Saturday, June 29, 2024

ಪತಿಯ ಆದಾಯ ಟೀಕಿಸುವುದು ಕ್ರೌರ್ಯ – ವಿಚ್ಛೇದನಕ್ಕೆ ದಾರಿ: ಹೈಕೋರ್ಟ್

ಸುದ್ದಿ ಸದ್ದು  ನ್ಯೂಸ್ 

ದೆಹಲಿ: ಗಂಡನ ಆರ್ಥಿಕ ಮಿತಿಗಳನ್ನು ಹೆಂಡತಿ ನಿರಂತರವಾಗಿ ಟೀಕಿಸುವುದು ಮತ್ತು ಆತನ ಆರ್ಥಿಕ ಮಿತಿಗೆ ಮೀರಿದ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಡ ಹೇರುವುದು ಮಾನಸಿಕ ಕ್ರೌರ್ಯದ ವ್ಯಾಪ್ತಿಗೆ ಬರುತ್ತದೆ ಎಂದು ದೆಹಲಿ ಹೈಕೋರ್ಟ್ ಇತ್ತೀಚೆಗೆ ಅಭಿಪ್ರಾಯಪಟ್ಟಿದೆ.

ಪತಿಯ ಮನವಿ ಆಧರಿಸಿ ವಿಚ್ಛೇದನ ನೀಡಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶ ರದ್ದು ಕೋರಿ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ

ನ್ಯಾ.ಸುರೇಶ್ ಕುಮಾರ್ ಕೈಟ್ ಮತ್ತು ನ್ಯಾ. ನೀನಾ ಬನ್ಸಾಲ್ ಕೃಷ್ಣ ಅವರಿದ್ದ ವಿಭಾಗೀಯ ಪೀಠ ಈ ಮಹತ್ವದ ತೀರ್ಪು ನೀಡಿದೆ.

ಪೀಠ ತನ್ನ ತೀರ್ಪಿನಲ್ಲಿ “ಗಂಡನ ಆರ್ಥಿಕ ಮಿತಿಗಳನ್ನು ಹೆಂಡತಿ ನಿರಂತರವಾಗಿ ನೆನಪಿಸಲು ಹೋಗಬಾರದು. ಆತನ ಹಣಕಾಸು ಮಿತಿಗೆ ಮೀರಿದ ಬೇಡಿಕೆಗಳನ್ನು ಈಡೇಸುರುವಂತೆ ಒತ್ತಾಯಿಸಬಾರದು. ಹಾಗೆ ಮಾಡಿದ್ದಲ್ಲಿ ಪತಿಯಲ್ಲಿ ಅತೃಪ್ತಿಯ ಭಾವನೆ ಉಂಟಾಗಲಿದೆ ಮತ್ತು ಇಂತಹ ನಡವಳಿಕೆಯು ವೈವಾಹಿಕ ಜೀವನದ ಸಂತೃಪ್ತಿ ಮತ್ತು ಶಾಂತಿಯನ್ನು ಹದಗೆಡಿಸುತ್ತದೆ. ಯಾರೇ ಆಗಲಿ ಅಗತ್ಯತೆ ಮತ್ತು ಆಸೆಗಳ ವಿಚಾರದಲ್ಲಿ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು” ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೇ, “ಇಂತಹ ವಿಚಾರಗಳು ಮೇಲ್ನೋಟಕ್ಕೆ ಕ್ಷುಲ್ಲಕವೆಂಬಂತೆ ತೋರುತ್ತವೆ. ಆದರೆ ಇಂತಹುದೇ ನಡವಳಿಯನ್ನು ಮುಂದುವರೆಸುತ್ತಾ ಹೋದರೆ ಒಂದು ಹಂತದ ಬಳಿಕ ಮಾನಸಿಕ ಒತ್ತಡ ಸೃಷ್ಟಿಯಾಗುತ್ತದೆ. ಕೊನೆಯಲ್ಲಿ ಗಂಡ-ಹೆಂಡತಿ ತಮ್ಮ ವೈವಾಹಿಕ ಸಂಬಂಧವನ್ನು ಉಳಿಸಿಕೊಳ್ಳುವುದೇ ಅಸಾಧ್ಯವಾಗುತ್ತದೆ” ಎಂದು ಹೈಕೋರ್ಟ್‌ ಪ್ರಕರಣವನ್ನು ವಿಶ್ಲೇಷಿಸಿ ಪತಿಗೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ವಿಚ್ಛೇದವನ್ನು ಎತ್ತಿಹಿಡಿದಿದೆ. ಪತ್ನಿ ತನ್ನ ಆರ್ಥಿಕ ಸ್ಥಿತಿಗತಿಗಳನ್ನು ಟೀಕಿಸುತ್ತಾಳೆ ಮತ್ತು ತನ್ನ ಹಣಕಾಸು ಶಕ್ತಿಗೆ ಮೀರಿದ ಬೇಡಿಕೆಗಳನ್ನು ಇರಿಸುವ ಮೂಲಕ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾಳೆ ಆಕ್ಷೇಪಿಸಿ ಪತಿ ವಿಚ್ಛೇದನ ಕೋರಿದ್ದರು. ಮಾನಸಿಕ ಕ್ರೌರ್ಯ ಆರೋಪ ಹಾಗೂ ದಂಪತಿ ಪ್ರತ್ಯೇಕ ವಾಸವಿರುವ ಅಂಶಗಳನ್ನು ಪರಿಗಣಿಸಿ ಕೌಟುಂಬಿಕ ನ್ಯಾಯಾಲಯ ವಿಚ್ಛೇದನ ನೀಡಿತ್ತು. ಈ ಆದೇಶ ಪ್ರಶ್ನಿಸಿ ಪತ್ನಿ ಹೈಕೋರ್ಟ್ ಮೊರೆ ಹೋಗಿದ್ದರು.

(MAT, APP. (F.C.) 167/2019 & CM APPL. 30637/2019)

ಲಾಟಾದಿಂದ ಎರವಲು ಪಡೆದದ್ದು

ಜಿಲ್ಲೆ

ರಾಜ್ಯ

error: Content is protected !!