Wednesday, July 3, 2024

ಅಟೋ ಚಾಲಕರಿಗೆ ಮತ್ತು ಬೀದಿ ಬದಿ ವ್ಯಾಪಾರಸ್ಥರಿಗೆ ಆಹಾರದ ಕಿಟ್ ವಿತರಿಸುವಂತೆ ಆಗ್ರಹ

ಬೈಲಹೊಂಗಲ ಅ.13 : ಕೋವಿಡ್-೧೯ ಸಮಯದಲ್ಲಿ ಸರಕಾರವು ಅಸಂಘಟಿತ ಕಾರ್ಮಿಕರಿಗೆ ಘೋಷಿಸಿದ ಆಹಾರದ ಕಿಟ್‌ಗಳನ್ನು ಬೈಲಹೊಂಗಲ ಅಟೋ ರಿಕ್ಷಾ ಚಾಲಕರು ಹಾಗೂ ಬೀದಿ ಬದಿ ವ್ಯಾಪಾರಸ್ಥರಿಗೆ ವಿತರಿಸುವಂತೆ ಆಗ್ರಹಿಸಿ ಉತ್ತರ ಕರ್ನಾಟಕ ಅಟೋ ಚಾಲಕರ ಸಂಘ, ಬೀದಿ ಬದಿ ವ್ಯಾಪಾರಸ್ಥರ ಸಂಘದಿಂದ ಉಪವಿಭಾಗಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು.

ಉತ್ತರ ಕರ್ನಾಟಕ ಅಟೋ ಚಾಲಕರ ಸಂಘದ ಗೌರವಾಧ್ಯಕ್ಷ, ಬೀದಿ ಬದಿ ವ್ಯಾಪಾರ ಸಮಿತಿಯ ಉಪಾಧ್ಯಕ್ಷ ರಫೀಕ ಬಡೇಘರ ಮಾತನಾಡಿ, ಕೋವಿಡ್-19 ಮಹಾಮಾರಿಯ ಹಾವಳಿಯಿಂದ ದೇಶದ ಅಸಂಘಟಿತ ಕಾರ್ಮಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ದೇಶದ ಮಾನ್ಯ ಸರ್ವೋಚ್ಛ ನ್ಯಾಯಾಲಯ. ಉಚ್ಛ ನ್ಯಾಯಾಲಯ ಮತ್ತು ಕರ್ನಾಟಕ ಕಾನೂನು ಸೇವಾ ಪ್ರಾಧಿಕಾದ ನಿರ್ದೇಶನದಂತೆ ಅಸಂಘಟಿತ ಕಾರ್ಮಿಕರಿಗೆ ಆಹಾರ ಸಾಮಗ್ರಿಗಳ ಕಿಟ್‌ಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿರುವುದು ಸ್ವಾಗತಾರ್ಹವಾಗಿದೆ.

ಆದರೆ ಬೈಲಹೊಂಗಲ ನಗರದಲ್ಲಿರುವ ರಿಕ್ಷಾ ಚಾಲಕರು, ಬೀದಿ ಬದಿ ವ್ಯಾಪಾರಸ್ಥರು ಹಾಗೂ ಇನ್ನಿತರ ಕಾರ್ಮಿಕ ವರ್ಗಕ್ಕೆ ಇಲ್ಲಿಯವರೆಗೆ ಆಹಾರ ಸಾಮಗ್ರಿ ಕಿಟ್‌ಗಳನ್ನು ವಿತರಣೆ ಮಾಡಿರುವುದಿಲ್ಲ.
ಕಾರ್ಮಿಕ ಅಧಿಕಾರಿಗಳ ನಿರ್ಲಕ್ಷ, ಬೇಜಬ್ದಾರಿತನವಾಗಿದೆ. ಶೀಘ್ರ ಎಲ್ಲ ಕಾರ್ಮಿಕರಿಗೆ ಆಹಾರದ ಕಿಟ್‌ಗಳನ್ನು ವಿತರಿಸುವುದಾಗಬೇಕೆಂದರು.

ಅಟೋ ಚಾಲಕರಾದ ಉಳವಪ್ಪ ಅಂಗಡಿ, ಶಿವಾನಂದ ಕುಲಕರ್ಣಿ ಮಾತನಾಡಿ, ಆಹಾರದ ಕಿಟ್ ವಿತರಣೆ ಬಗ್ಗೆ ಹಲವಾರು ಬಾರಿ ಸ್ಥಳೀಯ ಕಾರ್ಮಿಕ ಇಲಾಖೆಯ ಅಧಿಕಾರಿಯನ್ನು ಕೇಳಿದರೆ ಅವರು ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ. ಇದರಿಂದ ಬಡ ರಿಕ್ಷಾ ಚಾಲಕರು, ಬೀದಿ ಬದಿ ವ್ಯಾಪಾರಸ್ಥರು ಹಾಗೂ ಇನ್ನಿತರ ಕಾರ್ಮಿಕ ವರ್ಗದವರಿಗೆ ಆಹಾರ ಸಾಮಗ್ರಿ ಕಿಟ್‌ಗಳಿಂದ ವಂಚಿತರಾಗುತ್ತಿದ್ದಾರೆ.
ಇದು ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯವಾಗಿದೆ. ದಯಾಳುಗಳಾದ ತಾವು ಇದರ ಬಗ್ಗೆ ಸಮಗ್ರವಾಗಿ ತನಿಖೆ ಮಾಡಿಸಿ, ಅರ್ಹ ಬಡ ಅಸಂಘಟಿತ ಕಾರ್ಮಿಕ ವಲಯದ ರಿಕ್ಷಾ ಚಾಲಕರು, ಬೀದಿ ಬದಿ ವ್ಯಾಪಾರಸ್ಥರು ಹಾಗೂ ಇನ್ನಿತರ ಕಾರ್ಮಿಕ ವರ್ಗಕ್ಕೆ ಅತಿ ಶೀಘ್ರದಲ್ಲಿ ಆಹಾರದ ಕಿಟ್ ವಿತರಿಸಲು ಕ್ರಮ ಕೈಗೊಳ್ಳಬೇಕೆಂದು ಕಳಕಳಿಯಿಂದ ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಉಳವಪ್ಪ ಅಂಗಡಿ, ಶಿವಾನಂದ ಕುಲಕರ್ಣಿ, ಹಮ್ಜೆಸಾಬ ನಂದಗಡ, ಮಾರುತಿ ಕೊಂಡೂರ, ಜನತಬಿ ಧಾರವಾಡ, ಬೆಬಿಜಾನ್ ಮುಲ್ಲಾ, ಧರ್ಮರಾಜ ನೀಲಣ್ಣವರ, ಸಯ್ಯದ ರಸೂಲವಾರ, ವಿಷ್ಣು ಭಾವಿಮನಿ, ದಾದಾಫೀರ್ ಸಂಗೊಳ್ಳಿ ಸೇರಿದಂತೆ ಅಟೋ ರಿಕ್ಷಾ ಚಾಲಕರು ಹಾಗೂ ಬೀದಿ ಬದಿ ವ್ಯಾಪಾರಸ್ಥರು ಉಪಸ್ಥಿತರಿದ್ದರು.

“ಕಾರ್ಮಿಕ ನಿರೀಕ್ಷಕ ಬೆಟಗೇರಿ ಅವರು, ಬೇಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದಾರೆ. ಎಲ್ಲ ಕಾರ್ಮಿಕರಿಗೂ ಕಿಟ್ ವಿತರಿಸದೆ, ಕೆಲ ಕಾರ್ಮಿಕರಿಗೆ ಅಷ್ಟೇ ಕಿಟ್‌ಗಳನ್ನು ವಿತರಿಸಿದ್ದಾರೆ. ಕಚೇರಿಯಲ್ಲಿಯೂ ಹೆಚ್ಚಾಗಿ ಇರುವುದಿಲ್ಲ. ಕಾರ್ಮಿಕರ ಸಮಸ್ಯೆಗಳಿದ್ದರೆ ಯಾರಿಗೆ ಹೇಳೋದು ಎಂದು ಪ್ರಶ್ನಿಸಿದರು. 250 ಜನರು ಅಟೋ ಚಾಲಕರು, 800 ಜನರು ಬೀದಿ ವ್ಯಾಪಾರಸ್ಥರಿದ್ದು, ಎಲ್ಲರಿಗೂ ಆಹಾರ ಕಿಟ್‌ಗಳನ್ನು ವಿತರಿಸಬೇಕು. ಒಂದು ವೇಳೆ ಆಹಾರ ಕಿಟ್‌ಗಳನ್ನು ವಿತರಿಸದೆ ಇದ್ದರೆ, ಕಾರ್ಮಿಕ ಇಲಾಖೆಗೆ ಬೀಗ ಜಡಿದು, ಉಗ್ರ ಹೋರಾಟ ಮಾಡಬೇಕಾಗುತ್ತದೆಂದು ಎಚ್ಚರಿಸಿದರು.’

ರಫೀಕ ಬಡೇಘರ,
ಉತ್ತರ ಕರ್ನಾಟಕ ಅಟೋ ಚಾಲಕರ ಸಂಘದ ಗೌರವಾಧ್ಯಕ್ಷರು.

ಮನವಿ ಸ್ವೀಕರಿಸಿದ ಉಪವಿಭಾಗಾಧಿಕಾರಿ ಶಶಿಧರ ಬಗಲಿ ಅವರು, ತಕ್ಷಣ ಜಿಲ್ಲಾ ಮಟ್ಟದ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಪೋನ್ ಕರೆ ಮಾಡಿ, ಅಸಂಘಟಿತ ಕಾರ್ಮಿಕರಿಗೆ ಕಿಟ್ ವಿತರಿಸಬೇಕೆಂದು ತಿಳಿಸಿದರು. ಎಲ್ಲರಿಗೂ ಆಹಾರ ಕಿಟ್‌ಗಳನ್ನು ವಿತರಿಸಲು ಕ್ರಮ ಕೈಕೊಳ್ಳುವುದಾಗಿ ಎಸಿ ಭರವಸೆ ನೀಡಿದರು.

 

ಜಿಲ್ಲೆ

ರಾಜ್ಯ

error: Content is protected !!