ಸುದ್ದಿ ಸದ್ದು ನ್ಯೂಸ್
ಬೆಂಗಳೂರು:12: ರಾಜ್ಯದೆಲ್ಲೆಡೆ ವ್ಯಾಪಕವಾಗಿ ಸುದ್ದಿಯಾಗಿದ್ದ ಬಿಟ್ ಕಾಯಿನ್ ದಂಧೆ ಕುರಿತಂತೆ ಆಡಳಿತ ಪಕ್ಷ ಮತ್ತು ಪ್ರತಿಪಕ್ಷದ ಮುಖಂಡರ ಹೆಸರುಗಳು ಕೇಳಿ ಬರುತ್ತಿದ್ದು ಈ ಬಗ್ಗೆ ಖುದ್ದು ಪ್ರಧಾನಿಗಳೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ವರದಿ ಪಡೆದಿರುವುದು ಮಹತ್ವದ ತಿರುವು ಪಡೆದಿದೆ.
ನಿನ್ನೆಯಷ್ಟೇ ಸಿಎಂ ಬೊಮ್ಮಾಯಿ ಅವರು ಪ್ರಧಾನಿಯವರನ್ನು ಭೇಟಿ ಮಾಡಿದ್ದು ಬಿಟ್ ಕಾಯಿನ್ ಬಗ್ಗೆ ತಲೆ ಕೆಡಿಸಿಕೊಳ್ಳದಂತೆ ಪ್ರಧಾನಿ ಸೂಚಿಸಿರುವುದಾಗಿ ಮಾಧ್ಯಮಗಳಲ್ಲಿ ಸುದ್ದಿಯಾಗಿದೆ. ಆದರೆ ಕಳೆದ ಮೂರು ದಿನಗಳಿಂದ ಸಿಎಂ ಬದಲಾವಣೆ ಸುದ್ದಿ ಇದೀಗ ವ್ಯಾಪಕ ಸುದ್ದಿಯಾಗಿದ್ದು ಬಿಟ್ ಕಾಯಿನ್ ಪ್ರಕರಣಕ್ಕೂ ಸಿಎಂ ಬದಲಾವಣೆಗೂ ತಳುಕು ಹಾಕಿಕೊಂಡಿರುವ ಸಂಶಯ ವ್ಯಕ್ತವಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಈ ದಿನ ಮಾಜಿ ಸಿಎಂ ದಿಢೀರ ದೆಹಲಿಗೆ ಪ್ರಯಾಣಿಸಿದ್ದು ಮತ್ತಷ್ಟು ಊಹಾಪೋಹಗಳನ್ನು ಹುಟ್ಟುಹಾಕಿದೆ.
‘ಕಾಗೆ ಕೂರೋದಕ್ಕೂ ಟೊಂಗೆ ಮುರಿಯೋದಕ್ಕೂ’ ಅನ್ನೋ ಗಾದೆಯಂತೆ ಬಿಟ್ ಕಾಯಿನ್ ದಂಧೆ ವ್ಯಾಪಕ ಸುದ್ದಿಯಾಗುವುದಕ್ಕೂ ಸಿಎಂ ಬದಲಾವಣೆ ಕೂಗಿಗೂ ನಂಟು ಬೆಸೆದಂತಿದೆ. ಈ ಮಧ್ಯೆ ಸಚಿವಾಕಾಂಕ್ಷಿಗಳು ಹೈ ಕಮಾಂಡ್ ನಾಯಕರಿಗೆ ಒತ್ತಡ ಹೇರುತ್ತಿದ್ದು ಈ ಎಲ್ಲ ಸಂಕಟಗಳಿಂದ ಪಾರಾಗಲು ಸಿಎಂ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಮುಂದಾಗಿರುವುದು ಸಂಕಟ ಬಂದಾಗ ವೆಂಕಟರಮನ ಎನ್ನುವಂತೆ ಈ ಎಲ್ಲ ಸಂಕಷ್ಟಗಳನ್ನು ದೂರ ಮಾಡುವಂತೆ ತಿಮ್ಮಪ್ಪನ ದರ್ಶನಕ್ಕೆ ನಾಳೆ ಅಥವಾ ನಾಡಿದ್ದು ಪ್ರವಾಸ ಹಮ್ಮಿಕೊಂಡಿರುವುದಾಗಿ ತಿಳಿದುಬಂದಿದೆ.
ಒಟ್ಟಾರೆ ಬಿಟ್ ಕಾಯಿನ್ ದಂಧೆ ಸಿಎಂ ಸ್ಥಾನಕ್ಕೆ ಕುತ್ತು ತರುವ ಸಾಧ್ಯತೆಗಳು ದಟ್ಟವಾಗಿದ್ದು ಬೊಮ್ಮಾಯಿಯವರು ಮುಖ್ಯಮಂತ್ರಿ ಸ್ಥಾನದಿಂದ ಇಳಿಯುವ ಸಾಧ್ಯತೆಗಳು ದಟ್ಟವಾಗಿ ಚರ್ಚೆಯಾಗುತ್ತಿವೆ.