ಬೈಲಹೊಂಗಲ (ನ.06):-ತಾಲೂಕಿನ ಚಿಕ್ಕಬಾಗೇವಾಡಿಯಲ್ಲಿ ರೈತಪರ ಹೋರಾಟಗಾರ ಮಾಜಿ ಕೇಂದ್ರ ಸಚಿವ ದಿ.ಬಾಬಾಗೌಡ್ರು ರುದ್ರಗೌಡ ಪಾಟೀಲ್’ರ ಮೂರ್ತಿ ಪ್ರತಿಷ್ಠಾಪನಾ ಅಡಿಗಲ್ಲು ಸಮಾರಂಭ ಜರುಗಿತು.
ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಬೈಲೂರು ನಿಜಗುಣಾನಂದ ಶ್ರೀಗಳು ಬಾಬಾಗೌಡ್ರು ಪಾಟೀಲರು ನಾಡಿನ ರೈತರ ಹಕ್ಕುಗಳಿಗಾಗಿ ಹೋರಾಟ ಮಾಡಿದವರು.ಅವರು ನಮ್ಮ ನಾಡಿನ ರೈತರ ಶಕ್ತಿ, ಗ್ರಾಮ ಸಡಕ ಯೋಜನೆಯ ರೂವಾರಿಗಳು ಹಾಗೂ ರೈತರಿಗೆ ಹೋರಾಟದ ಮನೋಭಾವ ಬೆಳಿಸಿದ ಮಹಾನ ರೈತ ರತ್ನ ಯುವ ಸಮುದಾಯಕ್ಕೆ ಪ್ರೇರಣೆ ನೀಡುವ ಆಧುನಿಕ ಬಸವತತ್ವ ಪರಿಪಾಲಕರಾಗಿದ್ದರು ಎಂದರು.
ಪೂಜಾರಿಗಳ, ಸ್ವಾಮೀಜಿಗಳ ಪಾದ ಪೂಜೆಗಳಿಂದ ಮತ್ತು ರಾಜಕಾರಣಿಗಳಿಂದ ದೇಶ ಉದ್ದಾರ ಆಗುವುದಿಲ್ಲ. ರೈತ ಬೆಳಿಗ್ಗೆ ಎದ್ದು ನೇಗಿಲ ಹಿಡಿದು ಬೆವರು ಹನಿ ಸುರಿದಾಗ ದೇಶ ಉದ್ದಾರ ಆಗುತ್ತದೆ ಎಂದು ಹೇಳಿದ ಅವರು ಡಿಸೆಂಬರ್ 15 ರಿಂದ ಜನವರಿ 6 ರವರಿಗೆ ‘ರೈತ ಪ್ರವಚನ’ ಚಿಕ್ಕಬಾಗೇವಾಡಿ ಗ್ರಾಮದಲ್ಲಿ ಮಾಡಲಾಗುವುದು.ಜನವರಿ 6 ರಂದು ಬಾಬಾಗೌಡ್ರು ರುದ್ರಗೌಡ ಪಾಟೀಲ್ ಅವರ ಮೂರ್ತಿಯನ್ನು ಅನಾವರಣ ಗೊಳಿಸವುದು.
ಮೂರ್ತಿ ಪ್ರತಿಷ್ಠಾಪಿಸುತ್ತಿರುವ ಉದ್ದೇಶ ಮುಂದಿನ ಯುವ ಜನಾಂಗಕ್ಕೆ ಬಾಬಾಗೌಡರ ಹೋರಾಟದ ಹಾದಿ ಪ್ರೇರಣೆಯಾಗಬೇಕು ಹಾಗೂ ಈ ಗ್ರಾಮ ಮಾದರಿ ಹೋರಾಟದ ಊರು ಎಂಬ ಹೆಸರಿನೊಂದಿಗೆ ಅಜರಾಮರವಾಗಿ ಉಳಿಯಲಿದೆ. ಎಂದು ಆರ್ಶಿವಚನ ನೀಡಿದರು.
ಈ ವೇಳೆ ಕೊಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ ಬಾಬಾಗೌಡ ಒಬ್ಬರು ವ್ಯಕ್ತಿ ಅಲ್ಲಾ ರೈತ ಹೋರಾಟದ ದೊಡ್ಡ ಶಕ್ತಿ. ಎಕಕಾಲದಲ್ಲಿ ಎರೆಡು ಕ್ಷೇತ್ರಗಳಲ್ಲಿ ಗೆದ್ದು ದಾಖಲೆ ನಿರ್ಮಿಸಿದವರು,ಬಾರುಕೋಲು ಚಳುವಳಿ, ಚಕ್ಕಡಿ ಚಳುವಳಿ, ರಸ್ತಾ ರೋಖೋ ಚಳುವಳಿ ಹೀಗೆ ಹಲವಾರು ಚಳುವಳಿಗಳ ಮುಖಾಂತರ ರೈತರ ಮನೆ,ಮನೆಗಳಲ್ಲಿ ಅಚ್ಚಳುದವರು.
ಅನ್ಯಾಯ ಖಂಡರೆ ಅದರ ಬಗ್ಗೆ ಸಿಡಿದೆಳುವಂತೆ ಮಾಡಿದ ರೈತ ನಾಯಕ ನಮ್ಮನಗಲಿರುವುದು ದುರ್ದೈವ ಎಂದು ಹೇಳಿದ ಅವರು ಮೂರ್ತಿಯನ್ನು ಪ್ರತಿಷ್ಠಾಪಿಸಿ ಮುಂದಿನ ಯುವ ಜನಾಂಗಕ್ಕೆ ಹೋರಾಟದ ಕಿಚ್ಚು,ಹೋರಾಟದ ಮನೋಭಾವ ಬೆಳಸುವುದರೊಂದಿಗೆ ಅವರ ಕುಟುಂಬದ ಜೊತೆಗೆ ನಾವೆಲ್ಲರೂ ನಿಲ್ಲಬೇಕು ರೈತಪರ ಹೋರಾಟಗಳಿಗೆ ನಾವು ಸದಾ ಸಿದ್ದರಿರಬೇಕು ಎಂದರು.
ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ವಕೀಲ ಬಿ.ಎಲ್ ಪಾಟೀಲ್ ಅವರು ಮಾತನಾಡಿ ನಾವು ಹಣ ಗಳಿಸುವುದರಲ್ಲಿಯೆ ಇದ್ದವರು ನಮ್ಮನ್ನು ರೈತ ಹೋರಾಟಕ್ಕೆ ದುಮ್ಮಿಕ್ಕುವಂತೆ ಮಾಡಿದವರು ದಿ||ಬಾಬಾಗೌಡ್ರು ಪಾಟೀಲರು.ಅವರು ರೈತರಿಗೆ ಕಾನೂನು ಅರಿವು ಮೂಡಿಸುವದರ ಜೊತೆಗೆ ರೈತ ಹೋರಾಟದ ಕಿಚ್ಚನ್ನು ಹಚ್ಚಿದವರು ಈ ಒಂದು ಅಡಿಗಲ್ಲು ಸಮಾರಂಭದಲ್ಲಿ ನನ್ನನ್ನು ಸನ್ಮಾನ ಮಾಡುತ್ತಿರುವುದು ನಮ್ಮ ಅದೃಷ್ಟ ಈ ಗ್ರಾಮದ ಜನರ ಆರ್ಶಿವಾದ ಸದಾ ನಮ್ಮ ಮೇಲಿರಬೇಕು,ಬಾಬಾಗೌಡ್ರು ಪಾಟೀಲ್ ಅವರ ಹೋರಾಟದ ಹಾದಿಯಲ್ಲಿ ನಾವೆಲ್ಲಾ ಸಾಗೋಣ ಎಂದು ಹೇಳಿದರು.
ಈ ಸಮಾರಂಭದಲ್ಲಿ ಬಸವಕಲ್ಯಾಣದ ಗೋಣಿರುದ್ರ ಸ್ವಾಮೀಜಿ, ಮುಖಂಡರಾದ ಸಿದ್ದನಗೌಡ ಪಾಟೀಲ, ಮಲ್ಲಿಕಾರ್ಜುನ ವಾಲಿ,ಚಂದ್ರಶೇಖರ್ ಸಾಧುನವರ,ರಮೇಶಗೌಡ ಪಾಟೀಲ,ಈಶಪ್ರಭು ಪಾಟೀಲ, ವೇದಿಕೆ ಮೇಲೆ ಉಪಸ್ಥಿತರಿದ್ದರು.