Tuesday, September 17, 2024

“ಏಳಾ ಹನ್ನೊಂದು”

ಜೀವನ ಎನ್ನುವದು ಏಳು-ಬೀಳುಗಳ, ಸುಖ-ದುಃಖಗಳ, ನೋವು-ನಲಿವುಗಳ, ಕೀರ್ತಿ-ಅಪಕೀರ್ತಿಗಳ, ಹೊಗಳಿಕೆ-ತೆಗಳಿಕೆಗಳ ಸಂಕೀರ್ಣ ವ್ಯವಸ್ಥೆ.

ಕೆಲವೊಮ್ಮೆ “ಕೇಕ್ ವಾಕ್” ಇನ್ನು ಕೆಲವೊಮ್ಮೆ “ತಂತಿ ಮೇಲಿನ ನಡಿಗೆ. ಕೆಲವೊಮ್ಮೆ “ಮುಟ್ಟಿದ್ದೆಲ್ಲ ಚಿನ್ನ”ವಾದರೆ ಹಲವು ಬಾರಿ “ಇತ್ತ ದರಿ ಅತ್ತ ಪುಲಿ” ಎನ್ನುವ ಪರಿಸ್ಥಿತಿ!!

ಅವರವರ ಸ್ವಭಾವ, ನೋಡುವ ದೃಷ್ಟಿ, ಸಹಿಸಿಕೊಳ್ಳುವ ತಾಕತ್ತು ಇತ್ಯಾದಿಗಳಿಗೆ ಅನುಗುಣವಾಗಿ ಪರಿಸ್ಥಿತಿಗಳು ಸರಳ ಇಲ್ಲವೇ ಸಂಕೀರ್ಣ ಆಗುತ್ತವೆ.

ಕೆಲವೊಬ್ಬರು ಎಂತದೇ ಪರಿಸ್ಥಿತಿ ಬಂದರೂ ಎದೆಗುಂದದೆ ಎದುರಿಸುತ್ತಾರೆ. ಇನ್ನು ಕೆಲವರು ಎಷ್ಟೇ ಸಣ್ಣ ಪ್ರಸಂಗಗಳಿಗೂ “ಹುಲಿಗೆ ಹುಣ್ಣು ಹುಟ್ಟಿದವರಂತೆವರ್ತಿಸುತ್ತಾರೆ.

ಏನೇ ಕಷ್ಟ ಬಂದರೂ “ಮನೀಷ್ಯಾಗ ಬರದ ಮರಕ್ಕ ಬರ್ತಾವೇನು?” ಎಂದು ಕೆಲವರು ಎದುರಿಸಿದರೆ. ಆಕಾಶವೇ ತಲೆ ಮೇಲೆ ಬಿದ್ದಂತೆ ಕೆಲವರು ಕೈ ಹೊತ್ತು ಕುಳಿತುಕೊಳ್ಳುತ್ತಾರೆ.

ಆತ್ಮೀಯರಲ್ಲಿ ಕಷ್ಟಗಳನ್ನು ಹೇಳಿಕೊಂಡರೆ ಕೆಲವರು ಉರಿಯುವ ಬೆಂಕಿಗೆ ತುಪ್ಪ ಸುರಿದು “ಕಡ್ಡಿ ಹೋಗಿ ಗುಡ್ಡಾ” ಮಾಡಿ ಬಿಡುತ್ತಾರೆ. ಇನ್ನು ಕೆಲವರು ನಾನಿದ್ದೇನೆ ಮುಂದೆ ನಡೆ ಎಂದು ಹೆಗಲು ಕೊಟ್ಟು ಕಷ್ಟಗಳಿಗೆ “ಬಂಡಿಯೊಳಗ ಬಂದಿದ್ದು ಗಿಂಡ್ಯಾಗ ಹೋತು” ಅನ್ನೋ ತರಹ ಸಹಾಯ ಮಾಡಿ ಜಟಿಲ ಸಮಸ್ಯೆಗಳನ್ನು “ಕಡ್ಲಿ ತಿಂದು ಕೈ ತೊಳಕೊಂಡಂತೆ” ನಿವಾರಿಸಿಬಿಡುತ್ತಾರೆ.

ಅಂವ ಗಟ್ಟಿ ಅಲ್ಲ ಲಗೂನ ಕೈ ಕಾಲು ಕಳಕೊತಾನ” ಎಂದರೆ ಕೆಲವೊಮ್ಮೆ “ಬ್ಯಾರೆ ಯಾರರ ಆಗಿದ್ರ ಉರ್ಲ ಹಾಕೊತಿದ್ರು ಎನ್ನುವ ಮೆಚ್ಚಿಗೆಯೂ ಬರಬಹುದು.

ತಮಗೆ ಬಂದ ಕಷ್ಟಗಳನ್ನು ಹೇಳುವ ರೀತಿಗಳು ವಿಭಿನ್ನ-ವಿಶಿಷ್ಟ. “ನನ್ನ ಬಾಳೆ ಮೂರಾ ಬಟ್ಟೆ ಆಗೇತಿ”, “ನನ್ನ ಪರಿಸ್ಥಿತಿ ಹದಗೆಟ್ಟು ಹೈದ್ರಾಬಾದ್ ಆಗೇತಿ”, “ಕೆಟ್ಟು ಕ್ಯಾರ್ ಸರ ಆಗೇತಿ”, “ರಾಮ ಕಥಿ ಆಗೇತಿ”,………… ” ಏಳಾ ಹನ್ನೊಂದು ಆಗೇತಿ”.

ಅಂದ ಹಾಗೆ ಇವತ್ತು ಆಂಗ್ಲರ ಕಾಲಮಾನದ ಪ್ರಕಾರ
2021 ನೇ ವರ್ಷದ 7 11 (7th November)!!

ಹವ್ಯಾಸಿ ಬರಹಗಾರ ಪ್ರಕಾಶ

ಹವ್ಯಾಸಿ ಬರಹಗಾರ:-
ಪ್ರಕಾಶ ರಾಜಗೋಳಿ, ಯರಡಾಲ

ಜಿಲ್ಲೆ

ರಾಜ್ಯ

error: Content is protected !!