Saturday, July 27, 2024

“ಸಾರಿಗೆ ನೌಕರರ ಮನವಿಗೆ ಸ್ಪಂದಿಸಿರುವ ರಾಜ್ಯ ಸರ್ಕಾರ”

ಬೆಂಗಳೂರು (ಅ.16):  ಆಯುಧ ಪೂಜೆ ಹಾಗೂ ನಾಡಹಬ್ಬ ದಸರಾ ಬಂದರೂ ಆಗಸ್ಟ್‌ ತಿಂಗಳ ಶೇ.50ರಷ್ಟು ಬಾಕಿ ವೇತನ ನೀಡುತ್ತಿಲ್ಲ ಎಂದು ಆಕ್ರೋಶ ಹೊರಹಾಕಿ ಸಾರಿಗೆ ನೌಕರರು ಬಾಕಿ ವೇತನ ಬಿಡುಗಡೆಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದರು.ಸಾರಿಗೆ ನೌಕರರ ಮನವಿಗೆ ಸ್ಪಂದಿಸಿರುವ ರಾಜ್ಯ ಸರ್ಕಾರ ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳಿಗೆ ಒಟ್ಟು 171.69 ಕೋಟಿ ರೂಪಾಯಿ.ಅನುದಾನ ಬಿಡುಗಡೆ ಮಾಡಿದೆ.

ಬಿಎಂಟಿಸಿಗೆ 50.58 ಕೋಟಿ ರೂ.,ಕೆಎಸ್‌ಆರ್‌ಟಿಸಿಗೆ 55.48 ಕೋಟಿ ರೂ., ಎನ್‌ಡಬ್ಲ್ಯೂಕೆಆರ್‌ಟಿಸಿಗೆ 34.41 ಕೋಟಿ ರೂ. ಹಾಗೂ ಕೆಕೆಆರ್‌ಟಿಸಿಗೆ 31.23 ಕೋಟಿ ರೂ. ಸೇರಿದಂತೆ ಒಟ್ಟು 171.69 ಕೋಟಿ ರು. ಅನುದಾನ ಬಿಡುಗಡೆಗೊಳಿಸಿದೆ.

ಕೊರೋನಾದಿಂದ ಸಾರಿಗೆ ಆದಾಯ ಕುಸಿತವಾಗಿ ಆರ್ಥಿಕ ಸಂಕಷ್ಟದಲ್ಲಿರುವ ನಾಲ್ಕು ರಸ್ತೆ ಸಾರಿಗೆ ನಿಗಮಗಳು ಕಳೆದ ಒಂದು ವರ್ಷದಿಂದ ಸರ್ಕಾರದಿಂದ ಅನುದಾನ ಪಡೆದು ನೌಕರರಿಗೆ ವೇತನ ಪಾವತಿಸುತ್ತಿವೆ.ಕೊರೋನಾ ಪೂರ್ವದಲ್ಲಿ ಪ್ರತಿ ತಿಂಗಳ 10 ರೊಳಗೆ ವೇತನ ಪಡೆಯುತ್ತಿದ್ದ ಸಾರಿಗೆ ನೌಕರರಿಗೆ ಕೊರೋನಾ ಬಳಿಕ ಸಕಾಲಕ್ಕೆ ವೇತನ ಸಿಗುತ್ತಿಲ್ಲ.

ಆಗಸ್ಟ್‌ ತಿಂಗಳ ವೇತನದ ಶೇ.50ರಷ್ಟನ್ನು ಸೆಪ್ಟೆಂಬರ್‌ನಲ್ಲಿ ಪಾವತಿಸಲಾಗಿತ್ತು.ಇದೀಗ ಸೆಪ್ಟೆಂಬರ್‌ ಕಳೆದರೂ ಆಗಸ್ಟ್ ತಿಂಗಳ ಉಳಿದ  ಶೇ.50ರಷ್ಟುವೇತನ ಪಾವತಿಸಿರಲಿಲ್ಲ.ಹೀಗಾಗಿ ಸಾರಿಗೆ ನೌಕರರು ಕೂಡಲೇ ಬಾಕಿ ವೇತನ ಬಿಡುಗಡೆಗೊಳಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರು.

ಅದರಂತೆ ಸರ್ಕಾರ ಆಗಸ್ಟ್‌ ತಿಂಗಳ ಬಾಕಿ ಶೇ.50ರಷ್ಟುವೇತನ ಪಾವತಿಗೆ ಸಾರಿಗೆ ನಿಗಮಗಳಿಗೆ ಅನುದಾನ ಬಿಡುಗಡೆಗೊಳಿಸಿದೆ. ಆಕ್ರೋಶ ಹೊರಹಾಕಿದ್ದ ಸಾರಿಗೆ ನೌಕರರು ಇದೀಗ ಕೊಂಚ ಸಮಾಧಾನಗೊಂಡಿದ್ದಾರೆ.

ಅಕ್ಟೋಬರ್‌ ಅರ್ಧ ತಿಂಗಳು ಕಳೆದರೂ ಸೆಪ್ಟೆಂಬರ್‌ ವೇತನ ಬಿಡುಗಡೆಯಾಗಿಲ್ಲ. ಅಕ್ಟೋಬರ್‌ ಕಡೆಯ ವಾರ ಅಥವಾ ನವೆಂಬರ್‌ನಲ್ಲಿ ಸೆಪ್ಟೆಂಬರ್‌ ಬಾಕಿ ವೇತನ ಪಾವತಿಸುವ ಸಾಧ್ಯತೆಯಿದೆ.

ಜಿಲ್ಲೆ

ರಾಜ್ಯ

error: Content is protected !!