Saturday, June 29, 2024

ಕಿತ್ತೂರಿನಲ್ಲಿ ಶೀಘ್ರವೇ ಕೈಗಾರಿಕಾ ಟೌನ್‌ಶಿಪ್ ; 50 ಸಾವಿರ ಯುವಕರಿಗೆ ಉದ್ಯೋಗ: ಸಿಎಂ ಬಸವರಾಜ ಬೊಮ್ಮಾಯಿ

ಚನ್ನಮ್ಮನ ಕಿತ್ತೂರು: ಅ,24: ಬ್ರಿಟಿಷರ ವಿರುದ್ಧ ಧ್ವನಿ ಎತ್ತಿ, ತಲೆ ಎತ್ತಿ ಹೋರಾಡಿ ಬ್ರಿಟಿಷರಿಗೆ ಸೋಲುನುಣಿಸಿದ ರಾಣಿ ಚನ್ನಮ್ಮ ಅವರ ಐತಿಹ್ಯ ಯಶೋಗಾಥೆ ಅವಿಸ್ಮರಣೀಯ. ಸೈದ್ಧಾಂತಿಕ, ಸ್ವಾಭಿಮಾನದಿಂದ ಹೋರಾಡಿದ ಚನ್ನಮ್ಮ ಅವರ ಶಕ್ತಿ, ಯುಕ್ತಿ, ಸೈದ್ಧಾಂತಿಕ, ಸ್ವಾಭಿಮಾನದ ಗುಣಗಳನ್ನು ನಾಡು ಕಟ್ಟಲು ಮೈಗೂಡಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ಚನ್ನಮ್ಮನ ಕಿತ್ತೂರಿನ ಕೋಟೆ ಆವರಣದಲ್ಲಿ ಆಯೋಜಿಸಲಾಗಿರುವ ರಾಜ್ಯ ಮಟ್ಟದ ಚನ್ನಮ್ಮನ ಕಿತ್ತೂರು ಉತ್ಸವ-2022 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು   ಮಾಜಿ ಸಿಎಂ ದಿವಂಗತ ಎಸ್.ಬಂಗಾರೆಪ್ಪ ಅವರು ಕಿತ್ತೂರು ಉತ್ಸವ ಪ್ರಾರಂಭ ಮಾಡಿ ಒಂದು ವರ್ಷದಲ್ಲಿ ತಮ್ಮ ಅಧಿಕಾರವನ್ನು ಕಳೆದುಕೊಂಡರು ಅಂದಿನಿಂದ ನಾನು ಅಧಿಕಾರಕ್ಕೆ ಬರುವ ವರೆಗೆ ಯಾವ ಒಬ್ಬ ಸಿಎಂ ಕಿತ್ತೂರು ಉತ್ಸವಕ್ಕೆ ಅಧಿಕಾರ ಹೋಗುವುದು ಎಂಬ ಮೂಡನಂಬಿಕೆಯಿಂದ ಬರಲಿಲ್ಲ, ನಾನು ಸಿಎಂ ಆದ ನಂತರ ಕಳೆದ ವರ್ಷ ಉತ್ಸವಕ್ಕೆ ಬರುವಾಗ ಉತ್ಸವಕ್ಕೆ ಹೋದರೆ ಅಧಿಕಾರ ಹೋಗುವುದು ಎಂದು ಕೆಲವರು ನನಗೆ ಕಿವಿ ಮಾತು ಹೇಳಿದರು ಆದರೆ ನಾನು ನನ್ನ ಅಧಿಕಾರ ಹೋದರು ಚಿಂತೆಯಿಲ್ಲ ದೇಶಕ್ಕೆ ಸ್ವಾತಂತ್ರ ತರಲು ಬ್ರಿಟಿಷ್‌ರ ವಿರುದ್ಧ ಹೋರಾಡಿದ ತಾಯಿ  ಉತ್ಸವಕ್ಕೆ ಹೋಗುವೆ ಎಂದು ನಿರ್ಧರಿಸಿ ಕಳೆದ ವರ್ಷವು ಆಗಮಿಸಿದೇ, ಅದೇ ರೀತಿ ಈ ವರ್ಷ ಸಹ ಪಾಲ್ಗೊಂಡಿದೇನೆ ಎಂದರು.
ಕಿತ್ತೂರಿನ ಕೆಐಡಿಬಿಯ 1000 ಪ್ರದೇಶದಲ್ಲಿ ಕೈಗಾರಿಕಾ ಚಟುವಟಿಕೆ ಸಾಕಾರಗೊಳಿಸಿ ಈ ಮೂಲಕ 50 ಸಾವಿರ ಯುವಕರಿಗೆ ಉದ್ಯೋಗ ನೀಡಲು ಕ್ರಮ ಕೈಗೊಳ್ಳಲಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು. 
ಬೈಲಗೊಂಗಲ, ಕಿತ್ತೂರು, ಸವದತ್ತಿ, ಖಾನಾಪೂರ ತಾಲೂಕುಗಳಿಗೆ ಜಲಜೀವನ್ ಮಿಷನ್‌ಗಾಗಿ 950 ಕೋಟಿ ಅನುದಾನ ನೀಡಲಾಗಿದೆ. ಬೆಳಗಾವಿಯಿಂದ ಕಿತ್ತೂರು ಮೂಲಕವಾಗಿ ಧಾರವಾಡಕ್ಕೆ ರೈಲ್ವೆ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಇದೇ ಡಿಸೆಂಬರ್‌ನಲ್ಲಿ ಸ್ರ್ತಿ ಸಂಘ, ಸ್ವಾಮಿ ವಿವೇಕನಾಂದ ಸಂಘ ಯೋಜನೆ ಮೂಲಕ ರಾಜ್ಯದ 5 ಲಕ್ಷ ಯುವತಿಯರು, 5 ಲಕ್ಷ ಯುವಕರಿಗೆ ನೆರವಾಗುವ ಕಾರ್ಯ ಕೈಗೊಳ್ಳಲಿದ್ದೇನೆ ಎಂದು ಹೇಳಿದರು. ರಾಜ್ಯದ ರೈತರು, ಕೂಲಿ ಕಾರ್ಮಿಕರು, ಮೀನುಗಾರರು, ನೇಕಾರರ ಮಕ್ಕಳಿಗೆ ವಿದ್ಯಾರ್ಥಿ ನಿಧಿಯನ್ನು ನೀಡಲು 100 ಕೋಟಿಯಷ್ಟು ಅನುದಾನ ಮೀಸಲಿಡಲಾಗಿದೆ ಎಂದು ತಿಳಿಸಿದ ಅವರು ಸಮಸ್ಯೆ, ಸವಾಲುಗಳಿಗೆ ಎದೆಗುಂದದೇ ನಾಡು ನಿರ್ಮಾಣದಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಬೇಕು. ಏಕೆಂದರೆ ಈ ಮಣ್ಣಿನಲ್ಲಿ ಹುಟ್ಟಿದ ಪ್ರತಿಯೊಬ್ಬರು ಸ್ವಾಭಿಮಾನಿಗಳು, ಸ್ವಾವಲಂಬಿಗಳು. ಶಿಕ್ಷಣ, ಉದ್ಯೋಗ, ಜಾಗೃತೆಯಿಂದ ದೇಶದ ಒಗ್ಗಟ್ಟು, ಭದ್ರತೆಯನ್ನು ಕಾಪಿಟ್ಟುಕೊಳ್ಳಬೇಕಾಗಿದೆ ಎಂದು ಹೇಳಿದರು. 
ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಮಾತನಾಡಿ, ಕಿತ್ತೂರು ಕ್ಷೇತ್ರದ ಅಭಿವೃದ್ಧಿಗಾಗಿ ಶಾಸಕ ಮಹಾಂತೇಶ ದೊಡಗೌಡರ ಅವಿರತವಾಗಿ ಶ್ರಮಿಸಿದ್ದಾರೆ. ನೀರಾವರಿ, ಕೃಷಿ, ಕೈಗಾರಿಕೆ, ರಸ್ತೆ, ವಸತಿ ಸೇರಿ ಅನೇಕ ಯೋಜನೆಗಳನ್ನು ಕ್ಷೇತ್ರದ ಏಳ್ಗೆಗಾಗಿ ಸಮಪರ್ಕವಾಗಿ ಬಳಸಿಕೊಂಡಿದ್ದಾರೆ ಎಂದು ಬಣ್ಣಿಸಿದರು.
ಅತಿಥಿಯಾಗಿ ಮಾತನಾಡಿದ ಮುಜರಾಯಿ ವಕ್ಫ್ ಮತ್ತು ಹಜ್ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರು, ಕೆಚ್ಚೆದೆಯಿಂದ ಬ್ರಿಟಿಷರ ವಿರುದ್ಧ ಹೋರಾಡಿ ಸೋಲುಣಿಸಿದ ರಾಣಿ ಚನ್ನಮ್ಮ ಅವರು ವೀರ ಮಹಿಳೆ ಅನ್ನುವ ಖ್ಯಾತಿ ಪಡೆದುಕೊಂಡಿದ್ದು ರೋಚಕ. ಇಂತಹ ಐತಿಹಾಸಿಕ ಸಾಹಸಗಾಥೆಯನ್ನು ಮೆರೆದ ಚನ್ನಮ್ಮ ಅವರ ಹೋರಾಟ, ವ್ಯಕ್ತಿತ್ವ ಪ್ರಸ್ತುತ ಆದರ್ಶನೀಯ ಎಂದರು. 
ಕಿತ್ತೂರು ಉತ್ಸವ ರಾಜ್ಯಮಟ್ಟದ ಉತ್ಸವ ಆಗಬೇಕು ಎಂದು ನಾವೆಲ್ಲ ಮನವಿ ಮಾಡಿಕೊಂಡಿದ್ದೇವು. ಮನವಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ವರ್ಷ ಸಾಕಾರಗೊಳಿಸಿದ್ದರೆ. ಮಾತುಗಳು ಸಾಧನೆಗಳಾಗಬಾರದು ಕಾರ್ಯಗಳು ಸಾಧನೆಯಾಗಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಮುಖ್ಯಮಂತ್ರಿ ಹಾಗೂ ಸ್ಥಳೀಯ ಶಾಸಕರನ್ನು ಬಣ್ಣಿಸಿದರು.
ದೇಶದಲ್ಲಿ ಆಳಿ ಅಳಿದು ಹೋದ ಅನೇಕ ಐತಿಹಾಸಿಕ ಪುರುಷ, ಮಹಿಳೆಯರಿಗೆ ವ್ಯಾಪಕ ಪ್ರಚಾರ ಸಿಕ್ಕಿದೆ. ಆದರೆ ಚನ್ನಮ್ಮ ಅವರಿಗೆ ಅದಕ್ಕಿಂತಲೂ ಅಧಿಕ ವ್ಯಾಪಕ ಪ್ರಚಾರ, ಸ್ಮರಣೆ ಸಾಧ್ಯವಾಗಬೇಕಿದೆ ಎಂದು ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಅಭಿಪ್ರಾಯ ಪಟ್ಟರು. 
ಕಳೆದ ಕಿತ್ತೂರು ಉತ್ಸವದಲ್ಲಿ ಬಾಂಬೆ ಕರ್ನಾಟಕ ಅನ್ನುವದನ್ನು ಬದಲಿಸಿ ಕಿತ್ತೂರು ಕರ್ನಾಟಕ ಎಂದು ಘೋಷಿಸಿ ಐತಿಹಾಸಿಕ ನಿರ್ಧಾರ ತೆಗೆಕೊಂಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈಗ ಅದನ್ನು ಸಾಕಾರಗೊಳಿಸುವ ಹಂತದಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ ಎಂದು ಕಿತ್ತೂರು ಶಾಸಕ ಮಹಾಂತೇಶ ದೊಡಗೌಡರ ಅವರು ಹೇಳಿದರು.
ಉತ್ಸವದ ಅಧ್ಯಕ್ಷತೆ ವಹಿಸಿಕೊಂಡು ಮಾತನಡಿದ ಅವರು, ಕಿತ್ತೂರನ್ನು ಐತಿಹಾಸಿಕ ಪ್ರೇಕ್ಷಣೀಯ ತಾಣವನ್ನಾಗಿ ನಿರ್ಮಿಸಲು ವಿಶೇಷ ಅನುದಾನ ಕಲ್ಪಿಸಿಕೊಡಬೇಕು. ಕೋಟೆ ನಿರ್ಮಾಣಕ್ಕೆ ಕೂಡಲೇ ಅಡಿಗಲ್ಲು ನೆರವೇರಿಸಲು ಶೀಘ್ರವೇ ಮುಂದಾಗಬೇಕು ಎಂದು ಸಿಎಂ ಬೊಮ್ಮಾಯಿ ಅವರಲ್ಲಿ ಮನವಿ  ಮಾಡಿಕೊಂಡರು.
ಸಾಂಕೇತಿಕ ವಿದ್ಯಾರ್ಥಿನಿಧಿ ವಿತರಣೆ:
ಮುಖ್ಯ ವೇದಿಕೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿದ್ಯಾರ್ಥಿನಿದಿ ಅಡಿಯಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಪ್ರಮಾಣ ಪತ್ರಗಳನ್ನು ವಿತರಿಸಿ ಪ್ರೋತ್ಸಾಹಿಸಿದರು.
ನೇಗಿಲಯೋಗಿ ಮುಖ್ಯಮಂತ್ರಿಗೆ ಸನ್ಮಾನ:
ಜನಪರ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರೈತರ ಮಕ್ಕಳ ಪರವಾಗಿಯೂ ಅನೇಕ ಕಾರ್ಯಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ವೇದಿಕೆಯಲ್ಲಿ ಮುಖ್ಯಂತ್ರಿಗಳನ್ನು ನೇಗಿಲಯೋಗಿ ಎಂದು ಬಣ್ಣಿಸಿ ಸನ್ಮಾನಿಸಲಾಯಿತು.
ಕಿತ್ತೂರು ಸಂಸ್ಥಾನದ ವಂಶಸ್ಥರಿಗೆ ಸನ್ಮಾನ:
ಕಿತ್ತೂರು ಸಂಸ್ಥಾನದ ವಂಶಸ್ಥರಿಗೆ ಮುಖ್ಯಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ ವೇದಿಕೆ ಮೇಲಿರುವ ಗಣ್ಯರು ಸನ್ಮಾನಿಸಿ ಗೌರವ ಸಲ್ಲಿಸಿದರು.
ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮೀಜಿ, ನಿಚ್ಚಣಕಿ ಮಠದ ಪಂಚಾಕ್ಷರಿ ಮಹಾಸ್ವಾಮೀಜಿ ದಿವ್ಯ ಸಾನಿಧ್ಯವನ್ನು ವಹಿಸಿ ಆಶೀರ್ವಚನ ನೀಡಿದರು.
ಸ್ವಾಗತಿಸಿ ಪ್ರಾಸ್ತಾಕವಾಗಿ ಮಾತನಾಡಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು, ಚನ್ನಮ್ಮ ಶೌರ್ಯ, ಸಾಹಸದ ಸಂಕೇತವಾಗಿದ್ದಾರೆ. ಇಂತಹ ಐತಿಹಾಸಿಕ ಮಹಿಳೆಯ ಹೋರಾಟದಿಂದ ಪುನೀತಗೊಂಡ ಕಿತ್ತೂರು ನೆಲದಲ್ಲಿ ಆಯೋಜಿಸಲಾಗಿರುವ ರಾಜ್ಯ ಮಟ್ಟದ ಕಿತ್ತೂರು ಉತ್ಸವವನ್ನು ಯಶಸ್ವಿಗೊಳಿಸೋಣ ಎಂದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಮುರುಗೇಶ್ ನಿರಾಣಿ, ಶಾಸಕ ಮಹಾಂತೇಶ ಕೌಜಲಗಿ, ದುರ್ಯೋಧನ ಐಹೊಳೆ, ಕಾಡಾ ಅಧ್ಯಕ್ಷ ವಿಶ್ವನಾಥ ಪಾಟೀಲ, ಮಾಜಿ ಶಾಸಕ, ಜಗದೀಶ ಮೆಟಗುಡ್ಡ ಸಂಜಯ ಪಾಟೀಲ, ಮಲ್ಲಿಕಾರ್ಜುನ ತುಬಾಕಿ ಸೇರಿದಂತೆ ತಾಲೂಕಾ, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಜಿಲ್ಲೆ

ರಾಜ್ಯ

error: Content is protected !!