Saturday, June 29, 2024

ವಿಜಯಪೂರ: ದಾಖಲೆ ಇದ್ದರೆ ಯತ್ನಾಳ್ ತನಿಖೆ ಮಾಡಿಸಲಿ: ವಿಜಯೇಂದ್ರ ಸವಾಲು

ಸುದ್ದಿ ಸದ್ದು ನ್ಯೂಸ್ 

ವಿಜಯಪುರ: ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ಮಹಾಮಾರಿ ಕೋವಿಡ್ ಸಂದರ್ಭದಲ್ಲಿ 40 ಸಾವಿರ ಕೋಟಿ ರೂ. ಹಗರಣ ಮಾಡಿದ್ದಾರೆ ಎಂಬ ವಿಜಯಪೂರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಯಲ್ಲಿ ಯಾವುದೇ ಆಧಾರವಿಲ್ಲ. ಸಾಕ್ಷಿಗಳಿದ್ದರೆ ಸರಕಾರಕ್ಕೆ ನೀಡಿ ತನಿಖೆ ಮಾಡಿಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸವಾಲು ಹಾಕಿದರು

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಯತ್ನಾಳ್ ಮಾಡಿರುವ ಆರೋಪದಲ್ಲಿ ಗಂಭೀರತೆ ಇಲ್ಲ, ಅರ್ಥವೂ ಇಲ್ಲ ಹೀಗಾಗಿ ಇಂಥವಕ್ಕೆಲ್ಲ ಉತ್ತರ ಕೊಡುವ ಅಗತ್ಯವಿಲ್ಲ. ಅಷ್ಟಕ್ಕೂ ಪ್ರಾಮಾಣಿಕ ಆಡಳಿತ ನಡೆಸಿರುವ ಯಡಿಯೂರಪ್ಪ ಅವರಿಗೆ ಯಾರ ಅನುಕಂಪದ ಅಗತ್ಯವೂ ಇಲ್ಲ ಎಂದರು.

ಪಕ್ಷದ ನಾಯಕರ ವಿರುದ್ಧ ಟೀಕೆಗಳನ್ನು ಮಾಡುತ್ತಿದ್ದರೂ ಸ್ವಪಕ್ಷೀಯ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಕೇಂದ್ರ ವರಿಷ್ಠರಿಗೆ ಯಾರೂ ದೂರು ನೀಡಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ನಾನು ಯಡಿಯೂರಪ್ಪ ಅವರ ಮಗ ಎಂಬ ಕಾರಣಕ್ಕೆ ಅವರ ಕೃಪೆಯಿಂದ ಬಿಜೆಪಿ ವರಿಷ್ಠರು ನನ್ನನ್ನು ಪಕ್ಷದ ಅಧ್ಯಕ್ಷ ಸ್ಥಾನದ ಹೊಣೆ ನೀಡಿಲ್ಲ. ಪಕ್ಷ ಕಟ್ಟುವಲ್ಲಿ ಶ್ರಮಿಸಿದ ನನ್ನ ಸೇವೆಯನ್ನು ಪರಿಗಣಿಸಿ ವರಿಷ್ಠರು ನನಗೆ ಜವಾಬ್ದಾರಿ ನೀಡಿದ್ದಾರೆ ಎಂದರು.

ಎಲ್ಲರನು ವಿಶ್ವಾಸಕ್ಕೆ ಪಡೆದು, ಪಕ್ಷವನ್ನು ಸಂಘಟಿಸುವ ಕೆಲಸದಲ್ಲಿ ತೊಡಗುತ್ತೇನೆ ಎನ್ನುವ ಮೂಲಕ ಯತ್ನಾಳ್ ಮಧ್ಯೆ ಇರುವ ಬಿರುಕು ಮುಚ್ಚುವ ಭರವಸೆ ನೀಡಿದರು.

 ಯತ್ನಾಳ್ ಗೈರು: ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ವಿಜಯಪೂರ ಜಿಲ್ಲೆಗೆ ಆಗಮಿಸಿದ ವಿಜಯೇಂದ್ರ ಅವರನ್ನು ಸ್ವಾಗತಿಸಲು ಹಮ್ಮಿಕೊಂಡಿದ್ದ ಅದ್ದೂರಿ ಮೆರವಣಿಗೆ, ಸನ್ಮಾನ ಸಮಾರಂಭ ಸೇರಿದಂತೆ ಎಲ್ಲ ಕಾರ್ಯಕ್ರಮಗಳಿಗೂ ಪಕ್ಷದ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಗೈರಾಗಿದ್ದರು.

ವಿಜಯೇಂದ್ರ ಅವರ ಸನ್ಮಾನ ಸಮಾರಂಭ ಹಾಗೂ ಮೆರವಣಿಗೆ ಹೀಗೆ ಎಲ್ಲ ಕಡೆಗಳಲ್ಲೂ ಯತ್ನಾಳ ಮಾತ್ರವಲ್ಲ ಅವರ ಬೆಂಬಲಿತ ನಾಯಕರು ಹಾಗೂ ಕಾರ್ಯಕರ್ತರು ಸಹ ಸಭೆಗೆ ಗೈರಾಗಿದ್ದರು.

ವಿಜಯಪುರದಲ್ಲಿ ಇಂದು ನಿರೀಕ್ಷೆ ಮೀರಿ ಸಮಾವೇಶಗೊಂಡಿದ್ದ ಕಾರ್ಯಕರ್ತರು ಹಾಗೂ ಬಿಜೆಪಿ ಅಭಿಮಾನಿಗಳ ಸಮ್ಮುಖದಲ್ಲಿ ನಡೆದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಲಾಯಿತು.

ಕಾರ್ಯಕರ್ತರು ಹಾಗೂ ಮುಖಂಡರ ಪ್ರೀತಿಪೂರ್ವಕ ಅಭಿನಂದನೆ ಸ್ವೀಕರಿಸಿ, ಜ್ಞಾನ ಗುಮ್ಮಟವಾಗಿರುವ ವಿಜಯಪುರ ಜಿಲ್ಲೆಯು ಪಕ್ಷದ ಸುಭದ್ರ ಕೋಟೆಯಾಗಿದ್ದು, ಮುಂಬರುವ ದಿನಗಳಲ್ಲಿ ಲೋಕಸಮರ ಗೆಲ್ಲುವ ಮೂಲಕ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಗದೊಮ್ಮೆ ಪ್ರಧಾನಿಯಾಗಿಸಲು ಎಲ್ಲರೂ ಹಗಲಿರುಳೆನ್ನದೇ ಶ್ರಮಿಸಬೇಕೆಂಬ ಕರೆ ನೀಡಲಾಯಿತು.

ಈ ಸಂದರ್ಭದಲ್ಲಿ ಕೇಂದ್ರದ ಮಾಜಿ ಸಚಿವರು ಹಾಗೂ ಸಂಸದರಾದ ರಮೇಶ್ ಜಿಗಜಿಣಗಿ, ಬಿಜೆಪಿ ರಾಜ್ಯ ಉಪಾಧ್ಯಕ್ಷರು ಹಾಗೂ ಮಾಜಿ ಸಚಿವರಾದ ಮುರುಗೇಶ್ ನಿರಾಣಿ, ಬಿಜೆಪಿ ರೈತ ಮೋರ್ಚಾ ನೂತನ ರಾಜ್ಯಾಧ್ಯಕ್ಷರಾದ ಎ.ಎಸ್.ಪಾಟೀಲ್ ನಡಹಳ್ಳಿ, ಮಾಜಿ ಸಚಿವರಾದ ಎಸ್ ಕೆ ಬೆಳ್ಳುಬ್ಬಿ, ಜಿಲ್ಲಾಧ್ಯಕ್ಷರಾದ ಆರ್.ಎಸ್.ಪಾಟೀಲ್ ಕುಚಬಾಳ, ಮಾಜಿ ಶಾಸಕರುಗಳಾದ ರಮೇಶ್ ಭೂಸನೂರ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಅರುಣ್ ಶಹಾಪುರ್, ರಾಜ್ಯ ಕಾರ್ಯದರ್ಶಿ ಶರಣು ತಳ್ಳೀಕೆರೆ ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

ಜಿಲ್ಲೆ

ರಾಜ್ಯ

error: Content is protected !!