ಕನ್ನಡ ಮನಸ್ಸುಗಳ ಪ್ರೀತಿ ಅಭಿಮಾನಕ್ಕೆ ಸದಾ ಚಿರಋಣಿ:- ಮಂಗಳಾ ಮೆಟಗುಡ್

ಉಮೇಶ ಗೌರಿ (ಯರಡಾಲ)

ಬೈಲಹೊಂಗಲ: ಕನ್ನಡ ಮನಸ್ಸುಗಳ ಪ್ರೀತಿ ಅಭಿಮಾನಕ್ಕೆ ಎಂದೆಂದಿಗೂ ಚಿರಋಣಿ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಪುನರಾಯ್ಕೆಯಾದ  ಮಂಗಳಾ ಶ್ರೀಶೈಲ ಮೆಟಗುಡ್ ಹೇಳಿದರು. ಬೈಲಹೊಂಗಲದ ತಮ್ಮ ನಿವಾಸದಲ್ಲಿ ಖಾನಾಪೂರ ತಾಲೂಕಿನ ಇಟಗಿ ಗ್ರಾಮದ ಸಾಹಿತ್ಯ ಬಳಗದಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಸಾಹಿತ್ಯ ಪರಿಷತ್ತಿನ ಮೂಲಕ ಜಿಲ್ಲೆಯಲ್ಲಿ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕನ್ನಡದ ಕಂಪನ್ನು ಎಲ್ಲೆಡೆ ಪಸರಿಸುವ ಗುರಿ ಹೊಂದಿದ್ದೇನೆ ಎಂದು ಅವರು ಅಭಿಪ್ರಾಯಪಟ್ಟರು. ಕನ್ನಡದ ಸೇವೆ ಮಾಡಲು ಈ ಹಿಂದೆ ನೀಡಿದ ಎಲ್ಲರ ಸಹಕಾರ ಹೀಗೆಯೇ ಮುಂದುವರೆಯಲಿ ಎಂದರು.

ಮಾಜಿ ಶಾಸಕರಾದ ಜಗದೀಶ ಮೆಟಗುಡ್ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಂಗಲಾ ಮೆಟಗುಡ್ ಮತ್ತು ಶ್ರೀಶೈಲ ಮೆಟಗುಡ್ ದಂಪತಿಗಳಿಗೆ ಅಭಿನಂದಿಸಿ ಕನ್ನಡದ ಸೇವೆ ಮುಂದುವರೆಯಲಿ ಎಂದು ಶುಭಕೋರಿದರು.

ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ ಮಾತನಾಡಿ ಹಚ್ಚ ಹಸಿರಿನ ಸೆರಗಿನಲ್ಲಿ ಕಂಗೊಳಿಸುವ ಖಾನಾಪೂರ ತಾಲೂಕಿನ ಸಾಹಿತ್ಯ ಪ್ರತಿಭೆಗಳು ನಾಡಿನ ಕೀರ್ತಿ ಹೆಚ್ಚಿಸಲಿ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಖಾನಾಪೂರ ತಾಲೂಕಾ ಘಟಕದ ಮಾಜಿ ಅಧ್ಯಕ್ಷರಾದ ವಿಜಯ ಬಡಿಗೇರ
ಮಾತನಾಡಿ ಜನರಿಗೆ ಸಾಹಿತ್ಯದ ಬಗ್ಗೆ ಒಲವು ಮೂಡಿಸುವ, ಕನ್ನಡಿಗರನ್ನು ಒಂದುಗೂಡಿಸುವ, ಕನ್ನಡದ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ಮೂಲಕ ಪರಿಷತ್ತು ಜನಮನಕ್ಕೆ ಇನ್ನೂ ಹತ್ತಿರವಾಗಬೇಕು ಎಂದು ಅಭಿಪ್ರಾಯಪಟ್ಟರು.

ಇಟಗಿ ಗ್ರಾಮದ ಹಿರಿಯರೂ ಸಾಹಿತ್ಯ ಪ್ರೇಮಿಗಳೂ ಆದ ಆರ್.ಎಂ ಕುಂಕೂರ ಮಾತನಾಡಿ ಕನ್ನಡದ ಪುಸ್ತಕಗಳನ್ನು ಪ್ರಕಟಿಸುವ ಹಾಗೂ ಯುವಕರಲ್ಲಿ ಓದುವ ಹವ್ಯಾಸವನ್ನು ಬೆಳೆಸುವ ನಿಟ್ಟಿನಲ್ಲಿ ಪರಿಷತ್ತು ಹೆಚ್ಚಿನ ಗಮನ ಹರಿಸಬೇಕು ಎಂದು ಅನಿಸಿಕೆ ವ್ಯಕ್ತಪಡಿಸಿದರು.

ಇಟಗಿಯ ಚೆನ್ನಮ್ಮ ರಾಣಿ ಸ್ಮಾರಕ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಜಿ.ಬಿ ನಾಯ್ಕರ ಮಾತನಾಡಿ ಕನ್ನಡದ ನೆಲ, ಜಲ, ಸಂಸ್ಕೃತಿಗಳನ್ನು ಸಂರಕ್ಷಿಸುವ ಜವಾಬ್ದಾರಿ ಕನ್ನಡ ಸಾಹಿತ್ಯ ಪರಿಷತ್ತಿನ ಮೇಲಿದೆ ಎಂದು ಹೇಳಿದರು.

ಬೂದಿಹಾಳ ಸರಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಎನ್.ಆರ್.ಠಕ್ಕಾಯಿ ಮಾತನಾಡಿ ಖಾನಾಪೂರ ತಾಲೂಕಿನ ಐತಿಹಾಸಿಕ ಮತ್ತು ಪಾರಂಪರಿಕ ವೈಶಿಷ್ಟ್ಯಗಳನ್ನು ಪುಸ್ತಕ ರೂಪದಲ್ಲಿ ಹೊರತರಬೇಕು ಎಂದು ಮನವಿ ಮಾಡಿದರು.

ಸಾಹಿತಿಗಳಾದ ಶಂಕರ.ವಿ.ಗಣಾಚಾರಿ ಮಾತನಾಡಿ ಇಟಗಿ ಖಾನಾಪೂರ ತಾಲೂಕಿನ ಪ್ರಮುಖ ಗ್ರಾಮವಾಗಿದ್ದು ಕನ್ನಡಾಭಿಮಾನ ಹೆಚ್ಚಿಸುವ ವಿಭಿನ್ನ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು ಎಂದು ಹೇಳಿದರು.

ದೊಡವಾಡ ಪ್ರೌಢಶಾಲೆಯ ಶಿಕ್ಷಕರಾದ ಕುಮಾರ.ಬಿ.ಕಡೇಮನಿ ಅವರು ಮಂಗಲಾ ಮೆಟಗುಡ್ ಅವರ ಕವನಗಳಿಗೆ ರಾಗಸಂಯೋಜಿಸಿ ಹಾಡಿದ್ದು ಎಲ್ಲರ ಗಮನ ಸೆಳೆಯಿತು. ಚಿತ್ರಕಲಾ ಶಿಕ್ಷಕರಾದ ಷಡಕ್ಷರಯ್ಯ.ಶಿ.ಹಿರೇಮಠ, ಕವಯಿತ್ರಿ ಗಿರಿಜಾ ಬಿಳಮರಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮೆಟಗುಡ್ ಮನೆತನದ ಸದಸ್ಯರು, ಸ್ನೇಹಿತರು, ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು. ಪ್ರಾಚಾರ್ಯರಾದ ಆರ್.ಬಿ.ಹುಣಶೀಕಟ್ಟಿ ಸ್ವಾಗತಿಸಿದರು. ಶಿಕ್ಷಕರಾದ ಎಸ್.ಕೆ ಕುರಗುಂದ ನಿರೂಪಿಸಿದರು. ಉಪನ್ಯಾಸಕರಾದ ಜಗದೀಶ್ವರ.ಎಚ್.ಪೂಜಾರ ವಂದಿಸಿದರು.

 

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";