ಬೈಲಹೊಂಗಲ(ನ.28): ಕನ್ನಡ ನಾಡು ನುಡಿ ಸೇವೆಗಾಗಿ ಮತ್ತೊಮ್ಮೆ ಅವಕಾಶ ಮಾಡಿಕೊಟ್ಟ ಎಲ್ಲ ಕನ್ನಡ ಮನಸ್ಸುಗಳಿಗೆ ಆಭಾರಿಯಾಗಿದ್ದೇನೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಪುನರಾಯ್ಕೆಯಾದ ಮಂಗಳಾ ಶ್ರೀಶೈಲ ಮೆಟಗುಡ್ ಹೇಳಿದರು. ಬೈಲಹೊಂಗಲದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿ ಐದು ವರ್ಷಗಳ ಅವಧಿಯಲ್ಲಿ ಕನ್ನಡ ಭವನಗಳನ್ನು ನಿರ್ಮಿಸಿ ಬಾಕಿ ಇರುವ ಇನ್ನಿತರ ಕೆಲಸ ಕಾರ್ಯಗಳನ್ನು ಮಾಡಲು ಸದಾ ಬದ್ಧನಾಗಿದ್ದೇನೆ ಎಂದರು.
ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ ಮಾತನಾಡಿ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯದಲ್ಲಿಯೇ ಮಾದರಿಯಾಗಲಿ ಎಂದರು.
ಹಿರೇಬಾಗೇವಾಡಿ ಸಮುದಾಯ ಆರೋಗ್ಯ ಕೇಂದ್ರದ ವಿಕಿರಣಶಾಸ್ತ್ರ ಚಿತ್ರಣ ಅಧಿಕಾರಿಗಳಾದ ಆಕಾಶ ಥಬಾಜ ಕಿತ್ತೂರು ಚನ್ನಮ್ಮಾಜಿಯ ಮೂರ್ತಿ ನೀಡಿ ಅಭಿನಂದಿಸಿ ಮಾತನಾಡಿ ಕನ್ನಡ ನಾಡಿನ ಸಂಸ್ಕೃತಿ, ಇತಿಹಾಸ, ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪರಿಷತ್ತು ಮುನ್ನಡೆಯುವಂತಾಗಲಿ ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಬೆಳಗಾವಿ ಜಿಲ್ಲಾ ಕ್ರೀಡಾ ಕಾರ್ಯದರ್ಶಿಗಳಾದ ಕಿರಣ ಸಾವಂತನವರ ನೂತನ ಅಧ್ಯಕ್ಷರಿಗೆ ಧಾರವಾಡದ ಪ್ರತಿಷ್ಠಿತ ಜೆ.ಎಸ್.ಎಸ್ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕರಾದ ಡಾ. ಭರಮಪ್ಪ ನಿಂಗಪ್ಪ ಭಾವಿ ಅವರು ಬರೆದ ಉತ್ತರ ಕನ್ನಡ ಜಿಲ್ಲೆಯ ಜೈನ ಸಂಸ್ಕ್ರತಿ ಎಂಬ ಮೌಲಿಕ ಸಂಶೋಧನಾ ಕೃತಿ ನೀಡಿ ಅಭಿನಂದಿಸಿದರು.
ಬೂದಿಹಾಳ ಸರಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಎನ್.ಆರ್.ಠಕ್ಕಾಯಿ ಮಾತನಾಡಿ ಹೊಸ ಸಾಹಿತ್ಯ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿ ಜಿಲ್ಲೆಯ ಬರಹಗಾರರ ಮಾಹಿತಿ ಕೋಶವನ್ನು ಪರಿಷತ್ತಿನಿಂದ ಹೊರತರಬೇಕು ಎಂದು ಅಭಿಪ್ರಾಯಪಟ್ಟರು.
ಬೈಲಹೊಂಗಲದ ವಾಣಿಜ್ಯ ತೆರಿಗೆ ಪರಿವೀಕ್ಷಕರಾದ ಚಿಂತಾಮಣಿ ಮಹಾವೀರ ಬೋಗಾರ ಮಾತನಾಡಿ ಡಾ. ಭರಮಪ್ಪ ನಿಂಗಪ್ಪ ಭಾವಿಯವರ ಸಂಶೋಧನಾ ಕೃತಿಯು ಉತ್ತರ ಕನ್ನಡ ಜಿಲ್ಲೆಯ ಜೈನ ಸಂಸ್ಕೃತಿ, ಜಿನಾಲಯಗಳು, ವಾಸ್ತುಶಿಲ್ಪ, ರಾಜಮನೆತನಗಳನ್ನು ಪರಿಚಯಿಸುವ ಉತ್ತಮ ಗ್ರಂಥವಾಗಿದ್ದು ಇಂತಹ ಉತ್ತಮ ಸಾಹಿತ್ಯ ಕೃತಿಗಳು ಜಿಲ್ಲೆಯಲ್ಲಿ ಬರುವಂತಾಗಬೇಕು ಎಂದು ಹೇಳಿದರು.
ಸಾಮಾಜಿಕ ಕಾರ್ಯಕರ್ತರಾದ ಪ್ರವೀಣ ರೇಣಕೆ ಮಾತನಾಡಿ ಬೆಳಗಾವಿ ಗಡಿ ಜಿಲ್ಲೆಯಾಗಿದ್ದು ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಲು ಅಭಿಯಾನ ಆರಂಭಿಸಬೇಕೆಂದು ಮನವಿ ಮಾಡಿದರು.