನಾಡಪ್ರೇಮಿಗಳ ಒಕ್ಕೊರಲಿನ ಆಗ್ರಹವಾಗಿದೆ. ಹಾಗೆಯೇ ತರಾಸುರವರಿಂದ ಚಿತ್ರದುರ್ಗದ ಸಮಗ್ರ ಇತಿಹಾಸ ದಾಖಲಾಗಿ ನಾಡಿನ ಸಮಸ್ತರ ಗಮನ ಸೆಳೆದಂತೆ, ಸಮಗ್ರ ಕಿತ್ತೂರು ಇತಿಹಾಸದ ರಚನೆಯ ಕಾರ್ಯಕ್ಕೆ ಪ್ರಾಧಿಕಾರ ಕೂಡಲೇ ಮುಂದಡಿ ಇಡಬೇಕೆಂಬುದು ಇತಿಹಾಸ ಪ್ರಿಯರ ಆಗ್ರಹವಾಗಿದೆ.ಏಕೆಂದರೆ ಅಷ್ಟೊಂದು ಸಾಧನೆಯ ಕಿತ್ತೂರು ಸಂಸ್ಥಾನಕ್ಕೆ ಕೇವಲ ಇಷ್ಟು ಕೆಲಸ ಸಾಕೆ? ಎಂಬುದು ಎಲ್ಲರ ಸಹಜ ಪ್ರಶ್ನೆಯಾಗಿದೆ.

 

ರಾಣಿ ಚನ್ನಮ್ಮನ ಕಾಲ್ಪನಿಕ ಚಿತ್ರ

ಲಂಡನ್ನಿನಲ್ಲಿರುವ ಕಿತ್ತೂರು ರಾಣಿಯ ಖಡ್ಗವನ್ನು ಸರ್ಕಾರ ವಾಪಸ್ ತರಿಸಿಕೊಳ್ಳಬೇಕೆಂಬ ಬಹುದಿನಗಳ ಬೇಡಿಕೆ ಇನ್ನೂ ಈಡೇರಿಲ್ಲ.ರಾಜ್ಯ ಸರ್ಕಾರ ಒತ್ತಾಯ ಹಾಕಿದರೆ, ಕೇಂದ್ರ ಸರ್ಕಾರ ಮನಸ್ಸು ಮಾಡಿದರೆ ಈ ಬೇಡಿಕೆ ಸುಲಭವಾಗಿ ಕಾರ್ಯ ಸಾಧ್ಯವಾಗುತ್ತದೆ. ಚನ್ನಮ್ಮನ ಜಯಂತ್ಯುತ್ಸವವನ್ನು ದೇಶಾದ್ಯಂತ ಆಚರಿಸಬೇಕೆಂಬ ಇನ್ನೊಂದು ಬೇಡಿಕೆಯು ಅಷ್ಟೆ.ಕಿತ್ತೂರಿನ ಐತಿಹಾಸಿಕ ಸ್ಥಳಗಳನ್ನು ಅಭಿವೃದ್ಧಿಗೊಳಿಸಿ ಪ್ರವಾಸಿ ತಾಣವನ್ನಾಗಿಸಬೇಕೆoಬುದು ಇಲ್ಲಿನ ಜನರ ಬಹುದಿನಗಳ ಕೋರಿಕೆಯಾಗಿದೆ. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಚನ್ನಮ್ಮನ ಹೆಸರಲ್ಲಿ ಅಧ್ಯಯನ ಪೀಠ ಸ್ಥಾಪಿಸಿ,ಕಿತ್ತೂರಿನ ಇತಿಹಾಸದ ಬಗ್ಗೆ ಸಂಶೋಧನಾಸಕ್ತರಿಗೆ ಅವಕಾಶ ಮಾಡಿಕೊಡಬೇಕೆಂಬುದು ಇನ್ನೊಂದು ಬೇಡಿಕೆ

*ಚನ್ನಮ್ಮನ ಮಹಾಶಕ್ತಿ, ಪ್ರಾಧಿಕಾರಕ್ಕಿದೆಯೇ ಇಚ್ಛಾಶಕ್ತಿ?*

ಬೈಲಹೊಂಗಲದಲ್ಲಿರುವ ಚನ್ನಮ್ಮನ ಸಮಾಧಿಯನ್ನು ರಾಷ್ಟ್ರೀಯ ಸ್ಮಾರಕವನ್ನಾಗಿಸಿ, ಕಾಕತಿಯಲ್ಲಿರುವ ಚನ್ನಮ್ಮ ಹುಟ್ಟಿದ ಮನೆಯನ್ನು ಜೀರ್ಣೋದ್ಧಾರಗೊಳಿಸಿ, ಪ್ರವಾಸಿ ತಾಣಗಳನ್ನಾಗಿ ಅಭಿವೃದ್ಧಿಪಡಿಸಬೇಕೆಂಬುದು ಕೂಡ ಜನರ ಆಗ್ರಹವಾಗಿದೆ. ಇಲ್ಲಿ ಚನ್ನಮ್ಮನ ವಂಶದ 6ನೇ ತಲೆಮಾರಿನ ಮೂರು ಕುಟುಂಬಗಳು ಈಗಲೂ ವಾಸಿಸುತ್ತಿವೆ.ಈ ಬೇಡಿಕೆ ಈಡೇರಲು ಸಂಬಂಧಿಸಿದವರ ಇಚ್ಛಾಶಕ್ತಿಯ ಕೊರತೆಯೊಂದನ್ನು ಬಿಟ್ಟರೆ ಬೇರೆ ಇನ್ನೇನೂ ಇಲ್ಲ. ಇನ್ನಾದರೂ ಪ್ರಾಧಿಕಾರ, ಸರ್ಕಾರ ತನ್ನ ಇಚ್ಛಾಶಕ್ತಿಯನ್ನು ಪ್ರದರ್ಶಿಸುವುದೇ? ಹಾಗೆಯೇ ಪ್ರತಿ ವರ್ಷ ನಡೆಯುವ ಕಿತ್ತೂರು ಉತ್ಸವ ಕೇವಲ ಜಾತ್ರೆಯಂಥಾಗದೆ,ನಮ್ಮ ನಾಡಿನ ಶ್ರೇಷ್ಠ ಇತಿಹಾಸವನ್ನು ಮೆಲುಕು ಹಾಕುವ,ಕಿತ್ತೂರಿನ ಸಮಗ್ರ ಅಭಿವೃದ್ಧಿಗೆ ಪೂರಕವಾಗುವ, ರಾಣಿ ಚನ್ನಮ್ಮನ ಹೋರಾಟದ ಬದುಕನ್ನು, ಕಿತ್ತೂರು ಸಂಸ್ಥಾನದ ಸ್ವಾಭಿಮಾನಿ ಜನರ ಜೀವನವನ್ನು, ನಾಡಿನೆದುರು ಪ್ರದರ್ಶಿಸುವ ಅರ್ಥಪೂರ್ಣ ಉತ್ಸವವಾಗಲಿ ಎಂಬುದು ಸಮಸ್ತ ಕನ್ನಡಿಗರ ಸಮಗ್ರ ಆಗ್ರಹವಾಗಿದೆ. ಹಾಗಾಗದಿದ್ದರೆ ನಿಜಕ್ಕೂ ಅದು ವೀರವನಿತೆ ಚನ್ನಮ್ಮನಿಗೆ ಮಾಡಿದ ಅವಮಾನವೇ ಸರಿ.

ಈ ಹಾದಿಯಲ್ಲಿ ಪ್ರಾಧಿಕಾರ, ಸರ್ಕಾರ ಹೆಜ್ಜೆ ಇಡುವುದೇ?ಮುಂದೆ ಸಾಗುವುದೇ? ಕಾದು ನೋಡೋಣ.

 

ಲೇಖಕರು:ಮಣ್ಣೆ ಮೋಹನ್
6360507617
[email protected]

ಜಿಲ್ಲೆ

ರಾಜ್ಯ

error: Content is protected !!