ಯರಡಾಲ ಕ್ರಾಸ್ ಎಂ.ಕೆ.ಹುಬ್ಬಳ್ಳಿ ಹದಗೆಟ್ಟ ರಸ್ತೆ! ವಾಹನ ಸವಾರರ ನಿತ್ಯ ಹರ ಸಾಹಸ; ಜಾಣ ಕುರುಡರಾದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು.

ಬೈಲಹೊಂಗಲ:ತಾಲೂಕಿನ ಯರಡಾಲ ಕ್ರಾಸ್ ಎಂ.ಕೆ.ಹುಬ್ಬಳ್ಳಿ ರಸ್ತೆಯ ಕಾಮಗಾರಿ ಅರ್ಧಕ್ಕೆ ನಿಂತಿದ್ದರಿಂದ ದೂಳುಮಯವಾಗಿ ವಾಹನ ಸವಾರರು ನಿತ್ಯ ಹರ ಸಾಹಸ ಪಡಬೇಕಾಗಿದೆ.

ಈ ರಸ್ತೆಯ ಅಭಿವೃದ್ದಿ ಕಾಮಗಾರಿಗೆ 50:50ಅಪೆಂಡಿಕ್ಷ ಯೋಜನೆಯಲ್ಲಿ3.5 ಕೀಮೀ ರಸ್ತೆ, ಮತ್ತು ನಾಲ್ಕು ಸಿಡಿಗಳ ನಿರ್ಮಾಣಕ್ಕೆ ರೂ.4 ಕೋಟಿ 60 ಲಕ್ಷದಲ್ಲಿ ಮರು ನಿರ್ಮಾಣ ಕೈಗೊಳ್ಳುತ್ತಿದ್ದು ಕಳೆದ 6 ತಿಂಗಳು ಗತಿಸಿದರೂ ಕಾಮಗಾರಿ ಮಂದಗತಿಯತ್ತ ಸಾಗುತಿದ್ದು ಇದರಿಂದ ವಾಹನ ಸವಾರರು ಸಾಕಷ್ಟು ತೊಂದರೆಗೆ ಈಡಾಗಬೇಕಾಗಿದೆ. ಯರಡಾಲ ಕ್ರಾಸ್‌ನಿಂದ ಕೇವಲ 1ಕೀಮೀ. ಡಾಂಬಿರೀಕರಣಗೊಳಿಸಿದ ಗುತ್ತಿಗೆದಾರನು ಮುಂದಿನ ಭಾಗದ ರಸ್ತೆಯನ್ನು ಅಗೆದು ಜಲ್ಲಿ ಕಡಿ ಹಾಕಿ ಕಾಮಗಾರಿಯನ್ನು ಅರ್ಧಕ್ಕೆ ಸ್ಥಗಿತಗೊಳಿಸಿದ್ದರಿಂದ ಅಪಘಾತಕ್ಕೆ ಹೇಳಿ ಮಾಡಿದ ತಾಣವಾಗಿದ್ದು ಗಾಯಗೊಂಡ ಬೈಕ್ ಸವಾರರು ಸಾವಿರಾರು ರೂ ಆಸ್ಪತ್ರೆಗೆ ಸುರಿಯುವಂತಾಗಿದೆ. ನಿತ್ಯ ಪ್ರಯಾಣಿಕರು ಕೆಂದೂಳಿನಲ್ಲಿ ಮಿಂದೇಳುವಂತಾಗಿದೆ.

ಈ ರಸ್ತೆಯು ಬೈಲಹೊಂಗಲದಿಂದ ಯರಡಾಲ, ನೇಗಿನಹಾಳ, ಎಂ.ಕೆ.ಹುಬ್ಬಳ್ಳಿ ಇಟಗಿ ರೋಡ, ಚನ್ನಮ್ಮನ ಕಿತ್ತೂರು, ಖಾನಾಪೂರ, ಪಾರಿಶ್ವಾಡ, ಹುಣಶೀಕಟ್ಟಿ, ತುರಮರಿ, ಬೀಡಿ ಮುಂತಾದ ಊರುಗಳಿಗೆ ತೆರಳಲು ಈ ರಸ್ತೆಯೇ ಪ್ರಮುಖವಾಗಿದ್ದು ತೀರಾ ಹದಗೆಟ್ಟಿದ್ದರಿಂದ ಈ ಭಾಗದ ಜನರು ಬೇರೆ ಮಾರ್ಗಗಳಾದ ಬೇವಿನಕೊಪ್ಪ ಅಥವಾ ಹಿರೇಬಾಗೇವಾಡಿ ಗ್ರಾಮಗಳ ಮೂಲಕ ಸುತ್ತು ಬಳಸಿ ತೆರಳಬೇಕಾದ ಅನಿವಾರ್ಯತೆ ಎದುರಾಗಿದೆ.

ಹಲವಾರು ತಿಂಗಳಿನಿಂದ ರಸ್ತೆಯ ಅಭಿವೃದ್ದಿ ಕಾಮಗಾರಿಗೆ ಜಲ್ಲಿ ಕಲ್ಲು, ಮಣ್ಣು ಸುರಿದು ರಸ್ತೆಯುದ್ದಕ್ಕೂ ಗುಂಪು ಗುಂಪಾಗಿ ಸುರಿದು ಇದರಿಂದ ವಾಹನ ಸವಾರರು ನಿತ್ಯ ಪರದಾಡುವಂತಾಗಿದೆ. ಕತ್ತಲೆಯಾಗುತ್ತಲೇ ಗುಂಪು ಗುಂಪಾಗಿ ಸುರಿದ ಜಲ್ಲಿ ಕಲ್ಲು ಮಣ್ಣು ಕಣ್ಣಿಗೆ ಕಾಣದೇ ಹಲವಾರು ಅಪಘಾತ ಸಂಭವಿಸುತ್ತಿವೆ.

ಈ ಕುರಿತು ಸಂಬಂಧಪಟ್ಟ ಅಭಿಯಂತರನ್ನು ಸಂಪರ್ಕಿಸಿದರೆ ಗುತ್ತಿಗೆದಾರನು ಕಾಮಗಾರಿ ಕೈಗೊಳ್ಳುವಲ್ಲಿ ಉದಾಶೀನತೆ ತೋರುತ್ತಿದ್ದು ಈ ಕುರಿತು ಹಲವಾರು ಬಾರಿ ತಿಳಿ ಹೇಳಿದರೂ ಯಾವದೇ ಪ್ರಯೋಜನವಾಗುತ್ತಿಲ್ಲ. ಮೋಬೈಲನಲ್ಲಿ ಸಂಪರ್ಕಿಸಿದರೂ ರಿಂಗ್ ಆದರೂ ಸಹ ರೀಸೀವ ಮಾಡುವದಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಇದಲ್ಲದೆ ಕೆಲ ದಿನಗಳ ಹಿಂದೆ ಸರಿಯಾಗಿ ಕೆಲಸ ಮಾಡುವಂತೆ ಬೇಗನೆ ಕಾಮಗಾರಿ ಮುಗಿಸಲು ಸೆಕ್ಷನ ಆಫೀಸರ್ ಆರ್.ಬಿ.ಹೆಡಗೆ ಅಲ್ಲಿನ ಕೆಲಸಗಾರರಿಗೆ ಹೇಳಿದ್ದರು. ಗುತ್ತಿಗೆದಾನಿಗೆ ಸಂಬಂಧಿಸಿದ ಕೆಲಸಗಾರರು ಸೆಕ್ಷನ್ ಆಫೀಸರ್ನನ್ನು ಮನ ಬಂದಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿದಲ್ಲದೇ ಕೈ ಕೈಮಿಲಾಯಿಸುವ ಹಂತಕ್ಕೂ ಹೋಗಿತ್ತು. ಇದನ್ನೆಲ್ಲಾ ಗಮನಿಸಿದರೆ ಗುತ್ತಿಗೆದಾರ ಯಾವ ಹಂತದಲ್ಲಿ ಬೆಳದಿರಬಹುದು ಎಂದು ಊಹಿಸಿಕೊಳ್ಳಲು ಅಸಾಧ್ಯ.

ಗುತ್ತಿಗೆದಾರನು ಅಧಿಕಾರಿಗಳ ಮಾತಿಗೆ ಬೆಲೆ ನೀಡುತ್ತಿಲ್ಲ ಎನ್ನುವದಾದರೆ ಇನ್ನು ಸಾಮಾನ್ಯ ನಾಗರಿಕರ ಗೋಳು ಕೇಳುವರ‍್ಯಾರು. ಈಗಾಗಿ ನಾಗರಿಕರು ಸಂಕಷ್ಟ ಅನುಭವಿಸುತ್ತಿದ್ದು ‘ಇಲಿಗೆ ಪ್ರಾಣ ಸಂಕಟವಾದರೆ ಬೆಕ್ಕಿಗೆ ಚೆಲ್ಲಾಟ’ ಎಂಬ ಗಾದೆ ಮಾತು ಅಕ್ಷರಶಃ ಸತ್ಯವಾಗಿ ಗೋಚರವಾಗುತ್ತಿದೆ.

ಈ ರಸ್ತೆ ಮುಖಾಂತರ ಸಾಕಷ್ಟು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಓಡಾಡುತ್ತಿದ್ದರು ಜಾಣ ಕುರುಡರಂತೆ ವರ್ತಿಸುತ್ತಿರುವುದು ಏಕೆ ಎಂದು ಹಲವರನ್ನು ಕಾಡುವ ಪ್ರಶ್ನೆ.

ಈ ರಸ್ತೆಯ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಬೀದಿಗಳಿದು ಹೋರಾಟ ಮಾಡುವ ಮುನ್ನವೇ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ರಸ್ತೆ ದುರಸ್ತಿ ಕಾರ್ಯಕ್ಕೆ ಮುಂದಾಗುತ್ತಾರೆಯೋ ಕಾದು ನೋಡುವಂತಾಗಿದೆ.

ರಸ್ತೆ ಕಾಮಗಾರಿಯು ಮಂದಗತಿಯತ್ತ ಸಾಗುತ್ತಿರುವದಕ್ಕೆ ಪ್ರಯಾಣಿಕರಿಂದ ದೂರು ಬರುತ್ತಿದ್ದು ಗುತ್ತಿಗೆದಾರನಿಗೆ ತ್ವರಿತ ಗತಿಯಲ್ಲಿ ಕಾಮಗಾರಿ ಕೈಗೊಳ್ಳುವಂತೆ ಸೂಚಿಸಲಾಗಿದೆ.

                 ಆರ್.ಬಿ.ಹೆಡಗೆ.
ಲೋಕೋಪಯೋಗಿ ಇಲಾಖೆ, ಬೈಲಹೊಂಗಲ

ಯರಡಾಲ ಮತ್ತು ಎಂ.ಕೆ.ಹುಬ್ಬಳ್ಳಿ ರಸ್ತೆಯ ಕಾಮಗಾರಿಯು ಕಳೆದ ಐದಾರು ತಿಂಗಳಿನಿಂದ ಮಂದಗತಿಯತ್ತ ಸಾಗುತ್ತಿದ್ದು ರಸ್ತೆ ಅಗೆದು ಜಲ್ಲಿ ಕಲ್ಲು, ಮಣ್ಣು ಗುಂಪು ಗುಂಪಾಗಿ ರಸ್ತೆಯುದ್ದಕ್ಕೂ ಬಿಟ್ಟಿದ್ದರಿಂದ ವಾಹನ ಸವಾರರು ನಿತ್ಯ ಪರದಾಡುವಂತಾಗಿದೆ. ಕತ್ತಲೆಯಾಗುತ್ತಲೆ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಸವಾರಿ ಮಾಡುವ ಪರಿಸ್ಥಿತಿ ಎದುರಾಗಿದೆ. ಕೂಡಲೇ ಅಧಿಕಾರಿಗಳು ದುರಸ್ತಿ ಕಾರ್ಯಕ್ಕೆ ಮುಂದಾಗಬೇಕು. ಎಂದು ಯರಡಾಲ ಗ್ರಾಮದ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";