Friday, September 20, 2024

ಕಿತ್ತೂರು ವಿಜಯೋತ್ಸವಕ್ಕೆ ಬೆಳ್ಳಿ ಸಂಭ್ರಮ: ಜಾತ್ರೆಯಾಗದಿರಲಿ ಉತ್ಸವ!

ಭಾರತದ ಸ್ವಾತಂತ್ರ್ಯಕ್ಕೆ ಬ್ರಿಟಿಷರ ಗುಂಡಿಗೆ ಎದೆಯೊಡ್ಡುವ ಮೂಲಕ ಫಿರಂಗಿಗಳ ಜೊತೆಗೆ ಖಡ್ಗ ಹಿಡಿದು ಸೆಣಸಾಡುವ ಮೂಲಕ ಇಡೀ ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ ಬೆಳ್ಳಿ ಚುಕ್ಕಿಯಾಗಿ ಹೊರಹೊಮ್ಮಿದ ವೀರರಾಣಿ ಕಿತ್ತೂರು ಚನ್ನಮ್ಮಳ ಪರಾಕ್ರಮದ ಫಲವಾಗಿ ಕಿತ್ತೂರು ಜಯಶಾಲಿಯಾಗಿದ್ದು ಆ ವಿಜಯೋತ್ಸವದ ಸವಿನೆನಪಿಗಾಗಿ ಹಮ್ಮಿಕೊಳ್ಳಲಾದ ಕಿತ್ತೂರು ಉತ್ಸವಕ್ಕೆ ಈ ಬಾರಿ 25 ರ ಸಂಭ್ರಮ.

ಐತಿಹಾಸಿಕ ಹಿನ್ನೆಲೆ:-ಬೆಳಗಾವಿ ಜಿಲ್ಲೆಯ ಕಿತ್ತೂರಿನ ದೇಸಾಯಿ ಮಲ್ಲಸರ್ಜನ ಹೆಂಡತಿ ಕಾಕತಿ ದೇಸಾಯಿ ವಂಶಸ್ಥೆ ರಾಣಿ ಚನ್ನಮ್ಮ ದತ್ತು ಪುತ್ರನನ್ನು ಪಡೆಯುವ ಸಂದರ್ಭದಲ್ಲಿ ಬ್ರಿಟಿಷ್ ಸರ್ಕಾರದ ಧೋರಣೆಯನ್ನು ಖಂಡಿಸಿ ಅವರ ವಿರುದ್ದ ಸೆಣಸಾಟಕ್ಕೆ ಇಳಿದಿದ್ದು ಅವಳ ಈ ಹೋರಾಟ ಜಗತ್ತಿಗೆ ಮಾದರಿಯಾದುದು. 1778 ರಲ್ಲಿ ಬೆಳಗಾವಿಯ ಕಾಕತಿಯಲ್ಲಿ ಜನಿಸಿದ ಈ ವೀರಮಹಿಳೆ ಬ್ರಿಟಿಷ್ ಸರ್ಕಾರದ ಬಂಧನಕ್ಕೊಳಗಾಗಿ 2 ಫೆಬ್ರುವರಿ 1829 ರಲ್ಲಿ ಬೈಲಹೊಂಗಲದ ಜೈಲಿನಲ್ಲಿ ಇಹಲೋಕ ತ್ಯಜಿಸಿದ್ದರು.

ಈ ನಡುವೆ 1816 ರಲ್ಲಿ ಮಲ್ಲಸರ್ಜನ ಮರಣಹೊಂದಿದಾಗ ಅವನ ಮಗ ಶಿವಲಿಂಗರುದ್ರಸರ್ಜ ರಾಜನಾಗುತ್ತಾನೆ. ಅವನೂ ಸಹ 11 ಸಪ್ಟಂಬರ್ 1824 ರಲ್ಲಿ ತೀರಿಕೊಳ್ಳುತ್ತಾನೆ.ಆಗ ವಾರಸುದಾರರಿಲ್ಲದ ಸಮಯದಲ್ಲಿ ಶಿವಲಿಂಗರುದ್ರಸರ್ಜನ ಮರಣಪೂರ್ವ ಮಾತಿನಂತೆ ಮಾಸ್ತಮರಡಿಯ ಗೌಡರ ಪುತ್ರ ಶಿವಲಿಂಗಪ್ಪನನ್ನು ದತ್ತಕ ತೆಗೆದುಕೊಂಡಳು.

ಈ ದತ್ತಕ ಪ್ರಕ್ರಿಯೆಯನ್ನು ಬ್ರಿಟಿಷ್ ಆಡಳಿತದ ಧಾರವಾಡದ ಕಲೆಕ್ಟರ್ ಥ್ಯಾಕರೆ ತಿರಸ್ಕರಿಸಿ 13 ಸೆಪ್ಟೆಂಬರ್ 1824ರಂದು ಕಿತ್ತೂರಿನ ಭಂಡಾರಕ್ಕೆ ಬೀಗ ಹಾಕುತ್ತಾನೆ. ಆದರೆ ಇದನ್ನು ಕೆಚ್ಚೆದೆಯಿಂದ ಎದುರಿಸಿದ ಚೆನ್ನಮ್ಮ ಥ್ಯಾಕರೆ ವಿರುದ್ಧ ಸಿಡಿದೇಳುತ್ತಾಳೆ. 21 ಅಕ್ಟೋಬರ್ 1824ರಂದು ಥ್ಯಾಕರೆ ಕಿತ್ತೂರಿಗೆ ಮುತ್ತಿಗೆ ಹಾಕಿ ಯುದ್ಧಕ್ಕೆ ಮುಂದಾಗುತ್ತಾನೆ.

ಈ ಯುದ್ದದಲ್ಲಿ 23 ಅಕ್ಟೋಬರ್ 1824 ರಂದು ರಾಣಿ ಚೆನ್ನಮ್ಮ ತನ್ನ ಸೈನ್ಯ ಸಮೇತ ಬ್ರಿಟಿಷರೊಡನೆ ಹೋರಾಡುವಾಗ ಚೆನ್ನಮ್ಮನ ಅಂಗರಕ್ಷಕನಾಗಿದ್ದ ಅಮಟೂರು ಬಾಳಪ್ಪನ ಗುಂಡಿಗೆ ಬ್ರಿಟಿಷ್ ಅಧಿಕಾರಿ ಥ್ಯಾಕರೆ ಬಲಿಯಾದ. ಅವನೊಂದಿಗಿದ್ದ ಸ್ಟೀವನ್ಸನ್ ಹಾಗೂ ಈಲಿಯಟ್ ಸಹ ಸೆರೆಯಾಳಾದರು.

ಈ ವಿಜಯೋತ್ಸವವನ್ನು ಕರ್ನಾಟಕ ಸರ್ಕಾರ ಪ್ರತಿವರ್ಷವೂ ಅಕ್ಟೋಬರ್ 23, 24, 25 ರಂದು ಕಿತ್ತೂರು ಉತ್ಸವವಾಗಿ ಆಚರಣೆ ಮಾಡುತ್ತದೆ. ಆಗಿನ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಕಾಲದಲ್ಲಿ ಪ್ರಾರಂಭವಾದ ಕಿತ್ತೂರು ವಿಜಯೋತ್ಸವಕ್ಕೆ ಇದೀಗ ಬೆಳ್ಳಿ ಹಬ್ಬದ ಸಂಭ್ರಮ.

ವಿಜಯೋತ್ಸವ ಜಾತ್ರೆಯಾಗದಿರಲಿ:-25 ನೇ ವರ್ಷದ ಸಂಭ್ರಮಕ್ಕೆ ಸಾಕ್ಷಿಯಾಗುವ ಕಿತ್ತೂರು ಉತ್ಸವಕ್ಕೆ ಸರ್ಕಾರ ನೀಡುವ ಅನುದಾನ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇದೆ. ಕಳೆದ ಬಾರಿ ಹೆಚ್ಚಾಗಿದ್ದ ಕೋವಿಡ್ ಹಿನ್ನೆಲೆಯಲ್ಲಿ ಉತ್ಸವಕ್ಕೆ ಸರ್ಕಾರ ಯಾವುದೇ ಅನುದಾನವನ್ನು ನೀಡಿರಲಿಲ್ಲ.

ಈ ಬಾರಿ ರೂ.1.00 ಕೋಟಿ ಅನುದಾನ ನಿಗದಿಪಡಿಸಿದ ಸರ್ಕಾರ ಪ್ರಸ್ತುತ 75 ಲಕ್ಷ ಅನುದಾನವನ್ನು ಈಗಾಗಲೇ ಮಂಜೂರು ಮಾಡಿದೆ. ಅದ್ದೂರಿ ಪೆಂಡಾಲ್, ವಸ್ತು ಪ್ರದರ್ಶನ ಮಳಿಗೆಗಳು, ಅರ್ಥವಿಲ್ಲದ ಗೋಷ್ಠಿ ಹಾಗೂ ವಿಚಾರ ಸಂಕಿರಣಗಳು ಈ ವರೆಗೂ ಉತ್ಸವದಲ್ಲಿ ಪೇಲವವಾಗಿ ಗೋಚರಿಸಿದ್ದು ಸಾರ್ವಜನಿಕರು ಇದರತ್ತ ಸುಳಿಯದಂತೆ ಆಗಿರುವುದು ವಿಪರ್ಯಾಸ.

ರಾಜ್ಯದ ಪ್ರತಿ ಶಾಲೆ ಕಾಲೇಜುಗಳಲ್ಲಿ ರಾಣಿ ಚನ್ನಮ್ಮ ಮತ್ತು ಕಿತ್ತೂರು ಇತಿಹಾಸವನ್ನು ಬಿಂಬಿಸುವ ಪಠ್ಯಗಳ ಮೂಲಕ ಯುವ ವಿದ್ಯಾರ್ಥಿಗಳ ಮನಸ್ಸಲ್ಲಿ ಸ್ವಾತಂತ್ರ್ಯ ಮತ್ತು ಅದರಲ್ಲಿ ಕಿತ್ತೂರಿನ ಪಾತ್ರದ ಬಗ್ಗೆ ಇರುವ ಮಹತ್ವ ಕುರಿತು ಪಠ್ಯಗಳಲ್ಲಿ ಅಳವಡಿಸುವ ಕಾರ್ಯ ಪೂರ್ಣ ಪ್ರಮಾಣದಲ್ಲಿ ಈ ವರೆಗೂ ನಡೆದಿಲ್ಲ.

ಚನ್ನಮ್ಮ ಮತ್ತು ಅವಳ ಸಹಚರರು ಹಾಗೂ ಆ ಕಾಲದ ಪ್ರಾದೇಶಿಕ ಚಿತ್ರಣಗಳು ಪಳೆಯುಳಿಕೆಗಳ ಸಂಶೋಧನೆ ಮತ್ತು ಸಂಸ್ಥಾನದ ಹೆಚ್ಚಿನ ಅಧ್ಯಯನ ಹಾಗೂ ಸಂಶೋಧನೆಯಲ್ಲಿ ಇಲ್ಲಿನ ಇತಿಹಾಸ ತಜ್ಞರು ಸಾಹಿತಿಗಳು ಮನಸ್ಸು ಮಾಡಿ ವರದಿಗಳನ್ನು ಓದುಗರಿಗೆ ತಲುಪಿಸುವ ನಿಟ್ಟಿನಲ್ಲಿ ಕೈಗೊಂಡ ಕ್ರಮ ನಿಜಕ್ಕೂ ಈ ವರೆಗೂ ನಡೆದಿಲ್ಲ.

ಪಾಳು ಕೋಟೆಯೊಂದು ಮತ್ತು ಇಲ್ಲಿನ ಪ್ರಾಚ್ಯವಸ್ತು ಸಂಗ್ರಹಾಲಯದ ಕೆಲವು ವಸ್ತುಗಳನ್ನು ಹೊರತು ಪಡಿಸಿ ಹೆಚ್ಚಿನ ಸಂಶೋಧನೆಗೆ ಈ ವರೆಗೂ ಯಾವುದೇ ಕ್ರಮ ವಹಿಸದಿರುವುದು ವಿಷಾಧನೀಯ.

ಸಪ್ಪೆಯಾದ ಪ್ರಾಧಿಕಾರ:-ಕಿತ್ತೂರು ಸಂಸ್ಥಾನದ ಪಳೆಯುಳಿಕೆಗಳು ಸಾಹಿತ್ಯ ಸೇರಿದಂತೆ ಕೋಟೆ ಮತ್ತದರ ಐತಿಹಾಸಿಕ ಹಿನ್ನೆಲೆಯುಳ್ಳ ರಣಗಟ್ಟಿ ಕೆರೆ ಮುಂತಾದ ಪ್ರದೇಶಗಳನ್ನು ಅಭಿವೃದ್ದಿ ಮಾಡುವಲ್ಲಿ ಪ್ರಾಧಿಕಾರ ನಿಜಕ್ಕೂ ಸಪ್ಪೆಯಾಗಿದೆ.

ಈ ಬಾರಿ ಬಜೆಟ್ ನಲ್ಲಿ ಪ್ರಾಧಿಕಾರಕ್ಕೆ ರೂ 50 ಕೋಟಿ ಅನುದಾನ ಮೀಸಲಿಡಲಾಗಿದ್ದು ಮೊದಲ ಹಂತದಲ್ಲಿ 10 ಕೋಟಿ ಅನುದಾನದ ನಿರೀಕ್ಷೆಯಲ್ಲಿರುವ ಪ್ರಾಧಿಕಾರ ಕೋಟೆ ಮರು ಸೃಷ್ಟಿಸುವ ತಯಾರಿಯಲ್ಲಿದೆ.

ಇದಕ್ಕಾಗಿ ಪ್ರಮುಖ ವಿದ್ವಾಂಸರು ಸಾಹಿತಿಗಳು ಸಂಶೋಧಕರನ್ನು ಒಳಗೊಂಡಂತೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಈಗಾಗಲೇ ಸಭೆ ಸೇರಿ ಚರ್ಚಿಸಲಾಗಿದ್ದು ಕಿತ್ತೂರು ಕೋಟೆಯನ್ನು ಮರು ಸೃಷ್ಟಿಸುವ ಕಾರ್ಯ ಪ್ರಗತಿಯಲ್ಲಿರುವುದಾಗಿ ಆಯುಕ್ತರು ಕಿತ್ತೂರು ಅಭಿವೃದ್ದಿ ಪ್ರಾಧಿಕಾರ ಹಾಗೂ ಪ್ರಾಧಿಕಾರದ ಸದಸ್ಯರುಗಳು ಹೇಳುತ್ತಾರೆ. ಈ ಹಿಂದೆ ಕೋಟೆಯ ಹಿಂದೆ ಉತ್ಕೃಷ್ಟವಾಗಿ ಬೆಳೆದ ಕಸಕಡ್ಡಿಗಳನ್ನು ಸ್ವಚ್ಛಗೊಳಿಸುವ ಮತ್ತು ಆ ಸ್ಥಳದಲ್ಲಿ ಗುಲಾಬಿ ಗಿಡಗಳನ್ನು ನೆಡುವ ಮೂಲಕ ಮಾದರಿ ಕಾರ್ಯ ಮಾಡಿದ ಆಗಿನ ಕಿತ್ತೂರು ತಹಶೀಲ್ದಾರ ಹಾಗೂ ಸಾಹಿತಿಗಳಾದ ಯ.ರು. ಪಾಟೀಲ ಅವರು ಮಾಡಿದ ಕಾರ್ಯ ನಿಜಕ್ಕೂ ಶ್ಲಾಘನೀಯ.

ಈ ಬಾರಿ ಕಿತ್ತೂರು ಇತಿಹಾಸವನ್ನೇ ಗಮನದಲ್ಲಿಟ್ಟುಕೊಂಡು ಪ್ರಮುಖ 6 ಗೋಷ್ಠಿ ಹಮ್ಮಿಕೊಂಡಿದ್ದು ಜನಾಕರ್ಷಣೆಗಾಗಿ ಖ್ಯಾತ ಗಾಯಕರಾದ ವಿಜಯಪ್ರಕಾಶ ಮತ್ತು ತಂಡದವರನ್ನು ಆಹ್ವಾನಿಸಿರುವುದು ಎಂದಿನಂತೆಯೇ ವಿಶೇಷವೆನಿಸಿಲ್ಲ. ಸ್ಥಳೀಯ ಕಲಾವಿದರಿಗೆ ಪ್ರಾಧಾನ್ಯತೆ ನೀಡುವ ನಿಟ್ಟಿನಲ್ಲಿ ಜಾನಪದ, ಕಲೆ, ಸಂಗೀತ ಸಾಹಿತ್ಯ, ಭಜನೆ ಮುಂತಾದ ಕಾರ್ಯಕ್ರಮಗಳಿಗೂ ವೇದಿಕೆ ಕಲ್ಪಿಸಿದ್ದು ಎಂದಿನಂತೆ ಕಿತ್ತೂರು ಉತ್ಸವ ಕೇವಲ ಎರಡು ದಿನಕ್ಕೆ ಸೀಮಿತವಾಗಿಸಿ ಅನುದಾನವನ್ನು ಖರ್ಚು ಮಾಡುವ ಪ್ರಕ್ರಿಯೆಗೆ ಮಾತ್ರ ಸೀಮಿತಗೊಳಿಸದೇ ಕಿತ್ತೂರು ಇತಿಹಾಸವನ್ನು ಇಡೀ ವರ್ಷಪೂರ್ತಿ ಶಾಲಾ ಕಾಲೇಜುಗಳಲ್ಲಿ ಪ್ರಾಯೋಗಿಕ ಪಠ್ಯದ ಮೂಲಕ ಬಿತ್ತರಿಸುವ ಕಾರ್ಯ ಅನುಷ್ಠಾನಗೊಳಿಸಲು ಜಿಲ್ಲಾಡಳಿತ ಕ್ರಮ ಕೈಗೊಂಡರೆ ಉತ್ತಮ.

ಕೇವಲ ರಾಣಿ ಚನ್ನಮ್ಮ ಸಂಗೊಳ್ಳಿ ರಾಯಣ್ಣ ಅಷ್ಟೇ ಅಲ್ಲದೇ ರಾಯಣ್ಣನೊಂದಿಗೆ ಗಲ್ಲಿಗೇರಿದ ಇತರೆ ಹುತಾತ್ಮರ ಬಗ್ಗೆಯೂ ಹೆಚ್ಚಿನ ಅಧ್ಯಯನ ಮತ್ತು ಸಂಶೋಧನೆಗಳ ಮೂಲಕ ಬೆಳಕು ಚೆಲ್ಲುವ ಪ್ರಕ್ರಿಯೆಗೆ ಮುಂದಾಗುವುದು ಉತ್ತಮ ಎನಿಸುತ್ತದೆ.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಕಿತ್ತೂರಿನಲ್ಲಿಯೇ ನಿರ್ಮಾಣ ಮಾಡಬೇಕು ಅನ್ನುವ ಕೂಗು ಇದೀಗ ಹಳೆಯದಾದರೂ ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಕಿತ್ತೂರಿಗೆ ರಾಣಿ ಚನ್ನಮ್ಮ ವಿವಿ ಸ್ಥಳಾಂತರಗೊಂಡರೆ ಇಲ್ಲಿನ ನಾಗರಿಕರ ಖುಷಿ ನಿಜಕ್ಕೂ ಇಮ್ಮಡಿಯಾಗುವುದರಲ್ಲಿ ಎರಡು ಮಾತಿಲ್ಲ.

ಈಗಾಗಲೇ ಮುಂಬೈ ಕರ್ನಾಟಕ ವನ್ನು ಕಿತ್ತೂರು ಕರ್ನಾಟಕ ಎಂದು ಮರುನಾಮಕರಣಗೊಳಿಸಲು ಕೂಗು ಕೇಳಿ ಬಂದಿದ್ದು ಉದ್ಘಾಟನೆಗೆ ಆಗಮಿಸುತ್ತಿರುವ ಮಾನ್ಯ ಮುಖ್ಯಮಂತ್ರಿಗಳು ಕಿತ್ತೂರಿಗೆ ಈ ಗಿಫ್ಟ್ ನೀಡಬಹುದೇ ಎಂಬ ನಿರೀಕ್ಷೆಯಲ್ಲಿ ಇಲ್ಲಿನ ಜನ ಕಾಯುತ್ತಿದ್ದಾರೆ.

ದಸರಾ ಮಾದರಿಯಲ್ಲಿ ಕಿತ್ತೂರು ಉತ್ಸವವೂ ವಿಜೃಂಭಣೆಯಿಂದ ಜರುಗುವಂತಾದಲ್ಲಿ ರಾಣಿ ಚನ್ನಮ್ಮನ ಪವಿತ್ರ ಆತ್ಮಕ್ಕೆ ಸಂತೋಷ ಸಿಗುತ್ತದೆ ಎಂಬ ಆಶಯ ಇಲ್ಲಿನ ಜನರದ್ದಾಗಿದೆ.

 

ಲೇಖಕರು:-ಉಮೇಶ ಗೌರಿ
ಯರಡಾಲ.ತಾ:ಬೈಲಹೊಂಗಲ
ಜಿ:ಬೆಳಗಾವಿ. (M) 8867505678.

ಜಿಲ್ಲೆ

ರಾಜ್ಯ

error: Content is protected !!