Friday, April 19, 2024

“ಗಡಿನಾಡಿನಲ್ಲೊಬ್ಬ ಕನ್ನಡ ಸೇವಕ”

ಹೆತ್ತ ತಾಯಿ ಹೊತ್ತ ನಾಡು ಸ್ವರ್ಗಕ್ಕಿಂತ ಮಿಗಿಲು. ತಾಯ ಸೇವೆ ಮಾಡುವ ಭಾಗ್ಯ ದೊರಕಿದರೆ ನಮ್ಮಂಥ ಪುಣ್ಯವಂತರು ಭೂಮಿ ಮೇಲೆ ಮತ್ಯಾರೂ ಇಲ್ಲ.ಬಹಳಷ್ಟು ಮಹನೀಯರು ನಾಡು-ನುಡಿ ಸೇವೆಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದಾರೆ. ಕುವೆಂಪು ಅವರು“ಕನ್ನಡಕ್ಕಾಗಿ ಕೈಯೆತ್ತು ನಿನ್ನ ಕೈ ಕಲ್ಪವೃಕ್ಷವಾಗುವುದು. ಕನ್ನಡಕ್ಕೆ ಧ್ವನಿಯೆತ್ತು ನಿನ್ನ ಕೊರಳು ಪಾಂಚಜನ್ಯವಾಗುವುದು” ಎಂದು ನುಡಿದಿದ್ದಾರೆ.

ಅದರಂತೆಯೇ ತಮ್ಮ ಜೀವಿತಾವಧಿಯ ಬಹುಪಾಲನ್ನು ಕನ್ನಡಮಾತೆಯ ರಕ್ಷಣೆಗೆ, ಭಾಷೆಯ ಏಳ್ಗೆಗೆ, ಗಡಿನಾಡ ಅಭಿವೃದ್ಧಿಗೆ ಮೀಸಲಿಟ್ಟ ಬಹುತೇಕರಲ್ಲಿ ಗಡಿಜಿಲ್ಲೆ ಬೀದರಿನ. ಡಾ. ಸಂಜೀವಕುಮಾರ್ ಅತಿವಾಳೆ ಕೂಡ ಒಬ್ಬರು.ಶಿಕ್ಷಕರಾಗಿ, ಸಾಹಿತಿಗಳಾಗಿ, ಸಂಘಟಕರಾಗಿ ಬೀದರನಲ್ಲಿ ಕನ್ನಡಪರ ಕೆಲಸಗಳನ್ನು ಮುತುವರ್ಜಿಯಿಂದ ಮಾಡುತ್ತಿದ್ದಾರೆ.

ಸಾಹಿತ್ಯದ ಆಸಕ್ತಿ :-ಬೀದರ ಜಿಲ್ಲೆಯ ಅತಿವಾಳೆ ಗ್ರಾಮದಲ್ಲಿ ಜನಿಸಿದ ಸಂಜೀವಕುಮಾರ ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯದ ಆಸಕ್ತಿ ಮೂಡಿಸಿಕೊಂಡವರು. ಕನ್ನಡ ವಿಷಯದಲ್ಲಿನ ಕವಿಪರಿಚಯವನ್ನು ಓದಿ ಕವಿತೆ ಬರೆಯುವ ಗೀಳನ್ನು ಹಚ್ಚಿಕೊಂಡ ಇವರು, ಕುವೆಂಪು, ಬೇಂದ್ರೆ ಅವರ ಕವಿತೆಗಳಿಂದ ಪ್ರಭಾವಿತರಾಗಿದ್ದರು. ಬರಹ ಬದುಕು ಒಂದಾದರೆ ಮಾತ್ರ ಕವಿಗೆ ಸಮಾಜದಲ್ಲಿ ಗೌರವ ಸಿಗಲು ಸಾಧ್ಯ ಎಂದು ಬಲವಾಗಿ ನಂಬಿರುವ ಸಂಜೀವ್, ಸಮಾಜದ ಪ್ರತಿಬಿಂಬವಾಗಿ, ನೊಂದವರ ಭರವಸೆಯಾಗಿ ಕಾವ್ಯ ರೂಪುಗೊಳ್ಳಬೇಕು ಎನ್ನುತ್ತಾರೆ.

ಸಾಹಿತ್ಯ ಕೃಷಿ ಮತ್ತು ಸಂಘಟನೆ :-ಕವಿತೆ, ಲೇಖನ, ಬಿಡಿಬರಹಗಳನ್ನು ಬರೆಯುವ ಹಾಗೂ ಪುಸ್ತಕ ಸಂಗ್ರಹ ಹವ್ಯಾಸವನ್ನು ಮೈಗೂಡಿಸಿಕೊಂಡಿರುವ ಅತಿವಾಳೆ ಪ್ರಜಾವಾಣಿ ವಾಚಕರ ವಿಭಾಗದಲ್ಲಿ ವರ್ತಮಾನದ ಸಮಸ್ಯೆಗಳ ಕುರಿತು ಬೆಳಕು ಚೆಲ್ಲುವ ಪತ್ರಗಳನ್ನು ಬರೆಯುತ್ತಾರೆ. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಇವರ ಬರಹಗಳು ಬೆಳಕು ಕಂಡಿವೆ. ೨೦೦೯ ರಲ್ಲಿ ‘ಸ್ವಾತಂತ್ರ್ಯ’ ಎಂಬ ಮೊದಲ ಕವನ ಸಂಕಲನ ಪ್ರಕಟಿಸಿ ಓದುಗರ ಮನಗೆದ್ದಿದ್ದಾರೆ. ‘ಇವರು ರಚಿಸಿದ ‘ಚೌಕಟ್ಟಿನಾಚೆ’ ಎಂಬ ಪ್ರಬಂಧಗಳ ಸಂಕಲನ ಜನಮೆಚ್ಚುಗೆಯನ್ನು ಗಳಿಸಿದೆ.

‘ನುಡಿ-ಕಿಡಿ’ ಎನ್ನುವ ಕನ್ನಡ ನುಡಿಮುತ್ತುಗಳ ಸಂಪಾದಿತ ಸಂಕಲನವನ್ನು ಹೊರತಂದಿದ್ದಾರೆ. ಕಳೆದ ಹತ್ತು ವರ್ಷಗಳಿಂದಲೂ ಪ್ರಕಟಿಸುತ್ತಿರುವ ‘ಸಾಹಿತ್ಯ ಸಿಂಚನ’ ಎಂಬ ತ್ರೈಮಾಸಿಕ ಪತ್ರಿಕೆಯಲ್ಲಿ ನಾಡಿನ ಪ್ರಸಿದ್ಧ ಲೇಖಕರು ಅಂಕಣ, ಲೇಖನಗಳನ್ನು ಬರೆಯುತ್ತಿದ್ದಾರೆ. ಜಿಲ್ಲಾ ಸಮ್ಮೇಳನ, ಕೇಂದ್ರ ಸಾಹಿತ್ಯ ಅಕಾಡೆಮಿ, ರಾಜ್ಯ ಸಾಹಿತ್ಯ ಅಕಾಡೆಮಿ ಆಯೋಜಿಸಿದ ಕಾವ್ಯಕಮ್ಮಟಗಳಲ್ಲಿ ಭಾಗಿಯಾಗಿದ್ದಾರೆ. ಇತ್ತೀಚೆಗೆ ಧಾರವಾಡದಲ್ಲಿ ನಡೆದ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವಿತಾ ವಾಚನ ಮಾಡಿದ್ದಾರೆ.

ರಾಜ್ಯಮಟ್ಟದ ಕರುನಾಡು ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಹುಟ್ಟು ಹಾಕುವುದರ ಮೂಲಕ ಎಲೆಮರೆ ಪ್ರತಿಭೆಗಳಿಗೆ ಮುಖ್ಯವೇದಿಕೆ ಕಲ್ಪಿಸಿಕೊಡುತ್ತಿದ್ದಾರೆ. ಈ ವೇದಿಕೆ ಮುಖಾಂತರ ರಾಜ್ಯಮಟ್ಟದ ಕಥಾ ಕಮ್ಮಟ, ಕಾವ್ಯ ಕಮ್ಮಟ, ಪುಸ್ತಕ ಬಿಡುಗಡೆ, ಕವಿಗೋಷ್ಠಿ ಕಾರ್ಯಕ್ರಮಗಳನ್ನು ಸಂಘಟಿಸುತ್ತಾ ಹಲವು ಪ್ರತಿಭೆಗಳು ಕುಡಿಯೊಡೆಯಲು ಪ್ರೇರೇಪಣೆ ನೀಡುತ್ತಿದ್ದಾರೆ.

ಡಾ.ಸಂಜೀವಕುಮಾರ್ ಅತಿವಾಳೆ ಅವರ ಬಾವಚಿತ್ರ

ನೃಪತುಂಗ ಕನ್ನಡ ಬಳಗದ ಜಿಲ್ಲಾ ಕಾರ್ಯದರ್ಶಿಯಾಗಿ, ದಾಸ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯನಾಗಿ ಕಾರ್ಯನಿರ್ವಹಿಸುತ್ತಿರುವುದಲ್ಲದೆ ಎರಡು ಬಾರಿ ಬೀದರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.

ಕರುನಾಡು ಸಾಂಸ್ಕೃತಿಕ ಭವನ ನಿರ್ಮಾಣ
ಡಾ. ಸಂಜೀವಕುಮಾರ್ ಅತಿವಾಳೆ ಅವರ ಕನ್ನಡ ಪ್ರೀತಿಗೆ ಸಾಕ್ಷಿಯಾಗಿ ಬೀದರ ನಗರದಲ್ಲಿ ಕರುನಾಡು ಸಾಂಸ್ಕೃತಿಕ ಭವನ ನಿರ್ಮಾಣವಾಗಿದೆ. ತಮ್ಮ ಸ್ವಂತ ಜಾಗೆಯಲ್ಲಿ ಎರಡು ಲಕ್ಷ ಹಣ ಖರ್ಚು ಮಾಡಿ ೨೦೦ ಜನ ಕುಳಿತುಕೊಳ್ಳಲು ಸಾಧ್ಯವಾಗುವ ಸಾಂಸ್ಕೃತಿಕ ಭವನದ ನಿರ್ಮಾಣ ಮಾಡಿ, ಕನ್ನಡ ಕಾರ್ಯಕ್ರಮಗಳಿಗೆ ಉಚಿತವಾಗಿ ಅವಕಾಶ ನೀಡುತ್ತಿರುವುದು ಇವರ ಕನ್ನಡ ಪ್ರೇಮಕ್ಕೆ ತಾಜಾ ಉದಾಹರಣೆಯಾಗಿದೆ.

ಒಲಿದು ಬಂದ ಗೌರವ ಸನ್ಮಾನ:-ಇಂತಹ ಅಪ್ಪಟ ಕನ್ನಡ ಪ್ರೇಮಿಗೆ ‘ಸಾಹಿತಿ ಸಂಗಮ’ ಕಾರ್ಯಕ್ರಮದಡಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚೌವ್ಹಾಣ್ ಅವರಿಂದ ಸನ್ಮಾನ ಸ್ವೀಕಾರ. ಮಂಡ್ಯ ಜಿಲ್ಲೆಯ ಸಂಘಟನೆ ‘ರಾಜ್ಯಮಟ್ಟದ ಕನ್ನಡ ಸೇವಕ’ ಪುರಸ್ಕಾರ ನೀಡಿ ಗೌರವಿಸಿದೆ.

ಬೀದರ ಜಿಲ್ಲಾಡಳಿತ ಇವರ ಸಾಹಿತ್ಯ ಮತ್ತು ಶೈಕ್ಷಣಿಕ ಸೇವೆ ಪರಿಗಣಿಸಿ ‘ರಾಜ್ಯೋತ್ಸವ ಪ್ರಶಸ್ತಿ’ ನೀಡಿ ಪುರಸ್ಕರಿಸಿದೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗೌರವ ಸನ್ಮಾನಕ್ಕೂ ಭಾಜನರಾಗಿದ್ದಾರೆ. ಹಲವಾರು ಕನ್ನಡಪರ ಸಂಘಟನೆಗಳು, ಸಂಘ-ಸಂಸ್ಥೆಗಳು ನೀಡುವ ಅನೇಕ ಗೌರವ ಪುರಸ್ಕಾರ, ಸನ್ಮಾನಗಳು ಇವರಿಗೆ ಒಲಿದು ಬಂದಿವೆ.

ಇಂತಹ ಅಪರೂಪದ ಕನ್ನಡ ಸೇವಕ ಗಡಿಭಾಗದಲ್ಲಿ ಕನ್ನಡವನ್ನು ಕಟ್ಟುವ ಕಾರ್ಯದಲ್ಲಿ ತೊಡಗಿಕೊಂಡಿರುವುದು ಹೆಮ್ಮೆಯ ಸಂಗತಿ. ಇವರ ನಿಸ್ವಾರ್ಥ ಕನ್ನಡ ಪ್ರೇಮ ನಿರಂತರವಾಗಿರಲಿ ಎಂದು ಅಭಿನಂದಿಸೋಣ.

 

ಲೇಖಕರು:ನಾಗೇಶ್ ಜೆ. ನಾಯಕ.
ಶಿಕ್ಷಕರು.ರಾಮಲಿಂಗೇಶ್ವರ ಹೈಸ್ಕೂಲ್. ಉಡಿಕೇರಿ.ಬೈಲಹೊಂಗಲ ತಾಲ್ಲೂಕು
ಬೆಳಗಾವಿ ಜಿಲ್ಲೆ.
ಮೊಬೈಲ್-9900817716

 

ಜಿಲ್ಲೆ

ರಾಜ್ಯ

error: Content is protected !!