Friday, September 20, 2024

ಬೂದಿಹಾಳದ ಸರಕಾರಿ ಪ್ರೌಢಶಾಲೆಯಲ್ಲಿ ಸೈಬರ್ ಜಾಗೃತಿ ಕಾರ್ಯಕ್ರಮ

ಬೈಲಹೊಂಗಲ: ತಾಲೂಕಿನ ಬೂದಿಹಾಳದ ಸರಕಾರಿ ಪ್ರೌಢಶಾಲೆಯಲ್ಲಿ ಸೈಬರ್ ಜಾಗೃತಿ ಹಾಗೂ ಡಿಜಿಟಲ್ ಬ್ಯಾಂಕಿಂಗ್ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಬೆಳಗಾವಿಯ ಎಚ್.ಡಿ.ಎಫ್.ಸಿ ಬ್ಯಾಂಕಿನ ಆಡಿಟ್ ಅಧಿಕಾರಿಗಳಾದ ಈರಣ್ಣ ಚಂದ್ರು ಬಡಿಗೇರ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಆನ್ ಲೈನ್ ವಂಚನೆ ಹೆಚ್ಚುತ್ತಿದ್ದು ಎಲ್ಲರೂ ಬಹಳಷ್ಟು ಜಾಗರೂಕರಾಗಿರುವುದು ಅಗತ್ಯವಿದೆ ಎಂದು ಹೇಳಿದರು. ಸೈಬರ್ ಅಪರಾಧಗಳು, ನಕಲಿ ವೆಬ್ ಸೈಟ್ ಗಳು, ವಂಚಕರ ಹಾವಳಿ, ಡಿಜಿಟಲ್ ಬ್ಯಾಂಕಿಂಗ್, ಫೇಕ್ ಕರೆಗಳ ಬಗ್ಗೆ ಸಾಕಷ್ಟು ಮಾಹಿತಿ ನೀಡಿದರು. ಪಾಸ್ವರ್ಡ ಬದಲಾವಣೆ, ಎಟಿಎಂಗಳ ನಿರ್ವಹಣೆ, ಸುರಕ್ಷಿತ ಆನ್ಲೈನ್ ಪಾವತಿ, ಆನ್ ಲೈನ್ ಶಾಪಿಂಗ್ ಕುರಿತು ಉದಾಹರಣೆ ಸಹಿತ ವಿವರಿಸಿದರು.

ಮುಖ್ಯಶಿಕ್ಷಕರಾದ ಎನ್.ಆರ್.ಠಕ್ಕಾಯಿ ಮಾತನಾಡಿ ಆಫರ್, ಬೋನಸ್, ಲಾಟರಿ ಇತ್ಯಾದಿಯಾಗಿ ಮೊಬೈಲ್ ನಲ್ಲಿ ಹರಿದಾಡುವ ನಕಲಿ ಸಂದೇಶಗಳಿಗೆ ಪ್ರತಿಕ್ರಿಯೆ ನೀಡಬೇಡಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ತೀರ ವೈಯಕ್ತಿಕವಾದ ಮಾಹಿತಿಗಳನ್ನು ಹಂಚಿಕೊಳ್ಳಬೇಡಿ ಎಂದು ಹೇಳಿದರು. ಮಕ್ಕಳು ಸೈಬರ್ ಅಪರಾಧಗಳನ್ನು ತಡೆಗಟ್ಟುವ ಎಚ್ಚರಿಕೆಯ ಕ್ರಮಗಳನ್ನು ತಿಳಿದುಕೊಂಡು ಕುಟುಂಬದ ಸದಸ್ಯರಿಗೆ ಜಾಗೃತಿ ಮೂಡಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಶಿಕ್ಷಕರಾದ ಸುನೀಲ್ ಭಜಂತ್ರಿ ಪ್ರಾಸ್ತಾವಿಕವಾಗಿ ಮಾತನಾಡಿ ಡಿಜಿಟಲ್ ಯುಗದಲ್ಲಿ ಮೋಸ ಹೋಗದಂತೆ ಇರಬೇಕಾದರೆ ಸರಿಯಾದ ಜ್ಞಾನ ಹೊಂದುವುದು ಅಗತ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಉಪಾಧ್ಯಕ್ಷ ವಿನಾಯಕ ಬಡಿಗೇರ, ಶಿಕ್ಷಕರಾದ ಜಗದೀಶ ನರಿ, ಶಿವಾನಂದ ಬಳಿಗಾರ ಉಪಸ್ಥಿತರಿದ್ದರು.ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರವೀಣ ಗುರುನಗೌಡರ ವಂದಿಸಿದರು.

ಜಿಲ್ಲೆ

ರಾಜ್ಯ

error: Content is protected !!