Tuesday, September 17, 2024

ಕೃತಿಗಳು ಹೆಚ್ಚುತ್ತಿವೆ ಓದುಗರು ಹೆಚ್ಚುತ್ತಿಲ್ಲ:- ಸಾಹಿತಿ ಬಿ. ಎಸ್. ಗವಿಮಠ ವಿಷಾದ

ಬೆಳಗಾವಿ (ಅ.21): ಇತ್ತೀಚಿನ ದಿನಗಳಲ್ಲಿ ಕೃತಿಗಳು ಹೆಚ್ಚುತ್ತಿವೆ, ಆದರೆ ಓದುಗರು ಹೆಚ್ಚುತ್ತಿಲ್ಲ. ಇದು ಸಾಹಿತ್ಯಕ್ಕೆ ಆತಂಕಕಾರಿ ಎಂದು ಹಿರಿಯ ಸಾಹಿತಿ ಬಿ.ಎಸ್. ಗವಿಮಠ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಗುರುವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ಹಮ್ಮಿಕೊಳ್ಳಲಾದ ಸಾಹಿತಿ ರೇಣುಕಾ ಜಾಧವ ರವರು ರಚಿಸಿದ ಅವಳಿ ಕೃತಿಗಳ ಬಿಡುಗಡೆ ಸಮಾರಂಭಸಲ್ಲಿ ಹಿರಿಯ ಸಾಹಿತಿ ಬಿ.ಎಸ್. ಗವಿಮಠ ರವರು ರೇಣುಕಾ ಜಾಧವ ಅವರ ‘ಅಮ್ಮ’ ಮತ್ತು ‘ಓ ನನ್ನ ಕಂದ ಅರುಣ’ ಕೃತಿಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿ, ಜೀವನದಲ್ಲಿ ನಂಬಿಕೆಯೇ ದೇವರು, ನಂಬಿದರೆ ಕಲ್ಲು ಸಹ ದೇವರು ನಂಬದಿದ್ದರೆ ದೇವರೇ ಕಲ್ಲು.ಅದರಲ್ಲೂ ಅಮ್ಮನೇ ಸಾಕ್ಷಾತ್ ದೇವರು. ಆತ್ಮಕಥನಗಳು ನೈಜತೆಯನ್ನು ತಿಳಿಸುತ್ತವೆ. ಜಾಧವ ಅವರ ಅಮ್ಮ-ಮಗನ ಕುರಿತಾದ ಎರಡು ಕೃತಿಗಳು ನಿಜವಾಗಲೂ ಅಂತರಾಳದ ಭಾವನೆಗಳನ್ನು ವ್ಯಕ್ತಪಡಿಸುತ್ತವೆ.ಇಂತಹ ಕೃತಿಗಳು ಹೊರಬರಲಿ ಎಂದರು. ಇದೇ ಸಂದರ್ಭದಲ್ಲಿ ಚುಟುಕು ಸಾಹಿತ್ಯಕ್ಕೆ ಪ್ರೋತ್ಸಾಹ ನೀಡಲು ವೈಯಕ್ತಿಕವಾಗಿ ಲೇಖಕಿಯರ ಸಂಘಕ್ಕೆ 25000 ರೂಪಾಯಿಗಳ ದತ್ತಿ ನಿಧಿಯನ್ನು ದಾನವಾಗಿ ನೀಡಿ ಮುಂಬರುವ ದಿನಗಳಲ್ಲಿ ಇದನ್ನು ವಿಶೇಷವಾಗಿ ಚುಟುಕು ಸಾಹಿತ್ಯವನ್ನು ಪ್ರೋತ್ಸಾಹಿಸಲು ಬಳಕೆಮಾಡಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಹೇಮಾವತಿ ಸೋನೋಳ್ಳಿ ಮಾತನಾಡಿ ಲೇಖಕಿಯರ ಸಂಘದ ಹಿರಿಯ ಸಾಹಿತಿಗಳ ಅನುಭವದ ಅಗರದಿಂದ ಸಾಮಾನ್ಯರಲ್ಲಿ ಸಾಮಾನ್ಯರು ಸಹ ಸಾಹಿತ್ಯದ ಕೃಷಿಯಲ್ಲಿ ತೊಡಗಿದ್ದಾರೆ. ಮಹಿಳೆಯರ ಸಾಹಿತ್ಯ ಪ್ರೀತಿ ಹೆಮ್ಮರವಾಗಿ ಬೆಳೆಯುತ್ತಿದೆ ಎಂದರು.

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕಿ ಡಾ.ಶೋಭಾ ನಾಯಕ ‘ಅಮ್ಮ’ ಕೃತಿಯನ್ನು ಪರಿಚಯಿಸುತ್ತಾ ಮಾತನಾಡಿ ಬದುಕೇ ಬರಹ ಆದರೆ ಜೀವನ ದರ್ಶನವಾಗುತ್ತದೆ. ಅಮ್ಮನ ಅನುಭವ,ಪುನರ್ಜನ್ಮ ಕುರಿತ ಕುತೂಹಲ,ಅಮ್ಮನ ಆಚರಣೆ ಸಂಸ್ಕೃತಿ, ಆತ್ಮ ಮತ್ತು ಜೀವಗಳ ಬೆಸುಗೆ ಕೃತಿಯಲ್ಲಿ ಅಡಗಿದೆ. ಆತ್ಮ ನಸಿಸುವದಿಲ್ಲ ಜೀವ ನಶಿಸುತ್ತದೆ. ಅಮ್ಮನ ಜಾಗೃತ ರೂಪ ನಿಜಕ್ಕೂ ಇಲ್ಲಿ ಜೀವಂತಿಕೆ ಪಡೆದಿದೆ. ಅಮ್ಮನವರಿಗೆ ಧಾರ್ಮಿಕ-ಸಾಮಾಜಿಕ, ಅನುಭವಗಳ ಆಗರವೇ ಅಮ್ಮನಲ್ಲಿ ಅಡಗಿದೆ ಎಂದು ಕೃತಿ ಪರಿಚಯಿಸಿದರು.

ಕೃತಿ ಬಿಡುಗಡೆ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ಸದಸ್ಯರು ಭಾಗಿಯಾದ ಭಾವಚಿತ್ರ

‘ಓ ನನ್ನ ಕಂದ’ ಕವನ ಸಂಕಲನ ಪರಿಚಯಿಸಿ ಮಾತನಾಡಿದ ಡಾ. ಭಾರತಿ ಮಠದ ಅಮ್ಮನ ಬದುಕಿನ ಚೇತನವೇ ಆಕೆಯ ಮಗ. ಮಗನಿಲ್ಲದ ನೋವನ್ನು ಅಕ್ಷರದಲ್ಲಿ ತಿಳಿಸಿದ್ದಾರೆ. ಕವನ ಸಂಕಲನದಲ್ಲಿ ಪ್ರತಿ ಕವನಗಳು ಮಗನ ಕುರಿತಾದ ಅಂತಃಕರಣವನ್ನು ಓದುಗನ ಮನವನ್ನು ತದಕುತ್ತವೆ ಎಂದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಹಿರಿಯ ಸಾಹಿತಿ ಡಾ.ಗುರುದೇವಿ ಹುಲೆಪ್ಪನವರಮಠ ಇತ್ತೀಚಿನ ದಿನಗಳಲ್ಲಿ ಜಿಲ್ಲೆಯ ಲೇಖಕಿಯರ ಕೃತಿ ಮತ್ತು ಭಾವನೆಗಳನ್ನು ಅವರ ಆಶಯಗಳು ಮತ್ತು ಗುರಿಗಳನ್ನು ವಿಶಿಷ್ಟ ರೀತಿಯಲ್ಲಿ ಲೇಖಕಿಯರ ಸಂಘ ಪೋಷಿಸುತ್ತಿದೆ. ಅದಕ್ಕೆ ತಕ್ಕಂತೆ ಲೇಖಕಿಯರು ಸಹ ಶ್ರದ್ಧೆಯಿಂದ ಸಂಘವನ್ನು ಬೆಳೆಸುತ್ತಿದ್ದಾರೆ. ಅದೇ ರೀತಿ ದಿನೇದಿನೇ ನಮ್ಮ ಸಂಘಕ್ಕೆ ದತ್ತಿ ದಾನಿಗಳ ಬೆಂಬಲ ಸಿಗುತ್ತಿದ್ದು ಹೀಗೆ ಮುಂದುವರಿಯಲಿ ಎಂದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ಹಿರಿಯ ಸಾಹಿತಿ ಶಾಂತಾದೇವಿ ಹುಲೆಪ್ಪನವರಮಠ ದಾನ ಮಾಡುವ ಬಿ. ಎಸ್. ಗವಿಮಠ ರಂತಹ ಸಹೃದಯಿಗಳ ಕೈಗಳು ಶಕ್ತಿಯುತವಾಗಲಿ ಸಾಹಿತ್ಯದ ಬೆಳಕು ಬೆಳಗಲಿ ಎಂದರು.

ಕೃತಿ ರಚಿಸಿದ ರೇಣುಕಾ ಜಾಧವ ಮಾತನಾಡಿ ನನ್ನ ಕೃತಿಗಳು ನಾನು ಎದುರಿಸಿದ ಜೀವನದ ಅನುಭವಗಳ ಆಗರವೇ ಈ ಕೃತಿಯಲ್ಲಿ ಅಡಗಿವೆ. ಇದಕ್ಕೆ ನನ್ನ ಮನದಾಳದ ನೆನಪುಗಳು ಮತ್ತು ಹಲವಾರು ಹಿರಿಯರ ಆಶೀರ್ವಾದ ಕೃತಿ ರಚಿಸಲು ಸಹಕಾರಿಯಾಗಿದೆ ಎನ್ನುತ್ತಾ ಹಿರಿಯರನ್ನು ಲೇಖಕಿಯರನ್ನು ಸನ್ಮಾನಿಸಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ನೀಲಗಂಗಾ ಚರಂತಿಮಠ, ಸುನಂದಾ ಎಮ್ಮಿ, ಜಯಶೀಲಾ ಬ್ಯಾಕೋಡ, ಇಂದಿರಾ ಮೋಟೆಬೆನ್ನೂರ, ಜ್ಯೋತಿ ಬದಾಮಿ, ಶಾಲಿನಿ ಚೀನಿವಾಲರ, ಶೈಲಜಾ ಭಿನ್ಗೆ, ಜಯಶ್ರೀ ನಿರಾಕಾರಿ,ಸುಮಾ ಕಿತ್ತೂರ, ಸರ್ವಮಂಗಲಾ ಅರಳಿಮಟ್ಟಿ, ಸೋನಿ ಜಾಧವ, ಭುವನೇಶ್ವರಿ, ಉಮಾ ಸೋನೋಳ್ಳಿ, ಅನ್ನಪೂರ್ಣ ಹಿರೇಮಠ, ಶ್ರೀರಂಗ ಜೋಷಿ ಬಸವರಾಜ ಗಾರ್ಗಿ, ಆರ್. ಎಸ್. ಚಾಪಗಾವಿ, ಎಂ.ವೈ. ಮೆಣಸಿನಕಾಯಿ, ಎ.ಎ. ಜಾಧವ, ಮಧುಕರ ಗುಂಡೇನಟ್ಟಿ, ಆತ್ರೆಯ, ಆತ್ರಿಕೆ, ಶಿವಾನಂದ ತಲ್ಲೂರ ಸೇರಿದಂತೆ ಅನೇಕ ಸಾಹಿತ್ಯಾಸಕ್ತರು ಭಾಗವಹಿಸಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಮಹಾನಂದಾ ಪಾರುಶೆಟ್ಟಿ ಪ್ರಾರ್ಥಿಸಿದರು. ರಾಜನಂದಾ ಘಾರ್ಗಿ ಸ್ವಾಗತಿಸಿದರು. ಆಶಾ ಯಮಕನಮರಡಿ ಕಾರ್ಯಕ್ರಮವನ್ನು ನಿರೂಪಿಸಿದರು. ಇಂದಿರಾ ಮೋಟೆಬೆನ್ನೂರ ವಂದಿಸಿದರು.

ಜಿಲ್ಲೆ

ರಾಜ್ಯ

error: Content is protected !!