Tuesday, May 28, 2024

ಬ್ರಿಟಿಷ್ ಸರ್ಕಾರದ ವಿರುದ್ಧ ತೊಡೆತಟ್ಟಿ ಹೋರಾಡಿ ಜೀವತೆತ್ತ ಸಂಗೋಳ್ಳಿ ರಾಯಣ್ಣನ ಹೋರಾಟದ ಗತವೈಭವ ಸಾರುವ :ರಾಕ್ ಗಾರ್ಡನ್, ಸೈನಿಕ ಶಾಲೆ ನಿರ್ಮಾಣ

ಬ್ರಿಟಿಷ್ ಸರ್ಕಾರದ ವಿರುದ್ಧ ತೊಡೆತಟ್ಟಿ ಹೋರಾಡಿ ಜೀವತೆತ್ತ ಸ್ವಾತಂತ್ರ‍್ಯ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ತವರೂರಲ್ಲಿ 110 ಎಕರೆ ಪ್ರದೇಶದಲ್ಲಿ ರಾಷ್ಟ್ರಮಟ್ಟದ ಸೈನಿಕ ಶಾಲೆ ಹಾಗೂ ಸಂಗೊಳ್ಳಿ ರಾಯಣ್ಣ ಜೀವನ ಚರಿತ್ರೆ ಸಾರುವ ರಾಕ್ ಗಾರ್ಡನ್ ಡಿಸೆಂಬರ್ ಅಂತ್ಯಕ್ಕೆ ಪೂರ್ಣಗೊಳ್ಳಲಿದ್ದು, ಕಾಮಗಾರಿ ಪೂರ್ಣಗೊಳ್ಳುವ ಮುಂಚಿತವಾಗಿಯೇ ಸೈನಿಕ ಶಾಲೆ ಹಾಗೂ ಸಂಗೊಳ್ಳಿ ರಾಯಣ್ಣನ ಜೀವನ ಚರಿತ್ರೆ ಸಾರುವ ರಾಕ್ ಗಾರ್ಡನ್ ನೋಡಲು ನಿತ್ಯ ನೂರಾರು ಜನರು ಆಗಮಿಸುತ್ತಿದ್ದಾರೆ.

ಬೈಲಹೊಂಗಲ ತಾಲೂಕಿನ ರಾಯಣ್ಣನ ಹುಟ್ಟೂರು ಸಂಗೊಳ್ಳಿ ಗ್ರಾಮದ ಹೊರವಲಯದಲ್ಲಿ 100 ಎಕರೆ ಭೂಪ್ರದೇಶದಲ್ಲಿ ಸಂಗೊಳ್ಳಿ ರಾಯಣ್ಣನ ಸೈನಿಕ ಶಾಲೆ ಮತ್ತು 10 ಎಕರೆಯಲ್ಲಿ ರಾಯಣ್ಣ ಸಮಗ್ರ ಜೀವನ ಚರಿತ್ರೆ ಸಾರುವ ರಾಕ್ ಗಾರ್ಡನ್ ನಿರ್ಮಿಸಲಾಗುತ್ತಿದೆ.

ಕೊರೊನಾ ಕಾರಣಕ್ಕೆ ಬಾಕಿ ಉಳಿಸಿಕೊಂಡಿದ್ದ 87 ಕೋಟಿ ಅನುದಾನವನ್ನೂ ಈಗಾಗಾಲೇ ಬಿಡುಗಡೆ ಮಾಡಿ ಡಿಸೆಂಬರ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸುವಂತೆ ಸರ್ಕಾರ ಸೂಚನೆ ಕೊಟ್ಟಿದೆಯಂತೆ.ವಿಪಕ್ಷ ನಾಯಕ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ನಡೆದ ಸಚಿವ ಸಂಪುಟ ಸಭೆಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಿ, ಸಂಗೊಳ್ಳಿ ಗ್ರಾಮದ ಹೊರವಲಯದಲ್ಲಿ ಒಟ್ಟು 110 ಎಕರೆ ಭೂಪ್ರದೇಶವನ್ನು ರಾಯಣ್ಣನ ಸೈನಿಕ ಶಾಲೆ ಸೇರಿದಂತೆ ಇತರ ಅಭಿವೃದ್ಧಿ ಕಾಮಗಾರಿಗಳಿಗೆ ನಿಗದಿಪಡಿಸಿ 267.67ಕೋಟಿ ಅನುದಾನವನ್ನು ತೆಗೆದಿಟ್ಟು ಬೆಳಗಾವಿಯ ಸುವರ್ಣಸೌದ ನಿರ್ಮಾಣ ಮಾಡಿದ್ದ ಶಿರ್ಕೆ ಕಂಪನಿಗೆ ಸೈನಿಕ ಶಾಲೆಯ ಕಾಮಗಾರಿಯ ಗುತ್ತಿಗೆಯನ್ನು ನೀಡಲಾಗಿತ್ತು. ಆದ್ರೆ, ಮುಗಿಯುವ ಕೊನೆಯ ಹಂತಕ್ಕೆ ಬರುವಷ್ಟರಲ್ಲಿ ದೇಶದಲ್ಲಿ ಕೊರೊನಾ ವಕ್ಕರಿಸಿಕೊಂಡ ನಂತರ ಅಭಿವೃದ್ಧಿ ಕಾಮಗಾರಿಗಳು ಆಮೆಗತಿಯಲ್ಲಿ ಸಾಗುತ್ತಿದ್ದವು.

ಸದ್ಯ ತೆಗೆದಿಟ್ಟ ಎಲ್ಲ ಅನುದಾನ ಬಿಡುಗಡೆ ಆಗಿರುವ ಹಿನ್ನೆಲೆ ಕಾಮಗಾರಿಗಳು ವೇಗ ಪಡೆದುಕೊಂಡಿವೆ. ಸಂಗೊಳ್ಳಿಯಲ್ಲಿ ಈಗಾಗಲೇ ರಾಯಣ್ಣ ಸ್ಮಾರಕ ಸೈನಿಕ ಶಾಲೆ, ರಾಕ್ ಗಾರ್ಡನ್, ಕಲ್ಯಾಣಮಂಟಪ ಮತ್ತಿತರ ಕಾಮಗಾರಿಗಳು ಹಾಗೂ ಖಾನಾಪುರ ತಾಲ್ಲೂಕಿನ ನಂದಗಡದಲ್ಲಿ ಸಂಗೊಳ್ಳಿ ರಾಯಣ್ಣ ಸ್ಮಾರಕ ಮ್ಯೂಸಿಯಂ (ವೀರಭೂಮಿ), ಯಾತ್ರಿನಿವಾಸ ನಿರ್ಮಾಣ, ರಾಯಣ್ಣ ಸ್ನಾನ ಮಾಡುತ್ತಿದ್ದ ಕೆರೆಯ ಜೀರ್ಣೋದ್ಧಾರ ಸೇರಿದಂತೆ ಇತರ ಕಾಮಗಾರಿಗಳು ಬಹುತೇಕ ಕೊನೆಯ ಹಂತಕ್ಕೆ ತಲುಪಿದೆ.

ಸೈನಿಕ ಶಾಲೆಯಲ್ಲಿ ಏನೇನಿರಲಿದೆ..! 70 ಎಕರೆಯಲ್ಲಿ ನಿರ್ಮಾನಗೊಳ್ಳುತ್ತಿರುವ ಸೈನಿಕ ಶಾಲೆಯಲ್ಲಿ 6 ರಿಂದ 12 ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಉಳಿದುಕೊಳ್ಳಲು ವಸತಿ ಸೌಲಭ್ಯ, ಭೋಜನಾಲಯ, ಗ್ರಂಥಾಲಯ, ಶಿಕ್ಷಕರ ವಸತಿ ಗೃಹ, ಆಡಿಟೋರಿಯಂ ಹಾಗೂ ಕೆಲಸಗಾರರು ಉಳಿದುಕೊಳ್ಳಲು ಹೈಟೆಕ್ ವಸತಿ ಗೃಹಗಳನ್ನು ನಿರ್ಮಿಸಲಾಗಿದೆ.ಇದಲ್ಲದೇ 30 ಎಕರೆ ವಿಸ್ತೀರ್ಣದಲ್ಲಿ ಬೃಹತ್ ಕ್ರೀಡಾ ಮೈದಾನ ನಿರ್ಮಿಸಲಾಗಿದ್ದು, ಒಳಾಂಗಣ ಮತ್ತು ಹೊರಾಂಗಣದಲ್ಲಿ ಬರುವ ಈಜುಕೊಳ, ಹಾರ್ಸ್ ರೈಡಿಂಗ್,ಹಾಕಿ,ಕಬಡ್ಡಿ, ವಾಲಿಬಾಲ್,ಕ್ರಿಕೆಟ್ ಅಥ್ಲೆಟಿಕ್ಸ್ ಸೇರಿದಂತೆ ಎಲ್ಲ ಕ್ರೀಡೆಗಳಿಗೂ ಸಂಬಂಧಿಸಿದ ಆಟದ ಮೈದಾನವನ್ನು ಸಿದ್ಧಪಡಿಸಲಾಗುತ್ತಿದೆ.ರಾಯಣ್ಣನ ಸಮಗ್ರ ಜೀವನ ಚರಿತ್ರೆ ಸಾರುವ ರಾಕ್ ಗಾರ್ಡನ್ ನಿರ್ಮಾಣ: ಸೈನಿಕ ಶಾಲೆಯ ಎದರಿಗೆ ಸುಮಾರು ೧೦ಎಕರೆ ಪ್ರದೇಶದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಸಮಗ್ರ ಜೀವನ ಚರಿತ್ರೆ ಹಾಗೂ ಕಿತ್ತೂರು ಚೆನ್ನಮ್ಮರ ಜೀವನದ ಘಟನೆಗಳನ್ನು ಸಾರುವ ೧೬೦೦ಕ್ಕೂ ಹೆಚ್ಚಿನ ಮೂರ್ತಿಗಳನ್ನು ವಿನ್ಯಾಸಗೊಳಿಸಿ ರಾಕ್ ಗಾರ್ಡನ್ ನಿರ್ಮಿಸಲಾಗುತ್ತಿದೆ. ಇದರ ಹೊಣೆಯನ್ನು ಉತ್ಸವ ರಾಕ್ ಗಾರ್ಡನ್ ವಿನ್ಯಾಸಕ ಟಿ.ಬಿ.ಸೋಲಬಕ್ಕನವರ ವಹಿಸಿಕೊಂಡಿದ್ದಾರೆ. ರಾಕ್ ಗಾರ್ಡನ್ ನಲ್ಲಿ ಸಂಗೊಳ್ಳಿ ರಾಯಣ್ಣನ ಹೋರಾಟದ ಕುರಿತಾಗಿರುವ ಮೂರ್ತಿಗಳು, ಗರಡಿ ಮನೆ, ಕುಸ್ತಿ ಮೈದಾನ, ವೀರಭದ್ರ ದೇವಸ್ಥಾನ,ದರ್ಬಾರ್ ಹಾಲ್, ಬ್ರಿಟಿಷರೊಂದಿಗಿನ ಯುದ್ಧದ ಸನ್ನಿವೇಶಗಳು ಸೇರಿದಂತೆ ಇಡೀ ಸಂಗೊಳ್ಳಿ ರಾಯಣ್ಣನ ಹೋರಾಟದ ಇತಿಹಾಸದ ಚಿತ್ರಣವನ್ನೇ ಮೂರ್ತಿಗಳ ರೂಪದಲ್ಲಿ ಕಣ್ತುಂಬಿಕೊಳ್ಳಬಹುದು. ಸದ್ಯ ರಾಕ್ ಗಾರ್ಡನ್ ಕಾಮಗಾರಿ ವೇಗ ಪಡೆದುಕೊಂಡಿದ್ದರೂ ಪೂರ್ಣಗೊಳ್ಳಲು ಸಾಕಷ್ಟು ತಿಂಗಳುಗಳು ಹಿಡಿಯಲಿವೆ.ಹೀಗಾಗಿ ಆದಷ್ಟು ಬೇಗ ರಾಕ್ ಗಾರ್ಡನ್ ಕಾಮಗಾರಿಯನ್ನು ಮುಗಿಸುವ ಮೂಲಕ ಪ್ರವಾಸಿಗರಿಗೆ ಅವಕಾಶ ನೀಡಬೇಕೆಂದು ಗ್ರಾಮಸ್ಥರ ಒತ್ತಾಸೆ.

ಹಳ್ಳಿಗಳ ಅಭಿವೃದ್ಧಿಗೆ ಪೂರಕ: ರಾಜ್ಯದಲ್ಲೇ ಮೊದಲ ಬಾರಿಗೆ ಗ್ರಾಮೀಣ ಪ್ರದೇಶದಲ್ಲಿ ರಾಷ್ಟ್ರಮಟ್ಟ ಸೈನಿಕ ಶಾಲೆ ನಿರ್ಮಿಸುತ್ತಿರುವುದು ಇದೇ ಮೊದಲು ಇರಬೇಕು. ಸಂಪನ್ಮೂಲಗಳ ದೃಷ್ಟಿಯಿಂದ ದೊಡ್ಡಮಟ್ಟದ ಶಿಕ್ಷಣ ಸಂಸ್ಥೆಗಳನ್ನು ನಗರದ ಪ್ರದೇಶಗಳಲ್ಲಿ ಹೆಚ್ಚಿರುತ್ತವೆ.ಆದ್ರೆ, ಕ್ರಾಂತಿಕಾರಿ ನೆಲದ ಜೊತೆಗೆ ಪುಟ್ಟ ಹಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ಈ ಸೈನಿಕ ಶಾಲೆಯಿಂದ ಸುತ್ತಮುತ್ತಲಿನ ಗ್ರಾಮಗಳ ಅಭಿವೃದ್ಧಿಗೆ ಪೂರಕವಾಗಲಿದ್ದು, ಬೀದಿಬದಿ ವ್ಯಾಪಾರಿಗಳ ಜೊತೆಗೆ ಸಣ್ಣಪುಟ್ಟ ಉದ್ಯಮಗಳು ಬೆಳವಣಿಗೆಗೆ ಸಹಕಾರಿ ಆಗಲಿವೆ. ಹೀಗಾಗಿ ನಗರ ಪ್ರದೇಶಕ್ಕೆ ಸೀಮಿತವಾದ ಶಿಕ್ಷಣ ಸಂಸ್ಥೆಗಳನ್ನು ಗ್ರಾಮೀಣ ಪ್ರದೇಶಕ್ಕೂ ಕೊಂಡ್ಯೊಯುವ ಕೆಲಸವನ್ನು ಸರ್ಕಾರ ಮಾಡಬೇಕು. ಅದರಲ್ಲಿ ಸ್ಥಳೀಯ ಮಕ್ಕಳಿಗೆ ಆದ್ಯತೆ ನೀಡುವ ಕೆಲಸವನ್ನು ಮಾಡಬೇಕಿದೆ.ಸಂಗೊಳ್ಳಿ ರಾಯಣ್ಣ ಹೋರಾಟದ ಹಾದಿ: ಬ್ರಿಟಿಷರ ವಿರುದ್ಧ ಹೋರಾಡಿ ಜೀವತೆತ್ತ ಸ್ವಾತಂತ್ರ‍್ಯ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಇತಿಹಾಸ ಕೆದಕಿನೋಡಿದ್ರೆ ಕಾಕತಾಳೀಯ ಎಂಬಂತೆ ಭಾರತಕ್ಕೆ ಸ್ವಾತಂತ್ರ‍್ಯ ದೊರೆತ ದಿನವಾದ 1796 ಆಗಸ್ಟ್ 15 ರಂದು ಸಂಗೊಳ್ಳಿ ರಾಯಣ್ಣನ ಜನ್ಮದಿನವಾದ್ರೆ, ರಾಯಣ್ಣ ಹುತಾತ್ಮನಾಗಿರುವ ದಿನ 1831 ಜನವರಿ 26 ರಂದು ಭಾರತ ಗಣರಾಜ್ಯ ದಿನವೆಂದು ಘೋಷಣೆ ಮಾಡಿರುವುದು ಕಾಕತಾಳೀಯ.

ಕಿತ್ತೂರು ರಾಣಿ ಚೆನ್ನಮ್ಮನ ಬಲಗೈ ಬಂಟನಾಗಿದ್ದ ಸಂಗೊಳ್ಳಿ ರಾಯಣ್ಣ ಅಂತಿಮ ಕ್ಷಣದವರೆಗೂ ಬ್ರಿಟಿಷರ ವಿರುದ್ಧ ಹೋರಾಡಿ ವೀರಮರಣ ಹೊಂದಿದ ಅಪ್ರತಿಮ ವೀರನಾಗಿದ್ದನು. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ಆಗಸ್ಟ್ 15 ರಂದು ಜನಿಸಿದ ರಾಯಣ್ಣ ಕುರುಬ ಜನಾಂಗಕ್ಕೆ ಸೇರಿದ್ದಾನೆ. ಕಿತ್ತೂರು ಚೆನ್ನಮ್ಮನ ಬಲಗೈ ಬಂಟನಾಗಿದ್ದ ಈತ ಕೇವಲ 32 ವರ್ಷಗಳ ಕಾಲ ಬದುಕಿದರೂ ಬ್ರಿಟಿಷರನ್ನು ಇನ್ನಿಲ್ಲದಂತೆ ಕಾಡಿದ್ದಾನೆ.

ಗೆರಿಲ್ಲಾ ಯುದ್ಧ ತಂತ್ರವನ್ನು ಕಲಿತಿದ್ದ ಸಂಗೊಳ್ಳಿ ರಾಯಣ್ಣ ಬಡಬಗ್ಗರ ಭೂಮಿಯನ್ನು ಕಿತ್ತುಕೊಳ್ಳುತ್ತಿದ್ದ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ್ದ ರಾಯಣ್ಣನನ್ನು ಜೀವಂತವಾಗಿ ಹಿಡಿಯಬೇಕೆಂದು ನಿರ್ಧರಿಸಿದ ಬ್ರಿಟಿಷ್ ಅಧಿಕಾರಿಗಳ ಸಂಚಿಗೆ ಮರುಳಾದ ನಮ್ಮವರೇ ಆತನನ್ನು ಹಿಡಿಯಲು ಸಹಕರಿಸುತ್ತಾರೆ.

ಒಂದು ದಿನ ಅಳ್ನಾವರದ ಸಮೀಪದಲ್ಲಿರುವ ಚೆಣಚಿ ಹಳ್ಳದಲ್ಲಿ ರಾಯಣ್ಣ ಸ್ನಾನ ಮಾಡುತ್ತಿರುವ ಸಂದರ್ಭದಲ್ಲಿ ಸೈನಿಕರು ಆಕ್ರಮಣ ಮಾಡಿ ರಾಯಣ್ಣನನ್ನು ಬ್ರಿಟಿಷರು ಹಿಡಿದುಕೊಂಡು ಆತನಿಗೆ 1831ರ ಜನವರಿ 26 ರಂದು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ಗಲ್ಲಿಗೇರಿಸುತ್ತಾರೆ. ಗಲ್ಲಿಗೇರಿಸಿದ ಸ್ಥಳದಲ್ಲಿ ಆತನ ನೆನಪಿಗಾಗಿ ಆತನ ಗೋರಿಯ ಮೇಲೆ ಆಲದ ಸಸಿಯನ್ನು ನೆಟ್ಟು ಈಗಲೂ ಪೂಜಿಸುತ್ತಿದ್ದಾರೆ.

ಲೇಖಕರು: ಯುನೂಸ್ ಬಡೇಘರ
ಬೈಲಹೊಂಗಲ.
ಮೊಬೈಲ್:7892962907

ಜಿಲ್ಲೆ

ರಾಜ್ಯ

error: Content is protected !!