ಸಂಸದೀಯ ಸದಸ್ಯ ಸ್ಥಾನಕ್ಕೆ ಬಿಎಸ್‌ವೈ ರಾಜೀನಾಮೆ ನೀಡಬೇಕು! ಯತ್ನಾಳ್ ಆಗ್ರಹ.

ಉಮೇಶ ಗೌರಿ (ಯರಡಾಲ)

ಬೆಂಗಳೂರು: ಬಿಎಸ್‌ವೈ ಕುಟುಂಬದ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದ ಹಿನ್ನೆಲೆ ʻ ಕೇಂದ್ರೀಯ ಸಂಸದೀಯ ಸದಸ್ಯ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಬೇಕುʼ ಎಂದು ಬಸನಗೌಡ ಪಾಟೀಲ್​ ಯತ್ನಾಳ್ ಆಗ್ರಹಿಸಿದ್ದಾರೆ.

ವಿಧಾನಸೌಧದಲ್ಲಿಂದು ಮಾತನಾಡಿದ ಅವರು, ಮಾಜಿ ಸಿಎಂ ಬಿಎಸ್​ವೈ ವಿರುದ್ಧ ಎಫ್‌ಐಆರ್​ಗೆ ಕೋರ್ಟ್ ಆದೇಶ ನೀಡಿದ ವಿಚಾರವಾಗಿ ಪ್ರತಿಕ್ರಿಯಿಸಿದರು. ಎಲ್ ಕೆ ಆಡ್ವಾಣಿ, ವಾಜಪೇಯಿಗಿಂತ ಡೊಡ್ಡವ್ರಾ ಅವರು?. ಎಲ್ ಕೆ ಆಡ್ವಾಣಿ ಆದರ್ಶ ಪಾಲಿಸಲಿ. ಕೇಂದ್ರ ಸಂಸದೀಯ ಸ್ಥಾನಕ್ಕೆ ಬಿಎಸ್​ವೈ ರಾಜೀನಾಮೆ ನೀಡಲಿ ಎಂದರು.

ಎಷ್ಟೇ ದುಡ್ಡಿನ ಹುಲಿ ಇದ್ದರೂ ಕಾನೂನಿನ ಮುಂದೆ ಎಲ್ಲರೂ ಒಂದೇ. ಈ ಹಿಂದೆ ಎಲ್ ಕೆ ಆಡ್ವಾಣಿ ಮೇಲೆ ಆರೋಪವೊಂದು ಕೇಳಿ ಬಂದಿತ್ತು. ಆ ಸಂದರ್ಭದಲ್ಲಿ ಎಲ್ಲ ಸ್ಥಾನಕ್ಕೆ ಅವರು ರಾಜೀನಾಮೆ ಕೊಟ್ಟಿದ್ದರು ಎಂದು ಹೇಳಿದರು.

ಕಾಂಗ್ರೆಸ್​ನವರಿಗೆ ಸಿಎಂ ಬೊಮ್ಮಾಯಿ‌ ಭಯ ಇಲ್ಲ, ಯಡಿಯೂರಪ್ಪ ಭಯ ಇಲ್ಲ. ಅವರಿಗೆ ನನ್ನ ಭಯ ಇದೆ ಎಂದು ಯತ್ನಾಳ್ ಅಭಿಪ್ರಾಯಪಟ್ಟರು. ಯತ್ನಾಳ್ ಎಲ್ಲಿ ಬಂದು ಬಿಡ್ತಾನೋ?. ಅನ್ನೋ ಭಯ ಅವರಿಗೆ ಇದೆ. ಯತ್ನಾಳ್ ಸಿಎಂ ಆದರೆ ಜೈಲಿಗೊಬ್ಬರು, ಕಾಡಿಗೆ ಒಬ್ಬರು ಹೋಗಬೇಕಾಗುತ್ತದೆ. ತಿಹಾರ್ ಜೈಲಿನಲ್ಲಿ ಯಾವ ಬಂಡೆನೂ ಇಲ್ಲ, ಪಂಡೆನೂ ಇಲ್ಲ, ಸಂಡೇ ಅಷ್ಟೇ ಎಂದು ಕುಟುಕಿದರು.

Share This Article
";