Saturday, July 6, 2024

“ಆದರ್ಶ ಶಿಕ್ಷಕ ಸಾಲಹಳ್ಳಿಯ ಆರ್.ಎಸ್ ಪಾಟೀಲರ ಸಾಹಿತ್ಯ ಸೇವೆ ಅಪಾರ”

ಬೆಳಗಾವಿ: ನಾಲ್ಕು ದಶಕಗಳಿಂದ ಉತ್ತಮ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾದರೂ ಸಾಹಿತ್ಯಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸದಾ ಚೈತನ್ಯದ ಚಿಲುಮೆಯಂತಿರುವ ಸಾಲಹಳ್ಳಿಯ ಆರ್.ಎಸ್ ಪಾಟೀಲರ ಕನ್ನಡ ಸೇವೆ ಅಪಾರವಾದದ್ದು ಎಂದು ಸಂಭ್ರಮ ಫೌಂಡೇಶನ್‌ದ ಅಧ್ಯಕ್ಷ ಕಿರಣ ಗಣಾಚಾರಿ(ಇಟಗಿ) ಹೇಳಿದರು.

ಇತ್ತೀಚೆಗೆ ಕೇಂದ್ರ ಬಸವ ಸಮಿತಿ ಹಾಗೂ ಸಂಭ್ರಮ ಫೌಂಡೇಶನ್ ವತಿಯಿಂದ ಸಮಾಜ ಸೇವಾರತ್ನ ಪ್ರಶಸ್ತಿ ಪುರಸ್ಕೃತರಾದ ಸರಳ ಸಜ್ಜನಿಕೆಯ ರಾಮದುರ್ಗ ತಾಲೂಕಿನ ಸಾಲಹಳ್ಳಿಯ ಆರ್.ಎಸ್ ಪಾಟೀಲ ಅವರನ್ನು ಸನ್ಮಾನಿಸಿ ಮಾತನಾಡಿದ ಕಿರಣ ಗಣಾಚಾರಿ(ಇಟಗಿ) ಅವರು ಕನ್ನಡ ಸಾಹಿತ್ಯ ಪರಿಷತ್ತಿನ ರಾಮದುರ್ಗ ತಾಲೂಕಾ ಘಟಕದ ಕೋಶಾಧ್ಯಕ್ಷರಾಗಿ, ಕಾರ್ಯದರ್ಶಿಗಳಾಗಿ, ಕಾರ್ಯಕಾರಿ ಮಂಡಳಿಯ ಸದಸ್ಯರಾಗಿ, ರಾಮದುರ್ಗ ತಾಲೂಕಾ ಘಟಕದ ಚುಟುಕು ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ತಮ್ಮದೇ ಆದ ರೀತಿಯಲ್ಲಿ ಕನ್ನಡ ನಾಡು-ನುಡಿಯ ಸೇವೆಯನ್ನು ಮಾಡುತ್ತಿರುವುದು ಅವರ ಕ್ರಿಯಾಶೀಲತೆಯನ್ನು ತೋರಿಸುತ್ತದೆ ಮತ್ತು ಬೆಳಗಾವಿ ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿ, ಆಶುಕವಿ ಪ್ರಶಸ್ತಿ, ಮೌಲ್ಯ ಸಾಹಿತ್ಯ ಸಂಪದ ಪ್ರಶಸ್ತಿ, ರಾಜೇಂದ್ರ ಸಾಹಿತ್ಯ ಪ್ರಶಸ್ತಿ, ಸಾಹಿತ್ಯ ಸಿರಿ ಪ್ರಶಸ್ತಿ ಪಡೆದಿರುವವುದು ಕನ್ನಡ ತಾಯಿಯ ಸೇವೆಗೈದ ಫಲ ಎಂದು ಅವರು ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಪರಿಷತ್ತು ಬೆಳಗಾವಿ ಜಿಲ್ಲಾ ಮಾಜಿ ಅಧ್ಯಕ್ಷ ಮೋಹನ ಬಸನಗೌಡ ಪಾಟೀಲ ಮಾತನಾಡಿ ಕಥೆ, ಕವನ, ಚುಟುಕು, ಲೇಖನ, ಜೀವನ ಚರಿತ್ರೆ, ಆಧುನಿಕ ವಚನಗಳು, ಒಗಟುಗಳು ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಪಾಟೀಲರು ಬಹುಮುಖ ಪ್ರತಿಭೆಯುಳ್ಳವರು ಎಂದು ಹೇಳಿದರು. ಇಲ್ಲಿಯವರೆಗೆ ಸುಮಾರು 42 ಕೃತಿಗಳನ್ನು ಹೊರತಂದಿದ್ದು ,2016ರಲ್ಲಿ ಸಾಲಹಳ್ಳಿಯಲ್ಲಿ ಜರುಗಿದ ಚಂದರಗಿ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದು ಆರ್.ಎಸ್ ಪಾಟೀಲರ ಸಾಹಿತ್ಯ ಸೇವೆಗೆ ಸಂದ ಗೌರವ ಎಂದರು.

ಬೂದಿಹಾಳ ಸರಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಎನ್.ಆರ್.ಠಕ್ಕಾಯಿ ಮಾತನಾಡಿ ಆರ್.ಎಸ್.ಪಾಟೀಲರು ತಮ್ಮದೇ ಆದ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ಶಿಕ್ಷಕ ವೃತ್ತಿಯನ್ನು ಅತ್ಯಂತ ಶ್ರದ್ಧೆಯಿಂದ ಮಾಡಿ ಅಪಾರ ಶಿಷ್ಯ ಬಳಗವನ್ನು ಹೊಂದಿರುವುದು ಅವರ ಸೇವಾ ಮನೋಭಾವದ ಪ್ರತೀಕ ಎಂದು ಹೇಳಿದರು. 15 ವರ್ಷ ರಾಮದುರ್ಗ ತಾಲೂಕಿನ ಕಾರ್ಯಾನುಭವ ಕಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಕಲಾ ಸೇವೆಯನ್ನೂ ಮಾಡಿದ ಕೀರ್ತಿ ಇವರದಾಗಿದೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಕನ್ನಡ ಅಂಕಿಗಳ ಅಪ್ಪಟ ಅಭಿಮಾನಿ ಸುರೇಶ ದೇಸಾಯಿ, ವಿ.ಎ.ಚಿಚಖಂಡಿ, ಆರ್.ಬಿ.ರಾಜೂರ ಉಪಸ್ಥಿತರಿದ್ದರು.

ಜಿಲ್ಲೆ

ರಾಜ್ಯ

error: Content is protected !!