Saturday, July 20, 2024

ಭೂಗತವಾಗಿದ್ದ ಕಿತ್ತೂರ ಇತಿಹಾಸ ಹೆಕ್ಕಿ ತೆಗೆದ ಮಹಾನ ಸಂಶೋಧಕ: ಬೈಲಹೊಂಗಲದ ದೊಡ್ಡಬಾವೆಪ್ಪ ಮೂಗಿ.

ಕನ್ನಡಿಗರಿಗೆ ಇತಿಹಾಸ ಸೃಷ್ಟಿಸುವುದು ಸಹಜ ಅದನ್ನು ದಾಖಲಿಸುವುದು ಮಾತ್ರ ಗೊತ್ತಿಲ್ಲ.ಆ ನಿಟ್ಟಿನಲ್ಲಿ ಕಿತ್ತೂರ ಸಂಸ್ಥಾನವು ಹೊರತಾಗಿಲ್ಲ.

ಹಲವಾರು ಇತಿಹಾಸ ಸೃಷ್ಟಿ ಮಾಡಿದ ಸಂಸ್ಥಾನಿಕರು ವ್ಯವಸ್ಥಿತವಾಗಿ ದಾಖಲಿಸದೇ ಇರುವುದು ವರ್ತಮಾನದ ಹಲವಾರು ಗೊಂದಲಗಳಿಗೆ ಅವಕಾಶ ಮಾಡಿಕೊಟ್ಟಿದೆ.

ಈ ಸಂಶಯಗಳನ್ನು ನಿವಾರಣೆ ಮಾಡುವ ನಿಟ್ಟಿನಲ್ಲಿ ಕಿತ್ತೂರು ಸಂಸ್ಥಾನದ ಇತಿಹಾಸ ಸಂಗ್ರಹ ಮಾಡುವ ಕಾಯಕಕ್ಕೆ ತಮ್ಮ ಜೀವನವನ್ನೇ ಸಮರ್ಪಿಸಿದ ವ್ಯಕ್ತಿ ಬೈಲಹೂಂಗಲದ ದೊಡ್ಡಬಾವೆಪ್ಪ ಮೂಗಿಯವರು. 

ದೊಡ್ಡಬಾವೆಪ್ಪ ಮೂಗಿಯವರು:-ಮನೆಯಲ್ಲಿ ಕಿತ್ತೂರು ಸಂಸ್ಥಾನದ ಗತವೈಭವದ ಕುರಿತು ಚರ್ಚೆಗಳು ನಡೆಯುತ್ತಿದ್ದವು.ಹಾಗಾಗಿ ಕಿತ್ತೂರು ಮರೆತು ಹೋದ ಸಂಸ್ಥಾನವಾಗಬಾರದು ಅದನ್ನು ಬೆಳಕಿಗೆ ತರಬೇಕು ಎಂಬ ಅವರಲ್ಲಿ ಹಂಬಲದ ಚಿಲುಮೆ ಚಿಗರೊಡೆಯಿತು.

ಮನೆಯ ವೃತ್ತಿ ವ್ಯಾಪಾರವಾಗಿತ್ತು.ಆಗ ವ್ಯಾಪಾರದ ಗಲ್ಲೆಯ ಮೇಲೆ ಕುಳಿತು ಕಿತ್ತೂರು ಗತವೈಭವದ ಇತಿಹಾಸ ಸಾಹಿತ್ಯದ ಚಿಂತನೆ ಪ್ರಾರಂಭಿಸಿದರು.

ಮಗನ ವಿಲಕ್ಷಣ ಸ್ಥಿತಿಕಂಡು ತಂದೆ ಮರುಕ ಪಟ್ಟರು.
ಹಿರಿಯರಿಂದ ಬುದ್ದಿ ಹೇಳಿಸಿದ್ದಾಯಿತು.ಆದರೂ ಬದಲಾವಣೆ ಕಾಣಲಿಲ್ಲ.ದೊಡ್ಡಬಾವೆಪ್ಪ ಮನೆಬಿಟ್ಟು ಇತಿಹಾಸದ ಸಂಗ್ರಹಣೆಗೆ ಹಗಲು ರಾತ್ರಿಯನ್ನದೇ ತಿರುಗಿದರು.

ಕನ್ನಡ, ಮರಾಠಿ, ಪಾರ್ಸಿ, ಉರ್ದು,ಮೂಡಿಲಿಪಿ ಈ ಎಲ್ಲಾ ಭಾಷೆಗಳನ್ನು ಬಲ್ಲವರಾಗಿದ್ದರು ದೊಡ್ಡಬಾವೆಪ್ಪ ಮೂಗಿ.ಹೀಗಾಗಿ ಕಿತ್ತೂರು ಸಂಸ್ಥಾನದ ಇತಿಹಾಸದ ಸಂಶೋಧನೆ ಅವರಿಗೆ ಕಷ್ಟವಾಗಲಿಲ್ಲ.

‘ಮದುವೆ ಮಾಡಿದರೆ ಮಗ ಸರಿ ಹೋದಾನು”ಎಂದು ತಂದೆ ನಾಲ್ಕಾರು ಕಡೆ ಕನ್ಯೆ ನೋಡಿದರು.ಕೊನೆಗೂ ದೊಡವಾಡ ಗ್ರಾಮದ ಸಬರದ ಮನೆತನದ ಈರಮ್ಮಳೊಂದಿಗೆ ವಿವಾಹ ನೆರೆವೇರಿತು.ಆದರೆ ದೊಡ್ಡಬಾವೆಪ್ಪ ಬದಲಾಗಲಿಲ್ಲ.ಪತ್ನಿ ಸಹಿತ ಅವರಿಗೆ ಅಪರೋಕ್ಷವಾಗಿ ಸಹಕಾರ ನೀಡಿದಳು.

ಕಿತ್ತೂರಿನ ಇತಿಹಾಸದ ದಾಖಲೆಗಳ ಸಂಗ್ರಹಣೆಗೆ ಮಹಾರಾಷ್ಟ್ರ ಮತ್ತು ಕರ್ನಾಟಕ ಸುತ್ತಿದರು.ಕಿತ್ತೂರಿನ ಬಗೆಗೆ ಪತ್ರಗಳು,ಲಾವಣಿಗಳು,ದುಂದುಬಿ,ಜನಪದ ಪದಗಳ ಸಂಗ್ರಹಣೆಗೆ ತಮ್ಮ ಜೀವನದ 50 ವರ್ಷಗಳನ್ನು ಸೆವೆಸಿದರು.

ಬೈಲಹೊಂಗಲದಲ್ಲಿ ಹೊಲದ ಕೆಲಸಕ್ಕೆ ಹೋಗುತ್ತಿದ್ದ ರೈತಾಪಿಗಳನ್ನು ನಿಮಗೆ ಎಷ್ಟು ಸಂಬಳ ಕೊಡುವರು ಅಷ್ಟೂ ನಾನೇ ಕೊಡುತ್ತೇನೆ. ಕಿತ್ತೂರು ಕುರಿತು ನಿಮಗೆ ಗೊತ್ತಿರುವ ಹಾಡು ಹೇಳಿ ನಾನು ಬರೆದುಕೊಳ್ಳುತ್ತೇನೆ ಎನ್ನುತ್ತಿದ್ದರು.

ಕಿತ್ತೂರು ಸಂಸ್ಥಾನಕ್ಕೆ ಸಂಬಂಧಿಸಿದ 256 ಹಾಡುಗಳು ಮತ್ತು10000 ಪುಟಕ್ಕೂ ಹೆಚ್ಚು ಐತಿಹಾಸಿಕ ಆಕರ ಪತ್ರಗಳನ್ನು ಸಂಗ್ರಹಿಸಿರುವುದಾಗಿ ಅವರೆ ಹೇಳಿಕೊಂಡಿದ್ದರು.

ಕಿತ್ತೂರು ಸಂಸ್ಥಾನದ ಇತಿಹಾಸ ಸಂಶೋಧನೆ ಮಾಡುವಾಗ ಯಾರು ಯಾವ-ಯಾವ ದಾಖಲೆಗಳನ್ನು ನೀಡಿದರು ಎಂಬುದನ್ನು ಬಹಳ ಜತನದಿಂದ ದಾಖಲಿಸಿರುವರು.

ಆದರೆ ಇಂದಿನ ಸಂಶೋಧಕರು ಇದನ್ನು ಮಾಡದೇ ಎಲ್ಲವನ್ನೂ ನಾನೇ ಸೃಷ್ಟಿ ಮಾಡಿರುವೆ ಎಂಬ ಅವಗುಣ ರೂಢಿಸಿಕೊಳ್ಳುತ್ತಿರುವುದು ಬಹಳ ಅಸಹ್ಯಕರ ಪ್ರವೃತ್ತಿಯಾಗಿದೆ.ಇದಕ್ಕೆ ವಿಮುಖವಾದ ವೃತ್ತಿ ಪಾವಿತ್ರ್ಯ ದೊಡ್ಡಬಾವೆಪ್ಪ ಮೂಗಿಯವರದ್ದು.ಇದು ದೊಡ್ಡಬಾವೆಪ್ಪನವರ ಸಂಶೋಧನಾ ಪಾವಿತ್ರ್ಯತೆಯನ್ನು  ಎತ್ತಿ ತೋರಿಸುತ್ತದೆ

ಮೂಗಿಯವರ ಸಂಶೋಧನಾ ಪ್ರವೃತ್ತಿ ಗಮನಿಸಿ ಅವರೂಂದಿಗೆ ತಲ್ಲೂರ ರಾಯಣಗೌಡ್ರು ,ಕಲ್ಲೇಶ್ವರ ಶೆಟ್ಟರು,ಬಸರಿಗಿಡದ ವೀರಪ್ಪ, ಎಂ ಪಿ ವಾಲಿ, ಹಾಲಭಾವಿ ವೀರಭದ್ರಪ್ಪ ಹೀಗೆ ಮುಂತಾದವರು ಸೇರಿ 26 ಜೂನ್ 1940 ಕಿತ್ತೂರು ಚನ್ನಮ್ಮರಾಣಿ ಇತಿಹಾಸ ಮಂಡಲ ಸಂಸ್ಥೆ ಪ್ರಾರಂಭಸಿದರು. ಕಿತ್ತೂರು ಇತಿಹಾಸಕ್ಕೆ ಸಂಬಂಧಿಸಿದ ಪುಸ್ತಕ ಪ್ರಕಟಿಸುವಲ್ಲಿ ಈ ಸಂಸ್ಥೆ ಪ್ರಮುಖ ಪಾತ್ರವಹಿಸಿತು.ಅದರೆ ಆ ಪುಸ್ತಕಗಳು ಇಂದು ಸಹಜವಾಗಿ ಲಭ್ಯವಿಲ್ಲ.

“ದೊಡ್ಡಬಾವೆಪ್ಪ ಮೂಗಿ ಮತ್ತು ಕರ್ನಾಟಕ ವಿಶ್ವವಿದ್ಯಾಲಯ”

ಇವತ್ತು ಕಿತ್ತೂರು ಸಂಸ್ಥಾನ ಕುರಿತು ಮಾತನಾಡಲು ಒಂದಿಷ್ಟು ವಿಷಯಗಳು ಸಿಕ್ಕಿವೆ ಎಂದರೆ ಅದು ದೊಡ್ಡಬಾವೆಪ್ಪ ಮೂಗಿಯವರ ಪ್ರಯತ್ನದ ಫಲ.ಆದರೆ ಉತ್ಸವದಲ್ಲಿ ಅವರ ಹೆಸರನ್ನು ಸ್ಮರಿಸಿದರೇ ಉತ್ಸವಕ್ಕೆ ಮತ್ತಷ್ಟು ಮೆರುಗು ಬರುವುದು.

ಆ ಹತ್ತು ಸಾವಿರ ಪುಟಗಳು ಏಲ್ಲಿ ಹೋದವು.?ಏನಾದವು.? ಇವತ್ತಿನ ಮಿಲಿಯನ ಡಾಲರ ಪ್ರಶ್ನೆ?

ವಚನ ಸಾಹಿತ್ಯಕ್ಕೆ ಡಾ!.ಪ ಗು ಹಳಕಟ್ಟಿಯವರು ಹೇಗೊ ಹಾಗೆಯೇ ಕಿತ್ತೂರು ಸಂಸ್ಥಾನದ ಇತಿಹಾಸ ಸಂಗ್ರಹಣೆಗೆ ದೊಡ್ಡಬಾವೆಪ್ಪ ಮೂಗಿ ಅವರು ಅಂದರೆ ಅತಿಶಯೋಕ್ತಿ ಆಗಲಾರದು.

ಆದರೆ ಕ್ಷೇತ್ರಗಳು ಮಾತ್ರ ಬೇರೆ ಬೇರೆ.ಒಂದು ಆಧ್ಯಾತ್ಮವಾದರೆ ಮತ್ತೊಂದು ಇತಿಹಾಸದ ಕ್ಷೇತ್ರ. 1960 ರಲ್ಲಿ ದೊಡ್ಡಬಾವೆಪ್ಪ ಮೂಗಿಯವರು ತಮ್ಮ 70ನೇಯ ವಯಸ್ಸಿನಲ್ಲಿ ಬೈಲಹೊಂಗಲ ನಿವಾಸದಲ್ಲಿ ನಿಧನರಾದರು.

ದಿವಂಗತ ‌.ಬಸಪ್ಪ ಮೂಗಿಯವರ ಭಾವಚಿತ್ರ.

ದೊಡ್ಡಬಾವೆಪ್ಪ ಮೂಗಿಯವರ ನಿಧನದ ನಂತರ ಆ ಹತ್ತು ಸಾವಿರ ಪುಟಗಳ ದಾಖಲೆಗಳನ್ನು ಏನು ಮಾಡುವುದು ಎಂದು ಅವರ ಮಗ ಚಿಂತಿತರಾದರು.
ತಮ್ಮ ತಂದೆಯವರ ಸಂಶೋಧನೆಯ ಶ್ರಮಕ್ಕೆ ಫಲ ದೊರೆಯಬೇಕಾದರೆ  ಕಿತ್ತೂರು ಇತಿಹಾಸವನ್ನು ಬೆಳಕಿಗೆ ತರಬೇಕು ಎಂಬುವುದನ್ನು ಅರಿತು ಅವರ ಮಗ ಬಸಪ್ಪ ಮೂಗಿಯವರು ಸಂಗ್ರಹಿಸಿದ ದಾಖಲೆಗಳನ್ನು ಕರ್ನಾಟಕ ವಿಶ್ವವಿದ್ಯಾಲಯಕ್ಕೆ  ಕೊಡುವ ಇಂಗಿತ ವ್ಯಕ್ತ ಪಡಿಸಿದರು.

ವಿಶ್ವವಿದ್ಯಾಲಯದಲ್ಲಿ ಮತ್ತಷ್ಟು ಅದರ ಸಂಶೋಧನೆ, ಚರ್ಚೆಗಳು ನಡೆದು ಕಿತ್ತೂರು ಸಂಸ್ಥಾನದ ಇತಿಹಾಸ ರಾಜ್ಯದ ಜನರ ಮನ ಮತ್ತು ಮನೆ ತಲುಪಬೇಕು ಎಂಬುದು ಅವರ ಮಹೋನ್ನತ ಉದ್ದೇಶವಾಗಿತ್ತು.   

9 ಅಕ್ಟೋಬರ್ 1978 ರಂದು ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಸಂಶೋಧನಾ ಸಂಸ್ಥೆಯ ಅಂದಿನ ನಿರ್ದೇಶಕರಿಗೆ ದೊಡ್ಡಬಾವೆಪ್ಪ ಮೂಗಿ ಅವರ ಮಗನಾದ ಬಸಪ್ಪ ಮೂಗಿಯವರು ಪತ್ರ ಬರೆದು”ನಮ್ಮ ತಂದೆಯವರಾದ ದೊಡ್ಡಬಾವೆಪ್ಪ ಮೂಗಿಯವರು ಸಂಗ್ರಹಿಸಿದ ಕಿತ್ತೂರು ಸಂಸ್ಥಾನದ ದಾಖಲೆಗಳನ್ನು ಅವರ ಸ್ಮರಣಾರ್ಥ ನಿಮ್ಮ ಸಂಸ್ಥೆಗೆ ಕಾಣಿಕೆಯಾಗಿ ಕೊಡಬೇಕು ಎಂದು ತಿಳಿಸಿದರು.

ದಿವಗಂತ.ಶಿವಪ್ಪ ಮೂಗಿಯವರ ಭಾವಚಿತ್ರ

ಆ ದಾಖಲೆಗಳನ್ನು ಪ್ರತ್ಯೇಕ ಕಪಾಟಿನಲ್ಲಿ ಇಟ್ಟು ಶ್ರೀ ದೊಡ್ಡಬಾವೆಪ್ಪ ಅಜ್ಜನವರ ಸ್ಮರಣಾರ್ಥ ಅವರ ಮಗನಾದ  ಎಸ್.ಡಿ.ಮೂಗಿ ಬೈಲಹೊಂಗಲ ಇವರು ನೀಡಿದ ಕಾಣಿಕೆ ಎಂದು ಬರೆದಿಡಲಾಗುವುದು.ಹಾಗೂ ದೂಡ್ಡಬಾವೆಪ್ಪ ಮೂಗಿಯವರ ಹೆಸರಿನಲ್ಲಿ ಕನ್ನಡ ಇತಿಹಾಸ ಸಂಶೋಧನ ಅಧ್ಯಯನ ಕೇಂದ್ರ ಸ್ಥಾಪಿಸಿಲಾಗುವುದು.ಮತ್ತು ಅವರು ಸಂಗ್ರಹಿಸಿದ ದಾಖಲೆಗಳು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇರುವುದು ಸೂಕ್ತ ಎನ್ನುವುದು ನನ್ನ ನಂಬಿಕೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಅಂದಿನ ನಿರ್ದೇಶಕರು ಎಸ್ ಡಿ ಮೂಗಿಯವರಿಗೆ ಪತ್ರ ಬರೆದು ತಿಳಿಸಿದರು.                               ಅಶೋಕ ಮೂಗಿಯವರ ಭಾವಚಿತ್ರ

ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಸಂಶೋಧನಾ ನಿರ್ದೇಶಕರ ಪತ್ರದ ಇಚ್ಛೆಯ ಅನುಸಾರ ದೊಡ್ಡಬಾವೆಪ್ಪ ಮೂಗಿಯವರ ಮೊಮ್ಮಗ ಅಶೋಕ ಮೂಗಿಯವರು 1978 ರಲ್ಲಿ 13 ಗಂಟುಗಳಲ್ಲಿ ಸಂಸ್ಥಾನಕ್ಕೆ ಸಂಬಂಧಿಸಿದ ಕಾಗದ ಪತ್ರಗಳನ್ನು ವಿಶ್ವವಿದ್ಯಾಲಯಕ್ಕೆ ಒಪ್ಪಿಸಿದರು.
ಪ್ರತಿಯಾಗಿ ವಿಶ್ವವಿದ್ಯಾಲಯವು 10000/-(ಹತ್ತು ಸಾವಿರ)ರೂಪಾಯಿಗಳನ್ನು ಗೌರವಧನವಾಗಿ ನೀಡಿತು.

ಹಾಗಾದರೆ 13ಗಂಟುಗಳಲ್ಲಿ ವಿಶ್ವವಿದ್ಯಾಲಯಕ್ಕೆ ನೀಡಿದ ಸಂಸ್ಥಾನದ ದಾಖಲೆಗಳ ಮೇಲೆ ಸಂಶೋಧನೆ ನಡೆಯಿತೇ.? ಸಂಶೋಧನೆ ಪುಸ್ತಕ ರೂಪದಲ್ಲಿ ಪ್ರಕಟವಾಯಿತೇ.?ದಾಖಲೆಗಳು ಎಲ್ಲಿ ಹೋದವು? ಮುಂದೇನಾಯಿತು.? ಯಾವುದಾದರೂ ಸಂಶೋಧಕ ಏಗರಿಸಿಕೊಂಡು ಹೋದರೆ? ಎಂಬುವುದು ಮಿಲಿಯನ್ ಡಾಲರ್ ಪ್ರಶ್ನೆ.?

ದೊಡ್ಡಬಾವೆಪ್ಪ ಮೂಗಿಯವರು ಸಂಗ್ರಹಿಸಿದ ದಾಖಲೆಗಳ ಮೇಲೆ ಹೆಚ್ಚಿನ ಸಂಶೋಧನೆ ನಡೆಸಿ ಅದರಲ್ಲಿರುವ ಐತಿಹಾಸಿಕ ಸಂಗತಿಗಳನ್ನು ಜನ ಮಾನಸಕ್ಕೆ ಮುಟ್ಟಿಸಿದಾಗ ವಿಶ್ವವಿದ್ಯಾಲಯ ಅವರಿಗೆ ನಿಜವಾಗಿಯೂ ಗೌರವ ಸಲ್ಲಿಸಿದಂತಾಗುತ್ತದೆ.

 

                                   

ಲೇಖಕರು:-ಮಹೇಶ.ನೀಲಕಂಠ.ಚನ್ನಂಗಿ.
ಮುಖ್ಯಶಿಕ್ಷಕರು:
ಚನ್ನಮ್ಮನ ಕಿತ್ತೂರ.
(M)-9740313820

ಜಿಲ್ಲೆ

ರಾಜ್ಯ

error: Content is protected !!